
ನವದೆಹಲಿ, ಜನವರಿ 20: ಕಳೆದ ಬಜೆಟ್ನಲ್ಲಿ (Union Budget) ಭರ್ಜರಿ ಟ್ಯಾಕ್ಸ್ ರಿಲೀಫ್ ಕೊಟ್ಟಿದ್ದ ಸರ್ಕಾರ ಈಗ ಮುಂಬರುವ ಬಜೆಟ್ನಲ್ಲೂ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ವರದಿಗಳ ಪ್ರಕಾರ ಸರ್ಕಾರವು ಅಮೆರಿಕ, ಜರ್ಮನಿ ಮೊದಲಾದ ಕೆಲ ದೇಶಗಳಲ್ಲಿ ಇರುವ ರೀತಿಯಲ್ಲಿ ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ಅಥವಾ ಜಂಟಿ ತೆರಿಗೆ ವ್ಯವಸ್ಥೆ ತರುವ ಬಗ್ಗೆ ಯೋಜಿಸಿದೆ. ಇದೇನಾದರೂ ಜಾರಿಗೆ ಬಂದಲ್ಲಿ ಒಂದೇ ಆದಾಯಮೂಲ ಇರುವ ಕುಟುಂಬಗಳಿಗೆ ತೆರಿಗೆ ಉಳಿಸಲು ಅನುಕೂಲವಾಗುವ ನಾಧ್ಯತೆ ಇದೆ.
ಗಂಡ ಮತ್ತು ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ಟ್ಯಾಕ್ಸ್ ಫೈಲ್ ಮಾಡುವ ಬದಲು ಜಂಟಿಯಾಗಿ ಐಟಿ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುತ್ತದೆ. ಜಂಟಿಯಾಗಿ ಸಲ್ಲಿಸಿದಾಗ ಹೆಚ್ಚಿನ ವಿನಾಯಿತಿಗಳು ಸಿಗುತ್ತವೆ. ಮೂಲ ಡಿಡಕ್ಷನ್ ಪ್ರಮಾಣ ಹೆಚ್ಚುತ್ತದೆ. ಸರ್ಚಾರ್ಜ್ ಮಿತಿ ಹೆಚ್ಚುತ್ತದೆ.
ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…
ಸದ್ಯ ಇರುವ ಪ್ರಸ್ತಾಪದ ಪ್ರಕಾರ, ಜಂಟಿ ಟ್ಯಾಕ್ಸೇಶನ್ನಲ್ಲಿ ಗಂಡ ಮತ್ತು ಹೆಂಡತಿ ಇಬ್ಬರ ಒಟ್ಟು ಆದಾಯದಲ್ಲಿ 8 ಲಕ್ಷ ರೂ ಟ್ಯಾಕ್ಸ್ ಎಕ್ಸೆಂಪ್ಷನ್ ಅಥವಾ ತೆರಿಗೆ ವಿನಾಯಿತಿ ಕೊಡಲಾಗುತ್ತದೆ. ಶೇ. 30 ತೆರಿಗೆ ಅನ್ವಯ ಆಗುವ ಆದಾಯ ಮಿತಿಯನ್ನು 48 ಲಕ್ಷ ರೂಗೆ ಏರಿಸಲಾಗಬಹುದು.
ಅಂದರೆ, ಕಳೆದ ವರ್ಷದ ಸ್ಲ್ಯಾಬ್ ದರದ ಪ್ರಕಾರ 24 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯ ಆಗುತ್ತದೆ. ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಲ್ಲಿ 48 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯ ಆಗಬಹುದು.
ಹಾಗೆಯೇ, ಈಗಿರುವ ವ್ಯವಸ್ಥೆಯಲ್ಲಿ 50 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಸರ್ಚಾರ್ಜ್ ಅನ್ವಯ ಆಗುತ್ತದೆ. ಶೇ. 10ರಿಂದ 25ರವರೆಗೂ ಸರ್ಚಾರ್ಜ್ ಇದೆ. ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಲ್ಲಿ ಸರ್ಚಾರ್ಜ್ 75 ಲಕ್ಷ ರೂ ಆದಾಯದಿಂದ ಶುರುವಾಗುತ್ತದೆ.
ಇದನ್ನೂ ಓದಿ: ಬಜೆಟ್ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ?
ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಿಂದ ಅನುಕೂಲಗಳು ಬಹಳಷ್ಟಾಗಬಹುದು. ಗಂಡ ಮತ್ತು ಹೆಂಡತಿ ಇಬ್ಬರಿದ್ದು ಗಂಡ ಮಾತ್ರವೇ ಕೆಲಸಕ್ಕೆ ಹೋಗುತ್ತಿದ್ದು, ಹೆಂಡತಿ ಗೃಹಿಣಿಯಾಗಿದ್ದರೆ, ಹಾಗೂ ಗಂಡನ ಆದಾಯ ಬಹಳ ಹೆಚ್ಚಿದ್ದರೆ ಆಗ ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ಅತಿಹೆಚ್ಚು ಅನುಕೂಲ ತರುತ್ತದೆ.
ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಜಂಟಿಯಾಗಿಯೇ ಐಟಿಆರ್ ಸಲ್ಲಿಸಬೇಕೆಂದು ಕಡ್ಡಾಯ ಪಡಿಸಲಾಗುವುದಿಲ್ಲ. ಪ್ರತ್ಯೇಕವಾಗಿ ಸಲ್ಲಿಸಬಹುದು, ಅಥವಾ ಜಂಟಿಯಾಗಿಯೂ ಸಲ್ಲಿಸಬಹುದು. ಟ್ಯಾಕ್ಸ್ ಬಾಧ್ಯತೆ ಮತ್ತು ಅನುಕೂಲತೆಗಳನ್ನು ಎಣಿಸಿ ನಿರ್ಧಾರ ತೆಗೆದುಕೊಳ್ಳಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ