ನವದೆಹಲಿ, ಫೆಬ್ರುವರಿ 12: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ (PPBL) ಸ್ವತಂತ್ರ ನಿರ್ದೇಶಕಿಯಾಗಿದ್ದ (Independent director) ಮಂಜು ಅಗರ್ವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪೇಮೆಂಟ್ಸ್ ಬ್ಯಾಂಕ್ನ ಮಂಡಳಿಗೆ ವಿದಾಯ ಹೇಳಿರುವ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಮಂಜು ಅಗರ್ವಾಲ್ ರಾಜೀನಾಮೆ ನೀಡಿರುವ ಸಂಗತಿಯನ್ನು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಖಚಿತಪಡಿಸಿದೆ. ಕುತೂಹಲವೆಂದರೆ ಆರ್ಬಿಐ ಪೆಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಫೆಬ್ರುವರಿ 1ರಂದು ಮಂಜು ತಮ್ಮ ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು 2021ರ ಮೇ ತಿಂಗಳಿಂದಲೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ನಿರ್ದೇಶಕರ ಮಂಡಳಿಯಲ್ಲಿ ಸ್ವತಂತ್ರ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು.
ಇನ್ನು ಪೇಟಿಎಂ ಪೇಮೆಂಟ್ಸ್ ಸರ್ವಿಸ್ನ ಮಂಡಳಿಯು ಗ್ರೂಪ್ ಅಡ್ವೈಸರಿ ಕಮಿಟಿ ರಚನೆಯನ್ನು ಘೋಷಿಸಿದೆ. ಮಾಜಿ ಸೆಬಿ ಛೇರ್ಮನ್ ಎಂ ದಾಮೋದರನ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಐಸಿಎಐ ಮಾಜಿ ಅಧ್ಯಕ್ಷ ಎಂಎಂ ಚಿತಾಲೆ, ಆಂಧ್ರ ಬ್ಯಾಂಕ್ ಮಾಜಿ ಛೇರ್ಮನ್ ಆರ್ ರಾಮಚಂದ್ರನ್ ಮೊದಲಾದವರು ಇರುವ ಈ ಸಮಿತಿಯು ಪೇಟಿಎಂನಲ್ಲಿ ಕಾನೂನು ಮತ್ತು ನಿಯಮಗಳ ಪಾಲನೆ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಲಹೆ ಮತ್ತ ಮಾರ್ಗದರ್ಶನಗಳನ್ನು ನೀಡುತ್ತದೆ.
ಇದನ್ನೂ ಓದಿ: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಆರ್ಬಿಐ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಸರ್ವಿಸ್ ಸಂಸ್ಥೆಗೆ ಇತರ ಬ್ಯಾಂಕುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಇದೇ ವೇಳೆ, ಎಕ್ಸಿಸ್ ಬ್ಯಾಂಕ್ ಪೇಟಿಎಂ ಜೊತೆ ಕೆಲಸ ಮಾಡಲು ಆಸಕ್ತಿ ತೋರಿದೆ.
‘ಆರ್ಬಿಐ ಅನುಮತಿಸಿದರೆ ಪೇಟಿಎಂ ಜೊತೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಪೇಟಿಎಂ ಬಹಳ ಮುಖ್ಯವಾದ ಕಂಪನಿ ಹೌದು,’ ಎಂದು ಎಕ್ಸಿಸ್ ಬ್ಯಾಂಕ್ನ ಸಿಇಒ ಮತ್ತು ಎಂಡಿ ಅಮಿತಾಭ್ ಚೌಧರಿ ಇಂದು ಸೋಮವಾರ ಹೇಳಿದ್ದಾರೆ.
ಇದನ್ನೂ ಓದಿ: ನಿರ್ಬಂಧ ಇರೋದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ; ಆದ್ರೆ ವ್ಯಾಲಟ್ಗೆ ಯಾಕೆ ತೊಂದರೆ? ತಿಳಿಯಬೇಕಾದ ಅಂಶಗಳು
ಎಕ್ಸಿಸ್ ಬ್ಯಾಂಕ್ ಮತ್ತು ಪೇಟಿಎಂ ಮಧ್ಯೆ ಕೆಲವಾರು ದಿನಗಳಿಂದ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಎಕ್ಸಿಸ್ ಬ್ಯಾಂಕ್ನ ಗ್ರೂಪ್ ಎಕ್ಸಿಕ್ಯೂಟಿವ್ ಅರ್ಜುನ್ ಚೌಧರಿ, ಇವು ಸಹಜ ವ್ಯಾವಹಾರಿಕ ಮಾತುಕತೆಗಳಾಗಿವೆ ಎಂದು ಸ್ಪಷ್ಪಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ