Patanjali Ban In Nepal: ಪತಂಜಲಿ ಉತ್ಪನ್ನ ತಯಾರಿಕಾ ಕಂಪನಿ ಸೇರಿ 16 ಭಾರತೀಯ ಕಂಪನಿಗಳ ಔಷಧ ರಫ್ತಿಗೆ ನೇಪಾಳ ನಿಷೇಧ
ಪಟ್ಟಿಯಲ್ಲಿ ಉಲ್ಲೇಖಿಸಿರುವ ಕಂಪನಿಗಳು ತಯಾರಿಸಿರುವ ಔಷಧಗಳನ್ನು ಆಮದು ಮಾಡಬಾರದು. ನೇಪಾಳದಲ್ಲಿ ಮಾರಾಟ ಮಾಡಬಾರದು ಎಂದು ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ.
ಕಠ್ಮಂಡು: ಯೋಗ ಗುರು ಬಾಬಾ ರಾಮ್‌ದೇವ್ (Baba Ramdev) ಅವರ ಪತಂಜಲಿ ಉತ್ಪನ್ನಗಳ (Patanjali Products) ತಯಾರಕ ಸಂಸ್ಥೆ ದಿವ್ಯಾ ಫಾರ್ಮಸಿ (Divya Pharmacy) ಸೇರಿದಂತೆ 16 ಭಾರತೀಯ ಔಷಧ ಕಂಪನಿಗಳನ್ನು ನೇಪಾಳ (Nepal) ಕಪ್ಪು ಪಟ್ಟಿಗೆ ಸೇರಿಸಿದೆ. ಈ ಕಂಪನಿಗಳ ಔಷಧ ಆಮದನ್ನು ನಿಷೇಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಉತ್ಪದನಾ ಗುಣಮಟ್ಟಗಳನ್ನು ಪಾಲಿಸುವಲ್ಲಿ ಈ ಕಂಪನಿಗಳ ವಿಫಲವಾಗಿವೆ ಎಂದು ನೇಪಾಳ ಹೇಳಿದೆ. ಈ ಕಂಪನಿಗಳ ಔಷಧ ಪೂರೈಕೆ ಮಾಡುತ್ತಿದ್ದ ಸ್ಥಳೀಯ ಏಜೆಂಟ್ಗಳಿಗೆ ಡಿಸೆಂಬರ್ 18ರಂದು ನೇಪಾಳದ ಔಷಧ ಆಡಳಿತ ನೋಟಿಸ್ ನೀಡಿದ್ದು, ಔಷಧಗಳನ್ನು ಮಾರಾಟ ಮಾಡದಂತೆ ಸೂಚಿಸಿದೆ.
ಪಟ್ಟಿಯಲ್ಲಿ ಉಲ್ಲೇಖಿಸಿರುವ ಕಂಪನಿಗಳು ತಯಾರಿಸಿರುವ ಔಷಧಗಳನ್ನು ಆಮದು ಮಾಡಬಾರದು. ನೇಪಾಳದಲ್ಲಿ ಮಾರಾಟ ಮಾಡಬಾರದು ಎಂದು ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Patanjali: ಬಾಬಾ ರಾಮದೇವ್ ಗೆ ಮತ್ತೊಮ್ಮೆ ಶಾಕ್! ಪತಂಜಲಿಯ ಪಂಚ ಔಷಧಗಳು ನಿಷೇಧ, ಮೆಡಿಕಲ್ ಮಾಫಿಯಾ ಅಂದರು ಬಾಬಾ
ನೇಪಾಳಕ್ಕೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಅರ್ಜಿ ಸಲ್ಲಿಸಿದ ಭಾರತದ ಔಷಧೀಯ ಕಂಪನಿಗಳ ಉತ್ಪಾದನಾ ಸೌಲಭ್ಯಗಳನ್ನು ಪರಿಶೀಲಿಸಿದ ನಂತರ, ಅವುಗಳ ಪೈಕಿ ಡಬ್ಲ್ಯುಎಚ್ಒ ಮಾನದಂಡಗಳನ್ನು ಅನುಸರಿಸದ ಕಂಪನಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.
ಔಷಧ ಕಂಪನಿಗಳ ಪರಿಶೀಲನೆಗೆ ತಂಡ ಕಳುಹಿಸಿದ್ದ ನೇಪಾಳ
ಏಪ್ರಿಲ್ ಮತ್ತು ಜುಲೈ ತಿಂಗಳಲ್ಲಿ ಭಾರತದ ಔಷಧ ಕಂಪನಿಗಳಲ್ಲಿರುವ (ನೇಪಾಳಕ್ಕೆ ಔಷಧ ರಫ್ತು ಮಾಡಲು ಮನವಿ ಸಲ್ಲಿಸಿರುವ ಕಂಪನಿಗಳು) ಉತ್ಪಾದನಾ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲು ನೇಪಾಳ ಸರ್ಕಾರವು ತಂಡವನ್ನು ಕಳುಹಿಸಿಕೊಟ್ಟಿತ್ತು. ಈ ತಂಡವು ನೀಡಿದ ವರದಿಯ ಆಧಾರದಲ್ಲಿ ಕಪ್ಪು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಕಪ್ಪು ಪಟ್ಟಿಯಲ್ಲಿ ಯಾವೆಲ್ಲ ಕಂಪನಿಗಳು?
ದಿವ್ಯಾ ಫಾರ್ಮಸಿ, ರೇಡಿಯಂಟ್ ಪೇರೆಂಟರ್ಲ್ಸ್, ಮರ್ಕ್ಯುರಿ ಲ್ಯಾಬೋರೇಟರೀಸ್, ಅಲಯನ್ಸ್ ಬಯೋಟೆಕ್, ಕ್ಯಾಪ್ಟ್ಯಾಬ್ ಬಯೋಟೆಕ್, ಅಗ್ಲೋವ್ಮೆಡ್ ಲಿಮಿಟೆಡ್, ಜಿಎಲ್ಎಸ್ ಫಾರ್ಮಾ, ಯುನಿಜೂಲ್ಸ್ ಲೈಫ್ ಸೈನ್ಸ್, ಕಾನ್ಸೆಪ್ಟ್ ಫಾರ್ಮಾಸ್ಯೂಟಿಕಲ್ಸ್, ಶ್ರೀ ಆನಂದ್ ಲೈಫ್ ಸೈನ್ಸಸ್, ಐಪಿಸಿಎ ಲ್ಯಾಬೋರೇಟರೀಸ್, ಕ್ಯಾಡಿಲಾ ಹೆಲ್ತ್ಕೇರ್, ಡಯಲ್ ಫಾರ್ಮಾಸ್ಯೂಟಿಕಲ್ಸ್ ಹಾಗೂ ಮ್ಯಾಕರ್ ಲ್ಯಾಬೋರೇಟರೀಸ್ ನೇಪಾಳದ ಕಪ್ಪು ಪಟ್ಟಿಯಲ್ಲಿರುವ ಭಾರತದ ಔಷಧ ಕಂಪನಿಗಳಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Wed, 21 December 22