ಕ್ಯಾಷ್​​ಬ್ಯಾಕ್ ಬಗ್ಗೆ ಹುಷಾರ್; ದುರಾಸೆಗೆ ಬಿದ್ದು ಮೋಸ ಹೋಗದಿರಿ; ಏನಿದೆ ಕ್ಯಾಷ್​ಬ್ಯಾಕ್ ಮರ್ಮ?

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Aug 04, 2023 | 5:20 PM

Beware of Cashbacks: ವಿವಿಧ ಬ್ಯಾಂಕುಗಳು, ಫೈನಾನ್ಸ್ ಕಂಪನಿಗಳು ಸಾರ್ವಜನಿಕರಿಗೆ ಬಹಳಷ್ಟು ಕ್ಯಾಷ್​ಬ್ಯಾಕ್ ಆಫರ್ ಕೊಡುತ್ತವೆ. ಹೆಚ್ಚಿನ ಜನರು ಇಂಥ ಕ್ಯಾಷ್​ಬ್ಯಾಕ್​ಗಳ ಆಸೆಗೆ ಬಿದ್ದು ಸಾಕಷ್ಟು ಶಾಪಿಂಗ್ ಮಾಡಿ ಹಣ ಖರ್ಚು ಮಾಡುತ್ತಾರೆ. ಆದರೆ ಅವರು ಅಂದುಕೊಂಡಷ್ಟು ಕ್ಯಾಷ್ ಬ್ಯಾಕ್ ಸಿಕ್ಕೋದೇ ಇಲ್ಲ. ಯಾಕೆ ಹೀಗೆ? ಮನಿ9 ವಿಶೇಷ ಸ್ಟೋರಿ ಓದಿರಿ...

ಕ್ಯಾಷ್​​ಬ್ಯಾಕ್ ಬಗ್ಗೆ ಹುಷಾರ್; ದುರಾಸೆಗೆ ಬಿದ್ದು ಮೋಸ ಹೋಗದಿರಿ; ಏನಿದೆ ಕ್ಯಾಷ್​ಬ್ಯಾಕ್ ಮರ್ಮ?
ಕ್ಯಾಷ್‌ಬ್ಯಾಕ್‌
Follow us on

ಹಬ್ಬಗಳ ಸಮಯದಲ್ಲಿ, ಅನೇಕ ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ ಕಂಪನಿಗಳು ಶಾಪಿಂಗ್‌ ಮಾಡೋರಿಗೆ ಅನೇಕ ಆಫರ್‌ಗಳನ್ನು ನೀಡುತ್ತವೆ. ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ನೀವು ಮಾಡುವ ಖರೀದಿಗಳ ಮೇಲೆ ಆಕರ್ಷಕ ಕ್ಯಾಷ್‌ಬ್ಯಾಕ್‌ ಆಫರ್‌ಗಳನ್ನು (Cashback offers) ಹೊರತರುತ್ತಿವೆ. ಇಂತಹ ಆಫರ್‌ಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ ವಸ್ತುಸ್ಥಿತಿ ಸಂಪೂರ್ಣವಾಗಿ ಬೇರೆಯೇ ಆಗಿರುತ್ತೆ. ಹೆಚ್ಚು ಹೆಚ್ಚು ಲಾಭ ಪಡೆಯುವ ದುರಾಸೆಯಿಂದ ನೀವು ನಿಮ್ಮ ಬಜೆಟ್‌ ಅನ್ನು ಹಾಳು ಮಾಡಿಕೊಳ್ಳದಿರಿ. ಹಣ ಮರುಪಾವತಿ ಮಾಡುವಾಗ ನಿಮಗೆ ಬಹಳಷ್ಟು ತೊಂದರೆ ಆಗಬಹುದು. ಅದಕ್ಕೆ ನಿದರ್ಶನ ಇಲ್ಲಿದೆ…

ನ್ಯೂಸ್‌ಪೇಪರ್‌ಗಳಲ್ಲಿ ಕ್ಯಾಷ್‌ಬ್ಯಾಕ್‌ನ ಒಂದು ಜಾಹಿರಾತನ್ನು ನೋಡಿದಾಗ ಪ್ರೊಫೆಸರ್‌ ವಿಶ್ವನಾಥ್‌ ಎಂಬುವವರಿಗೆ ಬಹಳ ಖುಷಿ ಆಗುತ್ತೆ. ಹಬ್ಬದ ಸಮಯದಲ್ಲಿ ಕ್ರೆಡಿಟ್‌ ಕಾರ್ಡ್‌ ಮೂಲಕ ಶಾಪಿಂಗ್‌ ಮಾಡಿದಾಗ ಶೇ 10ರಷ್ಟು ಕ್ಯಾ‍ಷ್‌ಬ್ಯಾಕ್‌ ಸಿಗತ್ತೆ ಅಂದ್ರೆ ಯಾರಿಗೆ ಖುಷಿ ಆಗಲ್ಲ ಹೇಳಿ? ಇದನ್ನು ನೋಡಿದ ಪ್ರೊ. ವಿಶ್ವನಾಥ್ ಒಂದು ಇ-ಕಾಮರ್ಸ್‌ ಸೈಟ್‌ನಿಂದ ಒಂದೇ ವಾರದಲ್ಲಿ 75,000 ರೂಪಾಯಿಗಳಷ್ಟು ಶಾಪಿಂಗ್‌ ಮಾಡಿಬಿಟ್ಟರು. ಆದರೆ, ಅವರಿಗೆ ಸಿಕ್ಕ ಕ್ಯಾಷ್‌ಬ್ಯಾಕ್‌ ಕೇವಲ 2,000 ರೂ ಅಂತ ಗೊತ್ತಾದಾಗ ಅವರಿಗೆ ಶಾಕ್‌ ಆಗಿತ್ತು. ಅವರು ಕಸ್ಟಮರ್‌ ಕೇರ್‌ಗೆ ಫೋನ್‌ ಮಾಡಿ ವಿಚಾರಿಸಿದ್ರು. ಆಗ ಅವರಿಗೆ ಒಂದು ಕಾರ್ಡ್‌ ಮೇಲೆ ಗರಿಷ್ಠ ಕೇವಲ 2,000 ರೂ ಕ್ಯಾಷ್‌ಬ್ಯಾಕ್‌ ಮಾತ್ರ ಸಿಗತ್ತೆ ಅಂತ ಗೊತ್ತಾಯ್ತು. ಇದನ್ನು ನ್ಯೂಸ್‌ಪೇಪರ್‌ ಜಾಹೀರಾತಿನಲ್ಲಿ ಕಣ್ಣಿಗೆ ಕಾಣದಷ್ಟು ಸಣ್ಣ-ಸಣ್ಣ ಅಕ್ಷರಗಳಲ್ಲಿ ಪ್ರಿಂಟ್‌ ಮಾಡಲಾಗಿತ್ತು.

ಇದು ಪ್ರೊ. ವಿಶ್ವನಾಥ್‌ ಒಬ್ಬರ ಕತೆ ಮಾತ್ರ ಅಲ್ಲ. ಈ ಕ್ಯಾಷ್‌ಬ್ಯಾಕ್‌ ದುರಾಸೆಯಿಂದ ಬಹಳಷ್ಟು ಜನ ತಮ್ಮ ಶಾಪಿಂಗ್ ಮಿತಿಯನ್ನು ಅಥವಾ ಮಾಡಿಕೊಂಡ ಬಜೆಟ್‌ನ ಹಾಳು ಮಾಡ್ಕೊಂಡು ಒದ್ದಾಡಿಬಿಡ್ತಾರೆ. ಅನೇಕ ಹಬ್ಬಗಳ ಸಮಯದಲ್ಲಿ, ಅನೇಕ ಬ್ಯಾಂಕ್‌ಗಳು ಮತ್ತು ಕಂಪನಿಗಳು ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಶಾಪಿಂಗ್‌ ಮಾಡೋರಿಗೆ ಕ್ಯಾಷ್‌ಬ್ಯಾಕ್‌ ಆಫರ್‌ಗಳನ್ನ ನೀಡ್ತಾನೆ ಇರ್ತವೆ. ಇಂಥ ಆಫರ್‌ಗಳು ಕೆಲ ಆಯ್ದ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳಲ್ಲಿ ಹಾಗೂ ಕೆಲ ಆಯ್ದ ಬ್ರಾಂಡ್‌ಗಳ ಮೇಲೆ ಮಾತ್ರ ಸಿಗತ್ವೆ. ಇಂತಹ ಆಫರ್‌ಗಳು ಕಣ್ಣಿಗೆ ಬಹಳ ಆಕರ್ಷಕವಾಗಿ ಕಂಡರೂ, ವಾಸ್ತವದಲ್ಲಿ ಬೇರೇನೇ ಆಗಿರತ್ವೆ. ನಿಮಗೆ ಇಷ್ಟಬಂದ ಷೋರೂಮ್‌ಗಳಲ್ಲಿ ಅಥವಾ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳಲ್ಲಿ ನೀವು ಖರೀದಿ ಮಾಡಿದ್ರೆ ನಿಮಗೆ ಕ್ಯಾಷ್‌ಬ್ಯಾಕ್‌ ಲಾಭ ಖಂಡಿತ ಸಿಗಲ್ಲ.

ಇದನ್ನೂ ಓದಿ: Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ

ಹೆಚ್ಚಿನ ಕಂಪನಿಗಳು ಅಷ್ಟೇನೂ ಬೇಡಿಕೆ ಇಲ್ಲದ ಪ್ರಾಡಕ್ಟ್‌ಗಳ ಮೇಲೆ ಅಥವಾ ಮುಂದೆಂದೋ ಪರಿಚಯಿಸಲ್ಪಡುವ ಪ್ರಾಡಕ್ಟ್‌ಗಳ ಮೇಲೆ ಮಾತ್ರ ಕ್ಯಾಷ್‌ಬ್ಯಾಕ್‌ ಆಫರ್‌ಗಳನ್ನು ನೀಡ್ತವೆ. ಆದಾಗ್ಯೂ, ಫಿನ್‌ಟೆಕ್‌ ಕಂಪನಿಗಳು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಹಾಗೂ ಟೆಲಿವಿಷನ್‌ಗಳು ಇತ್ಯಾದಿಗಳ ಮೇಲೆ ಒಮ್ಮೆ ಮಾತ್ರ ನೀಡಲಾಗುವ ಕ್ಯಾಷ್‌ಬ್ಯಾಕ್‌ ಆಫರ್‌ಗಳನ್ನ ನೀಡ್ತವೆ. ಇಂಥವನ್ನು ಕೊಳ್ಳುವುದರಲ್ಲಿ ಯಾವುದೇ ಅಪಾಯ ಇರಲ್ಲ. ನಿಮ್ಮ ಬ್ಯಾಂಕ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಕಂಪನಿ ಕ್ಯಾಷ್‌ಬ್ಯಾಕ್‌ ಆಫರ್‌ ನೀಡಿದ್ದರೆ, ಆಗ ನೀವು ಕೆಲ ಮುಖ್ಯ ಸಂಗತಿಗಳನ್ನು ಪರಿಗಣಿಸಿ ವ್ಯವಹಾರ ಮಾಡಿ. ಹಾಗೆ ಮಾಡಿದಾಗ, ನಿಮಗೆ ಮುಂದೊಮ್ಮೆ ಪಶ್ಚಾತ್ತಾಪ ಪಡೋ ಸಂದರ್ಭ ಎದುರಾಗಲ್ಲ.

ಕನಿಷ್ಠ ವೆಚ್ಚ ಮಾಡಬೇಕು

ಇ-ಕಾಮರ್ಸ್‌ ಸೈಟ್‌ಗಳಲ್ಲಿ ಶಾಪಿಂಗ್‌ ಮಾಡಿ ಕ್ಯಾಷ್‌ಬ್ಯಾಕ್‌ ಪಡೆಯಲು ಬ್ಯಾಂಕ್‌ಗಳು ಕೆಲವೊಮ್ಮೆ ಶಾಪಿಂಗ್‌ನ ಕನಿಷ್ಠ ಮೊತ್ತದ ಮಿತಿಯನ್ನು ನಿಗದಿ ಮಾಡಿರುತ್ತವೆ. ನೀವು ನಿಮ್ಮ ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡೋ ಎಲ್ಲಾ ಖರೀದಿಗಳಿಗೂ ಕ್ಯಾಷ್‌ಬ್ಯಾಕ್‌ ಸಿಕ್ಕೇ ಸಿಗುತ್ತೆ ಅಂತ ಏನೂ ಇಲ್ಲ. ಇಂತಹ ಆಫರ್‌ಗಳಿಗೆ ಒಂದು ಕನಿಷ್ಠ ಮೊತ್ತದ ಹಣವನ್ನು ಪಾವತಿ ಮಾಡಲೇಬೇಕೆಂಬ ನಿಯಮ ಇರತ್ತೆ. ಈ ಹಣ ಪಾವತಿಯ ಮಿತಿಯನ್ನು ಬ್ಯಾಂಕ್‌ಗಳು ಅಥವಾ ಕ್ರೆಡಿಟ್‌ ಕಾರ್ಡ್‌ ಕಂಪನಿಗಳು ನಿಗದಿ ಮಾಡಿರುತ್ತವೆ. ಸಾಮಾನ್ಯವಾಗಿ ಈ ಮೊತ್ತವು 2,000 ರೂನಿಂದ 5,000 ರೂ ನಡುವೆ ಇರುತ್ತೆ. ನೀವೇನಾದ್ರೂ ನಿಮ್ಮ ಕ್ರೆಡಿಟ್‌ ಕಾರ್ಡ್‌ನಿಂದ 1,800 ರೂ ಮೊತ್ತದ ಶಾಪಿಂಗ್‌ ಮಾಡಿದರೆ, ಆಗ ನಿಮಗೆ ಕ್ಯಾಷ್‌ಬ್ಯಾಕ್‌ ಸಿಗಲ್ಲ. ನಿಮಗೆ ಕ್ಯಾಷ್‌ಬ್ಯಾಕ್‌ ಸೌಲಭ್ಯ ಸಿಗಬೇಕು ಅಂದ್ರೆ ನೀವು ನಿಗದಿತ ಕನಿಷ್ಠ ಮೊತ್ತದ ಶಾಪಿಂಗ್‌ ಮಾಡಲೇಬೇಕು.

ಇದನ್ನೂ ಓದಿ: Ancestral Property: ಪಿತ್ರಾರ್ಜಿತವಾಗಿ ಪಡೆಯುವ ಆಸ್ತಿಗೆ ತೆರಿಗೆ ಕಟ್ಟಬೇಕಾ? ಮಾರಿದಾಗ ಎಷ್ಟು ಟ್ಯಾಕ್ಸ್ ಪಾವತಿಸಬೇಕು?

ಗರಿಷ್ಠ ಮಿತಿ ಜಾಹೀರಾತುಗಳನ್ನು ಗಮನ ಇಟ್ಟು ನೋಡಿದರೆ, ಹೆಚ್ಚಿನ ಸಂಖ್ಯೆಯ ಕಂಪನಿಗಳ ಕ್ಯಾಷ್‌ಬ್ಯಾಕ್‌ ಆಫರ್‌ಗಳಿಗೆ ಒಂದು ಗರಿಷ್ಠ ಮಿತಿ ಇರತ್ತೆ ಅನ್ನೋದು ನಿಮಗೆ ಗೊತ್ತಾಗತ್ತೆ. ನೀವು ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಮೂಲಕ ಶಾಪಿಂಗ್‌ ಮಾಡಿದಾಗ ನಿಮ್ಮ ಬ್ಯಾಂಕ್‌ ನಿಮಗೆ ಶೇ 10ರಷ್ಟು ಕ್ಯಾಷ್‌ಬ್ಯಾಕ್‌ ಕೊಡುತ್ತೆ ಅಂದುಕೊಳ್ಳೋಣ. ಹಾಗೂ ಕ್ಯಾಷ್‌ಬ್ಯಾಕ್‌ನ ಗರಿಷ್ಠ ಮಿತಿ 2,000 ರೂ ಅಂತ ಇಟ್ಕೊಳ್ಳೋಣ. ಇಂತಹ ಸ್ಥಿತಿಯಲ್ಲಿ, ನೀವು 20,000 ರೂ ಶಾಪಿಂಗ್‌ ಮಾಡಿ ಗರಿಷ್ಠ ಕ್ಯಾಷ್‌ಬ್ಯಾಕ್‌ ಪಡೆಯಬಹುದು. ಯಾವುದೇ ಶಾಪಿಂಗ್‌ ಮಾಲ್‌ಗೆ ಹೋಗಿ ನೀವು 50,000 ರೂ ಶಾಪಿಂಗ್‌ ಮಾಡ್‌ಬಿಟ್ರೆ, ಆಗ ನಿಮಗೆ 5,000 ರೂ ಕ್ಯಾಷ್‌ಬ್ಯಾಕ್‌ ಸಿಕ್ಕೇಬಿಡತ್ತೆ ಅಂತ ಅರ್ಥ ಅಲ್ಲ. ಎಲ್ಲಾ ಕಂಪನಿಗಳೂ ಕ್ಯಾಷ್‌ಬ್ಯಾಕ್ ಆಫರ್‌ಗಳಿಗೆ ಇರುವ ಜಟಿಲ ನಿಯಮಗಳನ್ನು ಬಹಳ ಸಣ್ಣ-ಸಣ್ಣ ಅಕ್ಷರಗಳಲ್ಲಿ ಪ್ರಿಂಟ್‌ ಮಾಡಿರುತ್ತವೆ ಅನ್ನೋದನ್ನ ಮರೆಯಬೇಡಿ. ಅನೇಕ ಬಾರಿ ಜಾಹಿರಾತುಗಳಲ್ಲಿ ಒಂದು ಸ್ಟಾರ್‌ ಮಾರ್ಕ್‌ ಹಾಕಿ “ನಿಯಮಗಳು ಅನ್ವಯವಾಗುತ್ತವೆ” ಎಂದೂ ಪ್ರಿಂಟ್‌ ಮಾಡಿರುತ್ತಾರೆ.

ವಿಶೇಷ ಒಪ್ಪಂದ

ಪರ್ಸನಲ್‌ ಫೈನಾನ್ಸ್‌ ಎಕ್ಸ್‌ಪರ್ಟ್‌ ಜಿತೇಂದ್ರ ಸೋಲಂಕಿಯವರು ಹೀಗೆ ಹೇಳ್ತಾರೆ: “ಅನೇಕ ಬಾರಿ ಹಣಕಾಸು ಸಂಸ್ಥೆಗಳು ಅವುಗಳ ಪಾಯಿಂಟ್‌ ಆಫ್‌ ಸೇಲ್‌ ಟರ್ಮಿನಲ್‌ಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಸ್ವೈಪ್‌ ಮಾಡಿದಾಗ ಮಾತ್ರ ಕ್ಯಾಷ್‌ಬ್ಯಾಕ್‌ ನೀಡ್ತವೆ. ಸಾಮಾನ್ಯವಾಗಿ, ಬ್ಯಾಂಕ್‌ಗಳು ಯಾವುದೋ ಒಂದು ವಿಶೇಷ ಬ್ರಾಂಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಆಗ, ಅದಕ್ಕೆ ತಗಲುವ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕೌಂಟರ್‌ಗಳಲ್ಲೇ ಕಾರ್ಡ್‌ ಸ್ವೈಪ್‌ ಆಗಬೇಕೆಂದು ಅವು ಬಯಸುತ್ತವೆ. ಉದಾಹರಣೆಗೆ, ಐಸಿಐಸಿಐ ಬ್ಯಾಂಕ್‌ ಎಚ್‌ಪಿಸಿಎಲ್‌ ಜೊತೆಗೆ ತನ್ನ ಕ್ರೆಡಿಟ್‌ ಕಾರ್ಡ್‌ ಬಳಕೆಯ ಒಪ್ಪಂದ ಹೊಂದಿದೆ. ಅದರ ಪೆಟ್ರೋಲ್‌ ಪಂಪ್‌ಗಳಲ್ಲಿ ಇಂಧನ ತುಂಬಿಸಿದಾಗ ಶೇ 2.5ರಷ್ಟು ಕ್ಯಾಷ್‌ಬ್ಯಾಕ್‌ ನೀಡುತ್ತದೆ. ನೀವೇನಾದ್ರೂ, ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಪಂಪ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಂಡರೆ ನಿಮಗೆ ಕ್ಯಾಷ್‌ಬ್ಯಾಕ್‌ ಸಿಗಲ್ಲ.”

ಇದನ್ನೂ ಓದಿ: Knowledge: ಕೆಲ ಲಿಸ್ಟೆಡ್ ಕಂಪನಿಗಳು ಯಾಕೆ ಸ್ಟಾಕ್ ಸ್ಪ್ಲಿಟ್ ಮಾಡುತ್ತವೆ? ಬೋನಸ್ ಷೇರುಗಳ ಹಂಚಿಕೆಯಿಂದ ಏನಾಗುತ್ತೆ?

ಸೋಲಂಕಿಯವರು ಮುಂದುವರೆದು ಹೀಗೆ ಹೇಳುತ್ತಾರೆ: “ಕ್ಯಾಷ್‌ಬ್ಯಾಕ್‌ ಆಸೆಗೆ ಬಿದ್ದು ಹೆಚ್ಚು-ಹೆಚ್ಚು ಶಾಪಿಂಗ್‌ ಮಾಡಬೇಡಿ. ನೀವೇನಾದ್ರೂ, ಕ್ಯಾಷ್‌ಬ್ಯಾಕ್‌ಗಾಗಿ ನಿಮ್ಮ ಬಜೆಟ್‌ನಿಂದ ಹಣ ಖರ್ಚು ಮಾಡಿಬಿಟ್ರೆ, ನಂತರ ಪೇಮೆಂಟ್‌ ಮಾಡೋವಾಗ ನಿಮಗೆ ತೊಂದರೆ ಆಗತ್ತೆ. ಇದರಿಂದ ನಿಮ್ಮ ಬಜೆಟ್‌ ಕೂಡಾ ಹಾಳಾಗುತ್ತೆ. ಆದ್ದರಿಂದ, ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳಿಂದ ಕ್ಯಾಷ್‌ಬ್ಯಾಕ್‌ ಲಾಭ ಪಡೆಯುವ ಮೊದಲು ಸಾಕಷ್ಟು ಯೋಚಿಸಿ. ನೀವೇನಾದ್ರೂ ಕ್ಯಾಷ್‌ಬ್ಯಾಕ್‌ ಪಡೆಯಲೇಬೇಕು ಅನ್ನೋ ನಿರ್ಧಾರ ಮಾಡಿಬಿಟ್ಟಿದ್ರೆ, ಆಗ ಅದರ ನಿಯಮ-ನಿಬಂಧನೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಈ ವಿಷಯದಲ್ಲಿ ಸ್ವಲ್ಪವೇ ಎಚ್ಚರ ತಪ್ಪಿದ್ರೂ ನಂತರ ಬಹಳ ತೊಂದರೆ ಆಗಬಹುದು.”

(ಕೃಪೆ: ಮನಿ9)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ