ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?

|

Updated on: Aug 15, 2024 | 12:52 PM

FIRE concept for early retirement: ಬೇಗನೇ ನಿವೃತ್ತಿಯಾಗುವಷ್ಟು ಹಣ ಸಂಪಾದನೆ ಮಾಡುವ FIRE ಕಾನ್ಸೆಪ್ಟ್ ಪ್ರಚಲಿತದಲ್ಲಿದೆ. ನಿವೃತ್ತಿಯಾಗಲು ಎಷ್ಟು ಹಣ ಸಂಪಾದಿಸಬೇಕು ಎಂಬ ಗುರಿ ನಿಮ್ಮ ಕಣ್ಮುಂದೆ ಇರುತ್ತದೆ. ಸಾಧ್ಯವಾದಷ್ಟೂ ಬೇಗ ನೀವು ಅಷ್ಟು ಹಣ ಸಂಪಾದಿಸಿದಲ್ಲಿ ನಿಮ್ಮ ಇಚ್ಛೆಯಂತೆ ಕೆಲಸಕ್ಕೆ ತಿಲಾಂಜಲಿ ಹೇಳಿ ವಿಶ್ರಾಂತ ಜೀವನ ನಡೆಸಬಹುದು.

ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?
ಹಣಕಾಸು ಸ್ವಾತಂತ್ರ್ಯ
Follow us on

ಕಷ್ಟಪಟ್ಟು ಯಾಕೆ ಓದುತ್ತೇವೆ? ಒಳ್ಳೆಯ ಕೆಲಸ ಸಿಗಲಿ ಎಂದು; ಕಷ್ಟ ಪಟ್ಟು ಯಾಕೆ ಕೆಲಸ ಮಾಡುತ್ತೇವೆ? ಸುಖವಾಗಿ ಜೀವನ ಸಾಗಿಸಲೆಂದು. ಜೀವನವಿಡೀ ಶ್ರಮ ವಹಿಸಿ ದುಡಿಯುತ್ತಲೇ ಇದ್ದರೆ ಸುಖದ ಜೀವನ ಹೇಗೆ ಸಾಧ್ಯ? ಇದೇ ವಿಚಾರದ ತಳಹದಿಯಲ್ಲಿ ಫೈರ್ (FIRE) ಟ್ರೆಂಡ್ ಶುರುವಾಗಿದೆ. FIRE ಎಂದರೆ ಫೈನಾನ್ಷಿಯಲ್ ಇಂಡಿಪೆಂಡೆನ್ಸ್ ರಿಟೈರ್ ಅರ್ಲಿ. ಬೇಗನೇ ನಿವೃತ್ತಿಯಾಗುವಷ್ಟು ಹಣಕಾಸು ಸ್ವಾತಂತ್ರ್ಯ ಪಡೆಯುವ ಕಾನ್ಸೆಪ್ಟೇ ಈ FIRE. ವಿಕಿ ರಾಬಿನ್ ಮತ್ತು ಜೋ ಡಾಮಿನ್​ಗೆಜ್ ಅವರು ಬರೆದ ‘ಯುವರ್ ಮನಿ ಆರ್ ಯುವರ್ ಲೈಫ್’ ಪುಸ್ತಕದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸಲಾಗಿದೆ.

ಇಷ್ಟ ಬಂದಂತೆ ಅಡ್ಡಾಡಿಕೊಂಡು, ಇಷ್ಟಬಂದಂತೆ ದುಡಿದುಕೊಂಡು, ಯಾರ ಅಂಕೆ, ಒತ್ತಡಗಳಿಲ್ಲದೇ ಆರಾಮವಾಗಿ ಇರಬೇಕು ಎನ್ನುವುದು ಹೆಚ್ಚಿನ ಮಂದಿಯ ಕನಸು. ಆದರೆ, ದುಡಿಮೆ, ಸಾಲದ ಚಕ್ರದಲ್ಲಿ ಎಲ್ಲರೂ ಸಿಲುಕಿಕೊಳ್ಳುತ್ತೇವೆ. ಇದನ್ನು ಹೇಗೆ ತಪ್ಪಿಸುವುದು? ನೀವು ಆರಾಮವಾಗಿ ಇರುವಷ್ಟು ಹಣ ಸಂಪಾದನೆ ಮಾಡಿ ಬಳಿಕ ಪೂರ್ಣಪ್ರಮಾಣದ ದುಡಿಮೆಗೆ ತಿಲಾಂಜಲಿ ಹೇಳುವ ಕಾನ್ಸೆಪ್ಟೇ ಫೈರ್. ನೀವು ದುಡಿಯುವ ಕಾಲದಲ್ಲಿ ಸಾಧ್ಯವಾದಷ್ಟೂ ಶ್ರಮ ಹಾಕಿ ಹೆಚ್ಚು ಹಣ ಸಂಪಾದಿಸುವುದು, ಮತ್ತು ಸಾಧ್ಯವಾದಷ್ಟೂ ಹಣ ಉಳಿಸುವುದು ಇದು ಪ್ರಮುಖವಾದುದು.

ನೀವು ವೆಚ್ಚ ಮಾಡುವ ಹಣದ ಸಂಪಾದನೆಗೆ ಎಷ್ಟು ಗಂಟೆ ಕೆಲಸ ಮಾಡಿರುತ್ತೀರಿ ಎಂಬುದನ್ನು ಆಲೋಚಿಸಬೇಕು. ಆಗ ಹಣ ಉಳಿಸಲು ಸಾಧ್ಯ ಎಂದು ಯುವರ್ ಮನಿ ಆರ್ ಯುವರ್ ಲೈಫ್ ಪುಸ್ತಕದಲ್ಲಿ ಒಂದು ಸಿಂಪಲ್ ಸೂತ್ರ ಹೇಳಿದ್ದಾರೆ.

ಇದನ್ನೂ ಓದಿ: ಫ್ರೀಡಂ ಎಸ್​ಐಪಿ: ಡಬಲ್ ಅನುಕೂಲ ಕೊಡುವ ಐಸಿಐಸಿಐ ಪ್ರುಡೆನ್ಷಿನ್ ಮ್ಯುಚುವಲ್ ಫಂಡ್ ಯೋಜನೆ ಇದು

ನಿಮ್ಮ ವಾರ್ಷಿಕ ವೆಚ್ಚದ 25 ಪಟ್ಟು ಹಣ ಸಂಪಾದನೆಯ ಸೂತ್ರ ಮರೆಯದಿರಿ

FIRE ವಿಚಾರದಲ್ಲಿ ಬಹಳ ಮೂಲಭೂತ ಅಂಶ ಎಂದರೆ ಅದು ರಿಟೈರ್ಮೆಂಟ್​ಗೆ ಎಷ್ಟು ಹಣ ಬೇಕು ಎಂಬುದು. ನೀವು 60 ವರ್ಷಕ್ಕೆ ನಿವೃತ್ತರಾಗುತ್ತೀರಿ ಎಂದಿಟ್ಟುಕೊಳ್ಳಿ. ಆಗ 25 ವರ್ಷಕ್ಕೆ ಆಗುವ ವೆಚ್ಚದಷ್ಟು ಹಣ ನಿಮ್ಮ ಬಳಿ ಇರಬೇಕು ಎಂದು ಹೇಳಲಾಗುತ್ತದೆ.

ನಿಮ್ಮ ಈಗಿನ ಲೈಫ್​ಸ್ಟೈಲ್​ನಂತೆಯೇ ಇರಲು ಒಂದು ವರ್ಷದಲ್ಲಿ ಎಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿರಿ. ಅಂದಾಜು 10 ಲಕ್ಷ ರೂ ಬೇಕಾಗುತ್ತದೆ ಎಂದಿಟ್ಟುಕೊಳ್ಳಿ. ನೀವು ನಿವೃತ್ತರಾಗಲು ಎಷ್ಟು ವರ್ಷ ಆಗುತ್ತೆ ಅದಕ್ಕೆ ಹಣದುಬ್ಬರ ಅಥವಾ ಬೆಲೆ ಏರಿಕೆಯ ಶೇ. 7ರ ದರ ಸೇರಿಸಿ. ಉದಾಹರಣೆಗೆ, ನಿಮ್ಮ ವಯಸ್ಸು 45 ವರ್ಷ ಇದೆ ಎಂದಾದರೆ 60 ವರ್ಷ ವಯಸ್ಸಿನವರೆಗೆ ದುಡಿಯುತ್ತೀರಿ ಎಂದರೆ ಇನ್ನೂ 15 ವರ್ಷ ಆಗುತ್ತದೆ. 15 ವರ್ಷದ ಬಳಿಕ ನಿಮ್ಮ 10 ಲಕ್ಷ ರೂನ ನಿಜ ಮೌಲ್ಯ 28 ಲಕ್ಷ ರೂ ಆಗಬಹುದು. ಅಂದರೆ ನಿಮ್ಮ ನಿವೃತ್ತಿ ಕಾಲಕ್ಕೆ ವರ್ಷಕ್ಕೆ ನಿಮಗೆ ಆಗುವ ವೆಚ್ಚ 28 ಲಕ್ಷ ರೂ.

ಈಗ ವರ್ಷಕ್ಕೆ 28 ಲಕ್ಷ ರೂನಂತೆ 25 ವರ್ಷಕ್ಕೆ ಎಷ್ಟಾಗಬಹುದು. 28 x 25 = 700 ಲಕ್ಷ. ಅಂದರೆ ಏಳು ಕೋಟಿ ರೂ ಆಗುತ್ತದೆ. ನೀವು ನಿವೃತ್ತರಾಗಲು ನಿಮ್ಮ ಬಳಿ 7 ಕೋಟಿ ರೂ ಹಣ ಇರಬೇಕು. ಈ 15 ವರ್ಷದಲ್ಲಿ ಇಷ್ಟು ಹಣ ಕೂಡಿಡಲು ಏನು ಮಾಡಬೇಕು ಎಂದು ಈಗಲೇ ಪ್ಲಾನ್ ಮಾಡಿರಿ. ಗಮನಿಸಿ, ನೀವು ಮನೆ ಕಟ್ಟುವುದು, ಮದುವೆ ಮಾಡುವುದು ಇವೆಲ್ಲವನ್ನೂ ಹೊರತುಪಡಿಸಿ ರಿಟೈರ್ಮೆಂಟ್​ಗೆಂದು ನೀವು ಹಣ ಕೂಡಿಡಬೇಕು.

ಇದನ್ನೂ ಓದಿ: ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ

15 ವರ್ಷದಲ್ಲಿ ಏಳು ಕೋಟಿ ರೂ ಕೂಡಿಡಲು ಎಷ್ಟು ಹಣ ಉಳಿಸಬೇಕು?

ವರ್ಷಕ್ಕೆ ಶೇ. 12ರಷ್ಟು ರಿಟರ್ನ್ ಕೊಡಬಲ್ಲಂತಹ ಮ್ಯೂಚುವಲ್ ಫಂಡ್ ಇತ್ಯಾದಿಯಲ್ಲಿ ನೀವು ತಿಂಗಳಿಗೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದಲ್ಲಿ 15 ವರ್ಷದಲ್ಲಿ ಏಳೂವರೆ ಕೋಟಿ ರೂ ಹಣ ಕೂಡಿಡಲು ಸಾಧ್ಯವಾಗುತ್ತದೆ. 60 ವರ್ಷಕ್ಕೆ ಅಲ್ಲ ನೀವು 50 ವರ್ಷಕ್ಕೆ ಕೆಲಸ ಬಿಟ್ಟು ಮನೆಯಲ್ಲಿ ಇರಲು ಈ ರೀತಿಯ ಸೂತ್ರವನ್ನು ಹಾಕಿ ನೋಡಿ. ಆಗ ಸಂಪಾದನೆ ಗುರಿ ಏನು ಎಂಬುದು ನಿಮಗೆ ಗೊತ್ತಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ