
ನವದೆಹಲಿ, ಮೇ 8: ಆರ್ಬಿಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ನಿರ್ಬಂಧ ಬಿದ್ದಾಗ ಪೇಟಿಎಂ ಅಥವಾ ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಯ ಷೇರುಕುಸಿತದ ಹೊಸ ಸುತ್ತು ಆರಂಭವಾಗಿತ್ತು. ಫೆಬ್ರುವರಿಯಿಂದ ಇಲ್ಲಿಯವರೆಗೆ ನಿರಂತರವಾಗಿ ಕುಸಿಯುತ್ತಿರುವ ಪೇಟಿಎಂ ಷೇರುಬೆಲೆ (Paytm share price) ಇಂದು ಬುಧವಾರ ಮಾರುಕಟ್ಟೆ ದಿನಾಂತ್ಯದಲ್ಲಿ 317.15 ರೂ ತಲುಪಿದೆ. ಅದರ ಹಿಂದಿನ ಕನಿಷ್ಠ ದರ 318 ರೂ ಇತ್ತು. ಆ ದಾಖಲೆ ಮುರಿದು ಕುಸಿದಿದೆ. ಸತತ 10 ಮಾರುಕಟ್ಟೆ ದಿನಗಳು ಇದರ ಕುಸಿತವಾಗಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೀರ್ಘಾವಧಿ ಕುಸಿತ ಕಂಡಿರುವುದು. 391.35 ರೂ ಇದ್ದ ಷೇರುಬೆಲೆ ಕೇವಲ 10 ಸೆಷನ್ನಲ್ಲಿ ಶೇ. 19ರಷ್ಟು ಕುಸಿತ ಕಂಡಿದೆ. ಈ ವರ್ಷದಲ್ಲಿ ಜನವರಿಯಿಂದ ಈಚೆ ಶೇ. 50ರಷ್ಟು ಬೆಲೆ ಕುಸಿತವಾಗಿದೆ.
ಪೇಟಿಎಂ ಷೇರು ಬೆಲೆ ಕುಸಿತ ಇಷ್ಟಕ್ಕೇ ನಿಲ್ಲುವುದಿಲ್ಲ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅನಿಸಿಕೆ. 280 ರೂವರೆಗೂ ಕುಸಿಯಬಹುದು ಎಂದು ಇವರು ನಿರೀಕ್ಷಿಸುತ್ತಿದ್ದಾರೆ. 2021ರಲ್ಲಿ ಪೇಟಿಎಂ ಐಪಿಒ ಬಿಡುಗಡೆ ಆದಾಗ ಭರ್ಜರಿ ಬೇಡಿಕೆ ಹೊಂದಿತ್ತು. ಒಂದು ಷೇರುಬೆಲೆ ಬರೋಬ್ಬರಿ 2,150ರೂ ಇತ್ತು. ಈಗ ಶೇ. 85.25ರಷ್ಟು ಕುಸಿತ ಕಂಡಿರುವುದು ನಿಜಕ್ಕೂ ಶೋಚನೀಯ ಪರಿಸ್ಥಿತಿ ಎನಿಸಿದೆ. ಪೇಟಿಎಂ ಲಾಭ ಗಳಿಸಲು ಪರದಾಡುತ್ತಿರುವುದು ಸೇರಿದಂತೆ ಹಲವು ಕಾರಣಗಳು ಈ ಪರಿ ಷೇರು ಕುಸಿತಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಈ ಷೇರುಗಳು ಶೇ. 90ರಷ್ಟು ಬೀಳುತ್ತವೆ, ಹುಷಾರ್: ಹೂಡಿಕೆದಾರ ಶಂಕರ್ ಶರ್ಮಾ ಎಚ್ಚರಿಸಿದ ಸ್ಟಾಕ್ಸ್ ಯಾವುವು?
ಪೇಟಿಎಂನ ಗ್ರಾಹಕರು ಸಾಲ ಮರುಪಾವತಿ ಮಾಡದೇ ಹೋದ ಕಾರಣ ಆದಿತ್ಯ ಬಿರ್ಲಾ ಫೈನಾನ್ಸ್ ಸಂಸ್ಥೆ ಲೋನ್ ಗ್ಯಾರಂಟಿಗಳನ್ನು ಬಳಸಿದೆ. ಇದು ಪೇಟಿಎಂ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಆದಿತ್ಯ ಬಿರ್ಲಾ ಸಂಸ್ಥೆ ಪೇಟಿಎಂ ಸಾಲದ ಪಾರ್ಟ್ನರ್. ಅಂದರೆ ಪೇಟಿಎಂ ಮುಖಾಂತರ ಸಾಲ ಪಡೆಯುವ ಗ್ರಾಹಕರಿಗೆ ಆದಿತ್ಯ ಬಿರ್ಲಾ ಸಾಲ ಒದಗಿಸುತ್ತದೆ. ಯಾವುದೇ ಸೆಕ್ಯೂರಿಟಿ ಇಲ್ಲದೇ ಸಾಲ ನೀಡಲಾಗುತ್ತಿತ್ತು. ಇದಕ್ಕೆ ಪೇಟಿಎಂ ಸಂಸ್ಥೆ ಲೋನ್ ಗ್ಯಾರಂಟಿ ಕೊಟ್ಟಿತ್ತು. ನೂರಾರು ಕೋಟಿ ರೂ ಮೌಲ್ಯದ ಈ ಗ್ಯಾರಂಟಿಗಳನ್ನು ಬಳಕೆ ಮಾಡಲಾಗಿರುವುದರಿಂದ ಪೇಟಿಎಂನ ಹಣಕಾಸು ಸ್ಥಿತಿಗೆ ಹಿನ್ನಡೆ ತರುವ ನಿರೀಕ್ಷೆ ಇದೆ.
ಹಾಗೆಯೇ, ಪಿರಾಮಲ್ ಫೈನಾನ್ಸ್ ಮತ್ತು ಕ್ಲಿಕ್ಸ್ ಕ್ಯಾಪಿಟಲ್ ಸಂಸ್ಥೆಗಳು ಪೇಟಿಎಂ ಜೊತೆ ಇದ್ದ ಸಹಭಾಗಿತ್ವವನ್ನು ರದ್ದು ಮಾಡಿವೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ಹೇರಿದ್ದರ ಒಟ್ಟಾರೆ ಎಫೆಕ್ಟ್ ಇದು.
ಇದನ್ನೂ ಓದಿ: ಎಸ್ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ
ಪೇಟಿಎಂ ಷೇರುಗಳಿಗೆ ಹಿನ್ನಡೆ ತರುತ್ತಿರುವ ಇನ್ನೊಂದು ಕಾರಣವೆಂದರೆ ಅದು ಸಿಇಒ ಭವೇಶ್ ಗುಪ್ತಾ ರಾಜೀನಾಮೆ. ಮತ್ತೊಂದು ಸಂಗತಿ ಎಂದರೆ ಪೇಟಿಎಂನ ಯುಪಿಐ ವಹಿವಾಟು ಪ್ರಮಾಣ ಸತತವಾಗಿ ಇಳಿಮುಖವಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ