
ನವೆಂಬರ್ (November) ತಿಂಗಳು ಆರಂಭವಾಗಿದೆ. ಇದರೊಂದಿಗೆ ಆಧಾರ್ ಕಾರ್ಡ್ ಸಂಬಂಧಿತ ನಿಯಮಗಳಿಂದ ತೊಡಗಿ ಬ್ಯಾಂಕಿಂಗ್ (Banking), ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ 7 ನಿಯಮಗಳು ಬದಲಾಗಿವೆ. ದೈನಂದಿನ ಹಣಕಾಸು ವಹಿವಾಟಿನ ಮೇಲೆ ನೇರವಾಗಿ ಪರಿಣಾಮ ಬೀರುವ ಹೊಸ ನಿಯಮಗಳು ಅಸ್ತಿತ್ವಕ್ಕೆ ಬಂದಿವೆ. ಆಧಾರ್ ಅಪ್‌ಡೇಟ್ ಶುಲ್ಕ, ಬ್ಯಾಂಕ್ ನಾಮಿನೇಷನ್, ಹೊಸ ಜಿಎಸ್ಟಿ ಸ್ಲ್ಯಾಬ್‌ಗಳು ಸೇರಿದಂತೆ ಜನಸಾಮಾನ್ಯರ ಖರ್ಚು ವೆಚ್ಚಗಳ ಮೇಲೆ ಪರಿಣಾಮ ಬೀರಬಲ್ಲ ಮತ್ತು ಬದಲಾಗಿರುವ 7 ನಿಯಮಗಳ ಮಾಹಿತಿ ಇಲ್ಲಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಕ್ಕಳ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್ ಅಪ್ಡೇಟ್ಗೆ 125 ರೂ. ಶುಲ್ಕವನ್ನು ಮನ್ನಾ ಮಾಡಿದೆ. ಇದು ಒಂದು ವರ್ಷದವರೆಗೆ ಉಚಿತ ಇರಲಿದೆ. ವಯಸ್ಕರಿಗೆ, ಹೆಸರು, ಜನ್ಮ ದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನವೀಕರಿಸಲು 75 ರೂ. ಇರಲಿದ್ದು, ಫಿಂಗರ್‌ಪ್ರಿಂಟ್‌ಗಳು ಅಥವಾ ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಅಪ್ಡೇಟ್ಗೆ 125 ರೂ. ನಿಗದಿಪಡಿಸಲಾಗಿದೆ.
ಪರಿಷ್ಕೃತ ನಿಯಮದ ಪ್ರಕಾರ, ಯಾವುದೇ ಸಪೋರ್ಟಿಂಗ್ ಡಾಕ್ಯುಮೆಂಟ್ಗಳನ್ನು ಸಲ್ಲಿಸದೆ ಆಧಾರ್ ವಿಳಾಸ, ಜನ್ಮ ದಿನಾಂಕ ಅಥವಾ ಹೆಸರನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದಾಗಿದೆ.
ನವೆಂಬರ್ 1 ರಿಂದ, ಬ್ಯಾಂಕುಗಳು ಗ್ರಾಹಕರಿಗೆ ಒಂದು ಖಾತೆ, ಲಾಕರ್ ಅಥವಾ ಸೇಫ್ ಕಸ್ಟಡಿಗೆ ನಾಲ್ಕು ಜನರನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುತ್ತವೆ . ತುರ್ತು ಸಂದರ್ಭಗಳಲ್ಲಿ ಕುಟುಂಬಗಳಿಗೆ ಹಣವನ್ನು ಸುಲಭವಾಗಿ ಪಡೆಯಲು ಮತ್ತು ಮಾಲೀಕತ್ವದ ವಿವಾದಗಳನ್ನು ತಪ್ಪಿಸಲು ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಗ್ರಾಹಕರಿಗೆ ನಾಮಿನಿಗಳನ್ನು ಸೇರಿಸುವ ಅಥವಾ ಬದಲಾಯಿಸುವ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗಿದೆ.
ಸರ್ಕಾರವು ಕೆಲವು ವಸ್ತುಗಳಿಗೆ ವಿಶೇಷ ದರದೊಂದಿಗೆ ಹೊಸ ಎರಡು-ಸ್ಲ್ಯಾಬ್ ಜಿಎಸ್ಟಿ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದು, ಅದು ಇಂದಿನಿಂದ ಜಾರಿಗೆ ಬರುತ್ತಿದೆ. ಹಿಂದಿನ 5%, 12%, 18%, ಮತ್ತು 28% ರ ನಾಲ್ಕು-ಸ್ಲ್ಯಾಬ್ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. 12% ಮತ್ತು 28% ಸ್ಲ್ಯಾಬ್‌ಗಳನ್ನು ತೆಗೆದುಹಾಕಲಾಗಿದೆ. ಆದರೆ 40% ಐಷಾರಾಮಿ ತೆರಿಗೆ ದರ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಐಷಾರಾಮಿ ಮತ್ತು ಸಿನ್ ಗೂಡ್ಸ್ (ತಂಬಾಕು, ಸಿಗರೇಟ್ ಇತ್ಯಾದಿ) ವಸ್ತುಗಳಿಗೆ ಅನ್ವಯಿಸುತ್ತದೆ. ಈ ಕ್ರಮವು ಭಾರತದ ಪರೋಕ್ಷ ತೆರಿಗೆ ರಚನೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯಿಂದ ಏಕೀಕೃತ ಪಿಂಚಣಿ ಯೋಜನೆ (UPS) ಗೆ ಬದಲಾಯಿಸಲು ಬಯಸುವ ಕೇಂದ್ರ ಸರ್ಕಾರಿ ನೌಕರರಿಗೆ ಈಗ ನವೆಂಬರ್ 30 ರವರೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯವಿದೆ. ಇದರಿಂದ ಉದ್ಯೋಗಿಗಳಿಗೆ ಪರಿಶೀಲಿಸಲು ಮತ್ತು ಬದಲಾಯಿಸಲು ಹೆಚ್ಚಿನ ಸಮಯ ದೊರೆಯಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ನಿವೃತ್ತ ನೌಕರರು ನವೆಂಬರ್ ಅಂತ್ಯದೊಳಗೆ ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಇದನ್ನು ಅವರ ಬ್ಯಾಂಕ್ ಶಾಖೆಯಲ್ಲಿ ಅಥವಾ ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾಡಬಹುದು. ಗಡುವನ್ನು ತಪ್ಪಿಸುವುದರಿಂದ ಪಿಂಚಣಿ ಪಾವತಿಗಳು ವಿಳಂಬವಾಗಬಹುದು ಅಥವಾ ನಿಲ್ಲಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಶೀಘ್ರದಲ್ಲೇ ಭಾರತದಾದ್ಯಂತ ತನ್ನ ಲಾಕರ್ ಬಾಡಿಗೆ ಶುಲ್ಕಗಳನ್ನು ಪರಿಷ್ಕರಿಸಲಿದೆ. ಹೊಸ ದರಗಳು ಲಾಕರ್ ಗಾತ್ರ ಮತ್ತು ವರ್ಗವನ್ನು ಅವಲಂಬಿಸಿರಲಿದೆ. ಪರಿಷ್ಕೃತ ಶುಲ್ಕಗಳನ್ನು ನವೆಂಬರ್‌ನಲ್ಲಿ ಘೋಷಿಸುವ ನಿರೀಕ್ಷೆಯಿದೆ ಮತ್ತು ಅಧಿಸೂಚನೆಯ 30 ದಿನಗಳ ನಂತರ ಜಾರಿಗೆ ಬರಲಿದೆ.
ನವೆಂಬರ್ 1 ರಿಂದ, ಎಸ್‌ಬಿಐ ಕಾರ್ಡ್ ಬಳಕೆದಾರರು MobiKwik ಮತ್ತು CRED ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಮಾಡುವ ಶಿಕ್ಷಣ ಸಂಬಂಧಿತ ಪಾವತಿಗಳಿಗೆ 1% ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಹೆಚ್ಚುವರಿಯಾಗಿ, ಎಸ್‌ಬಿಐ ಕಾರ್ಡ್ ಬಳಸಿ ಡಿಜಿಟಲ್ ವ್ಯಾಲೆಟ್‌ಗೆ 1,000 ರೂ.ಗಿಂತ ಹೆಚ್ಚಿನ ಹಣವನ್ನು ಲೋಡ್ ಮಾಡಿದರೆ 1% ಶುಲ್ಕ ವಿಧಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ