Union Budget 2022: ಈ ಬಾರಿಯೂ ಕಾಗದ ರಹಿತ ಬಜೆಟ್, ಹಲ್ವಾ ಕಾರ್ಯಕ್ರಮ ಇಲ್ಲ

Union Budget 2022: ಈ ಬಾರಿಯೂ ಕಾಗದ ರಹಿತ ಬಜೆಟ್, ಹಲ್ವಾ ಕಾರ್ಯಕ್ರಮ ಇಲ್ಲ
ಸಾಂದರ್ಭಿಕ ಚಿತ್ರ

ಈ ವರ್ಷ ಕೂಡ ಕಾಗದರಹಿತವಾದ ಬಜೆಟ್ ಮಂಡನೆ ಆಗಲಿದೆ. ಜತೆಗೆ ಹಲ್ವಾ ಕಾರ್ಯಕ್ರಮ ಇರುವುದಿಲ್ಲ. ಈ ಬಗ್ಗೆ ಇನ್ನಷ್ಟು ವಿವರಗಳು ಇಲ್ಲಿದೆ.

TV9kannada Web Team

| Edited By: Apurva Kumar Balegere

Jan 28, 2022 | 12:07 PM

ಕೊವಿಡ್19 ಮೂರನೇ ಅಲೆಯ ಮಧ್ಯೆ ಕೇಂದ್ರ ಬಜೆಟ್​ 2022-23ರ (Union Budget 2022) ಮಂಡನೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಇದೆ. ಜನವರಿಯಿಂದ ಲಕ್ಷಾಂತರ ಕೊರೊನಾ ಪ್ರಕರಣಗಳು ದಾಖಲಾಗಿವೆ. ಮೂರನೇ ಅಲೆಯ ಆತಂಕದ ಮಧ್ಯೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ 2022-23 ಅನ್ನು ಕಳೆದ ವರ್ಷದ ರೀತಿಯಲ್ಲೇ ಕಾಗದರಹಿತ ಫಾರ್ಮಾಟ್​ನಲ್ಲೇ ಮಂಡನೆ ಮಾಡಲಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಅಂದಹಾಗೆ, ಕೊರೊನಾ ಹಿನ್ನೆಲೆಯಲ್ಲಿ “ಹಲ್ವಾ ಕಾರ್ಯಕ್ರಮ” ಕೂಡ ಇರುವುದಿಲ್ಲ. “ಕೇಂದ್ರ ಬಜೆಟ್ 2022-23 ಅನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2022ರಂದು ಕಾಗದರಹಿತ ಫಾರ್ಮ್​ನಲ್ಲಿ ಮಂಡಿಸಲಿದ್ದಾರೆ,” ಎಂದು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಐತಿಹಾಸಿಕ ನಡೆಯಾಗಿ, ಕೇಂದ್ರ ಬಜೆಟ್ 2021-22 ಅನ್ನು ಮೊದಲ ಬಾರಿಗೆ ಕಾಗದರಹಿತವಾಗಿ ಮಂಡನೆ ಮಾಡಲಾಯಿತು. ಸಂಸತ್ ಸದಸ್ಯರಿಗೆ (MPs) ಮತ್ತು ಜನ ಸಾಮಾನ್ಯರಿಗೆ ಬಜೆಟ್ ದಾಖಲಾತಿಗೆ ತಡೆರಹಿತವಾದ ಸಂಪರ್ಕ ಕಲ್ಪಿಸಲು “ಯೂನಿಯನ್ ಬಜೆಟ್​ ಆ್ಯಪ್” ಆರಂಭಿಸಲಾಯಿತು. ಸಂಸತ್​ನಲ್ಲಿ ಫೆಬ್ರವರಿ 1, 2022ರಂದು ಬಜೆಟ್​ ಮಂಡನೆಯಾದ ನಂತರ ಕೇಂದ್ರ ಬಜೆಟ್ 2022-23 ಸಹ ಮೊಬೈಲ್ ಆ್ಯಪ್​ನಲ್ಲಿ ದೊರೆಯಲಿದೆ,​” ಎಂದು ಹೇಳಲಾಗಿದೆ. ಬಜೆಟ್​ ಆ್ಯಪ್ ಮೂಲಕ 14 ಕೇಂದ್ರ ಬಜೆಟ್​ನ ಡಾಕ್ಯುಮೆಂಟ್​ಗಳು ದೊರೆಯುತ್ತವೆ ಎಂದು ಸರ್ಕಾರ ಹೇಳಿದೆ. ಇದರಲ್ಲಿ ನಿರ್ಮಲಾ ಸೀತಾರಾಮನ್ ಅವರ ಬಜೆಟ್​ ಭಾಷಣವೂ ಒಳಗೊಂಡಿರುತ್ತದೆ. ಇದರ ಜತೆಗೆ ವಾರ್ಷಿಕ ಹಣಕಾಸು ಸ್ಟೇಟ್​ಮೆಂಟ್ (ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲಾಗುತ್ತದೆ), ಅನುದಾನದ ಬೇಡಿಕೆ (DG), ಹಣಕಾಸು ಮಸೂದೆ ಮತ್ತು ಇತರೆ, ಹೀಗೆ ಸಂವಿಧಾನದಲ್ಲಿ ತಿಳಿಸಿರುವುದೆಲ್ಲ ಒಳಗೊಂಡಿರುತ್ತದೆ.

“ಮೊಬೈಲ್ ಆ್ಯಪ್ ದ್ವಿಭಾಷೆ (ಇಂಗ್ಲಿಷ್ ಮತ್ತು ಹಿಂದಿಯಲ್ಲಿ) ಇದ್ದು ಮತ್ತು ಆಂಡ್ರಾಯಿಡ್ ಹಾಗೂ ಐಒಎಸ್​ ಪ್ಲಾಟ್​ಫಾರ್ಮ್​ಗಳಲ್ಲಿ ಲಭ್ಯ ಇದೆ. ಆ್ಯಪ್ ಅನ್ನು ಕೇಂದ್ರ ಬಜೆಟ್ ವೆಬ್ ಪೋರ್ಟಲ್ (www.indiabudget.gov.in) ಮೂಲಕ ಡೌನ್​ಲೋಡ್ ಮಾಡಬಹುದು. ಬಜೆಟ್ ಡಾಕ್ಯುಮೆಂಟ್​ಗಳು ಡೌನ್​ಲೋಡ್​ಗೆ ಸಾರ್ವಜನಿಕರು ಕೇಂದ್ರ ಬಜೆಟ್ ವೆಬ್​ ಪೋರ್ಟಲ್ (www.indiabudget.gov.in)ನಲ್ಲಿ ಪಡೆಯಬಹುದು,” ಎಂದು ಸರ್ಕಾರವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನು ಈ ವರ್ಷ “ಹಲ್ವಾ ಕಾರ್ಯಕ್ರಮ” ಇಲ್ಲ. ಇದರ ಬದಲಿಗೆ ಬಜೆಟ್ ದಾಖಲೆ ಸಿದ್ಧಪಡಿಸಲು ಭಾಗಿ ಆದವರಿಗೆ ಸಿಹಿ ವಿತರಿಸಲಾಗುತ್ತದೆ. “ಕೇಂದ್ರ ಬಜೆಟ್ ತಯಾರಿ ಪ್ರಕ್ರಿಯೆ ಅಂತಿಮ ಹಂತವನ್ನು ಗುರುತಿಸುವಂತೆ ಮುಖ್ಯ ಸಿಬ್ಬಂದಿಗೆ ಅವರವರ ಕೆಲಸದ ಸ್ಥಳಗಳಲ್ಲೇ ಸಿಹಿ ವಿತರಿಸಲಾಗುತ್ತದೆ. ಇಷ್ಟು ಸಮಯ ಪ್ರತಿ ವರ್ಷ ನಡೆದುಕೊಂಡ ಬಂದ ಹಲ್ವಾ ಕಾರ್ಯಕ್ರಮ ಇರುವುದಿಲ್ಲ. ಕೊರೊನಾ ಸನ್ನಿವೇಶವನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಆರೋಗ್ಯ ಸುರಕ್ಷತೆ ಪ್ರೊಟೋಕಾಲ್​ಗೆ ಅನುಗಣವಾಗಿ ಮಾಡಲಾಗುತ್ತಿದೆ,” ಎಂದು ಹಣಕಾಸು ಸಚಿವಾಲಯ ಹೇಳಿದೆ.

ಬಜೆಟ್​ನ ರಹಸ್ಯ ಕಾಪಾಡುವ ದೃಷ್ಟಿಯಿಂದ ಬಜೆಟ್​ ಸಿದ್ಧತೆಯಲ್ಲಿ ಭಾಗಿ ಆಗುವ ಅಧಿಕಾರಿಗಳು “ಲಾಕ್-ಇನ್” ಆಗಿರುತ್ತಾರೆ. ನಾರ್ತ್​ ಬ್ಲಾಕ್​ನ ಒಳಗೆ ಬಜೆಟ್ ಮುದ್ರಣಾಲಯ ಇದೆ. ಕೇಂದ್ರ ಬಜೆಟ್ ಮಂಡನೆ ಆಗುವವರೆಗೆ ಎಲ್ಲ ಅಧಿಕಾರಿಗಳು ಅಲ್ಲೇ ಇರುತ್ತಾರೆ. ಈ ಅಧಿಕಾರಿಗಳು ತಮ್ಮ ಹತ್ತಿರದವರು ಹಾಗೂ ಕುಟುಂಬದವರ ಸಂಪರ್ಕಕ್ಕೆ ಬರುವುದಿಲ್ಲ.

ಇದನ್ನೂ ಓದಿ: Budget 2022: ಬಜೆಟ್​ ಸಂದರ್ಭದಲ್ಲಿ ಮಾಡುವ ಹಲ್ವಾ ಕಾರ್ಯಕ್ರಮದ ಮಹತ್ವ ಏನು ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada