
ನವದೆಹಲಿ, ಮೇ 7: ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸಿ 26 ಪ್ರಯಾಣಿಕರನ್ನು ಬಲಿಪಡೆದ ಘಟನೆಗೆ ಪ್ರತಿಯಾಗಿ ಭಾರತೀಯ ಸೇನೆ ಇವತ್ತು ತಡರಾತ್ರಿ ಪಾಕಿಸ್ತಾನದೊಳಗೆ 9 ಉಗ್ರರ ತಾಣಗಳ ಮೇಲೆ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ. ಆಪರೇಷನ್ ಸಿಂಧೂರ್ ಹೆಸರಲ್ಲಿ ನಡೆಸಲಾದ ಈ ಕಾರ್ಯಾಚರಣೆಗೆ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರುವ ಮಾಹಿತಿ ಇದೆ. ಈ ಘಟನೆಗೆ ಷೇರುಮಾರುಕಟ್ಟೆ ಪ್ರತಿಕ್ರಿಯೆ ಮಿಶ್ರ ರೀತಿಯಲ್ಲಿದೆ. ಮಾರುಕಟ್ಟೆಯಲ್ಲಿ ತೀರಾ ಏರುಪೇರಾಗಿಲ್ಲ. ಒಟ್ಟಾರೆ ಪೇಟೆ ಕೆಂಪುಬಣ್ಣದಲ್ಲಿದೆ. ಹೆಚ್ಚಿನ ಸೂಚ್ಯಂಕಗಳು ಕುಸಿತ ಕಂಡಿವೆ. ವ್ಯವಹಾರ ಆರಂಭವಾದಾಗ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾಕಷ್ಟು ಕುಸಿತ ಕಂಡರೂ ಬಳಿಕ ಚೇತರಿಸಿಕೊಂಡಿವೆ. ಅದರಲ್ಲೂ ಡಿಫೆನ್ಸ್ ಸ್ಟಾಕ್ಗಳು ಬೇಡಿಕೆ ಪಡೆಯುತ್ತಿವೆ.
ಸೆನ್ಸೆಕ್ಸ್ ಇವತ್ತು ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ 230 ಅಂಕಗಳವರೆಗೆ ಕುಸಿತ ಕಂಡಿತ್ತು. ಒಂದು ಹಂತದಲ್ಲಿ 79,937 ಅಂಕಗಳಿಗೆ ಇಳಿಕೆ ಆಗಿತ್ತು. ನಿಫ್ಟಿ ಸೂಚ್ಯಂಕ ಕೂಡ ಇವತ್ತು ಒಂದು ಹಂತದಲ್ಲಿ 24,220 ಅಂಕಗಳಿಗೆ ಕುಸಿತ ಕಂಡಿತ್ತು. ಸೆನ್ಸೆಕ್ಸ್ ಈಗ ಚೇತರಿಸಿಕೊಂಡು 80,505 ಅಂಕಗಳ ಮಟ್ಟ ತಲುಪಿದೆ. ನಿಫ್ಟಿ ಕೂಡ 24,344 ಅಂಕಗಳಿಗೆ ಚೇತರಿಸಿಕೊಂಡಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್, ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ
ಇವತ್ತು ಆರಂಭಿಕ ಹಿನ್ನಡೆ ಕಂಡರೂ ಮಾರುಕಟ್ಟೆಯು ಸಕಾರಾತ್ಮಕವಾಗಿ ದಿನಾಂತ್ಯಗೊಳಿಸುವ ಸಾಧ್ಯತೆ ಕಾಣುತ್ತಿದೆ. ಭಯದ ಸೂಚಿಯಾದ ವಿಐಎಕ್ಸ್ ಕೂಡ ಬೆಳಗ್ಗೆ 10:30 ರಲ್ಲಿ ಇಳಿಕೆ ಆಗಿತ್ತು. ಇದು ಮಾರುಕಟ್ಟೆ ಮತ್ತೆ ಹೊಸ ಹುರುಪು ಪಡೆದುಕೊಳ್ಳುವ ಸಂಕೇತವಾಗಿ ಪರಿಗಣಿಸಬಹುದು.
ಬ್ಯಾಂಕಿಂಗ್, ಆಟೊಮೊಬೈಲ್, ಮೆಟಲ್ ಸ್ಟಾಕುಗಳು ಇವತ್ತು ಬುಧವಾರ ಏರಿಕೆ ಆಗುತ್ತಿವೆ. ಡಿಫೆನ್ಸ್ ಸ್ಟಾಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕ್ಷೇತ್ರದಲ್ಲಿರುವ ಮಜಗಾಂವ್ ಡಾಕ್, ಎಚ್ಎಎಲ್ ಇತ್ಯಾದಿ ಕಂಪನಿಗಳ ಷೇರುಬೆಲೆ ಇವತ್ತು ಏರುತ್ತಿದೆ.
ಇದನ್ನೂ ಓದಿ: ಇದು ಮೋದಿ ಸಂಖ್ಯಾಶಾಸ್ತ್ರ : 11,12,13 ದಿನಗಳ ಅಂತರದಲ್ಲಿ ಪಾಕ್ ಮೇಲೆ ಮಹತ್ವದ ದಾಳಿ
ಮಜಗಾನ್ ಡಾಕ್ ಶಿಪ್ಬ್ಯುಲ್ಡ್ಸ್ ಷೇರು ಶೇ. 2ರಷ್ಟು ಏರಿದರೆ, ಎಚ್ಎಎಲ್ ಶೇ. 1.5, ಹಾಗೂ ಬಿಇಎಲ್ ಶೇ. 1.22ರಷ್ಟು ಏರಿದೆ. ಎನ್ಎಸ್ಇನಲ್ಲಿರುವ ನಿಫ್ಟಿ ಡಿಫೆನ್ಸ್ ಇಂಡೆಕ್ಸ್ ಶೇ. 1ರಷ್ಟು ಏರಿಕೆ ಆಗಿದ್ದು ಗಮನಾರ್ಹ.
ಆಪರೇಷನ್ ಸಿಂಧೂರ್ನಿಂದ ಭಾರತದ ಮಾರುಕಟ್ಟೆ ಮೇಲೆ ಏನೇ ಪರಿಣಾಮವಾದರೂ ಅದು ತೀವ್ರ ಮಟ್ಟದಲ್ಲಿ ಆಗದು, ಹಾಗೂ ಆ ಹಿನ್ನಡೆ ತಾತ್ಕಾಲಿಕ ಮಾತ್ರ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ