Digital Personal Loan: ಸುಲಭವಾಗಿ ಸಾಲ ಪಡೆಯವುದು ಹೇಗೆ? ಇಲ್ಲಿದೆ ಮಾಹಿತಿ
ಅನೇಕ ಫಿನ್ಟೆಕ್ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ತ್ವರಿತವಾಗಿ ಸಾಲ ಮಂಜೂರು ಮಾಡುತ್ತಿವೆ. ಸ್ಮಾರ್ಟ್ಫೋನ್ಗಳಲ್ಲಿ ಆ್ಯಪ್ ಡೌನ್ಲೋಡ್ ಮಾಡುವ ಮೂಲಕ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಅಲೆಯದೇ, ಬ್ಯಾಂಕ್ ಸಿಬ್ಬಂದಿಯನ್ನು ಭೇಟಿಯಾಗದೆ ಸುಲಭವಾಗಿ ಸಾಲ ಪಡೆಯಬಹುದಾಗಿದೆ.
ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ (Fintech) ಇಂದು ಹಣಕಾಸು ಕ್ಷೇತ್ರದ ಸೇವೆಗಳು (Financial Services) ಬಹಳ ಸರಳ, ಸುಲಭವಾಗಿಬಿಟ್ಟಿವೆ. ಬ್ಯಾಂಕಿಂಗ್ ಸೇರಿದಂತೆ ಬಹುತೇಕ ಎಲ್ಲ ಹಣಕಾಸು ಸೇವೆಗಳನ್ನು ಸ್ಮಾರ್ಟ್ಫೋನ್ ಮೂಲಕವೇ ಪಡೆಯಬಹುದಾಗಿದೆ. ಡಿಜಿಟಲ್ ವೈಯಕ್ತಿಕ ಸಾಲ (Digital Personal Loan) ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ದೇಶದಲ್ಲಿ ನೀಡಲಾಗುವ ಶೇಕಡಾ 70ರಷ್ಟು ಸಾಲದ ಪೈಕಿ ಹೆಚ್ಚಿನದ್ದರ ಪ್ರಯೋಜನ ಶ್ರೀಮಂತ ವರ್ಗಕ್ಕೆ ದೊರೆಯುತ್ತಿದ್ದರೆ, 5 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ವೇತನ ಹೊಂದಿರುವವರಿಗೆ, ಮಧ್ಯಮ ವರ್ಗದ ಜನರಿಗೆ ಸಾಲ ಪಡೆಯುವ ಪ್ರಕ್ರಿಯೆ ತುಸು ಕಷ್ಟಕರವಾಗಿದೆ. ಕಠಿಣ ನಿಯಮಗಳು, ಆದಾಯ, ಕ್ರೆಡಿಟ್ ಸ್ಕೋರ್, ಪೇಪರ್ವರ್ಕ್ ಇತ್ಯಾದಿಗಳು ಸಾಲ ಪಡೆಯುವ ಪ್ರಕ್ರಿಯೆಯನ್ನು ಕಷ್ಟಕರಗೊಳಿಸಿವೆ. ತುರ್ತು ಸಂದರ್ಭಗಳಲ್ಲಂತೂ ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಆದರೆ, ಇದೀಗ ಸುಲಭವಾಗಿ ಅನುಮೋದನೆ ಪಡೆಯಬಹುದಾಗಿದೆ. ಹೇಗೆಂಬ ಮಾಹಿತಿ ಇಲ್ಲಿದೆ.
ಅನೇಕ ಫಿನ್ಟೆಕ್ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ತ್ವರಿತವಾಗಿ ಸಾಲ ಮಂಜೂರು ಮಾಡುತ್ತಿವೆ. ಸ್ಮಾರ್ಟ್ಫೋನ್ಗಳಲ್ಲಿ ಆ್ಯಪ್ ಡೌನ್ಲೋಡ್ ಮಾಡುವ ಮೂಲಕ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಅಲೆಯದೇ, ಬ್ಯಾಂಕ್ ಸಿಬ್ಬಂದಿಯನ್ನು ಭೇಟಿಯಾಗದೆ ಸುಲಭವಾಗಿ ಸಾಲ ಪಡೆಯಬಹುದಾಗಿದೆ. ತಂತ್ರಜ್ಞಾನದ ಸಹಾಯದಿಂದ ಸಾಲದ ಮೌಲ್ಯಮಾಪನ, ದಾಖಲೆ ದೃಢೀಕರಣ, ಮರುಪಾವತಿ ವಿಧಾನ ಎಲ್ಲವನ್ನೂ ಆನ್ಲೈನ್ನಲ್ಲೇ ಸುಲಭವಾಗಿ, ತ್ವರಿತವಾಗಿ ಮಾಡಬಹುದಾಗಿದೆ. ಬ್ಯಾಂಕಿಂಗ್, ಹೂಡಿಕೆ, ವಿಮೆ ಸೇರಿದಂತೆ ಹಲವು ಸೇವೆಗಳನ್ನು ಫಿನ್ಟೆಕ್ಗಳು ನೀಡುತ್ತಿವೆ.
ಎಷ್ಟು ಮೊತ್ತದ ಸಾಲ ಸಿಗುತ್ತದೆ?
ಸಾಲದ ಅವಶ್ಯಕತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಡಿಜಿಟಲ್ ವೇದಿಕೆಗಳ ಮೂಲಕ 5,000 ರೂ.ನಿಂದ 5 ಲಕ್ಷ ರೂ. ವರೆಗೆ ಸಾಲ ದೊರೆಯಬಹುದು ಎಂದು ಮನಿವಿವ್ ಸಿಎಂಒ ಎಸ್.ವಿ. ಪ್ರಶಾಂತ್ ನಾಯ್ಡು ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ತ್ವರಿತವಾಗಿ ಅರ್ಹತೆ ಪರಿಶೀಲನೆ, ಸಾಲ ಮಂಜೂರಾತಿ
ಸಾಲ ಪಡೆಯಲು ವ್ಯಕ್ತಿ ಅರ್ಹನೇ ಎಂಬುದನ್ನು ಪರಿಶೀಲಿಸುವ ಪ್ರಕ್ರಿಯೆ ಡಿಜಿಟಲ್ ತಾಣಗಳಲ್ಲಿ ಬಹು ಬೇಗನೆ ಮುಗಿದುಬಿಡುತ್ತದೆ. ಅರ್ಜಿ ಸಲ್ಲಿಸಿದ ವ್ಯಕ್ತಿಯು ಸಾಲ ಪಡೆಯಲು ಅರ್ಹನೇ ಎಂಬುದನ್ನು ಮಷಿನ್ ಆಧಾರಿತ ರಿಸ್ಕ್ ಅಸೆಸ್ಮೆಂಟ್ ಮಾದರಿಗಳ ಸಹಾಯದಿಂದ ಕೇವಲ 2 ನಿಮಿಷಗಳಲ್ಲಿ ಖಾತರಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಇಕೆವೈಸಿ, ಡಿಜಿಲಾಕರ್ಗಳಂಥ ತಾಣಗಳ ಸಹಾಯದಿಂದ ದಾಖಲೆಗಳ ದೃಢೀಕರಣ ಸಹ ಕೆಲವೇ ಸೆಕೆಂಡುಗಳಲ್ಲಿ ಮುಗಿದುಹೋಗುತ್ತದೆ. ಎಪಿಐ ಆಧಾರಿತ ಸೊಲ್ಯೂಷನ್ಗಳು ರಿಯಲ್ ಟೈಮ್ ಫೋಟೊ, ಆದಾಯದ ವಿವರಗಳನ್ನು ದೃಢೀಕರಿಸಲು ನೆರವಾಗುತ್ತವೆ. ದಾಖಲೆಗಳ ಪರಿಶೀಲನೆ, ದೃಢೀಕರಣ ಮುಗಿದ ಬೆನ್ನಲ್ಲೇ ತ್ವರಿತವಾಗಿ ಸಾಲ ಮಂಜೂರಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Thu, 22 December 22