ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು; ರಾಜ್ಯಗಳಿಗೂ ಲಾಭ ಹಂಚಿಕೆ ಎಂದ ನಿರ್ಮಲಾ ಸೀತಾರಾಮನ್

Parliament approves Central Excise Amendment Bill: ಅಬಕಾರಿ ತಿದ್ದುಪಡಿ ಮಸೂದೆಗೆ ಲೋಕಸಭೆ ಬಳಿಕ ರಾಜ್ಯಸಭೆಯೂ ಅನುಮೋದನೆ ನೀಡಿದೆ. ಇದರೊಂದಿಗೆ ಈ ಮಸೂದೆಗೆ ಸಂಸತ್​ನ ಅಂಗೀಕಾರ ಸಿಕ್ಕಂತಾಗಿದೆ. ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆಯನ್ನೂ ಇದೇ ವೇಳೆ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸದ್ಯ ಇರುವ ಕಾಂಪೆನ್ಸೇಶನ್ ಸೆಸ್ ಅವಧಿ ಮುಗಿಯುತ್ತಾ ಬಂದಿದ್ದು ಇದರಿಂದ ಬರಲಿರುವ ಆದಾಯ ಕೊರತೆ ನೀಗಿಸಲು ಅಬಕಾರಿ ಸುಂಕ ನೆರವಿಗೆ ಬರಲಿದೆ.

ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು; ರಾಜ್ಯಗಳಿಗೂ ಲಾಭ ಹಂಚಿಕೆ ಎಂದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

Updated on: Dec 04, 2025 | 8:01 PM

ನವದೆಹಲಿ, ಡಿಸೆಂಬರ್ 4: ತಂಬಾಕು ಹಾಗೂ ಅದರ ಉತ್ಪನ್ನಗಳ ಮೇಲೆ ಅಧಿಕ ಅಬಕಾರಿ ಸುಂಕ ವಿಧಿಸುವ ಅವಕಾಶ ನೀಡುವಂತಹ ತಿದ್ದುಪಡಿ ಮಸೂದೆಯೊಂದಕ್ಕೆ ಸಂಸತ್ (Parliament) ಅಂಗೀಕಾರ ಕೊಟ್ಟಿದೆ. ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ (Central Excise Amendment Bill) ಲೋಕಸಭೆ ನಿನ್ನೆ ಬುಧವಾರ ಅನುಮೋದನೆ ನೀಡಿತ್ತು. ಇವತ್ತು ಗುರುವಾರ ರಾಜ್ಯಸಭೆಯಲ್ಲೂ ಒಪ್ಪಿಗೆ ಸಿಕ್ಕಿದೆ. ಇದರೊಂದಿಗೆ ಈ ಮಸೂದೆಗೆ ಸಂಸತ್​ನ ಎರಡೂ ಮನೆಗಳಿಂದ ಸಮ್ಮತಿ ಸಿಕ್ಕಿದೆ.

ಕಾಂಪೆನ್ಸೇಶನ್ ಸೆಸ್ ಕ್ರಮದ ಅವಧಿ ಮುಗಿದ ಬಳಿಕ ಹೊಸ ಕ್ರಮ ಜಾರಿಗೆ ಬರುತ್ತದೆ. ಅಬಕಾರಿ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ ತಂಬಾಕು ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಲು ಸರ್ಕಾರಕ್ಕೆ ಅವಕಾಶ ಸಿಗುತ್ತದೆ. ಈಗ ಅಸ್ತಿತ್ವದಲ್ಲಿರುವ ಕಾಂಪೆನ್ಸೇಶನ್ ಸೆಸ್ ಅವಧಿ ಸದ್ಯದಲ್ಲೇ ಮುಗಿಯುತ್ತದೆ. ಹೀಗಾಗಿ, ತಂಬಾಕಿನಂತಹ ಸಿನ್ ಗೂಡ್ಸ್ ಅಥವಾ ಪಾಪದ ಸರಕುಗಳ ಮೇಲೆ ಅಬಕಾರಿ ಸುಂಕವನ್ನೇ ಹೆಚ್ಚಿಸಲು ಅನುವಾಗುವಂತೆ ತಿದ್ದುಪಡಿ ತರಲಾಗಿದೆ.

ಇದನ್ನೂ ಓದಿ: ಪುಟಿನ್ ಭೇಟಿಯಿಂದ ಭಾರತಕ್ಕೇನು ಲಾಭ? ರಷ್ಯಾದೊಂದಿಗೆ ಅಗಾಧ ವ್ಯಾಪಾರ ಅಂತರ ತಗ್ಗಿಸಲು ಭಾರತಕ್ಕೆ ಸಾಧ್ಯವಾ?

ಸಿಗರೇಟ್, ಸಿಗಾರ್, ಹುಕ್ಕಾ, ಪಾನ್ ಮಸಾಲ, ಜರ್ದಾ ಇತ್ಯಾದಿ ತಂಬಾಕು ಉತ್ಪನ್ನಗಳ ಮೇಲೆ ಅಬಕಾಸರಿ ಸುಂಕ ಹೆಚ್ಚಿಸಲು ಈ ಮಸೂದೆ ಎಡೆ ಮಾಡಿಕೊಡುತ್ತದೆ. ಒಂದು ಸಾವಿರ ಸಿಗರೇಟುಗಳಿಗೆ ಸದ್ಯಕ್ಕೆ ಅಬಕಾರಿ ಸುಂಕ 735 ರೂಗಳವರೆಗೆ ಇದೆ. ಕಾಯ್ದೆ ತಿದ್ದುಪಡಿ ಬಂದ ಬಳಿಕ ಪ್ರತೀ ಸಾವಿರ ಸಿಗರೇಟುಗಳಿಗೆ 11,000 ರೂವರೆಗೆ ಸುಂಕ ವಿಧಿಸಲು ಅವಕಾಶ ಇರುತ್ತದೆ. ಇತರ ತಂಬಾಕು ಉತ್ಪನ್ನಗಳ ಮೇಲೂ ಶೇ. 100ರವರೆಗೆ ಸುಂಕ ಏರಿಸುವ ಅವಕಾಶ ಇರುತ್ತದೆ.

ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆ ತೆರಿಗೆ

ಅಬಕಾರಿ ತಿದ್ದುಪಡಿ ಮಸೂದೆ ಜೊತೆಗೆ ಸರ್ಕಾರ ಹೆಲ್ತ್ ಅಂಡ್ ನ್ಯಾಷನಲ್ ಸೆಕ್ಯೂರಿಟಿ ಸೆಸ್ ಬಿಲ್ ಅನ್ನೂ ಸಂಸತ್ ಎದುರಿಗೆ ತಂದಿದೆ. ಪಾನ್ ಮಸಾಲ ಘಟಕಗಳ ಉತ್ಪಾದನೆ ಮೇಲೆ ಸೆಸ್ ಹಾಕಲು ಈ ಮಸೂದೆ ಅವಕಾಶ ಕೊಡುತ್ತದೆ.

ರಾಜ್ಯ ಸರ್ಕಾರಗಳಿಗೆ ಆದಾಯ ಹಂಚಿಕೆ

ಅಬಕಾರಿ ಸುಂಕ ಹಾಗೂ ಸೆಸ್​ನಿಂದ ಬರುವ ಆದಾಯವನ್ನು ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಪಿವಿ ಮಾಡ್ಯೂಲ್; ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 43,000

ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ನಿರ್ಮಲಾ ಸೀತಾರಾಮನ್, ತಂಬಾಕು ಬೆಳೆಯನ್ನು ಮೂಲದಲ್ಲೇ ತಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವ ಸಂಗತಿಯನ್ನು ತಿಳಿಸಿದ್ದಾರೆ. ತಂಬಾಕು ಬದಲು ಇತರ ಬೆಳೆಯನ್ನು ಬೆಳೆಯುವಂತೆ ರೈತರನ್ನು ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕ, ಆಂಧ್ರ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ತಂಬಾಕು ಬೆಳೆಯುತ್ತಿದ್ದ 1 ಲಕ್ಷ ಎಕರೆ ಜಮೀನಿನಲ್ಲಿ ಈಗ ಇತರ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ಹಣಕಾಸು ಸಚಿವೆ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Thu, 4 December 25