ಆರ್​ಬಿಐ ನಿರ್ಬಂಧ ಬಳಿಕ ಸ್ಥಗಿತಗೊಂಡಿದ್ದ ಪ್ರಮುಖ ಸೇವೆಗಳಿಗೆ ಪೇಟಿಎಂನಿಂದ ಮರುಚಾಲನೆ

|

Updated on: May 22, 2024 | 5:59 PM

Paytm products getting restarted: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ಹಾಕಿದ ಬಳಿಕ ಪೇಟಿಎಂನ ಕೆಲ ಪ್ರಮುಖ ಹಣಕಾಸು ಸೇವೆಗಳು ಸ್ಥಗಿತಗೊಂಡಿದ್ದವು. ನಂತರ ಬೇರೆ ಬೇರೆ ಬ್ಯಾಂಕುಗಳ ಜೊತೆ ಸಹಭಾಗಿತ್ವ ಸಾಧಿಸುವ ಮೂಲಕ ಪೇಟಿಎಂನ ಕೆಲ ಹಣಕಾಸು ಉತ್ಪನ್ನಗಳು ಪುನಾರಂಭಗೊಂಡಿವೆ. ಇನ್ನೂ ಕೆಲ ಸೇವೆಗಳು ಮರುಚಾಲನೆಯ ಹಾದಿಯಲ್ಲಿವೆ. ಈ ವಿಚಾರವನ್ನು ಪೇಟಿಎಂನ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಷೇರುದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆರ್​ಬಿಐ ನಿರ್ಬಂಧ ಬಳಿಕ ಸ್ಥಗಿತಗೊಂಡಿದ್ದ ಪ್ರಮುಖ ಸೇವೆಗಳಿಗೆ ಪೇಟಿಎಂನಿಂದ ಮರುಚಾಲನೆ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್
Follow us on

ನವದೆಹಲಿ, ಮೇ 22: ನಷ್ಟದ ಮಧ್ಯೆಯೂ ಭರಪೂರವಾಗಿ ಆದಾಯ ಹೆಚ್ಚಿಸಿಕೊಳ್ಳುತ್ತಿರುವ ಪೇಟಿಎಂ ಸಂಸ್ಥೆ (Paytm) ತನ್ನ ಹಲವು ಉತ್ಪನ್ನಗಳಿಗೆ ಮರುಚಾಲನೆ ಕೊಡುವ ಪ್ರಕ್ರಿಯೆಯಲ್ಲಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ (PPBL) ಆರ್​​ಬಿಐ ನಿರ್ಬಂಧ ಹೇರಿದ ಬಳಿಕ ಪೇಟಿಎಂನ ಕೆಲ ಸೇವೆಗಳಿಗೆ ಹಿನ್ನಡೆಯಾಗಿದ್ದವು. ಇದೀ ಅವುಗಳನ್ನು ಪುನಾರಂಭಿಸಲು ಪೇಟಿಎಂ ಮಾತೃಸಂಸ್ಥೆ ಒನ್97 ಕಮ್ಯೂನಿಕೇಶನ್ಸ್ ನಿರ್ಧರಿಸಿದೆ. ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂನ ಷೇರುದಾರರಿಗೆ ಬರೆದ ಪತ್ರದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಪೇಟಿಎಂನ ಕೋರ್ ಪೇಮೆಂಟ್ ಬಿಸಿನೆಸ್ ಅನ್ನು ಪಿಪಿಬಿಎಲ್​ನಿಂದ ಇತರ ಪಾರ್ಟ್ನರ್ ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

‘ಈ ಪರಿವರ್ತನೆಯಿಂದಾಗಿ ನಮ್ಮ ಬಿಸಿನೆಸ್ ಮಾಡಲ್​ನಲ್ಲಿರುವ ರಿಸ್ಕ್ ಅಂಶ ಕಡಿಮೆ ಆಗಲಿದೆ. ದೀರ್ಘಾವಧಿ ಮಾನಿಟೈಸ್​ಗೆ ಹೊಸ ಅವಕಾಶ ಸೃಷ್ಟಿಯಾಗಲಿದೆ,’ ಎಂದು ಹೇಳಿದ ಸಿಇಒ ವಿಜಯ್ ಶೇಖರ್ ಶರ್ಮಾ, ‘ಕಳೆದ ಕ್ವಾರ್ಟರ್​ನಲ್ಲಿ ಸ್ಥಗಿತಗೊಳಿಸಲಾಗಿದ್ದ ಇತರ ಪೇಮೆಂಟ್ ಮತ್ತು ಲೋನ್ ಪ್ರಾಡಕ್ಟ್​​ಗಳನ್ನು ಪುನಾರಂಭಗೊಳಿಸಲಾಗಿದೆ. ಅಥವಾ ಶೀಘ್ರದಲ್ಲೇ ಚಾಲನೆಗೆ ಸಿದ್ಧವಾಗಿವೆ,’ ಎಂದಿದ್ದಾರೆ.

ಇದನ್ನೂ ಓದಿ: Paytm ತ್ರೈಮಾಸಿಕ ನಷ್ಟ ಹೆಚ್ಚಳದ ಮಧ್ಯೆ ವಾರ್ಷಿಕ ಆದಾಯದಲ್ಲಿ ಭರ್ಜರಿ ಏರಿಕೆ; ಪೇಟಿಎಂ ಆರೋಗ್ಯದ ಕುರುಹುಗಳಿವು…

ಪೇಟಿಎಂ ಬಳಸುವ ಹೆಚ್ಚಿನ ವರ್ತಕರು ಈ ಮೊದಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದರು. ಆರ್​ಬಿಐ ನಿರ್ಬಂಧದ ಬಳಿಕ ಪೇಮೆಂಟ್ಸ್ ಬ್ಯಾಂಕ್ ವಹಿವಾಟು ಸ್ಥಗಿತಗೊಂಡಿತು. ಪರಿಣಾಮವಾಗಿ ವರ್ತಕರ ಖಾತೆಗಳೂ ಸ್ಥಗಿತಗೊಂಡಿದ್ದವು. ಆರ್​ಬಿಐ ನಿರ್ದೇಶನದ ಮೇರೆಗೆ ಪೇಟಿಎಂ ಸಂಸ್ಥೆ ತನ್ನ ಪೇಮೆಂಟ್ಸ್ ಬ್ಯಾಂಕ್ ಬಿಟ್ಟು ಬೇರೆ ಬ್ಯಾಂಕ್​ಗಳ ಜೊತೆ ಒಪ್ಪಂದ ಮಾಡಿಕೊಂಡಿತು. ವರ್ತಕರ ಪಿಪಿಬಿಎಲ್ ಖಾತೆಗಳು ಬೇರೆ ಬ್ಯಾಂಕ್​ಗೆ ವರ್ಗಾವಣೆ ಮಾಡಲಾಗಿದೆ. ಇದಾದ ಬಳಿಕ ವರ್ತಕರಿಗೆ ನೀಡಲಾಗುತ್ತಿದ್ದ ಪೇಟಿಎಂ ಸೇವೆ ಈಗ ಮರುಚಾಲನೆಗೊಂಡಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿದೆ ಎಂದು ಪೇಟಿಎಂ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಪೇಟಿಎಂನ ಬಿಸಿನೆಸ್ ಲೋನ್ ಸ್ಕೀಮ್ ಕೂಡ ವಿಸ್ತರಣೆ ಪಡೆಯುತ್ತಿದೆ. ಆದರೆ, ಪೇಟಿಎಂ ನೇರವಾಗಿ ಈಗ ಸಾಲ ಕೊಡುವುದಿಲ್ಲ. ಸಾಲ ವಿತರಣೆಗೆ ಅದು ಪ್ಲಾಟ್​ಫಾರ್ಮ್ ಮಾತ್ರವೇ ಆಗಿರುತ್ತದೆ. ಸಾಲ ನೀಡುವುದು, ಸಾಲ ಮರುವಸೂಲು ಮಾಡುವುದು ಎಲ್ಲವೂ ಪಾರ್ಟ್ನರ್ ಬ್ಯಾಂಕ್​ಗಳದ್ದಾಗಿರುತ್ತದೆ. ಈ ವಿಚಾರವನ್ನು ಸಿಇಒ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಹಡಗು ಅಲ್ಲಿಂದ ಇಲ್ಲಿ ಬರುವಷ್ಟರಲ್ಲಿ ಬೆಲೆ ದುಪ್ಪಟ್ಟು; ಯುಪಿಎ ಟೈಮಲ್ಲಿ ಅದಾನಿ ಬಿಸಿನೆಸ್ ಹೇಗಿತ್ತು ನೋಡಿ

TPAPಯಾಗಿ ಪೇಟಿಎಂನಿಂದ ಯುಪಿಐ ಸೇವೆ

Paytm ಈಗ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪೂರೈಕೆದಾರರಾಗಿ (TPAP) ಯುಪಿಐ ಸೇವೆಗಳನ್ನು ಮುಂದುವರಿಸಲಿದೆ. ವರ್ತಕರಿಗೆ ಫಂಡ್​ಗಳನ್ನು ಸೆಟಲ್ಮೆಂಟ್ ಮಾಡಲು ನೋಡಲ್ ಅಕೌಂಟ್ ಅಥವಾ ಎಸ್​ಕ್ರೋ ಅಕೌಂಟ್​ಗಳಿಗೆ, ಫಾಸ್​ಟ್ಯಾಗ್ ವಿತರಣೆಗೆ, ಬಿಲ್ ಪೇಮೆಂಟ್ ಸರ್ವಿಸ್​ಗಳಿಗೆ ಇತ್ಯಾದಿಗೆ ಪೇಟಿಎಂ ಟಿಪಿಎಪಿ ಪ್ರೊವೈಡರ್ ಆಗಿರಲಿದೆ.

ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೆಸ್ ಬ್ಯಾಂಕ್‌ಗಳೊಂದಿಗೆ ಪೇಟಿಎಂ ಸಹಭಾಗಿತ್ವ ಪಡೆದಿದೆ. ವರ್ತಕರಿಗೆ ಪೇಮೆಂಟ್ ಸೆಟಲ್ ಮಾಡಲು ನೋಡಲ್ ಬ್ಯಾಂಕ್ ಆಗಿ ಎಕ್ಸಿಸ್ ಬ್ಯಾಂಕ್ ಅನ್ನು ಒಪ್ಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ