
ಬೆಂಗಳೂರು, ಮೇ 8: ಮೊನ್ನೆ ತಡರಾತ್ರಿ ಭಾರತದ ಮಿಲಿಟರಿ ಪಡೆಗಳು ಆಪರೇಷನ್ ಸಿಂದೂರ (Operation Sindoor) ಕೈಗೊಂಡು ಪಾಕಿಸ್ತಾನದಲ್ಲಿರುವ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಿವೆ. ಪಾಕಿಸ್ತಾನದ ವಾಯು ಪ್ರದೇಶ ಪ್ರವೇಶಿಸದೆಯೇ ವಿವಿಧ ರೀತಿಯ ಕ್ಷಿಪಣಿಗಳ ಮೂಲಕ ನಿರ್ದಿಷ್ಟ ಸ್ಥಳಗಳನ್ನು ಗುರಿ ಮಾಡಲಾಗಿತ್ತು. ನಾಗರಿಕರಿಗೆ ಹಾನಿಯಾಗದಂತೆ, ಕೇವಲ ಉಗ್ರರಿರುವ ಕಟ್ಟಡವನ್ನು ಟಾರ್ಗೆಟ್ ಮಾಡಲಾಗಿದ್ದು ವಿಶೇಷ. ಅದಕ್ಕಾಗಿ ವಾಯುಪಡೆಯ ಬತ್ತಳಿಕೆಯಲ್ಲಿರುವ ಸ್ಕಾಲ್ಪ್ ಕ್ಷಿಪಣಿ (SCALP missiles), ಹ್ಯಾಮರ್ ಬಾಂಬ್ (AASM Hammer bombs) ಮತ್ತು ಲಾಯ್ಟರಿಂಗ್ ಮ್ಯೂನಿಶನ್ಗಳನ್ನು (Loitering munitions) ಈ ದಾಳಿಗೆ ಬಳಸಲಾಗಿತ್ತು. ಇದರಲ್ಲಿ ಹ್ಯಾಮರ್ ಬಾಂಬ್ ಮತ್ತು ಮ್ಯುನಿಶನ್ಗಳ ತಯಾರಿಕೆಯಲ್ಲಿ ಬೆಂಗಳೂರಿನ ಕಂಪನಿಗಳ ಪಾತ್ರ ಇರುವುದು ಹೆಮ್ಮೆಯ ವಿಚಾರ. ಮೇಲೆ ತಿಳಿಸಿದ ಕ್ಷಿಪಣಿ, ಬಾಂಬ್ ಮತ್ತು ಮ್ಯುನಿಶನ್ಗಳು ಯಾವ್ಯಾವ ಕಂಪನಿಗಳು ತಯಾರಿಸುತ್ತವೆ ಎನ್ನುವ ವಿವರ ಇಲ್ಲಿದೆ:
ಆಪರೇಷನ್ ಸಿಂದೂರದಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ಷಿಪಣಿಗಳೆಂದರೆ ಅದು ಸ್ಕಾಲ್ಪ್. ಇದು ಫ್ರಾನ್ಸ್ ಮತ್ತು ಬ್ರಿಟನ್ ಮೂಲದ ಎಂಬಿಡಿಎ ಎನ್ನುವ ಕಂಪನಿ ತಯಾರಿಸಿದ ಕ್ಷಿಪಣಿಯಾಗಿದೆ. ದೂರ ಶ್ರೇಣಿಯ, ಅಂದರೆ ದೂರ ಸ್ಥಳದಲ್ಲಿರುವ ಗುರಿಯನ್ನು ನಿಖರವಾಗಿ ಇದು ತಲುಪಬಲ್ಲುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿಗಳು ಪೂರ್ಣವಾಗಿ ಯೂರೋಪ್ನಲ್ಲೇ ತಯಾರಾಗಿವೆ.
ಇದನ್ನೂ ಓದಿ: ಶತ್ರುಗಳ ಮೇಲೆ ಕಣ್ಣಿಡಲು 52 ಸ್ಪೈ ಸೆಟಿಲೈಟ್ಗಳ ನಿಯೋಜನೆಗೆ ಭಾರತ ನಿರ್ಧಾರ
ಎಎಎಸ್ಎಂ ಹ್ಯಾಮರ್ ಬಾಂಬ್ ಎಂಬುದು ಒಂದು ರೀತಿಯ ಬಾಂಬ್ಗಳನ್ನು ಹೊತ್ತೊಯ್ಯುವ ಮ್ಯೂನಿಶನ್ ಆಗಿದೆ. ಫ್ರಾನ್ಸ್ ದೇಶದ ಸಫ್ರಾನ್ ಎಲೆಕ್ಟ್ರಾನಿಕ್ಸ್ ಅಂಡ್ ಡಿಫೆನ್ಸ್ ಎನ್ನುವ ಸಂಸ್ಥೆಯು ಈ ಮ್ಯುನಿಶನ್ನ ಮೂಲ ತಯಾರಿಕಾ ಸಂಸ್ಥೆ. ಭಾರತದ ಮಿಲಿಟರಿಗಾಗಿ ಸರಬರಾಜು ಮಾಡಲಾಗುವ ಎಎಎಸ್ಎಂ ಹ್ಯಾಮರ್ ಬಾಂಬ್ಗಳನ್ನು ಭಾರತದಲ್ಲೇ ಸಫ್ರಾನ್ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆ ತಯಾರಿಸುತ್ತದೆ.
ಆಪರೇಷನ್ ಸಿಂದೂರ್ನಲ್ಲಿ ಲಾಯ್ಟರಿಂಗ್ ಮ್ಯೂನಿಶನ್ಗಳನ್ನೂ ಬಳಸಲಾಗಿತ್ತು. ಇವು ಡ್ರೋನ್ ರೀತಿಯ ಕ್ಷಿಪಣಿಗಳಾಗಿವೆ. ಕಾಮಿಕೇಜ್ ಡ್ರೋನ್ಸ್ ಎಂದೂ ಹೆಸರುವಾಸಿಯಾಗಿವೆ. ಹದ್ದಿನ ಹಾಗೆ ಮೇಲೆ ಹಾರಾಡುತ್ತಾ, ಸರಿಯಾದ ಸಮಯಕ್ಕೆ ಕಾದು ಗುರಿಯ ಮೇಲೆ ಪ್ರಹಾರ ಮಾಡುವುದಕ್ಕೆ ಇವುಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಮೂರ್ನಾಲ್ಕು ಕಂಪನಿಗಳು ಈ ರೀತಿಯ ಲಾಯ್ಟರಿಂಗ್ ಮ್ಯೂನಿಶನ್ಗಳನ್ನು ತಯಾರಿಸುತ್ತಿವೆ.
ಇದನ್ನೂ ಓದಿ: ಹಾವಿಗೆ ಹಾಲೆರದರೇನು ಫಲ..! ಟರ್ಕಿ ಜೊತೆ ಎಂಥ ಫ್ರೆಂಡ್ಶಿಪ್? ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡ ತಜ್ಞರು
ಇಸ್ರೇಲ್ನ ಎಲ್ಬಿಟ್ ಸಿಸ್ಟಮ್ಸ್ ಜೊತೆ ಸೇರಿ ಭಾರತದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಯಿಂದ ಸ್ಕೈ ಸ್ಟ್ರೈಕರ್ ಲಾಯ್ಟರಿಂಗ್ ಮ್ಯುನಿಶನ್ಗಳ ತಯಾರಿಕೆ ಆಗುತ್ತಿದೆ.
ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ಎಕನಾಮಿಕ್ ಎಕ್ಸ್ಪ್ಲೋಸಿವ್ಸ್, ಬೆಂಗಳೂರಿನ ನ್ಯೂಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್ ಸಂಸ್ಥೆಗಳೂ ಕೂಡ ಲಾಯ್ಟರಿಂಗ್ ಮ್ಯುನಿಶನ್ಗಳ ತಯಾರಿಕೆಯಲ್ಲಿ ತೊಡಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Thu, 8 May 25