
ನವದೆಹಲಿ, ಸೆಪ್ಟೆಂಬರ್ 12: ನಿನ್ನೆ ಗುರುವಾರ (ಸೆ. 11) ಪತಂಜಲಿ ಫುಡ್ಸ್ ಷೇರುಬೆಲೆ (Patanjali Foods share price) ಶೇ. 60-65ರಷ್ಟು ಕುಸಿತ ಕಂಡಿತು. ಸೆಪ್ಟೆಂಬರ್ 10ರಂದು 1,802.25 ರೂಗೆ ಮುಕ್ತಾಯಗೊಂಡಿದ್ದ ಪತಂಜಲಿ ಷೇರುಬೆಲೆ, ಗುರುವಾರ ಬೆಳಗ್ಗೆ 595 ರೂಗೆ ಆರಂಭಗೊಂಡಿತ್ತು. ಇದಕ್ಕೆ ಕಾರಣ ಬೋನಸ್ ಷೇರುಗಳು. ಪತಂಜಲಿ ಫುಡ್ಸ್ ಸಂಸ್ಥೆ 2:1 ಬೋನಸ್ ಷೇರು ನೀಡಿದೆ. ಒಂದು ಷೇರಿಗೆ ಪ್ರತಿಯಾಗಿ ಎರಡು ಹೆಚ್ಚುವರಿ ಷೇರುಗಳನ್ನು ವಿತರಿಸಲಾಗುತ್ತಿದೆ. ನಿಮ್ಮ ಬಳಿ ಪತಂಜಲಿ ಫುಡ್ಸ್‌ನ 100 ಷೇರು ಇದ್ದರೆ, ಬೋನಸ್ ಷೇರುಗಳ ವಿತರಣೆ ಬಳಿಕ ನಿಮ್ಮ ಷೇರುಗಳ ಸಂಖ್ಯೆ 300 ಆಗಿರುತ್ತದೆ.
ನಿನ್ನೆ ಗುರುವಾರಕ್ಕೆ ಬೋನಸ್ ವಿತರಣೆಗೆ ದಾಖಲು ದಿನವಾಗಿ (ರೆಕಾರ್ಡ್ ಡೇಟ್) ನಿಗದಿ ಮಾಡಲಾಗಿತ್ತು. ಈ ದಿನಾಂಕದಲ್ಲಿ ಯಾರು ಷೇರು ಮಾಲಕತ್ವ ಹೊಂದಿರುತ್ತಾರೋ ಅವರಿಗೆ ಬೋನಸ್ ಷೇರುಗಳು ಸಿಗುತ್ತವೆ. ಸೆಪ್ಟೆಂಬರ್ 11ರ ಬೆಳಗ್ಗೆ ಯಾರ ಡೀಮ್ಯಾಟ್ ಅಕೌಂಟ್ಗಳಲ್ಲಿ ಪತಂಜಲಿ ಷೇರುಗಳು ಜಮೆ ಆಗಿರುತ್ತದೋ ಅವರಿಗೆ ಮಾತ್ರವೇ ಬೋನಸ್ ಷೇರು ಸಿಗುವುದು.
ಇದನ್ನೂ ಓದಿ: ಚರ್ಮದ ಆರೈಕೆಗೆ ಪತಂಜಲಿಯ ದಿವ್ಯ ಕಾಯಕಲ್ಪ ತೈಲಕ್ಕಿಂತ ಉತ್ತಮ ಮದ್ದು ಇನ್ನೊಂದಿಲ್ಲ
ಬೋನಸ್ ಷೇರು ಸಿಕ್ಕಿದರೂ ಒಟ್ಟಾರೆ ಷೇರು ಮೌಲ್ಯದಲ್ಲಿ ಬದಲಾವಣೆ ಆಗುವುದಿಲ್ಲ ಎಂಬುದು ಗಮನಾರ್ಹ. ಒಂದು ಷೇರು ಮೂರು ಷೇರುಗಳಾಗಿ ವಿಭಜನೆಯಾದಂತೆ. 1,800 ರೂ ಮೌಲ್ಯದ ಒಂದು ಷೇರು ತಲಾ 600 ರೂ ಮೌಲ್ಯದ ಮೂರು ಷೇರುಗಳಾಗುತ್ತವೆ. ಮೂರು ಷೇರುಗಳಿದ್ದರೂ ಒಟ್ಟಾರೆ ಷೇರುಗಳ ಮೌಲ್ಯ 1,800 ರೂ ಆಗಿರುತ್ತದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಪತಂಜಲಿ ಫುಡ್ಸ್ ಷೇರುಗಳ ಮೌಲ್ಯ ಕಡಿಮೆ ಆದರೂ ಅದರ ಫೇಸ್ವ್ಯಾಲ್ಯೂ ಎರಡೂನಲ್ಲೇ ಮುಂದುವರಿಯುತ್ತದೆ. ಡಿವಿಡೆಂಡ್ ಪ್ರಕಟವಾಗುವಾಗ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಸಿಗಲು ಸಾಧ್ಯವಾಗುತ್ತದೆ. ಹಾಗೆಯೇ, ಬೋನಸ್ ಷೇರುಗಳ ವಿತರಣೆಯಿಂದ ಕಂಪನಿಗೆ ಆಗುವ ಅನುಕೂಲ ಎಂದರೆ, ಷೇರುಗಳ ಸಂಖ್ಯೆ ಹೆಚ್ಚುತ್ತದೆ ಎಂಬುದು ಒಂದು ಸಂಗತಿ. ಹಾಗೆಯೇ, ಷೇರುಗಳ ಬೆಲೆ ಕಡಿಮೆ ಇದ್ದಾಗ ರೀಟೇಲ್ ಹೂಡಿಕೆದಾರರಿಗೆ ಆಕರ್ಷಕ ಎನಿಸುತ್ತದೆ ಎಂಬುದು ಮತ್ತೊಂದು ಸಂಗತಿ. ಇದರಿಂದ ಖರೀದಿ ಆಕರ್ಷಣೆ ಹೆಚ್ಚುತ್ತದೆ.
ಬೋನಸ್ ಷೇರುಗಳನ್ನು ನೀಡಿದ ನಂತರ, ಪತಂಜಲಿ ಫುಡ್ಸ್‌ನ ಒಟ್ಟು ಷೇರು ಬಂಡವಾಳ 108.75 ಕೋಟಿ ಷೇರುಗಳಿಗೆ ಏರಿದೆ. ಕಂಪನಿಯು ಒಟ್ಟು 72.50 ಕೋಟಿ ಬೋನಸ್ ಷೇರುಗಳನ್ನು ನೀಡಿದೆ. ಜೂನ್ 30, 2025 ರ ಹೊತ್ತಿಗೆ, ಪ್ರೊಮೋಟರ್ಗಳು ಹೊಂದಿರುವ ಷೇರು ಮಾಲಕತ್ವ ಪ್ರಮಾಣ 36.70% ರಷ್ಟಾಗಿದೆ. ಪಬ್ಲಿಕ್ ಷೇರುದಾರರ ಪಾಲು 31.17% ಇದೆ. ಪ್ರಮುಖ ಸಾಂಸ್ಥಿಕ ಹೂಡಿಕೆದಾರರಲ್ಲಿ, ಎಲ್‌ಐಸಿ 9.14%, ಮ್ಯೂಚುವಲ್ ಫಂಡ್‌ಗಳು 1.72% ಮತ್ತು ಜಿಕ್ಯೂಜಿ ಪಾಲುದಾರರು 4.56% ಪಾಲನ್ನು ಹೊಂದಿದ್ದಾರೆ. ಇದಲ್ಲದೆ, ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಮತ್ತು ಇತರ ಗ್ರೂಪ್ ಕಂಪನಿಗಳು ಸಹ ಇದರಲ್ಲಿ ಗಮನಾರ್ಹ ಪಾಲನ್ನು ಹೊಂದಿವೆ.
ಇದನ್ನೂ ಓದಿ: ಪತಂಜಲಿ ಉತ್ಪನ್ನದ ಸಹಾಯದಿಂದ ಬರೋಬ್ಬರಿ 70 ಕೆಜಿ ತೂಕ ಇಳಿಸಿಕೊಂಡ ಯುವತಿ
2019 ರಲ್ಲಿ, ಪತಂಜಲಿ ಗ್ರೂಪ್ ಸಂಸ್ಥೆಯು ರುಚಿ ಸೋಯಾ ಎನ್ನುವ ಎಫ್ಎಂಸಿಜಿ ಕಂಪನಿಯನ್ನು ಖರೀದಿಸಿತು. ನಂತರದ ದಿನಗಳಲ್ಲಿ ಅದನ್ನು ಪತಂಜಲಿ ಫುಡ್ಸ್ ಎಂದು ಮರು ನಾಮಕರಣ ಮಾಡಿತು. ಉತ್ಪನ್ನಗಳ ಸಂಖ್ಯೆ ಹೆಚ್ಚಿಸಿ, ಕ್ರಮೇಣವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Fri, 12 September 25