
ನವದೆಹಲಿ, ಮಾರ್ಚ್ 9: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಜನವರಿ 14ರಿಂದ ಫೆಬ್ರುವರಿ 27ರವರೆಗೆ ನಡೆದ ಮಹಾಕುಂಭದಲ್ಲಿ ಸಾಕಷ್ಟು ಉದ್ದಿಮೆಗಳು ಗರಿಗೆದರಿದ್ದು, ಒಟ್ಟಾರೆ ಆರ್ಥಿಕ ಚಟುವಟಿಕೆಯ ಮೊತ್ತ ನಾಲ್ಕು ಲಕ್ಷ ಕೋಟಿ ರೂನಷ್ಟಾಗಿರುವ ಅಂದಾಜು ಇದೆ. ಬಹಳಷ್ಟು ಸ್ಥಳೀಯ ಸಣ್ಣ ಉದ್ದಿಮೆಗಳು ಹುರುಪು ಪಡೆದವು. ಇದೇ ವೇಳೆ, ಮಹಾ ಕುಂಭದಲ್ಲಿ ಖಾದಿ ಉತ್ಪನ್ನಗಳ (Khadi products) ಭರಪೂರ ಮಾರಾಟವಾಗಿರುವುದು ತಿಳಿದುಬಂದಿದೆ. ಕುಂಭಮೇಳ ಸ್ಥಳದಲ್ಲಿ ರಾಷ್ಟ್ರ ಮಟ್ಟದ ಖಾದಿ ಪ್ರದರ್ಶನ ಕೇಂದ್ರ ಆಯೋಜಿಸಲಾಗಿದ್ದು, ಅದರಲ್ಲಿ 12.02 ಕೋಟಿ ರೂ ಮೌಲ್ಯದ ಖಾದಿ ಉತ್ಪನ್ನಗಳ ಮಾರಾಟವಾಗಿದೆ. ಎಂಎಸ್ಎಂಇ ಸಚಿವಾಲಯದ ಅಡಿಯಲ್ಲಿ ಬರುವ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ- Khadi and Village Industries commission) ಛೇರ್ಮನ್ ಮನೋಜ್ ಕುಮಾರ್ ಈ ಮಾಹಿತಿ ನೀಡಿದ್ದಾರೆ.
ಖಾದಿ ಪ್ರದರ್ಶನದಲ್ಲಿ 98 ಖಾದಿ ಅಂಗಡಿಗಳು, 54 ಗುಡಿ ಕೈಗಾರಿಕೆ ಅಂಗಡಿಗಳನ್ನು ಸ್ಥಾಪಿಸಲಾಗಿತ್ತು. ಖಾದಿ ಉತ್ಪನ್ನಗಳ ಮಾರಾಟ 9.76 ಕೋಟಿ ರೂನಷ್ಟಾಗಿತ್ತು. ಗುಡಿ ಕೈಗಾರಿಕಾ ಉತ್ಪನ್ನಗಳ ಮಾರಾಟ 2.26 ಕೋಟಿ ರೂನಷ್ಟಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಐಫೋನ್ ತಯಾರಿಸುವ ಫಾಕ್ಸ್ಕಾನ್ಗೆ 6,970 ಕೋಟಿ ರೂ ಪ್ರೋತ್ಸಾಹಕ; ಬಜೆಟ್ನಲ್ಲಿ ಉದ್ಯಮ ವಲಯಕ್ಕೆ ಸಿಕ್ಕ ಪ್ರೋತ್ಸಾಹವೇನು?
ಖಾದಿ ಪ್ರದರ್ಶನ ಮೇಳದಲ್ಲಿ ಆರು ರಾಜ್ಯಗಳ 205 ಜೇನು ಸಾಕಾಣಿಕೆದಾರರಿಗೆ 2,050 ಜೇನುಹುಳು ಪೆಟ್ಟಿಗೆ, ಜೇನು ಕಾಲೊನಿ ಮತ್ತು ಟೂಲ್ಕಿಟ್ಗಳನ್ನು ನೀಡಲಾಯಿತು. ಕೆವಿಐಸಿ ಮುಖ್ಯಸ್ಥ ಮನೋಜ್ ಕುಮಾರ್ ಅವರು ದೆಹಲಿಯಿಂದಲೇ ಜೇನು ವಿತರಣೆ ಕಾರ್ಯಕ್ರಮ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮಗ್ರಾಮಗಳಲ್ಲಿ ಸಿಹಿ ಕ್ರಾಂತಿ (Sweet Revolution) ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಜೇನು ಯೋಜನೆ (Honey Mission) ಆರಂಭಿಸಲಾಗಿದೆ ಎಂದರು.
2016ರಲ್ಲಿ ಪ್ರಧಾನಿಗಳು ಶ್ವೇತ ಕ್ರಾಂತಿಯಂತೆ ಸಿಹಿಕ್ರಾಂತಿ ಆಗಬೇಕೆಂದು ಕರೆ ನೀಡಿದ್ದರು. ಶ್ವೇತ ಕ್ರಾಂತಿ ಎಂದರೆ ಹಾಲಿನ ಕ್ರಾಂತಿ. ಸಿಹಿಕ್ರಾಂತಿ ಎಂದರೆ ಜೇನಿನ ಕ್ರಾಂತಿ. ಪ್ರಧಾನಿಯವರು ತಮ್ಮ 75ನೇ ಸಂಚಿಕೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜೇನು ಕೃಷಿಯಿಂದಾಗುವ ಲಾಭಗಳ ಬಗ್ಗೆ ಮಾತನಾಡುತ್ತಾ, ಕೃಷಿಕರಿಗೆ ಅದು ಪ್ರಮುಖ ಆದಾಯ ಆಗಬಲ್ಲುದು ಎಂದಿದ್ದರು.
ಇದನ್ನೂ ಓದಿ: ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ, ಮುಂದುವರಿಸಿ ನಿಮ್ಮ ಎಸ್ಐಪಿ ಕಾಯಕ: ತಜ್ಞರ ಅನಿಸಿಕೆ
2017ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ‘ಹನಿ ಮಿಷನ್’ ಆರಂಭಿಸಿತು. ಇಲ್ಲಿಯವರೆಗೆ 20,000 ಫಲಾನುಭವಿಗಳಿಗೆ ಎರಡು ಲಕ್ಷ ಜೇನುಪೆಟ್ಟಿಗೆ, ಜೇನು ಕಾಲೊನಿಗಳನ್ನು ನೀಡಲಾಗಿದೆ.
ಜೇನು ಉತ್ಪನ್ನಗಳಿಗೆ ಬಹಳ ಬೇಡಿಕೆ ಇದೆ. ಔಷಧ, ಆಹಾರ, ಜವಳಿ, ಕಾಸ್ಮೆಟಿಕ್ ಉದ್ಯಮಗಳಿಗೆ ಜೇನು ಅವಶ್ಯಕತೆ ಇದೆ. ಇದರಿಂದ ಕೃಷಿಕರಿಗೆ ಜೇನು ಸಾಕಾಣಿಕೆ ಪ್ರಮುಖ ಉಪಕಸುಬಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ