New ITR Forms: ಐಟಿಆರ್ ಅರ್ಜಿ ನಮೂನೆಗಳ ಬಿಡುಗಡೆ ಮಾಡಿದ ಸಿಬಿಡಿಟಿ; ಇಲ್ಲಿದೆ ವಿವರ
ಈ ಬಾರಿ ಅವಧಿಗೂ ಮೊದಲೇ ಐಟಿಆರ್ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿರುವುದರಿಂದ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಸುಲಭವಾಗಲಿದೆ ಎನ್ನಲಾಗಿದೆ. ಆದಾಯ ತೆರಿಗೆ ವಿವರ ಸಲ್ಲಿಕೆಯ ಅರ್ಜಿ ನಮೂನೆಗಳ ಕುರಿತಾದ ವಿವರ ಇಲ್ಲಿದೆ.
ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) 2023-24ನೇ ಸಾಲಿನ ತೆರಿಗೆ ಮೌಲ್ಯಮಾಪನ ವರ್ಷದ ಐಟಿಆರ್ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಹಣಕಾಸು ವರ್ಷದ ಕೊನೆಯಲ್ಲಿ ಅಥವಾ ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ ಸಿಬಿಡಿಟಿ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡುತ್ತಿತ್ತು. ಈ ಬಾರಿ ಮೊದಲೇ ಬಿಡುಗಡೆ ಮಾಡಿರುವುದರಿಂದ ಐಟಿಆರ್ (ITR) ಸಲ್ಲಿಕೆ ಪ್ರಕ್ರಿಯೆ ಸುಲಭವಾಗಲಿದೆ ಎನ್ನಲಾಗಿದೆ. ಆದಾಯ ತೆರಿಗೆ ವಿವರ ಸಲ್ಲಿಕೆಯ ಅರ್ಜಿ (ITR Forms) ನಮೂನೆಗಳ ಕುರಿತಾದ ವಿವರ ಇಲ್ಲಿದೆ.
ಆದಾಯ ತೆರಿಗೆ ವಿವರ ಸಲ್ಲಿಕೆ ಅರ್ಜಿ ವಿಧಗಳು
- ಐಟಿಆರ್ ಫಾರ್ಮ್ 1 ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಸಂಬಂಧಿಸಿದ್ದಾಗಿದೆ. 50 ಲಕ್ಷ ರೂ. ವರೆಗೆ ಆದಾಯ ಗಳಿಸುವ ವ್ಯಕ್ತಿಗಳು (ವೇತನ, ನಿವೇಶನ ಅಥವಾ ಬಡ್ಡಿ ಸೇರಿ ಇತರ ಮೂಲಗಳ ಆದಾಯ ಗಳಿಸುವ) ಈ ಅರ್ಜಿ ನಮೂನೆ ಮೂಲಕ ಐಟಿಆರ್ ಸಲ್ಲಿಸಬೇಕಾಗುತ್ತದೆ.
- 50 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಆದಾಯ ಗಳಿಸುವವರು ಮತ್ತು ನಿವೇಶನ ಆಸ್ತಿಯಿಂದ ಆದಾಯ ಗಳಿಸುವವರು ಐಟಿಆರ್ ಫಾರ್ಮ್ 2ರ ಮೂಲಕ ಐಟಿಆರ್ ಸಲ್ಲಿಸಬೇಕಾಗುತ್ತದೆ.
- ಉದ್ಯಮ ಅಥವಾ ವೃತ್ತಿಯಿಂದ ಆದಾಯ ಗಳಿಸುವವರು ಐಟಿಆರ್ ಫಾರ್ಮ್ 3ರ ಮೂಲಕ ಆದಾಯ ತೆರಿಗೆ ವಿವರ ಸಲ್ಲಿಸಬೇಕಾಗುಗತ್ತದೆ.
- ಸಣ್ಣ ಮತ್ತು ಮಧ್ಯಮ ತೆರಿಗೆ ಪಾವತಿದಾರರಿಗಾಗಿ ಸರಳವಾದ ಐಟಿಆರ್ ಫಾರ್ಮ್ 4ರ ಮೂಲಕ ಐಟಿಆರ್ ಸಲ್ಲಿಸಲು ಅವಕಾಶವಿದೆ.
- ಐಟಿಆರ್-5: ಇದರ ಮೂಲಕ ಎಲ್ಎಲ್ಪಿಗಳು ಹಾಗೂ ಉದ್ಯಮಗಳು ಐಟಿಆರ್ ಸಲ್ಲಿಸಬೇಕಾಗುತ್ತದೆ.
- ಐಟಿಆರ್-6: ಉದ್ಯಮಗಳು ಐಟಿಆರ್ ಸಲ್ಲಿಸಲು ಇರುವ ಅರ್ಜಿ ನಮೂನೆ ಇದಾಗಿದೆ.
ಐಟಿಆರ್ ಅರ್ಜಿಯಲ್ಲಿ ಮಹತ್ವದ ಬದಲಾವಣೆ ಇದೆಯೇ?
ಐಟಿಆರ್ ಅರ್ಜಿಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಐಟಿಆರ್-1 ಅರ್ಜಿ ನಮೂನೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ‘ಕ್ಲಿಯರ್’ ಸಿಇಒ ಅರ್ಚಿತ್ ಗುಪ್ತಾ ‘ಲೈವ್ಮಿಂಟ್ ಡಾಟ್ಕಾಂ’ಗೆ ತಿಳಿಸಿದ್ದಾರೆ. ವರ್ಚುವಲ್ ಡಿಜಿಟಲ್ ಸ್ವತ್ತುಗಳಿಂದ ಗಳಿಸಿದ ಆದಾಯವನ್ನು ಬಂಡವಾಳ ಗಳಿಕೆ ಜತೆ ಸೇರ್ಪಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ತಿಂಗಳಿಗೊಮ್ಮೆಯಾದರೂ ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲಿಸಬೇಕು; ಯಾಕೆಂಬುದು ಇಲ್ಲಿದೆ ನೋಡಿ
ಹೊಸ ತೆರಿಗೆ ಪದ್ಧತಿ ಆಯ್ದುಕೊಳ್ಳುವುದಕ್ಕೆ ಸಂಬಂಧಿಸಿದ ಆಯ್ಕೆಯನ್ನು ಅರ್ಜಿಯಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ. ತೆರಿಗೆದಾರರು ಕಳೆದ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ಹೊಸ ತೆರಿಗೆ ಪದ್ಧತಿ ಆಯ್ದುಕೊಂಡಿದ್ದಾರೆಯೇ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ. ಕಳೆದ ವರ್ಷ ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ತಿರಸ್ಕರಿಸಿದ್ದಾರೆಯೇ ಎಂಬ ಪ್ರಶ್ನೆ ಮತ್ತು 101ಇ ವಿವರ ಸಲ್ಲಿಸುವುದಕ್ಕೆ ಸಂಬಂಧಿಸಿದ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ.