FIFA World Cup: ತಮಿಳುನಾಡಿನ ನಾಮಕ್ಕಲ್​ನಿಂದ ಕತಾರ್​ಗೆ ಮೊಟ್ಟೆ ರಫ್ತಿನಲ್ಲಿ ಮೂರು ಪಟ್ಟು ಹೆಚ್ಚಳ

ಪ್ರತಿ ತಿಂಗಳು 10 ಕಂಟೇನರ್​ ಮೊಟ್ಟೆಗಳನ್ನು ಕತಾರ್​ಗೆ ಕಳುಹಿಸಿಕೊಡಲಾಗುತ್ತಿತ್ತು. ಈಗ 30 ಕಂಟೇನರ್​ಗಳಲ್ಲಿ ಮೊಟ್ಟೆ ಕಳುಹಿಸಿಕೊಡಲಾಗುತ್ತಿದೆ ಎಂದು ನಾಮಕ್ಕಲ್ ಮೊಟ್ಟೆ ರಫ್ತುದಾರರ ಮತ್ತು ಫಾರ್ಮ್ ಮಾಲೀಕರ ವ್ಯಾಪಾರಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವಿ. ಸೆಂಥಿಲ್ ತಿಳಿಸಿದ್ದಾರೆ.

FIFA World Cup: ತಮಿಳುನಾಡಿನ ನಾಮಕ್ಕಲ್​ನಿಂದ ಕತಾರ್​ಗೆ ಮೊಟ್ಟೆ ರಫ್ತಿನಲ್ಲಿ ಮೂರು ಪಟ್ಟು ಹೆಚ್ಚಳ
ನಾಮಕ್ಕಲ್​ನ ಕುಕ್ಕುಟೋದ್ಯಮ ಘಟಕದ ಚಿತ್ರ
TV9kannada Web Team

| Edited By: Ganapathi Sharma

Nov 22, 2022 | 3:37 PM

ನಾಮಕ್ಕಲ್: ಫಿಫಾ ವಿಶ್ವಕಪ್ (FIFA World Cup) ಆಯೋಜಿಸಿರುವ ಕತಾರ್​ಗೆ ತಮಿಳುನಾಡಿನ (Tamil Nadu) ನಾಮಕ್ಕಲ್​ನಿಂದ (Namakkal) ಮಾಡಲಾಗುತ್ತಿರುವ ಮೊಟ್ಟೆ ರಫ್ತಿನಲ್ಲಿ (Egg exporters) ಮೂರು ಪಟ್ಟು ಹೆಚ್ಚಳವಾಗಿದೆ. ಇದು ನಾಮಕ್ಕಲ್ ಜಿಲ್ಲೆಯ ಕುಕ್ಕುಟೋದ್ಯಮಿಗಳ ಸಂತಸಕ್ಕೆ ಕಾರಣವಾಗಿದೆ. ನಾಮಕ್ಕಲ್​ನಿಂದ ಮೊಟ್ಟೆ ರಫ್ತಾಗುತ್ತಿರುವ ದೇಶಗಳ ಪೈಕಿ ಕತಾರ್ ಪ್ರಮುಖವಾದದ್ದು. ಫುಟ್​ಬಾಲ್ ವಿಶ್ವಕಪ್ ಕಾರಣ ಮೊಟ್ಟೆಯ ಬೇಡಿಕೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಪ್ರತಿ ತಿಂಗಳು 50 ಲಕ್ಷದಷ್ಟು ಮೊಟ್ಟೆಗಳು ಕತಾರ್​ಗೆ ರಫ್ತಾಗುತ್ತಿದ್ದವು. ಈ ಸಂಖ್ಯೆ ಈಗ 1.50 ಕೋಟಿ ತಲುಪಿದೆ ಎಂದು ನಾಮಕ್ಕಲ್ ಮೊಟ್ಟೆ ರಫ್ತುದಾರರ ಮತ್ತು ಫಾರ್ಮ್ ಮಾಲೀಕರ ವ್ಯಾಪಾರಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವಿ. ಸೆಂಥಿಲ್ ತಿಳಿಸಿದ್ದಾರೆ.

‘ಪ್ರತಿ ತಿಂಗಳು 10 ಕಂಟೇನರ್​ ಮೊಟ್ಟೆಗಳನ್ನು ಕತಾರ್​ಗೆ ಕಳುಹಿಸಿಕೊಡಲಾಗುತ್ತಿತ್ತು. ಈಗ 30 ಕಂಟೇನರ್​ಗಳಲ್ಲಿ ಮೊಟ್ಟೆ ಕಳುಹಿಸಿಕೊಡಲಾಗುತ್ತಿದೆ. ಕತಾರ್​ಗೆ ಕಳುಹಿಸುವ ಪ್ರತಿ ಮೊಟ್ಟೆಗೆ 7 ರೂ. ದರ ನಿಗದಿಪಡಿಸಿದ್ದೇವೆ. ಮೊಟ್ಟೆಯ ಉತ್ಪಾದನಾ ವೆಚ್ಚ 5 ರೂ. ಆಗುತ್ತದೆ. ಕತಾರ್​ಗೆ ಕಳುಹಿಸಿಕೊಡಲು ಪ್ರತಿ ಮೊಟ್ಟೆಗೆ 2 ರೂ.ನಂತೆ ವೆಚ್ಚವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರತಿ ದಿನ 5 – 6 ಕೋಟಿ ಮೊಟ್ಟೆ ಉತ್ಪಾದನೆ

ನಾಮಕ್ಕಲ್​ನಲ್ಲಿ ಸುಮಾರು 1,100 ಪೌಲ್ಟ್ರಿ ಫಾರ್ಮ್​ಗಳಿದ್ದು ಪ್ರತಿ ದಿನ 5ರಿಂದ 6 ಕೋಟಿ ಮೊಟ್ಟೆ ಉತ್ಪಾದಿಸಲಾಗುತ್ತದೆ. ಇಲ್ಲಿ ತಯಾರಾದ ಮೊಟ್ಟೆಗಳನ್ನು ದೇಶದ ಕೆಲವೇ ಕಡೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಸೌದಿ ಅರೇಬಿಯಾ, ಕತಾರ್, ಇರಾನ್, ಇರಾಕ್, ಒಮಾನ್, ಬಹ್ರೈನ್ ಹಾಗೂ ಮಾಲ್ಡೀವ್ಸ್​ಗಳಿಗೆ ರಫ್ತಾಗುತ್ತದೆ. ಈ ದೇಶಗಳಿಗೆ ಪ್ರತಿ ತಿಂಗಳು 2 ಕೋಟಿ ಮೊಟ್ಟೆ ರಫ್ತಾಗುತ್ತದೆ ಎಂದು ನಾಮಕ್ಕಲ್​​ನ ರಫ್ತುದಾರರು ಹೇಳಿದ್ದಾರೆ.

ರಷ್ಯಾ – ಉಕ್ರೇನ್ ಯುದ್ಧವೂ ಕಾರಣ

ಕತಾರ್ ಸೇರಿದಂತೆ ಇತರ ದೇಶಗಳು ಭಾರತದಿಂದ ಹೆಚ್ಚು ಮೊಟ್ಟೆ ಖರೀದಿಸಲು ಉಕ್ರೇನ್-ರಷ್ಯಾ ನಡುವಣ ಯುದ್ಧ ಕೂಡ ಪ್ರಮುಖ ಕಾರಣ. ಯುದ್ಧದ ನಂತರ ಪೌಲ್ಟ್ರಿ ಆಹಾರ ಮತ್ತು ಕಚ್ಚಾ ವಸ್ತುಗಳ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಾಯಿತು. ಈ ಕಾರಣದಿಂದ ಅತಿ ಹೆಚ್ಚು ಮೊಟ್ಟೆ ಉತ್ಪಾದಿಸುವ ದೇಶವಾದ ಟರ್ಕಿ ದರ ಹೆಚ್ಚಳ ಮಾಡಿತು. 360 ಮೊಟ್ಟೆಗಳುಳ್ಳ ಒಂದು ಬಾಕ್ಸ್​ಗೆ ಟರ್ಕಿಯಲ್ಲಿ ಸಾಮಾನ್ಯವಾಗಿ 18ರಿಂದ 20 ಡಾಲರ್ ಇರುತ್ತಿತ್ತು. ಆದರೆ, ಕಳೆದ ತಿಂಗಳು ಇದನ್ನು 36 ಡಾಲರ್​ಗೆ ಹೆಚ್ಚಿಸಲಾಗಿತ್ತು. ಟರ್ಕಿಯ ಮೊಟ್ಟೆ ದರಕ್ಕೆ ಹೋಲಿಸಿದರೆ ನಾಮಕ್ಕಲ್ ಮೊಟ್ಟೆಯ ದರ ಕಡಿಮೆ ಇದೆ. ಹೀಗಾಗಿ ಯುಎಇ, ಕತಾರ್ ಹಾಗೂ ಒಮಾನ್​ನಂಥ ದೇಶಗಳು ನಮ್ಮಿಂದ ಹೆಚ್ಚು ಮೊಟ್ಟೆ ಖರೀದಿಗೆ ಮುಂದಾಗಿವೆ ಎಂದು ‘ಟಿವಿ 9 ನೆಟ್​ವರ್ಕ್​’ನ ಅಂಗಸಂಸ್ಥೆ ‘ನ್ಯೂಸ್ 9’ಗೆ ನಾಮಕ್ಕಲ್​ನ ರಫ್ತು ಉದ್ಯಮಿ ಎನ್. ಧರ್ಮಲಿಂಗಂ ತಿಳಿಸಿದ್ದಾರೆ.

ಈ ಮಧ್ಯೆ, ಹಕ್ಕಿ ಜ್ವರ ಮುಕ್ತ ಮೊಟ್ಟೆ ಉತ್ಪಾದನಾ ವಲಯ ಎಂಬ ಟ್ಯಾಗ್​ ಅನ್ನು ನಾಮಕ್ಕಲ್​ಗೆ ನೀಡಬೇಕು ಎಂದು ರಫ್ತುದಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರಿಂದ ರಫ್ತು ಹೆಚ್ಚಳಕ್ಕೆ ಇನ್ನಷ್ಟು ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada