
ಆಪರೇಷನ್ ಸಿಂದೂರ್ನಲ್ಲಿ (Operation Sindoor) ಭಾರತದ ದೈತ್ಯ ಶಕ್ತಿ ಮತ್ತು ಸಾಮರ್ಥ್ಯ ಜಗಜ್ಜಾಹೀರುಗೊಂಡಿದೆ. ಪಾಕಿಸ್ತಾನದ ಅಪಾರ ಪ್ರಮಾಣದ ಡ್ರೋನ್, ಕ್ಷಿಪಣಿಗಳನ್ನು ತಡೆದಿರುವುದೂ ಸೇರಿ, ಅಲ್ಲಿಯ ಉಗ್ರರು ಮತ್ತು ಮಿಲಿಟರಿ ನೆಲೆಗಳನ್ನು ನಾಶ ಮಾಡುವವರೆಗೂ ಭಾರತ ತನ್ನ ಪರಾಕ್ರಮ ತೋರಿದೆ. ಆದರೆ, ಗಮನಿಸಲೇಬೇಕಾದ ಒಂದು ಅಂಶ ಎಂದರೆ ಭಾರತವು ತನ್ನ ಶಸ್ತ್ರಾಸ್ತ್ರಗಳಿಗೆ ಬೇರೆ ದೇಶಗಳನ್ನು ಅವಲಂಬಿಸಿದ್ದು ಬಹಳ ಕಡಿಮೆ. ಭಾರತ ಬಳಿಸಿದ ಹೆಚ್ಚಿನ ಶಸ್ತ್ರಾಸ್ತ್ರಗಳು ದೇಶೀಯವಾಗಿ ಅಭಿವೃದ್ಧಿಪಡಿಸಿದ್ದಂಥವೇ. ಆ ಮಟ್ಟಿಗೆ ಆತ್ಮನಿರ್ಭರ್ ಭಾರತ್ ಅಥವಾ ಸ್ವಾವಲಂಬಿ ಭಾರತ್ ಎನ್ನುವುದು ಪರಿಣಾಮಕಾರಿ ಎನಿಸಿದೆ.
ಭಾರತದ ಏರ್ ಡಿಫೆನ್ಸ್ ವ್ಯವಸ್ಥೆಯು ವಿವಿಧ ಏರ್ ಡಿಫೆನ್ಸ್ ಸಿಸ್ಟಂಗಳ ಸಂಕೀರ್ಣ ಸಂಯೋಜನೆಯಾಗಿದೆ. ಇಸ್ರೇಲ್ನ ಐರನ್ ಡೋಮ್, ರಷ್ಯಾದ ಎಸ್-400 ಇದರ ಭಾಗ ಮಾತ್ರ. ಭಾರತವೇ ಸ್ವಂತವಾಗಿ ಅಭಿವೃದ್ಧಿಪಡಿಸಿದ ಡಿಫೆನ್ಸ್ ಸಿಸ್ಟಂಗಳು ಭಾರತಕ್ಕೆ ಅಭೇದ್ಯ ರಕ್ಷಣಾ ಕೋಟೆ ನಿರ್ಮಿಸಲು ಸಹಾಯವಾಗಿವೆ.
ಪೆಚೋರಾ, ಒಎಸ್ಎ-ಎಕೆ, ಎಲ್ಎಲ್ಎಡಿ ಗನ್ ಇತ್ಯಾದಿ ಏರ್ ಡಿಫೆನ್ಸ್ ಸಿಸ್ಟಂಗಳಿವೆ. ಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ಆಕಾಶ್ ಏರ್ ಮಿಸೈಲ್ ಸಿಸ್ಟಂ ಇದೆ. ಆಕಾಶ್ ಸಿಸ್ಟಂ ಏಕಕಾಲದಲ್ಲಿ ಹಲವು ಟಾರ್ಗೆಟ್ಗಳನ್ನು ಟ್ರ್ಯಾಕ್ ಮಾಡಿ ಹೊಡೆಯಬಲ್ಲುದು.
ಭಾರತದ ವಾಯುಪಡೆಯು ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಂ ಮೂಲಕ ಎಲ್ಲಾ ಏರ್ ಡಿಫೆನ್ಸ್ ಸಿಸ್ಟಂಗಳನ್ನು ಏಕೀಕೃತಗೊಳಿಸಿ ಕಾರ್ಯಾಚರಣೆ ಕ್ಷಮತೆ ಹೆಚ್ಚಿಸುವಂತೆ ಮಾಡಿತು.
ಇದನ್ನೂ ಓದಿ: ಭಾರತದಿಂದ ಭಾರ್ಗವಾಸ್ತ್ರ ಪರೀಕ್ಷೆ; ಡ್ರೋನ್ಗಳನ್ನು ಚಿಂದಿ ಉಡಾಯಿಸಲು ಭಾರತಕ್ಕೆ ಹೊಸ ಶಕ್ತಿ
ಭಾರತ ಕೇವಲ 23 ನಿಮಿಷದಲ್ಲಿ ಪಾಕಿಸ್ತಾನದ 11 ಮಿಲಿಟರಿ ನೆಲೆಗಳನ್ನು ಉಡಾಯಿಸಿತ್ತು. ಚೀನೀ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂಗಳನ್ನು ನಿಷ್ಕ್ರಿಯಗೊಳಿಸಿ ಈ ಕಾರ್ಯ ಮಾಡಲಾಗಿತ್ತು. ಈ ದಾಳಿಯಲ್ಲಿ ಲಾಯ್ಟರಿಂಗ್ ಮ್ಯೂನಿಶನ್ಸ್, ಲಾಂಗ್ ರೇಂಜ್ ಡ್ರೋನ್ಗಳನ್ನೂ ಬಳಸಲಾಗಿತ್ತು. ಈ ಡ್ರೋನ್ಗಳೆಲ್ಲವನ್ನೂ ಭಾರತೀಯ ಕಂಪನಿಗಳೇ ತಯಾರಿಸಿದ್ದುವು. ಅಮೆರಿಕವನ್ನೂ ಬೆಚ್ಚಿಬೀಳಿಸಿದ ನೂರ್ ಖಾನ್ ಏರ್ ಬೇಸ್ ಮೇಲಿನ ದಾಳಿ ಮಾಡಿದ್ದು ಇದೇ ಲಾಯ್ಟರಿಂಗ್ ಮ್ಯೂನಿಶನ್ಗಳೇ.
ಪಾಕಿಸ್ತಾನಕ್ಕೆ ಚೀನಾ ಮತ್ತು ಟರ್ಕಿ ಸಾಕಷ್ಟು ಯುದ್ಧೋಪಕರಣಗಳನ್ನು ಒದಗಿಸುತ್ತವೆ ಎಂಬುದಕ್ಕೆ ಆಪರೇಷನ್ ಸಿಂದೂರ ಸಾಕಷ್ಟು ಪುರಾವೆ ನೀಡಿದೆ. ಚೀನೀ ನಿರ್ಮಿತ ಪಿಎಲ್-15 ಕ್ಷಿಪಣಿಗಳು ಭಾರತದ ಡಿಫೆನ್ಸ್ ಸಿಸ್ಟಂಗೆ ಸಿಕ್ಕು ನಾಶವಾಗಿವೆ. ಟರ್ಕಿಯ ಯೀಹಾ ಡ್ರೋನ್ಗಳು ಉದುರಿಬಿದ್ದಿವೆ.
ಪಾಕಿಸ್ತಾನದಿಂದ ಯಾವಾಗ ಯಾವ ರೂಪದಿಂದಲಾದರೂ ಅಪಾಯದ ದಾಳಿ ಬರಬಹುದಿತ್ತು. ಅದಕ್ಕಾಗಿ ಡ್ರೋನ್ ನಾಶಕ ಸಿಸ್ಟಂ, ಲೆಗಸಿ ಏರ್ ಡಿಫೆನ್ಸ್ ವೆಪನ್, ಆಧುನಿಕ ಏರ್ ಡಿಫೆನ್ಸ್ ಸಿಸ್ಟಂ ಇತ್ಯಾದಿ ಎಳೆಗಳ ವ್ಯವಸ್ಥೆ ಮಾಡಲಾಗಿತ್ತು. ಇಸ್ರೋದಿಂದ 24 ಗಂಟೆಯೂ ವೀಕ್ಷಿಸುವ ಹತ್ತಕ್ಕೂ ಹೆಚ್ಚು ಸೆಟಿಲೈಟ್ಗಳಿದ್ದುವು. 7,000 ಕಿಮೀ ಉದ್ದಕ್ಕೂ ಇರುವ ಕರಾವಳಿ ಪ್ರದೇಶ ಹಾಗೂ ಚೀನಾ ಗಡಿ ಉದ್ದಕ್ಕೂ ಇರುವ ಎಲ್ಲಾ ಪ್ರದೇಶಗಳಲ್ಲೂ ಈ ಸೆಟಿಲೈಟ್ಗಳಿಂದ ಕಣ್ಗಾವಲು ಇಡಲಾಗಿ್ತು.
ಭಾರತದಲ್ಲಿ ಡ್ರೋನ್ ಉದ್ಯಮ ಗಣನೀಯವಾಗಿ ಬೆಳೆಯುತ್ತಿದೆ. ಆಪರೇಷನ್ ಸಿಂದೂರದಲ್ಲಿ ಭಾರತದ ಡ್ರೋನ್ಗಳ ಸಾಮರ್ಥ್ಯ ಸಾಬೀತಾಗಿದೆ. ಬೆಂಗಳೂರಿನ ಆಲ್ಫಾ ಡಿಸೈನ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಪರಸ್ ಡಿಫೆನ್ಸ್, ಐಜಿ ಡ್ರೋನ್ಸ್ ಇತ್ಯಾದಿ ಕಂಪನಿಗಳು ಡ್ರೋನ್ ತಯಾರಿಕೆಯಲ್ಲಿ ಪಳಗಿವೆ.
ಇದನ್ನೂ ಓದಿ: ಆಪರೇಷನ್ ಸಿಂದೂರ, ಹೀರೋ ಆದ ಆಕಾಶತೀರ; ಬೆಂಗಳೂರಿನ ಕಂಪನಿ ನಿರ್ಮಿಸಿದ ಅಭೇದ್ಯ ರಕ್ಷಣಾ ಕೋಟೆ ಅಂತಿಂಥದ್ದಲ್ಲ…
ಭಾರತದಲ್ಲಿ 550ಕ್ಕೂ ಹೆಚ್ಚು ಡ್ರೋನ್ ಕಂಪನಿಗಳಿವೆ. 5,500ಕ್ಕೂ ಅಧಿಕ ಡ್ರೋನ್ ಪೈಲಟ್ಗಳಿದ್ದಾರೆ. 2030ರೊಳಗೆ ಭಾರತವನ್ನು ಜಾಗತಿಕ ಡ್ರೋನ್ ಹಬ್ ಆಗಿ ಮಾಡುವ ಗುರಿ ಇದೆ.
ಭಾರತದ ಡಿಫೆನ್ಸ್ ಕ್ಷೇತ್ರದಿಂದ 2024-25ರಲ್ಲಿ ದಾಖಲೆಯ 24,000 ಕೋಟಿ ರೂ ರಫ್ತಾಗಿದೆ. ಇದು ಈವರೆಗಿನ ಗರಿಷ್ಠ ರಫ್ತು. 2029ರೊಳಗೆ ಇದಕ್ಕಿಂತ ಎರಡು ಪಟ್ಟು ರಫ್ತು ಮಾಡುವ ಗುರಿ ಇದೆ. 2047ರೊಳಗೆ ಭಾರತವು ವಿಶ್ವದ ಅತಿದೊಡ್ಡ ಡಿಫೆನ್ಸ್ ಎಕ್ಸ್ಪೋರ್ಟರ್ ಆಗಬೇಕೆನ್ನುವ ಗುರಿ ಇಡಲಾಗಿದೆ.
ಧನುಷ್ ಆರ್ಟಿಲರಿ ಗನ್ ಸಿಸ್ಟಂ, ಎಟಿಎಜಿಎಸ್, ಬ್ಯಾಟಲ್ ಟ್ಯಾಂಕ್ ಅರ್ಜುನ್, ಲೈಟ್ ಸ್ಪೆಷಲಿಸ್ಟ್ ವೆಹಿಕಲ್, ಹೈ ಮೊಬಿಲಿಟಿ ವೆಹಿಕಲ್, ಎಲ್ಸಿಎ ತೇಜಸ್, ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್, ಲೈಟ್ ಯುಟಿಲಿಟಿ ಹೆಲಿಕಾಪ್ಟರ್, ಆಕಾಶ್ ಮಿಸೈಲ್ ಸಿಸ್ಟಂ, ವೆಪನ್ ಲೊಕೇಟಿಂಗ್ ರಾಡಾರ್, ಸಾಫ್ಟ್ವೇರ್ ಡಿಫೈನ್ಡ್ ರೇಡಿಯೋ ಹೀಗೆ ನಾನಾ ರೀತಿಯ ವೆಪನ್ ಸಿಸ್ಟಂಗಳನ್ನು ಭಾರತೀಯ ಕಂಪನಿಗಳು ಅಭಿವೃದ್ಧಿಪಡಿಸಿವೆ. ಸರ್ಕಾರವು ಆರ್ ಅಂಡ್ ಡಿ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದು, ಹಾಗು ಖಾಸಗಿ ವಲಯವನ್ನು ಡಿಫೆನ್ಸ್ ಸೆಕ್ಟರ್ಗೆ ಮುಕ್ತವಾಗಿ ಆಹ್ವಾನಿಸಿದ್ದು ಫಲ ಕೊಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ