India Post: ಆಗಸ್ಟ್ 1ರಿಂದ ಹೊಸ ಸ್ಪೀಡ್ ಪೋಸ್ಟ್ ಶುಲ್ಕ ಜಾರಿ, ದಾಖಲೆ- ಪಾರ್ಸೆಲ್‌ಗೆ ಪ್ರತ್ಯೇಕ ವ್ಯಾಖ್ಯಾನ
ಭಾರತೀಯ ಅಂಚೆ ಇಲಾಖೆಯು (India Post) ಇದೇ ಮೊದಲ ಬಾರಿಗೆ 'ದಾಖಲೆ' (Document) ಮತ್ತು 'ಪಾರ್ಸೆಲ್' (Parcel) ವರ್ಗಗಳಿಗೆ ಅಧಿಕೃತ ವ್ಯಾಖ್ಯಾನ ನೀಡಿದ್ದು, ಆಗಸ್ಟ್ 1 ರಿಂದ ಜಾರಿಗೆ ಬರಲಿರುವ ಪ್ರೀಮಿಯಂ ಸ್ಪೀಡ್ ಪೋಸ್ಟ್ ಸೇವೆಗಳ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ. ಈ ಕುರಿತಾದ ಸಂಪೂರ್ಣ ವಿವರಗಳು ಇಲ್ಲಿವೆ.

ನವದೆಹಲಿ, ಜುಲೈ 28: ಮೊದಲ ಬಾರಿಗೆ ಅಂಚೆ ಇಲಾಖೆ (India Post) ದಾಖಲೆ (Document) ಎಂಬ ಪದಕ್ಕೆ ಅಧಿಕೃತ ವ್ಯಾಖ್ಯಾನ ನೀಡಿದ್ದು, ಪತ್ರಗಳು, ಮುದ್ರಿತ ವಸ್ತುಗಳು ಹಾಗೂ ಮರುಮಾರಾಟ ಮೌಲ್ಯವಿಲ್ಲದ ಉಚಿತ (Complimentary) ವಸ್ತುಗಳನ್ನು ದಾಖಲೆಗಳೆಂದು ಪರಿಗಣಿಸಲಾಗುವುದು ಎಂದು ತಿಳಿಸಿದೆ. ಇವುಗಳಿಗೆ ಕಡಿಮೆ ಶುಲ್ಕ ವಿಧಿಸಲಾಗಲಿದ್ದು, ಉಳಿದ ಎಲ್ಲ ವಸ್ತುಗಳನ್ನು ಪಾರ್ಸೆಲ್ (Parcel) ವಿಭಾಗದಲ್ಲಿ ಇನ್ನು ಸಾಗಾಟ ನಡೆಯಲಿದೆ. ಇದರ ಜೊತೆಗೆ, ಚಿಲ್ಲರೆ (Retail) ಹಾಗೂ ಸಗಟು (Wholesale) ಗ್ರಾಹಕರಿಗಾಗಿ 24 ಸ್ಪೀಡ್ ಪೋಸ್ಟ್ ಮತ್ತು 48 ಸ್ಪೀಡ್ ಪೋಸ್ಟ್ ಸೇವೆಗಳ ಹೊಸ ದರಗಳನ್ನು ಪ್ರಕಟಿಸಲಾಗಿದೆ.
ದಾಖಲೆ ವಿಭಾಗಕ್ಕೆ ಸೇರುವ ವಸ್ತುಗಳು
ಹೊಸ ಅಧಿಸೂಚನೆ ಪ್ರಕಾರ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಹಾಗೂ ವಿಮೆ (BFSI) ಕ್ಷೇತ್ರಕ್ಕೆ ಸಂಬಂಧಿಸಿದ ವೆಲ್ಕಮ್ ಕಿಟ್‌ಗಳು, ಪತ್ರಗಳು, ಪಾಸ್‌ಬುಕ್‌ಗಳು, ಚೆಕ್‌ಬುಕ್‌ಗಳು, ಬ್ಯಾಂಕ್ ವಿವರಗಳ ದಾಖಲೆಗಳು, ಪ್ಲಾಸ್ಟಿಕ್ ಕಾರ್ಡ್‌ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿಗಳನ್ನು ದಾಖಲೆ ಎಂದು ಪರಿಗಣಿಸಲಾಗುತ್ತದೆ. 500 ಗ್ರಾಂವರೆಗೆ ತೂಕವಿರುವ, ವಾಣಿಜ್ಯೇತರ ರಾಖಿ ಕವರ್‌ಗಳು, ಪ್ಯಾಕೆಟ್‌ಗಳು ಹಾಗೂ ಶುಭಾಶಯ ಪತ್ರಗಳನ್ನು ಸಹ ದಾಖಲೆ ವಿಭಾಗದಲ್ಲೇ ಸಾಗಿಸಲಾಗುತ್ತದೆ. ಇವುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಸ್ತುಗಳು ಪಾರ್ಸೆಲ್ ವಿಭಾಗಕ್ಕೆ ಸೇರುತ್ತವೆ.
ಇದನ್ನೂ ಓದಿ: EPFO ಚಂದಾದಾರರ ಗಮನಕ್ಕೆ; UPI ಆಧಾರಿತ PF ಕ್ಲೇಮ್ ಸೌಲಭ್ಯ ಜಾರಿಗೆ ಮತ್ತಷ್ಟು ವಿಳಂಬ!
ಚಿಲ್ಲರೆ ಗ್ರಾಹಕರಿಗೆ ಎಷ್ಟು ಶುಲ್ಕ?
ಚಿಲ್ಲರೆ (Retail) ಗ್ರಾಹಕರಿಗೆ ಈಗಿರುವ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ದಾಖಲೆ (Document) ವಿಭಾಗದ ಬಲ್ಕ್ ಬುಕ್ಕಿಂಗ್‌ಗಳಿಗೆ ಹೊಸ ದರಗಳನ್ನು ಅಧಿಸೂಚನೆ ಮಾಡಲಾಗಿದೆ. ಆಗಸ್ಟ್ 1ರಿಂದ 24 ಸ್ಪೀಡ್ ಪೋಸ್ಟ್ ಸೇವೆಯಡಿ, ಚಿಲ್ಲರೆ ಗ್ರಾಹಕರು ತೂಕ ಮತ್ತು ದೂರವನ್ನು ಆಧರಿಸಿ ಪ್ರತಿ ಪ್ಯಾಕೆಟ್‌ಗೆ ₹38 ರಿಂದ ₹186 ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ.
- 50 ಗ್ರಾಂಗಿಂತ ಕಡಿಮೆ ತೂಕದ ಪ್ಯಾಕೆಟ್‌ಗಳಿಗೆ ಸ್ಥಳೀಯ ಅಂಚೆ ಶುಲ್ಕ ₹38, ದೇಶದ ಯಾವುದೇ ಭಾಗಕ್ಕೆ ಕಳುಹಿಸಲು ₹94 (ಜಿಎಸ್‌ಟಿ ಹೆಚ್ಚುವರಿ)
- 51 ರಿಂದ 250 ಗ್ರಾಂ ತೂಕದ ಪ್ಯಾಕೆಟ್‌ಗಳಿಗೆ ₹118 ರಿಂದ ₹154 ವರೆಗೆ
- 251 ರಿಂದ 500 ಗ್ರಾಂ ತೂಕದ ಪ್ಯಾಕೆಟ್‌ಗಳಿಗೆ ₹140 ರಿಂದ ₹186 ವರೆಗೆ ಪ್ರತಿ ಪ್ಯಾಕೆಟ್‌ಗೆ ಶುಲ್ಕ
ಸಗಟು ಗ್ರಾಹಕರಿಗೆ ಹೊಸ ಶುಲ್ಕ
ಸಗಟು (Wholesale) ಗ್ರಾಹಕರಿಗೆ 24 ಗಂಟೆಗಳ ಸ್ಪೀಡ್ ಪೋಸ್ಟ್ ಸೇವೆಗೆ ₹38 ರಿಂದ ₹100 ಹಾಗೂ 48 ಗಂಟೆಗಳ ಸ್ಪೀಡ್ ಪೋಸ್ಟ್ ಸೇವೆಗೆ ₹48 ರಿಂದ ₹72 ವರೆಗೆ ಶುಲ್ಕ ನಿಗದಿಪಡಿಸಲಾಗಿದೆ. ಅಂಚೆ ಇಲಾಖೆ ತಿಳಿಸಿರುವಂತೆ, 48 ಗಂಟೆಗಳ ಸ್ಪೀಡ್ ಪೋಸ್ಟ್ ಸೇವೆಯಡಿ, ಚಿಲ್ಲರೆ ಗ್ರಾಹಕರು ತೂಕ ಮತ್ತು ದೂರವನ್ನು ಆಧರಿಸಿ ಪ್ರತಿ ಪ್ಯಾಕೆಟ್‌ಗೆ ₹61 ರಿಂದ ₹121 ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರಸ್ತುತ 24 ಗಂಟೆಗಳ ಸ್ಪೀಡ್ ಪೋಸ್ಟ್ ಮತ್ತು 48 ಗಂಟೆಗಳ ಸ್ಪೀಡ್ ಪೋಸ್ಟ್ ಸೇವೆಗಳು ದೇಶದ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್ ನಗರಗಳಲ್ಲಿ ಮಾತ್ರ ಲಭ್ಯವಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




