Patanjali: ಭಾರತದಲ್ಲಿ ಖಾದ್ಯ ಎಣ್ಣೆ ಬೆಲೆ ಇಳಿಕೆಗೆ, ಸ್ವಾವಲಂಬನೆಗೆ ಪತಂಜಲಿ ಮಾಸ್ಟರ್ ಪ್ಲಾನ್; ಮಲೇಷ್ಯನ್ ಕಂಪನಿ ಜೊತೆ ಡೀಲ್
Patanjali & Malaysia Partner to Boost India's Palm Oil Production: ಪತಂಜಲಿ, ಭಾರತದಲ್ಲಿ ತಾಳೆ ಎಣ್ಣೆ ಉತ್ಪಾದನೆಯನ್ನು ಹೆಚ್ಚಿಸಲು ಮಲೇಷ್ಯಾದ ಸಾವಿತ್ ಕಿನಾಬಾಲು ಗ್ರೂಪ್‌ನೊಂದಿಗೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. 40 ಲಕ್ಷ ತಾಳೆ ಬೀಜಗಳ ಪೂರೈಕೆಯ ಈ ಒಪ್ಪಂದದ ಮೂಲಕ ಪತಂಜಲಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿ, ಖಾದ್ಯ ತೈಲ ಬೆಲೆ ಏರಿಕೆಯನ್ನು ತಡೆಯುವ ಗುರಿ ಹೊಂದಿದೆ. ಮಲೇಷ್ಯಾ ಭಾರತಕ್ಕೆ ತಾಳೆ ಎಣ್ಣೆಯ ಪ್ರಮುಖ ಪೂರೈಕೆದಾರ ದೇಶವಾಗಿದೆ.

ಅತಿದೊಡ್ಡ FMCG ಕಂಪನಿಗಳಲ್ಲಿ ಒಂದಾದ ಪತಂಜಲಿ (Patanjali Foods), ದೇಶದಲ್ಲಿ ಖಾದ್ಯ ತೈಲ (edible oil) ದುಬಾರಿಯಾಗುವುದನ್ನು ತಪ್ಪಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಪತಂಜಲಿಯ ಈ ಕಾರ್ಯದಲ್ಲಿ ಮಲೇಷ್ಯಾದ ಸಹಭಾಗಿತ್ವ ಇದೆ. ಮಲೇಷ್ಯಾದ ಸರ್ಕಾರಿ ಸ್ವಾಮ್ಯದ ಸಾವಿತ್ ಕಿನಾಬಾಲು ಗ್ರೂಪ್ ಸಂಸ್ಥೆ (Sawit Kinabalu Group) ಪತಂಜಲಿ ಗ್ರೂಪ್‌ಗೆ ಇದೂವರೆಗೆ 15 ಲಕ್ಷ ತಾಳೆ ಬೀಜಗಳನ್ನು (Palm seeds) ಪೂರೈಸಿದೆ. ಮಲೇಷ್ಯಾದ ಈ ಗ್ರೂಪ್ ಪತಂಜಲಿ ಕಂಪನಿಯೊಂದಿಗೆ ಐದು ವರ್ಷಗಳ ಒಪ್ಪಂದ ಹೊಂದಿದೆ. 2027ರವರೆಗೂ ಇರುವ ಈ ಒಪ್ಪಂದದಂತೆ ಮಲೇಷ್ಯಾದ ಸಾವಿತ್ ಕಿನಾಬಾಲು ಸಂಸ್ಥೆಯು ಪತಂಜಲಿಗೆ ಒಟ್ಟು 40 ಲಕ್ಷ ತಾಳೆಬೀಜಗಳನ್ನು ಪೂರೈಸಲಿದೆ. ಶೇ 30ಕ್ಕಿಂತಲೂ ಹೆಚ್ಚು ಬೀಜಗಳನ್ನು ಈಗಾಗಲೇ ಸರಬರಾಜು ಮಾಡಿದೆ.
ತಾಳೆ ಎಣ್ಣೆ, ಭಾರತದ ಪ್ರಮುಖ ಪೂರೈಕೆದಾರ ಮಲೇಷ್ಯಾ
ಮಲೇಷ್ಯಾ ಭಾರತಕ್ಕೆ ತಾಳೆ ಎಣ್ಣೆಯ ಪ್ರಮುಖ ಪೂರೈಕೆದಾರ ದೇಶವಾಗಿದೆ. ಆದರೆ ಅಲ್ಲಿಯ ಸರ್ಕಾರಿ ಸಂಸ್ಥೆಯೊಂದು ತಾಳೆ ಬೀಜಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಇದೇ ಮೊದಲು. ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ದೇಶೀಯ ತಾಳೆ ಎಣ್ಣೆ ಕೃಷಿಯನ್ನು ಪ್ರೋತ್ಸಾಹಿಸುತ್ತಿರುವ ಸಂದರ್ಭದಲ್ಲಿ ಈ ಒಪ್ಪಂದ ಏರ್ಪಟ್ಟಿದೆ. ಮಲೇಷ್ಯಾದ ಸವಿತ್ ಕಿನಾಬಾಲು ಗ್ರೂಪ್ ಒಂದು ವರ್ಷಕ್ಕೆ 10 ಮಿಲಿಯನ್ (ಒಂದು ಕೋಟಿ) ತಾಳೆ ಬೀಜಗಳನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.
ಪತಂಜಲಿ ಮತ್ತು ಸವಿತ್ ಮಧ್ಯೆ 5 ವರ್ಷಗಳ ಒಪ್ಪಂದ
ಸಾವಿತ್ ಕಿನಾಬಾಲು ಗ್ರೂಪ್ನ ಬೀಜ ಘಟಕದ ಜನರಲ್ ಮ್ಯಾನೇಜರ್ ಡಾ. ಜುರೈನಿ ಮಾತನಾಡಿ, ‘40 ಲಕ್ಷ ತಾಳೆ ಬೀಜಗಳ ಪೂರೈಕೆಗಾಗಿ ನಾವು ಪತಂಜಲಿ ಗ್ರೂಪ್‌ನೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ನಾವು ಇಲ್ಲಿಯವರೆಗೆ 15 ಲಕ್ಷ ಬೀಜಗಳನ್ನು ವಿತರಿಸಿದ್ದೇವೆ. ಬೀಜಗಳನ್ನು ಪೂರೈಸುವುದರ ಜೊತೆಗೆ, ಕಂಪನಿಯು ಸಲಹಾ ಸೇವೆಗಳನ್ನು ಒದಗಿಸುತ್ತದೆ. ಕೃಷಿ ತಜ್ಞರು ಉತ್ಪಾದನಾ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ನೆಟ್ಟ ಬೀಜಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪತಂಜಲಿ ಷೇರುಗಳಲ್ಲಿ ಭಾರಿ ಲಾಭ: ಹೂಡಿಕೆದಾರರ ಸಂತಸ ಮತ್ತು ಭವಿಷ್ಯದ ನಿರೀಕ್ಷೆಯೂ ಉತ್ತಮ
ಮಲೇಷ್ಯಾದ ತಾಳೆ ಬೀಜದಿಂದ ಉತ್ತಮ ಇಳುವರಿ
‘ಭಾರತದಲ್ಲಿ ನೆಟ್ಟ ನಮ್ಮ ಬೀಜಗಳು ಉತ್ತಮ ಇಳುವರಿಯನ್ನು ನೀಡುತ್ತಿವೆ’ ಎಂದು ಈ ಮಲೇಷ್ಯನ್ ಸಂಸ್ಥೆಯ ಚೀಫ್ ಸಸ್ಟೈನಬಿಲಿಟಿ ಆಫಿಸರ್ ನಜ್ಲಾನ್ ಮೊಹಮ್ಮದ್ ತಿಳಿಸಿದ್ದಾರೆ. ಮಲೇಷ್ಯಾ ಸರ್ಕಾರ ಕೂಡ ತಮ್ಮ ದೇಶದೊಳಗೆ ತಾಳೆ ಮರಗಳನ್ನು ಹೆಚ್ಚಿಸಲು ಯೋಜನೆ ಹಾಕಿದೆ. ಇದರಿಂದಾಗಿ ಸ್ಥಳೀಯ ಬೇಡಿಕೆ ಪೂರೈಸುವ ಅವಶ್ಯಕತೆಯೂ ಸಾವಿತ್ ಕಿನಾಬಾಲು ಗ್ರೂಪ್ ಮೇಲಿದೆ. ಅದರ ನಡುವೆ ಪತಂಜಲಿ ಕಂಪನಿಗೆ ಅದು ಬೀಜಗಳನ್ನು ಸರಬರಾಜು ಮಾಡುತ್ತಿರುವುದು ಗಮನಾರ್ಹದ ಸಂಗತಿ.
ಪತಂಜಲಿಯ ಯೋಜನೆ ಏನು?
ಪತಂಜಲಿ ಗ್ರೂಪ್ ಈಶಾನ್ಯ ಭಾರತದಲ್ಲಿ ತಾಳೆ ಎಣ್ಣೆ ಗಿರಣಿಯನ್ನು ಸ್ಥಾಪಿಸಲು ಯೋಜಿಸುತ್ತಿದೆ. ಇದು 2026 ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ, ಭಾರತದಲ್ಲಿ ಸುಮಾರು 3,69,000 ಹೆಕ್ಟೇರ್ ತಾಳೆ ಕೃಷಿ ಇದೆ. ಅದರಲ್ಲಿ ಸುಮಾರು 1,80,000 ಹೆಕ್ಟೇರ್ ಕೃಷಿಗೆ ಸಿದ್ಧವಾಗಿದೆ. ಸಾಗುವಳಿ ಪ್ರದೇಶವು ನಿರಂತರವಾಗಿ ಹೆಚ್ಚುತ್ತಿದ್ದು, 2024 ರ ವೇಳೆಗೆ ಸುಮಾರು 3,75,000 ಹೆಕ್ಟೇರ್ ತಲುಪುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 80,000 ರಿಂದ 1,00,000 ಹೆಕ್ಟೇರ್‌ಗಳನ್ನು ಸೇರಿಸುವ ನಿರೀಕ್ಷೆಯಿದೆ. 2030 ರ ವೇಳೆಗೆ ಇದನ್ನು 66 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಒಟ್ಟಾರೆ 28 ಲಕ್ಷ ಟನ್ ಪಾಮ್ ಆಯಿಲ್ ಅನ್ನು ಉತ್ಪಾದಿಸುವ ಗುರಿ ಇದೆ.
ಇದನ್ನೂ ಓದಿ: ರೀಟೇಲ್ ಮಾತ್ರವಲ್ಲ, ಹೋಲ್ಸೇಲ್ ಬ್ಯುಸಿನೆಸ್ನಲ್ಲೂ ಇವೆ ಈ ಪತಂಜಲಿ ಉತ್ಪನ್ನಗಳು
ಸರ್ಕಾರದ ಯೋಜನೆ ಏನು?
2021-22ರ ಆರ್ಥಿಕ ವರ್ಷದಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಖಾದ್ಯ ತೈಲಗಳು-ತಾಳೆ ಎಣ್ಣೆ ಮಿಷನ್ (NMEO-OP- National Mission on Edible Oils – Oil Palm), ತಾಳೆ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಇದರ ಅಡಿಯಲ್ಲಿ, ಮುಖ್ಯವಾಗಿ ಈಶಾನ್ಯ ಭಾರತ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಗಮನ ಹರಿಸಲಾಗಿದೆ. ಭಾರತದ ಒಟ್ಟು ತಾಳೆ ಎಣ್ಣೆ ಉತ್ಪಾದನೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳ ಪಾಲು ಶೇಕಡಾ 98 ರಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








