Google Investment: ಗೂಗಲ್ನಿಂದ ಭಾರ್ತಿ ಏರ್‌ಟೆಲ್ ಜತೆ ವಾಣಿಜ್ಯ ಒಪ್ಪಂದ, ಈಕ್ವಿಟಿ ಮೂಲಕ 7506 ಕೋಟಿ ರೂ. ಹೂಡಿಕೆ
ಸರ್ಚ್ ಎಂಜಿನ್ ದೈತ್ಯ ಕಂಪೆನಿಯಾದ ಗೂಗಲ್ನಿಂದ ಏರ್ಟೆಲ್ನಲ್ಲಿ 1 ಬಿಲಿಯನ್ ಯುಎಸ್ಡಿ ತನಕ ಈಕ್ವಿಟಿ ಹೂಡಿಕೆ ಮತ್ತು ವಾಣಿಜ್ಯ ಒಪ್ಪಂದದ ಮೂಲಕ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.

ಇಂಟರ್ನೆಟ್ ಸರ್ಚ್ ಎಂಜಿನ್ ಆದ ಗೂಗಲ್ (Google) ಭಾರ್ತಿ ಏರ್ಟೆಲ್ನಲ್ಲಿ ಈಕ್ವಿಟಿ ಷೇರು ಪ್ರಮಾಣವಾದ ಶೇ 1.28ರಷ್ಟು ಖರೀದಿ ಮಾಡುವ ಮೂಲಕ 1 ಬಿಲಿಯನ್ ಅಮೆರಿಕನ್ ಡಾಲರ್ (100 ಕೋಟಿ ಯುಎಸ್ಡಿ) ತನಕ ಹೂಡಿಕೆ ಮಾಡಲಿದೆ. ಪರಸ್ಪರ ನಿಯಮಾವಳಿಗಳಿಗೆ ಒಳಪಟ್ಟು, ಮುಂದಿನ ಐದು ವರ್ಷಗಳಿಗೆ ವಾಣಿಜ್ಯ ಒಪ್ಪಂದ ಇದಾಗಿದೆ. ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್ ಭಾಗವಾಗಿ ಗೂಗಲ್ ಈ ಮೊತ್ತವನ್ನು ಹೂಡಿಕೆ ಮಾಡಲಿದೆ. ಭಾರ್ತಿ ಏರ್ಟೆಲ್ನಲ್ಲಿ ಹೂಡಿಕೆ ಮಾಡುವ ಮೂಲಕ ದೇಶದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಎರಡರಲ್ಲೂ ಹೂಡಿಕೆ ಮಾಡಿದ ಸಂಸ್ಥೆ ಗೂಗಲ್ ಎನಿಸಿಕೊಂಡಿದೆ. 700 ಮಿಲಿಯನ್ ಡಾಲರ್ ಈಕ್ವಿಟಿ ಹೂಡಿಕೆ (ಪ್ರತಿ ಷೇರಿಗೆ ರೂ. 734) ಮತ್ತು 300 ಮಿಲಿಯನ್ ಡಾಲರ್ ವಾಣಿಜ್ಯ ಒಪ್ಪಂದ ಜಾರಿಗೆ ಆಗುತ್ತದೆ. ಇದರಲ್ಲಿ ಏರ್ಟೆಲ್ನ ಕೊಡುಗೆಗಳನ್ನು ಹೆಚ್ಚಿಸುವುದಕ್ಕೆ ಹೂಡಿಕೆ ಜಾಸ್ತಿ ಮಾಡಲಾಗುತ್ತದೆ. ಭಾರತದ ಡಿಜಿಟಲ್ ಎಕೋಸಿಸ್ಟಮ್ನಾದ್ಯಂತ ಸಂಪರ್ಕ ಮತ್ತು ಡಿಜಿಟಲ್ ಒಳಗೊಳ್ಳುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.
ಭಾರ್ತಿ ಏರ್‌ಟೆಲ್ ಅಧ್ಯಕ್ಷರಾದ ಸುನೀಲ್ ಭಾರ್ತಿ ಮಿತ್ತಲ್ ಮಾತನಾಡಿ, ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಹೊಸ ಉತ್ಪನ್ನಗಳ ಮೂಲಕ ಬೆಳೆಸಲು ಏರ್‌ಟೆಲ್ ಮತ್ತು ಗೂಗಲ್ ದೃಷ್ಟಿಕೋನ ಹಂಚಿಕೊಳ್ಳುತ್ತದೆ. ಭವಿಷ್ಯಕ್ಕೆ ಸಿದ್ಧವಾಗಿರುವ ನೆಟ್ವರ್ಕ್, ಡಿಜಿಟಲ್ ಪ್ಲಾಟ್ಫಾರ್ಮ್ಗಳು, ಕೊನೆ- ಹಂತದ ವಿತರಣೆ ಮತ್ತು ಪಾವತಿ ಎಕೋಸಿಸ್ಟಮ್ ಇವೆಲ್ಲದರಲ್ಲಿ ನಾವು ಗೂಗಲ್ ಜತೆಗೆ ಹತ್ತಿರವಾಗಿ ಕೆಲಸ ಮಾಡಲು, ಆ ಮೂಲಕ ಡಿಜಿಟಲ್ ಎಕೋಸಿಸ್ಟಮ್ನ ಆಳ ಹಾಗೂ ಅಗಲವನ್ನು ವಿಸ್ತರಿಸಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ವಾಣಿಜ್ಯ ಒಪ್ಪಂದಗಳನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪರಸ್ಪರ ಒಪ್ಪುವ ನಿಯಮಗಳ ಮೇಲೆ ಗುರುತಿಸಲಾಗುತ್ತದೆ ಮತ್ತು ಒಪ್ಪಿಕೊಳ್ಳಲಾಗುತ್ತದೆ ಎಂದು ಕಂಪೆನಿಗಳು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿವೆ.
ಏರ್‌ಟೆಲ್ ಮಂಡಳಿಯು ಶುಕ್ರವಾರ ಪ್ರಸ್ತಾವನೆಯನ್ನು ಅನುಮೋದಿಸಿದ ನಂತರ ಈ ಘೋಷಣೆ ಮಾಡಲಾಗಿದೆ. ದಿನದ ಅಂತ್ಯಕ್ಕೆ ಏರ್‌ಟೆಲ್ ಷೇರಿನ ಬೆಲೆ ಎನ್ಎಸ್ಯಲ್ಲಿ 715.80 ತಲುಪಿತ್ತು. ಅಂದಹಾಗೆ ಗೂಗಲ್ ಮತ್ತು ಏರ್‌ಟೆಲ್ ಮಧ್ಯದ ಈ ಒಪ್ಪಂದವು ಅಗತ್ಯ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ಮೊದಲ ವಾಣಿಜ್ಯ ಒಪ್ಪಂದವಾಗಿ ಏರ್‌ಟೆಲ್ ಹಾಗೂ ಗೂಗಲ್ ಒಟ್ಟಾಗಿ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕೆಲಸ ಮಾಡುವ ಸಾಧನಗಳನ್ನು ಗ್ರಾಹಕರಿಗೆ ದೊರಕಿಸಲಾಗುದು, ಅದು ಕೂಡ ಕೈಗೆಟುಕುವ ಬೆಲೆಯಲ್ಲಿ ಎಂದು ಕಂಪೆನಿಗಳು ಹೇಳಿವೆ.
ಗೂಗಲ್ ಮತ್ತು ಆಲ್ಫಾಬೇಟ್ ಸಿಇಒ ಸುಂದರ್ ಪಿಚೈ ಮಾತನಾಡಿ, ಏರ್‌ಟೆಲ್‌ನಲ್ಲಿನ ನಮ್ಮ ವಾಣಿಜ್ಯ ಮತ್ತು ಈಕ್ವಿಟಿ ಹೂಡಿಕೆಯು ಸ್ಮಾರ್ಟ್‌ಫೋನ್‌ಗಳಿಗೆ ಪ್ರವೇಶ ಹೆಚ್ಚಿಸಲು, ಹೊಸ ವ್ಯಾಪಾರ ಮಾದರಿಗಳನ್ನು ಬೆಂಬಲಿಸಲು ಕನೆಕ್ಟಿವಿಟಿ ಹೆಚ್ಚಿಸಲು ಮತ್ತು ಕಂಪೆನಿಗಳಿಗೆ ತಮ್ಮ ಡಿಜಿಟಲ್ ರೂಪಾಂತರದ ಪ್ರಯಾಣದಲ್ಲಿ ಸಹಾಯ ಮಾಡಲು ನಮ್ಮ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್‌ನ ಪ್ರಯತ್ನಗಳ ಮುಂದುವರಿಕೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Airtel Payments Bank: ಆರ್ಬಿಐನಿಂದ ಶೆಡ್ಯೂಲ್ ಬ್ಯಾಂಕ್ ಸ್ಥಾನ ಪಡೆದ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್