ನವದೆಹಲಿ: ಆನ್ಲೈನ್ ಗೇಮಿಂಗ್ಗೆ (Online Gaming) ಶೇಕಡಾ 28ರ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸುವ ಬಗ್ಗೆ ರಾಜ್ಯಗಳ ಹಣಕಾಸು ಸಚಿವರ ಸಮಿತಿ ಶಿಫಾರಸು ಮಾಡುವ ಸಾಧ್ಯತೆ ಇದೆ. ಅದು ಕೌಶಲದ ಗೇಮ್ಸ್ ಅಥವಾ ಅವಕಾಶದ ಗೇಮ್ಸ್ ಆಗಿದೆಯೇ ಎಂಬುದನ್ನು ಪರಿಗಣಿಸದೆ ಶೇಕಡಾ 28 ತೆರಿಗೆ ವಿಧಿಸಲು ಶಿಫಾರಸು ಮಾಡುವ ಸಾಧ್ಯತೆ ಇದೆ. ಜತೆಗೆ, ಜಿಎಸ್ಟಿ ಮೊತ್ತವನ್ನು ಲೆಕ್ಕಹಾಕುವ ವಿಧಾನವನ್ನು ಪರಿಷ್ಕರಿಸುವಂತೆ ಸಲಹೆ ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಆನ್ಲೈನ್ ಗೇಮಿಂಗ್ಗೆ ಶೇಕಡಾ 18ರ ಜಿಎಸ್ಟಿ ವಿಧಿಸಲಾಗುತ್ತಿದೆ. ಆನ್ಲೈನ್ ಗೇಮಿಂಗ್ ಪೋರ್ಟಲ್ಗಳು ವಿಧಿಸುವ ಶುಲ್ಕದಿಂದ ಸಂಗ್ರಹವಾದ ಒಟ್ಟು ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ.
ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ವರದಿ ಬಹುತೇಕ ಅಂತಿಮಗೊಂಡಿದೆ. ಸಮಿತಿಯು ಈ ವರದಿಯನ್ನು ಶೀಘ್ರದಲ್ಲೇ ಜಿಎಸ್ಟಿ ಮಂಡಳಿಯ ಪರಿಶೀಲನೆಗೆ ಕಳುಹಿಸಿಕೊಡಲಿದೆ ಎಂದು ಮೂಲಗಳು ಹೇಳಿವೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾರೆ. ಆನ್ಲೈನ್ ಗೇಮಿಂಗ್ನ ಪೂರ್ಣ ಮೌಲ್ಯ ಆಧರಿಸಿ ಶೇಕಡಾ 28ರ ಜಿಎಸ್ಟಿ ವಿಧಿಸುವಂತೆ ಈ ಹಿಂದೆ ಸಮಿತಿ ಶಿಫಾರಸು ಮಾಡಿತ್ತು. ಅಂದರೆ ಎಂಟ್ರಿ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳ ಒಟ್ಟು ಮೊತ್ತದ ಮೇಲೆ ಜಿಎಸ್ಟಿ ಸಂಗ್ರಹಿಸಲು ಸಲಹೆ ನೀಡಲಾಗಿತ್ತು. ಇದರಲ್ಲಿ ಬದಲಾವಣೆ ಮಾಡುವಂತೆ ಸಚಿವರ ಸಮಿತಿ ಮನವಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Gaming Industry: ದೇಶದ ಗೇಮಿಂಗ್ ಉದ್ಯಮದಲ್ಲಿ ಸೃಷ್ಟಿಯಾಗಲಿದೆ 1 ಲಕ್ಷ ಉದ್ಯೋಗ; ವರದಿ
ಸಚಿವರ ಸಮಿತಿಯ ಶಿಫಾರಸಿನ ಬಳಿಕ ಅಟಾರ್ನಿ ಜನರಲ್ ಅವರು ಆನ್ಲೈನ್ ಗೇಮಿಂಗ್ ಉದ್ಯಮಿಗಳ ಅಭಿಪ್ರಾಯ ಕೋರಲಿದ್ದಾರೆ. ಆ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಲಾಕ್ಡೌನ್ ಸಂದರ್ಭದಲ್ಲಿ ದೇಶದಲ್ಲಿ ಆನ್ಲೈನ್ ಗೇಮಿಂಗ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಕೆಪಿಎಂಜಿ ವರದಿಯ ಪ್ರಕಾರ, 2021ರಲ್ಲಿ 13,600 ಕೋಟಿ ರೂ. ಇದ್ದ ಆನ್ಲೈನ್ ಗೇಮಿಂಗ್ ವಹಿವಾಟು 2024-25ರ ವೇಳೆಗೆ 29,000 ಕೋಟಿ ರೂ. ತಲುಪಬಹುದು ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮ ಇತ್ತೀಚಿನ ದಿನಗಳಲ್ಲಿ ಭಾರಿ ಬೆಳವಣಿಗೆ ಸಾಧಿಸುತ್ತಿದೆ. ಈ ಉದ್ಯಮದಲ್ಲಿ ಮುಂದಿನ ಹಣಕಾಸು ವರ್ಷದ ವೇಳೆಗೆ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಗೇಮಿಂಗ್ ಉದ್ಯಮಕ್ಕೆ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಮೊತ್ತದ ವಿದೇಶಿ ಹೂಡಿಕೆ ಹರಿದುಬರಲಿದೆ. 2023ರಲ್ಲಿ 780 ಕೋಟಿ ರೂ. ನೇರ ವಿದೇಶಿ ಹೂಡಿಕೆ ಬರಲಿದೆ. ಉದ್ದಿಮೆಯು ಶೇಕಡಾ 20-30ರಷ್ಟು ಬೆಳವಣಿಗೆ ಹೊಂದಲಿದೆ. 2026ರ ವೇಳೆಗೆ ಉದ್ಯಮದ ಮೌಲ್ಯವು 38,097 ಕೋಟಿ ರೂ.ಗೆ ಹೆಚ್ಚಲಿದೆ ಎಂದು ವರದಿ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ