2022ರ ಮೇ ತಿಂಗಳು ಒಂದರಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ 15,000ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಜಾಗತಿಕ ಸ್ಥೂಲ ಆರ್ಥಿಕ ಅಂಶಗಳು ಕಂಪೆನಿಗಳು, ಅದರಲ್ಲೂ ಸ್ಟಾರ್ಟ್ಅಪ್ಗಳ ಮೇಲೆ ಪರಿಣಾಮ ಬೀರಿವೆ. ಉದ್ಯೋಗದಿಂದ ತೆಗೆಯುವುದರ ಬಗ್ಗೆ ಸರಾಸರಿ ಲೆಕ್ಕವಿಡುವ layoffs.fyi ಪ್ರಕಾರ, 15000ಕ್ಕೂ ಹೆಚ್ಚು ಟೆಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ (Layoffs) ಎಂದು ಟೆಕ್ ಕ್ರಂಚ್ ವರದಿ ಮಾಡಿದೆ. ಕೊವಿಡ್19 ಆರಂಭವಾದ 2020ರ ಮಾರ್ಚ್ನಿಂದ ಜಾಗತಿಕವಾಗಿ 718 ಸ್ಟಾರ್ಟ್ಅಪ್ಗಳು 1.25 ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿವೆ. ಹೆಚ್ಚುತ್ತಿರುವ ಹಣದುಬ್ಬರ, ಆರ್ಥಿಕ ಕುಸಿತದ ಭೀತಿ ಮತ್ತು ರಷ್ಯಾ- ಉಕ್ರೇನ್ ಯುದ್ಧ ಹೀಗೆ ಹಲವು ಸಮಸ್ಯೆಗಳನ್ನು ಕಂಪೆನಿಗಳು ಎದುರಿಸುತ್ತಿವೆ.
ಮೆಟಾ (ಈ ಹಿಂದೆ ಫೇಸ್ಬುಕ್) ಮತ್ತು ಟ್ವಿಟ್ಟರ್ ಸಾರ್ವಜನಿಕವಾಗಿಯೇ ಘೋಷಿಸಿದಂತೆ, ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿದೆ. ಆದಾಯದ ಗುರಿಯನ್ನು ಮುಟ್ಟುವುದಕ್ಕೆ ಸಾಧ್ಯವಾಗಿಲ್ಲವಾದ್ದರಿಂದ ನೇಮಕಾತಿಯನ್ನು ನಿಧಾನ ಮಾಡಿರುವುದಾಗಿ ಸ್ನಾಪ್ಚಾಟ್ ಮಾತೃಸಂಸ್ಥೆಯಾದ ಸ್ನಾಪ್ ತಿಳಿಸಿದೆ. ಗುರುವಾರದಂದು ಇ-ಕಾಮರ್ಸ್ ಪ್ಲಾಟ್ಫಾರ್ಮ್ ವಿಟೆಕ್ಸ್ 193 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ತಿಳಿಸಿದೆ, ಅಮೆರಿಕದ ಕೇಂದ್ರಕಚೇರಿಯಲ್ಲಿ ಪೇಪಾಲ್ ಹತ್ತಾರು ಮಂದಿಯನ್ನು ಕೆಲಸದಿಂದ ತೆಗೆದಿದೆ. ದಿನಸಿಗಳನ್ನು ಡೆಲಿವರಿ ಮಾಡುವ ಇನ್ಸ್ಟಾಕಾರ್ಟ್ ನೇಮಕಾತಿಯನ್ನು ನಿಧಾನಗೊಳಿಸಿದೆ.
ಭಾರತದಲ್ಲಿ ಪುನರ್ರಚನೆ ಮತ್ತು ವೆಚ್ಚ ಕಡಿತದ ಹೆಸರಲ್ಲಿ 6000 ಮಂದಿಯ ಕೆಲಸಕ್ಕೆ ಕೊಕ್ ನೀಡಲಾಗಿದೆ. ಸರಿಯಾದ ಲಾಭ ತಂದುಕೊಡದ ವರ್ಟಿಕಲ್ಸ್ಗಳನ್ನು ಮುಚ್ಚಲಾಗಿದೆ. ಮಾರುಕಟ್ಟೆ ವೆಚ್ಚ ಕಡಿಮೆ ಮಾಡಲಾಗಿದೆ ಮತ್ತು ಹೊಸ ನೇಮಕಾತಿ ಸ್ಥಗಿತಗೊಳಿಸಲಾಗಿದೆ. ಎಡ್ಟೆಕ್ನಿಂದ ಇ-ಕಾಮರ್ಸ್ ತನಕ ಮತ್ತು ಹೆಲ್ತ್ಟೆಕ್ ವರ್ಟಿಕಲ್ಸ್ ತನಕ ಸಾವಿರಾರು ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಆರ್ಥಿಕ ಕುಸಿತದ ಸೂಚನೆ ಸಿಗುತ್ತಿದ್ದಂತೆ ಹಾಗೂ ಹಣದ ಸೆಲೆ ಬತ್ತುತ್ತಿರುವಂತೆ ಸನ್ನಿವೇಶ ಇನ್ನಷ್ಟು ಹದಗೆಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Vedantu Layoff: ವೇದಾಂತು ಕಂಪೆನಿಯಿಂದ ಶೇಕಡಾ 7ರಷ್ಟು ಅಥವಾ 424 ಉದ್ಯೋಗಿಗಳ ವಜಾ