ಬೇರೆಯವರ ಸಾಲಕ್ಕೆ ಶೂರಿಟಿ ಹಾಕಿದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತಾ? ಇಲ್ಲಿದೆ ರಿಯಾಲಿಟಿ
Effects of co-signing a loan: ಆಪ್ತರು ಅಥವಾ ಪರಿಚಿತರ ಸಾಲಕ್ಕೆ ಶೂರಿಟಿ ಹಾಕುವ ಸಂದರ್ಭ ಬರಬಹುದು. ಈ ರೀತಿ ಶೂರಿಟಿ ಹಾಕುವುದರಿಂದ ನಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಅಂಥ ಸಂದರ್ಭದಲ್ಲಿ ಬ್ಯಾಂಕ್ನವರು ನಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಹಾರ್ಡ್ ಇನ್ಕ್ವೈರಿ ಮಾಡುತ್ತವೆ. ಇದರಿಂದ ಸ್ಕೋರ್ ತುಸು ಕಡಿಮೆ ಆಗಬಹುದು. ಸಾಲ ಪಡೆದವರು ಸರಿಯಾಗಿ ಪಾವತಿಸಿದರೆ ನಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಬಹುದು. ಇಲ್ಲದಿದ್ದರೆ ಸ್ಕೊರ್ ಕಡಿಮೆ ಆಗಬಹುದು.
ನಾವು ಸಾಲ ಪಡೆದರೆ ಅದರ ಪ್ರಭಾವ ನಮ್ಮ ಕ್ರೆಡಿಟ್ ಸ್ಕೋರ್ (credit score) ಮೇಲೆ ಆಗುತ್ತದೆ. ಅದೇ ಬೇರೆಯವರು ತೆಗೆದುಕೊಳ್ಳುವ ಸಾಲಕ್ಕೆ ನಾವು ಶೂರಿಟಿ ಹಾಕಿದಾಗ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರಬಹುದಾ? ಶೂರಿಟಿ ಹಾಕಿದಾಗ ಆ ಸಾಲ ಪಡೆದವನ ಬಗ್ಗೆ ಬ್ಯಾಂಕ್ಗೆ ನಾವು ಭರವಸೆ ಕೊಟ್ಟಂತೆ. ಹೀಗಾಗಿ, ಸಾಲದ ಬಾಧ್ಯತೆ ನಮ್ಮ ಮೇಲೂ ಇರುತ್ತದೆ. ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಲಿಲ್ಲವೆಂದರೆ ಶೂರಿಟಿ ಹಾಕಿದವರನ್ನು ಆ ತೀರಿಸುವಂತೆ ಕೇಳಲಾಗುತ್ತದೆ. ಅಂತೆಯೇ, ಶೂರಿಟಿ ಹಾಕಿದವರ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರುತ್ತದೆ.
ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಅನ್ನು ತಿಳಿಯಲು ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಗಳು ಇನ್ಕ್ವೈರಿ ಮಾಡುತ್ತವೆ. ಹಾಗೆಯೇ, ಸಾಲಕ್ಕೆ ಶೂರಿಟಿ ಹಾಕಿದವರ ಕ್ರೆಡಿಟ್ ಸ್ಕೋರ್ ಅನ್ನೂ ಪರಿಶೀಲಿಸಲಾಗುತ್ತದೆ. ಈ ರೀತಿಯ ಕ್ರೆಡಿಟ್ ಸ್ಕೋರ್ ಇನ್ಕ್ವೈರಿಯನ್ನು ಹಾರ್ಡ್ ಇನ್ಕ್ವೈರಿ (hard inquiry) ಎನ್ನುತ್ತಾರೆ. ಯಾವುದೇ ಹಾರ್ಡ್ ಇನ್ಕ್ವೈರಿಯಿಂದ ಸಣ್ಣ ಪ್ರಮಾಣದಲ್ಲಾದರೂ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ಬಡ್ಡಿ ಶೇ. 7.4; ಅಧಿಕ ಬಡ್ಡಿ ಜೊತೆಗೆ ತೆರಿಗೆ ಲಾಭವೂ ಇದೆ ಎಂಐಎಸ್ನಲ್ಲಿ
ಶೂರಿಟಿ ಹಾಕಿದಾಗ ಸಕಾರಾತ್ಮಕವಾಗಿಯೂ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅವಕಾಶ ಉಂಟು. ಸಾಲ ಪಡೆದವರು ಸರಿಯಾದ ಸಮಯಕ್ಕೆ ಪಾವತಿಗಳನ್ನು ಮಾಡುತ್ತಿದ್ದರೆ ಅದು ಶೂರಿಟಿ ಹಾಕಿದವರ ಮೇಲಿನ ವಿಶ್ವಾಸವನ್ನು ಹೆಚ್ಚಿಸುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳಬಹುದು.
ಸಾಲ ಪಡೆದವರು ಸರಿಯಾಗಿ ಪಾವತಿ ಮಾಡಲಿಲ್ಲವೆಂದರೆ ಶೂರಿಟಿ ಹಾಕಿದವರ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ.
ಹೊಸ ಸಾಲ ಪಡೆಯಲು ನಿರ್ಬಂಧ ಬರಬಹುದು
ನೀವು ಒಂದು ಸಾಲಕ್ಕೆ ಶೂರಿಟಿ ಹಾಕಿದ್ದೀರೆಂದರೆ ಆ ಸಾಲಕ್ಕೆ ನೀವು ಬಾಧ್ಯತೆ ಹೊಂದಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ನೀವು ಈಗಾಗಲೇ ಬೇರೊಂದು ಸಾಲ ಹೊಂದಿದ್ದು, ಹೆಚ್ಚುವರಿ ಸಾಲ ಬೇಕೆಂದರೆ ಆಗ ಶೂರಿಟಿ ಇರುವ ಸಾಲದ ಹೊರೆ ನಿಮ್ಮ ಹೆಗಲಿಗೆ ಇರುತ್ತದೆ. ಉದಾಹರಣೆಗೆ, ನೀವು 5 ಲಕ್ಷ ರೂ ಸಾಲ ಹೊಂದಿರುತ್ತೀರಿ. ಬೇರೊಬ್ಬರಿಗೆ 5 ಲಕ್ಷ ರೂ ಸಾಲಕ್ಕೆ ನೀವು ಶೂರಿಟಿ ಹಾಕಿರುತ್ತೀರಿ. ಈಗ ನಿಮಗೆ 4 ಲಕ್ಷ ರೂ ಹೆಚ್ಚುವರಿ ಸಾಲದ ಅವಶ್ಯಕತೆ ಬೀಳುತ್ತದೆ. ಆಗ ನೀವು ಆ ಸಾಲಕ್ಕೆ ಅರ್ಜಿ ಹಾಕಿದಾಗ ಬ್ಯಾಂಕುಗಳು ನಿಮ್ಮ 5 ಲಕ್ಷ ರೂ ಸಾಲ ಹಾಗೂ ಶೂರಿಟಿಯ 5 ಲಕ್ಷ ರೂ ಸಾಲ, ಎರಡೂ ಸೇರಿ ನಿಮ್ಮ ಹೆಗಲ ಮೇಲೆ 10 ಲಕ್ಷ ರೂ ಸಾಲ ಇದೆ ಎಂದು ಪರಿಗಣಿಸುತ್ತವೆ. ಹೆಚ್ಚುವರಿ 4 ಲಕ್ಷ ರೂ ಸಾಲ ಕೊಡಲು ಹಿಂದೆ ಮುಂದೆ ನೋಡಬಹುದು.
ಇದನ್ನೂ ಓದಿ: ಇಪಿಎಫ್ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್
ನಿಮ್ಮ ಆದಾಯ ಬಹಳ ಚೆನ್ನಾಗಿದ್ದರೆ ಹೆಚ್ಚುವರಿ ಸಾಲ ಸಿಗುತ್ತದೆ. ಆದರೆ, 14 ಲಕ್ಷ ರೂ ಸಾಲ ತೀರಿಸುವಷ್ಟು ಆದಾಯ ನಿಮ್ಮಲ್ಲಿ ಇಲ್ಲ ಎಂದು ಬ್ಯಾಂಕ್ಗೆ ಅನಿಸಿದರೆ ಹೆಚ್ಚುವರಿ ಸಾಲ ಸಿಗದೇ ಹೋಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ