
ನವದೆಹಲಿ, ಮೇ 5: ಐಎಂಎಫ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸ್ಥಾನದಿಂದ ಕೆವಿ ಸುಬ್ರಮಣಿಯನ್ (KV Subramanian) ಹೊರಬಂದ ಬಳಿಕ ಖಾಲಿ ಇರುವ ಅವರ ಜಾಗಕ್ಕೆ ಪರಮೇಶ್ವರನ್ ಅಯ್ಯರ್ (Parameswaran Iyer) ಅವರನ್ನು ಆಯ್ಕೆ ಮಾಡಲಾಗಿದೆ. ಐಎಂಎಫ್ನ ಮಂಡಳಿಗೆ ಅಯ್ಯರ್ ಅವರು ಭಾರತದ ನಾಮಿನಿ ಡೈರೆಕ್ಟರ್ ಆಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ವರ್ಲ್ಡ್ ಬ್ಯಾಂಕ್ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಪರಮೇಶ್ವರನ್ ಅಯ್ಯರ್ ಅವರಿಗೆ ಐಎಂಎಫ್ನದ್ದು ಹೆಚ್ಚುವರಿ ಜವಾಬ್ದಾರಿಯಾಗಿರುತ್ತದೆ. ಮೇ 9ರಂದು ಮಹತ್ವದ ಐಎಂಎಫ್ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತುರ್ತಾಗಿ ತನ್ನ ಪ್ರತಿನಿಧಿಯನ್ನು ಸೇರಿಸಿದೆ.
ಐಎಂಎಫ್ ಬಳಿ ಪಾಕಿಸ್ತಾನದ ಎರಡು ಸಾಲಗಳ ಅರ್ಜಿ ವಿಚಾರ ಇದೆ. ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ನೆರವಾಗಲು 1.3 ಬಿಲಿಯನ್ ಡಾಲರ್ ಸಾಲಕ್ಕಾಗಿ ಪಾಕಿಸ್ತಾನ ಒಂದು ಅರ್ಜಿ ಹಾಕಿದೆ. ಹಾಗೆಯೇ, ಪಾಕಿಸ್ತಾನಕ್ಕೆ ನೀಡಲಾಗಿರುವ 7 ಬಿಲಿಯನ್ ಡಾಲರ್ ನೆರವಿನ ಪ್ಯಾಕೇಜ್ನ ಮೊದಲ ಪರಾಮರ್ಶೆಯೂ ಇದೆ. ಇವೆರಡೂ ವಿಚಾರಗಳು ಮೇ 9ರಂದು ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯಲ್ಲಿ ಪ್ರಸ್ತಾಪವಾಗಲಿವೆ. ಪಾಕಿಸ್ತಾನಕ್ಕೆ ಸಾಲದ ನೆರವು ನೀಡಬೇಕೋ ಬೇಡವೋ ಎಂಬುದನ್ನು ಅಂದು ನಿರ್ಧರಿಸಲಾಗುತ್ತದೆ.
ಪಹಲ್ಗಾಂನಲ್ಲಿ ಉಗ್ರರ ದಾಳಿ ಘಟನೆ ನಡೆದ ಬಳಿಕ ಪಾಕಿಸ್ತಾನವನ್ನು ಭಾರತ ವಿವಿಧ ಸ್ತರಗಳಲ್ಲಿ ಒತ್ತಡಕ್ಕೆ ಸಿಲುಕಿಸಲು ಯತ್ನಿಸುತ್ತಿದೆ. ಪಾಕಿಸ್ತಾನಕ್ಕೆ ಸಾಲ ನೀಡಿದರೆ ಆ ಹಣವು ಭಯೋತ್ಪಾದನೆಗೆ ದುರ್ಬಳಕೆ ಆಗುತ್ತದೆ ಎಂಬುದು ಭಾರತದ ಆಕ್ಷೇಪ. ಹೀಗಾಗಿ, ಪಾಕಿಸ್ತಾನಕ್ಕೆ ಸಾಲ ಸಿಗದಂತೆ ತೊಡರುಗಾಲು ಹಾಕಲು ಭಾರತ ಯತ್ನಿಸುತ್ತಿದೆ. ಹೀಗಾಗಿ, ಕೆವಿ ಸುಬ್ರಮಣಿಯನ್ ಅವರ ನಿರ್ಗಮನದಿಂದ ತೆರವಾದ ಕಾರ್ಯವಾಹಕ ನಿರ್ದೇಶಕ ಸ್ಥಾನಕ್ಕೆ ಪರಮೇಶ್ವರನ್ ಅಯ್ಯರ್ ಅವರನ್ನು ತುರ್ತಾಗಿ ಮತ್ತು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ಕೊಡಬೇಡಿ: ಐಎಂಎಫ್ಗೆ ಭಾರತ ಮನವಿ; ಈ ಸಾಲ ತಪ್ಪಿದರೆ ಪಾಕಿಸ್ತಾನಕ್ಕೆ ಏನು ಸಮಸ್ಯೆ?
ಈ ಮುಂಚೆ ಐಎಂಎಫ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸ್ಥಾನದಲ್ಲಿದ್ದ ಕೆವಿ ಸುಬ್ರಮಣಿಯನ್ ಅವರ ಅವಧಿ ಮುಗಿಯಲು ಇನ್ನೂ ಆರು ತಿಂಗಳಿತ್ತು. ಆದರೆ, ಭಾರತವು ಅವರನ್ನು ಹಿಂಪಡೆದುಕೊಂಡಿದ್ದು ಯಾಕೆ ಎಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಕೆಲ ಮಾಧ್ಯಮಗಳಲ್ಲಿ ಬಂದ ಮಾಹಿತಿ ಪ್ರಕಾರ, ಕೆವಿ ಸುಬ್ರಮಣಿಯನ್ ಅವರು ಐಎಂಎಫ್ನ ದತ್ತಾಂಶ ಸಂಗ್ರಹ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು, ಅಪಸ್ವರ ಎತ್ತಿದ್ದರು. ಇದು ಐಎಂಎಫ್ನ ಮುಂದಾಳುಗಳಿಗೆ ಪಥ್ಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಐಎಂಎಫ್ ಕಾರ್ಯವಾಹಕ ಮಂಡಳಿ ಸಭೆಯಲ್ಲಿ ಭಾರತದ ಪ್ರತಿನಿಧಿ ಇಲ್ಲದೇ ಹೋಗಿದ್ದರೆ ಶ್ರೀಲಂಕಾದ ಹರಿಷ್ಚಂದ್ರ ಗೆದರ ಅವರು ಕರ್ತವ್ಯ ನಿಭಾಯಿಸುತ್ತಿದ್ದರು.
ಐಎಂಎಫ್ ಬೋರ್ಡ್ನಲ್ಲಿ 25 ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳು ಇದ್ದಾರೆ. ಅಮೆರಿಕ, ಜಪಾನ್, ಚೀನಾ, ಜರ್ಮನಿ, ಫ್ರಾನ್ಸ್, ಬ್ರಿಟನ್, ಸೌದಿ ಅರೇಬಿಯಾ, ರಷ್ಯಾ ದೇಶಗಳು ಸ್ವತಂತ್ರ ಎಕ್ಸಿಕ್ಯೂಟಿವ್ ಡೈರೆಕ್ಟರ್ಸ್ ಹೊಂದಿವೆ. ಉಳಿದ ನಿರ್ದೇಶಕರು ಬೇರೆ ಬೇರೆ ಸಮೂಹಗಳನ್ನು ಪ್ರತಿನಿಧಿಸುತ್ತಾರೆ.
ಉದಾಹರಣೆಗೆ, ಸೌತ್ ಏಷ್ಯಾ ಕ್ಷೇತ್ರದಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭೂತಾನ್ ದೇಶಗಳಿವೆ. ಈ ನಾಲ್ಕು ದೇಶಗಳನ್ನು ಭಾರತದ ಸದಸ್ಯರೊಬ್ಬರು ಐಎಂಎಫ್ನಲ್ಲಿ ಪ್ರತಿನಿಧಿಸುತ್ತಾರೆ.
ಇದನ್ನೂ ಓದಿ: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ
ಹಾಗೆಯೇ, ಪಾಕಿಸ್ತಾನ ಇರುವ ಗುಂಪಿನಲ್ಲಿ ಇರಾನ್, ಆಲ್ಜೀರಿಯಾ, ಮೊರಾಕ್ಕೋ, ಟುನಿಶಿಯಾ, ಅಫ್ಘಾನಿಸ್ತಾನ್, ಘಾನಾ ಮತ್ತು ಲಿಬಿಯಾ ಇವೆ.
ಒಟ್ಟಾರೆ ಅಮೆರಿಕದ ಮತಕ್ಕೆ ಅತಿಹೆಚ್ಚು ವೈಟೇಜ್ ಇದೆ. ಶೇ. 16.49ರಷ್ಟು ವೇಟೇಜ್ ಇದೆ. ನಂತರದ ಸ್ಥಾನ ಶೇ. 6.14ರಷ್ಟು ವೈಟೇಜ್ ಇರುವ ಜಪಾನ್ ಬರುತ್ತದೆ. ಚೀನಾ ಶೇ. 6.08, ಜರ್ಮನಿ ಶೇ. 5.31, ಫ್ರಾನ್ಸ್ ಶೇ. 4.03, ಯುಕೆ ಶೇ. 4.03 ವೇಟೇಜ್ ಹೊಂದಿವೆ. ಭಾರತ ಪ್ರತಿನಿಧಿಸುವ ಸೌತ್ ಏಷ್ಯಾ ಬ್ಲಾಕ್ನ ವೈಟೇಜ್ ಶೇ. 3.05 ಇದೆ.
ಇಲ್ಲಿ ಪಾಕಿಸ್ತಾನಕ್ಕೆ ಸಾಲ ಮಂಜೂರು ಆಗಬೇಕೆಂದರೆ ಮತದಾನದಲ್ಲಿ ಸರಳ ಬಹುಮತ ಸಿಕ್ಕರೆ ಸಾಕಾಗಬಹುದು. ಈಗ ಅಂತಾರಾಷ್ಟ್ರೀಯ ಸ್ತರದಲ್ಲಿ ಪಾಕಿಸ್ತಾನದ ಉಗ್ರಪರ ಚಟುವಟಿಕೆಗಳ ಬಗ್ಗೆ ಭಾರತ ಸಾಕಷ್ಟು ಧ್ವನಿ ಎತ್ತುತ್ತಿದ್ದು, ಇದು ಐಎಂಎಫ್ನ ಮೇ 9ರ ಸಭೆಯಲ್ಲಿ ಪರಿಣಾಮ ಬೀರದೇ ಇರಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ