ಪ.ಬಂಗಾಳದಲ್ಲಿ ತೈಲ ನಿಕ್ಷೇಪ; ಉತ್ಪಾದನೆ ದಿಕ್ಕು ಕಾಣಲು ಬೇಕಾಯ್ತು 7 ವರ್ಷ

ONGC's Ashokanagar Oil Field: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅಶೋಕನಗರ್ ತೈಲ ಕ್ಷೇತ್ರದಲ್ಲಿ ONGC ವಾಣಿಜ್ಯ ತೈಲ ಉತ್ಪಾದನೆಗೆ ಸಿದ್ಧತೆ ನಡೆಸಿದೆ. ಸುಮಾರು 240 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ನಿಕ್ಷೇಪ ಹೊಂದಿರುವ ಈ ಯೋಜನೆ, ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸಿ, ಆಮದು ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಪಶ್ಚಿಮ ಬಂಗಾಳದ ಆರ್ಥಿಕತೆಗೂ ಭಾರಿ ಉತ್ತೇಜನ ನೀಡುವ ಸಾಮರ್ಥ್ಯ ಇದರಲ್ಲಿದೆ.

ಪ.ಬಂಗಾಳದಲ್ಲಿ ತೈಲ ನಿಕ್ಷೇಪ; ಉತ್ಪಾದನೆ ದಿಕ್ಕು ಕಾಣಲು ಬೇಕಾಯ್ತು 7 ವರ್ಷ
ತೈಲಬಾವಿಯ ಸಾಂದರ್ಭಿಕ ಚಿತ್ರ
Image Credit source: AP

Updated on: May 27, 2026 | 4:34 PM

ಕೋಲ್ಕತ್ತಾ, ಮೇ 27: ಏಳೆಂಟು ವರ್ಷದ ಹಿಂದೆ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿದ್ದ ತೈಲ ನಿಕ್ಷೇಪವೊಂದಕ್ಕೆ ಕೊನೆಗೂ ಒಂದು ಮುಕ್ತಿ ಸಿಕ್ಕಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಅಶೋಕನಗರ್ ಆಯಿಲ್ ಫೀಲ್ಡ್​ನಲ್ಲಿ ತೈಲ ತೆಗೆಯುವ ಕಾರ್ಯಕ್ಕೆ ಸಿದ್ಧತೆ ಆರಂಭವಾಗಿದೆ. ಅತಿ ಶೀಘ್ರದಲ್ಲೇ ಇಲ್ಲಿ ತೈಲ ಉತ್ಪಾದನೆ ಶುರುವಾಗಬಹುದು ಎನ್ನಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಈ ಯೋಜನೆಗೆ ಬಲ ಸಿಕ್ಕಿದಂತಾಗಿರುವುದು ಕಾಕತಾಳೀಯವಲ್ಲ. ರಾಜಕೀಯ ಇಚ್ಛಾ ಶಕ್ತಿ ಕೊರತೆ, ಸ್ಥಳೀಯರ ಗಲಾಟೆಗಳ ಮಧ್ಯೆ ತೈಲ ಉತ್ಪಾದನೆ ಬಹುತೇಕ ನೆನೆಗುದಿಯಲ್ಲಿ ಬಿದ್ದಂತಾಗಿತ್ತು. ಈಗ ಒಎನ್​ಜಿಸಿ ಸಂಸ್ಥೆಯಿಂದ ತೈಲ ಹೊರಬಗೆಯುವ ಕೆಲಸ ಸುಗಮವಾಗಲಿದೆ. ಇದರೊಂದಿಗೆ ಭಾರತದ ಇಂಧನ ಭದ್ರತೆ ಮತ್ತಷ್ಟು ಹೆಚ್ಚುವ ಸಂಭವ ಇದೆ.

ಕೋಲ್ಕತಾದಿಂದ ಕೇವಲ 50 ಕಿಮೀ ದೂರದಲ್ಲಿರುವ ಉತ್ತರ 24 ಪರಗಣ ಜಿಲ್ಲೆಯ ಭಾಗಗಳಲ್ಲಿ ತೈಲ ನಿಕ್ಷೇಪಗಳಿರಬಹುದು ಎಂದು ವಿಜ್ಞಾನಿಗಳು ಸುಮಾರು 1950-60ರ ದಶಕದಲ್ಲೇ ಅಂದಾಜಿಸಿದ್ದರು. ಅಶೋಕನಗರ್ ಪಟ್ಟಣದಲ್ಲಿ 2018ರಲ್ಲಿ ಒಎನ್​ಜಿಸಿ ಸಂಸ್ಥೆ ತೈಲ ನಿಕ್ಷೇಪ ಪತ್ತೆ ಮಾಡಿತ್ತು. 2020 ರ ಕೊನೆಯಲ್ಲಿ ಇಲ್ಲಿ ವಾಣಿಜ್ಯ ಮಟ್ಟದ ತೈಲ ಉತ್ಪಾದನೆಗೆ ಚಾಲನೆ ಸಿಕ್ಕಿತು. ಆದರೆ, ಭೂ ವ್ಯಾಜ್ಯಗಳು, ಪರಿಸರ ಸಮಸ್ಯೆ, ಪರಿಹಾರ ಧನದ ಸಮಸ್ಯೆ, ಕೇಂದ್ರ ರಾಜ್ಯಗಳ ನಡುವೆ ತಿಕ್ಕಾಟ ಇವೇ ಮುಂತಾದ ಕಾರಣಗಳಿಗೆ ಇಲ್ಲಿ ಉತ್ಪಾದನೆಗೆ ಬ್ರೇಕ್ ಬಿದ್ದಿತ್ತು. ಒಂದು ಸಾವಿರ ಕೋಟಿ ರೂ ಹೂಡಿಕೆ ಮಾಡಲು ಸಜ್ಜಾಗಿದ್ದರೂ ಈ ಯೋಜನೆಯು ಪ್ಲಾನಿಂಗ್ ಹಂತದಿಂದ ಮೇಲೇರಲೇ ಇಲ್ಲ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳು ಇರುವುದರಿಂದ ಯೋಜನೆ ಜಾರಿ ಸಲೀಸಾಗಿದೆ.

ಅಶೋಕನಗರ್ ಆಯಿಲ್ ಫೀಲ್ಡ್​ನಲ್ಲಿ ಎಷ್ಟಿದೆ ತೈಲ?

ಅಶೋಕ್​ನಗರ್ ಆಯಿಲ್ ಫೀಲ್ಡ್​ನಲ್ಲಿ ಅಂದಾಜು 240 ಮಿಲಿಯನ್ ಬ್ಯಾರಲ್​ನಷ್ಟು ಕಚ್ಚಾ ತೈಲ ಸಂಗ್ರಹ ಇರಬಹುದು ಎನ್ನಲಾಗಿದೆ. ಈ ತೈಲ ನಿಕ್ಷೇಪದಿಂದ ಹೊರತೆಗೆಯಬಹುದಾದ ತೈಲದ ಮೌಲ್ಯ 45,000 ಕೋಟಿ ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ತೈಲದಿಂದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಒಟ್ಟು 4,500 ಕೋಟಿ ರೂನಷ್ಟು ಆದಾಯ ಸಿಗಬಹುದು ಎಂಬುದು ಪೆಟ್ರೋಲಿಯಂ ಸಚಿವಾಲಯದ ಅನಿಸಿಕೆ.

ಭಾರತದ ಇಂಧನ ಭದ್ರತೆಗೆ ಈ ನಿಕ್ಷೇಪ ಸಹಕಾರಿಯಾಗಲಿದೆ. ಕರ್ನಾಟಕದಲ್ಲಿ ಎರಡು ಸೇರಿದಂತೆ ಭಾರತದಲ್ಲಿ ಈಗ ಒಟ್ಟು 3 ಕಡೆ ಪೆಟ್ರೋಲಿಯಂ ಸಂಗ್ರಹಾಗಾರಗಳಿವೆ. ಎಲ್ಲಾ ಸೇರಿಸಿದರೆ ಭಾರತದಲ್ಲಿ 74 ದಿನಗಳಿಗೆ ಆಗುವಷ್ಟು ಪೆಟ್ರೋಲಿಯಂ ಸ್ಟ್ರಾಟಿಜಿಕ್ ರಿಸರ್ವ್ಸ್ ಇವೆ. ಈಗ ನಾರ್ತ್ 24 ಪರಗಣ ಜಿಲ್ಲೆಯ ತೈಲ ನಿಕ್ಷೇಪ ಸೇರಿಸಿದರೆ 130ಕ್ಕೂ ಹೆಚ್ಚು ದಿನಗಳಿಗೆ ರಿಸರ್ವ್ ಇದ್ದಂತಾಗುತ್ತದೆ. ಅಂದರೆ, ನಾಲ್ಕು ತಿಂಗಳಿಗೂ ಹೆಚ್ಚು ಕಾಲಕ್ಕೆ ಆಗುವಷ್ಟು ಪೆಟ್ರೋಲ್ ಸಂಗ್ರಹ ಭಾರತದಲ್ಲಿ ಇದ್ದಂತಾಗಲಿದೆ.

ಪೆಟ್ರೋಲ್-ಡೀಸೆಲ್ ಕೊರತೆಗೆ ಬ್ರೇಕ್

ಪ್ರಸ್ತುತ ಭಾರತವು ತನ್ನ ಇಂಧನ ಅಗತ್ಯದ ಸುಮಾರು 80-85% ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದ ಆಮದು (Import) ಮಾಡಿಕೊಳ್ಳುತ್ತದೆ. ಪಶ್ಚಿಮ ಬಂಗಾಳದ ಈ ನಿಕ್ಷೇಪವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದರೆ, ದೇಶದ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್‌ನ ದೇಶೀಯ ಮಾರುಕಟ್ಟೆಗೆ ದೊಡ್ಡ ಆಸರೆಯಾಗಲಿದೆ.

ಅಶೋಕನಗರ್ ಆಯಿಲ್ ಫೀಲ್ಡ್ ಭಾರತದ 8ನೇ ಉತ್ಪಾದಕ ತೈಲ ಬೇಸಿನ್ (Oil Basin) ಆಗಿದೆ. ಗಂಗಾ-ಬ್ರಹ್ಮಪುತ್ರ ನದಿ ಮುಖಜ ಭೂಮಿಯ ಈ ‘ಬಂಗಾಳ ಬೇಸಿನ್’ ಅಡಿಯಲ್ಲಿ ಅತಿ ಹೆಚ್ಚು ಇಂಧನ ಸಂಪತ್ತು ಅಡಗಿದೆ ಎಂಬುದನ್ನು ಈ ಯಶಸ್ಸು ಸಾಬೀತುಪಡಿಸಿದೆ.

ಒಎನ್‌ಜಿಸಿ ಸಂಸ್ಥೆಯು ಅಶೋಕನಗರ ಸುತ್ತಮುತ್ತಲಿನ ಮತ್ತಷ್ಟು ಜಾಗಗಳಲ್ಲಿ ಹೊಸ ಬಾವಿಗಳನ್ನು ತೋಡಿ ಪರಿಶೋಧನೆ ನಡೆಸಲು ಯೋಜಿಸಿದೆ. ಈ ತೈಲ ನಿಕ್ಷೇಪವು ಕೇವಲ ಪಶ್ಚಿಮ ಬಂಗಾಳದ ಆರ್ಥಿಕತೆಯ ಚಿತ್ರಣವನ್ನು ಬದಲಾಯಿಸುವುದಲ್ಲದೆ, ಇಡೀ ಭಾರತದ ಇಂಧನ ಮಾರುಕಟ್ಟೆಯ ಮೇಲಿರುವ ಜಾಗತಿಕ ಬಿಕ್ಕಟ್ಟುಗಳ ಒತ್ತಡವನ್ನು ಕಡಿಮೆ ಮಾಡಬಲ್ಲ ಶಕ್ತಿ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us