ಎಚ್ಡಿಎಫ್ಸಿ ಬ್ಯಾಂಕ್ನಿಂದ ಎಂಸಿಎಲ್ಆರ್ ದರ ಪರಿಷ್ಕಾರ; ಲೋನ್ ಇಎಂಐ ಹೆಚ್ಚಳ ಸಾಧ್ಯತೆ
HDFC bank Hikes MCLR Rates: ಎಚ್ಡಿಎಫ್ಸಿ ಬ್ಯಾಂಕ್ ತನ್ನ ಓವರ್ನೈಟ್ ಮತ್ತು ಒಂದು ತಿಂಗಳ ಎಂಸಿಎಲ್ಆರ್ ದರಗಳನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಅದರ ಮೂರು ತಿಂಗಳ, ಆರು ತಿಂಗಳ ಮತ್ತು ಒಂದು ವರ್ಷದ ಎಂಸಿಎಲ್ಆರ್ ದರದಲ್ಲಿ ವ್ಯತ್ಯಾಸವಾಗಿಲ್ಲ. ಓವರ್ನೈಟ್ ಮತ್ತು ಒಂದು ತಿಂಗಳ ಎಂಸಿಎಲ್ಆರ್ ದರಗಳಿಗೆ ಜೋಡಿತವಾಗಿರುವ ಎಚ್ಡಿಎಫ್ಸಿ ಸಾಲಗಳ ಇಎಂಐ ಹೆಚ್ಚಲಿದೆ.
ನವದೆಹಲಿ, ಡಿಸೆಂಬರ್ 8: ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಚ್ಡಿಎಫ್ಸಿ (HDFC bank) ತನ್ನ ಕೆಲ ಎಂಸಿಎಲ್ಆರ್ ದರಗಳನ್ನು (MCLR) ಹೆಚ್ಚಿಸಿದೆ. ಆರ್ಬಿಐನ ಎಂಪಿಸಿ ಸಭೆಯ ಮುಕ್ತಾಯಕ್ಕೆ ಮುನ್ನ ನಿನ್ನೆ ಗುರುವಾರ (ಡಿ. 7) ಎಚ್ಡಿಎಫ್ಸಿ ಬ್ಯಾಂಕ್ ತನ್ನ ಎರಡು ಎಂಸಿಎಲ್ಆರ್ ದರಗಳನ್ನು ಪರಿಷ್ಕರಿಸಿದೆ. ಇದರೊಂದಿಗೆ ಕೆಲ ಸಾಲಗಳ ದರ ಹೆಚ್ಚಲಿದ್ದು, ಪರಿಣಾಮವಾಗಿ ಲೋನ್ ಇಎಂಐ ಹೆಚ್ಚಲಿದೆ. ಎಚ್ಡಿಎಫ್ಸಿ ಬ್ಯಾಂಕ್ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಓವರ್ನೈಟ್ ಎಂಸಿಎಲ್ಆರ್ ಅನ್ನು ಶೇ. 8.65ರಿಂದ ಶೇ. 8.70ಕ್ಕೆ ಹೆಚ್ಚಿಸಲಾಗಿದೆ. ಒಂದು ತಿಂಗಳ ಎಂಸಿಎಲ್ಆರ್ ದರವನ್ನು ಶೇ. 8.70ರಿಂದ ಶೇ. 8.75ಕ್ಕೆ ಏರಿಸಲಾಗಿದೆ. ಇವೆರಡು ಎಂಸಿಎಲ್ಆರ್ಗೆ ಜೋಡಿತವಾಗಿರುವ ಸಾಲಗಳ ದರವೂ ಏರಲಿದೆ.
ಏನಿದು ಎಂಸಿಎಲ್ಆರ್?
ಎಂಸಿಎಲ್ಆರ್ ಅನ್ನು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ಸ್ ಎನ್ನುತ್ತಾರೆ. ಇದು ಒಂದು ಬ್ಯಾಂಕ್ನ ಕನಿಷ್ಠ ಬಡ್ಡಿದರ. ಇದಕ್ಕಿಂತ ಕಡಿಮೆ ಬಡ್ಡಿಗೆ ಬ್ಯಾಂಕ್ ಸಾಲ ಕೊಡುವಂತಿಲ್ಲ. 2016ರಿಂದ ಆರ್ಬಿಐ ಎಂಸಿಎಲ್ಆರ್ ಅನ್ನು ಜಾರಿಗೆ ತಂದಿದೆ. ಅದಕ್ಕಿಂತ ಮುಂಚೆ ಬೇಸ್ ರೇಟ್ ಇತ್ತು. ಈಗ ಆ ಜಾಗಕ್ಕೆ ಎಂಸಿಎಲ್ಆರ್ ಇದೆ. ಇದರ ದರದಲ್ಲಿ ವ್ಯತ್ಯಯವಾದರೆ ಸಾಲದ ದರವೂ ವ್ಯತ್ಯಯವಾಗಬಹುದು. ಅಂದರೆ ಬಡ್ಡಿ ದರವನ್ನು ಏರಿಕೆ ಮಾಡಬಹುದು ಅಥವಾ ಇಳಿಕೆ ಮಾಡಬಹುದು. ಹೀಗಾಗಿ, ಬ್ಯಾಂಕ್ನ ಸಾಲಗಾರರಿಗೆ ಈ ಎಂಸಿಎಲ್ಆರ್ ದರ ಮುಖ್ಯ ಎನಿಸುತ್ತದೆ. ಫ್ಲೋಟಿಂಗ್ ರೇಟ್ ಇಂಟರೆಸ್ಟ್ ಇರುವ ಸಾಲಗಳಿಗೆ ಇದು ಅನ್ವಯ ಆಗುತ್ತದೆ.
ಇದನ್ನೂ ಓದಿ: ಒಟಿಪಿ ಇಲ್ಲದೇ ಯುಪಿಐ ಆಟೊ ಪೇಮೆಂಟ್; ಮಿತಿ 1 ಲಕ್ಷ ರೂಗೆ ಏರಿಕೆ: ಆರ್ಬಿಐ ಪ್ರಕಟಣೆ
ಒಂದು ತಿಂಗಳ ಎಂಸಿಎಲ್ಆರ್ ದರ ಎಂದರೇನು?
ಹಿಂದೆ ಇದ್ದ ಬೇಸ್ ರೇಟ್ ಒಂದೇ ದರ ಹೊಂದಿತ್ತು. ಎಂಸಿಎಲ್ಆರ್ ದರ ಐದು ವಿಭಾಗಗಳಲ್ಲಿ ಇದೆ. ಓವರ್ನೈಟ್ ಎಂಸಿಎಲ್ಆರ್, ಒಂದು ತಿಂಗಳ ಎಂಸಿಎಲ್ಆರ್, ಮೂರು ತಿಂಗಳ ಎಂಸಿಎಲ್ಆರ್, ಆರು ತಿಂಗಳ ಎಂಸಿಎಲ್ಆರ್ ಮತ್ತು ಒಂದು ವರ್ಷದ ಎಂಸಿಎಲ್ಆರ್ ಇದೆ. ಈ ಪ್ರತಿಯೊಂದು ಎಂಸಿಎಲ್ಆರ್ಗೂ ಬೇರೆ ದರ ನಿಗದಿ ಮಾಡಬಹುದು.
ನೀವು ಫ್ಲೋಟಿಂಗ್ ರೇಟ್ನಲ್ಲಿ ಸಾಲ ಪಡೆಯುವಾಗ ನಿರ್ದಿಷ್ಟ ಎಂಸಿಎಲ್ಆರ್ಗೆ ಜೋಡಿಸುವ ಅವಕಾಶ ನೀಡಲಾಗುತ್ತದೆ. ಅಂದರೆ, ನೀವು ಒಂದು ತಿಂಗಳ ಎಂಸಿಎಲ್ಆರ್ಗೆ ಜೋಡಿಸಿದ ಸಾಲದಲ್ಲಿ ತಿಂಗಳಿಗೊಮ್ಮೆ ಎಂಸಿಎಲ್ಆರ್ ದರದ ಪ್ರಕಾರ ಬಡ್ಡಿದರ ಪರಿಷ್ಕರಣೆ ಆಗುತ್ತದೆ.
ಇದನ್ನೂ ಓದಿ: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 604 ಬಿಲಿಯನ್ ಡಾಲರ್ಗೆ ಏರಿಕೆ; ಆರ್ಬಿಐ ಗವರ್ನರ್ ಮಾಹಿತಿ
ನೀವು ಒಂದು ವರ್ಷದ ಎಂಸಿಎಲ್ಆರ್ ಆಧಾರದಲ್ಲಿ ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. ಮೂರು ತಿಂಗಳಲ್ಲಿ ಬ್ಯಾಂಕ್ ತನ್ನ ಎಂಸಿಎಲ್ಆರ್ ದರವನ್ನು ಕಡಿಮೆ ಮಾಡಿದೆ ಎನ್ನಿ. ಆದರೆ, ನೀವು ಒಂದು ವರ್ಷದ ಎಂಸಿಎಲ್ಆರ್ ಆಯ್ಕೆ ಮಾಡಿರುವುದರಿಂದ ನಿಮಗೆ ಬಡ್ಡಿದರ ಪರಿಷ್ಕರಣೆ ಆಗಲು ಒಂದು ವರ್ಷ ಕಾಯಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ