Credit Score: ಕಾರ್ ಲೋನ್ಗೆ ನಿಮ್ಮ ಕನಿಷ್ಠ ಸಿಬಿಲ್ ಸ್ಕೋರ್ ಎಷ್ಟಿರಬೇಕು? ಇಲ್ಲಿದೆ ಡೀಟೇಲ್ಸ್
ಸಾಲ ಪಡೆಯುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಇತ್ಯಾದಿ ಹಣಕಾಸು ಅಂಶಗಳನ್ನು ಪರಿಶೀಲಿಸಲಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದವರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಸಾಲವೂ ಸುಲಭವಾಗಿ ಸಿಗುತ್ತದೆ. ಕಾರ್ ಲೋನ್ ಪಡೆಯುವಾಗಲೂ ಕ್ರೆಡಿಟ್ ಸ್ಕೋರ್ ಪರಿಗಣಿಸಲಾಗುತ್ತದೆಯಾದರೂ ಅದೊಂದೇ ಮಾನದಂಡ ಇರುವುದಿಲ್ಲ. ನಿಮಗೆ ಸಾಲ ನಿರಾಕರಿಸುವುದಿಲ್ಲವಾದರೂ ಹೆಚ್ಚು ಬಡ್ಡಿ ವಿಧಿಸಬಹುದು.
ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಗಳ ಹಣಕಾಸು ಜಾತಕವನ್ನು ಪರಿಶೀಲಿಸಲಾಗುತ್ತದೆ. ಬ್ಯಾಂಕಾಗಲೀ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಯಾಗಲೀ ಕ್ರೆಡಿಟ್ ಸ್ಕೋರ್ (Credit score) ಇತ್ಯಾದಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಕ್ರೆಡಿಟ್ ಸ್ಕೋರ್ ಯಾವುದೇ ಒಬ್ಬ ವ್ಯಕ್ತಿಯ ಹಣಕಾಸು ನಿರ್ವಹಣೆಗೆ (money management) ಕೈಗನ್ನಡಿ ಇದ್ದಂತೆ. ಹೀಗಾಗಿ, ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಯಾವುದೇ ಸಾಲ ತೆಗೆದುಕೊಳ್ಳುವಾಗಲೂ ಕ್ರೆಡಿಟ್ ಸ್ಕೋರ್ ನೋಡಲಾಗುತ್ತದೆ. ಕಾರ್ ಲೋನ್ ಪಡೆಯುವಾಗಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಗಮನಿಸಬೇಕಾದ ಸಂಗತಿ ಎಂದರೆ, ಸಾಲ ನೀಡಲು ಕ್ರೆಡಿಟ್ ಸ್ಕೋರ್ವೊಂದೇ ಮಾನದಂಡವಾಗಿರುವುದಿಲ್ಲ. ನಿಮ್ಮ ಹಿಂದಿನ ಮತ್ತು ಈಗಿನ ಹಣಕಾಸು ಸ್ಥಿತಿ ಹೇಗಿದೆ ಎಂಬುದನ್ನು ನೋಡಲಾಗುತ್ತದೆ. ಅಂದರೆ ನಿಮಗೆ ನಿರಂತರವಾಗಿ ಕನಿಷ್ಠ ಆದಾಯ ಬರುತ್ತಿದೆಯಾ ಎಂಬುದು ಮುಖ್ಯ. ಅದಕ್ಕೆ ಬಹುತೇಕ ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಸ್ಕೋರ್ ಜೊತೆಗೆ ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಪರಿಶೀಲಿಸುತ್ತವೆ.
ಇದನ್ನೂ ಓದಿ: ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳು: ಏಪ್ರಿಲ್ ನಂತರದ ಕ್ವಾರ್ಟರ್ನಲ್ಲಿ ಬಡ್ಡಿದರ ವಿವರ
ನಿಮ್ಮ ಆದಾಯ ಉತ್ತಮವಾಗಿದ್ದರೂ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕೆಂಬ ನಿಯಮ ಏನಿಲ್ಲ. ನೀವು ಹಿಂದೆ ಸರಿಯಾದ ಸಮಯಕ್ಕೆ ಕಂತುಗಳನ್ನು ಕಟ್ಟದೇ ಹೋಗಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ಅದಕ್ಕೆ ಕ್ರೆಡಿಟ್ ಸ್ಕೋರ್ ಎಂಬುದು ನಿಮ್ಮ ಹಣಕಾಸು ಜವಾಬ್ದಾರಿಗೆ ದ್ಯೋತಕವಾಗಿರುತ್ತದೆ.
ಕ್ರೆಡಿಟ್ ಸ್ಕೋರ್ 300ರಿಂದ 900 ಅಂಕಗಳವರೆಗೆ ಇರುತ್ತದೆ. 300 ಎಂಬುದು ಕನಿಷ್ಠವಾದರೆ 900 ಗರಿಷ್ಠ ಆಗಿರುತ್ತದೆ. ಕ್ರೆಡಿಟ್ ಸ್ಕೋರ್ 700ಕ್ಕಿಂತ ಹೆಚ್ಚು ಇದ್ದರೆ ಆ ವ್ಯಕ್ತಿಯ ಸಾಲ ಬದ್ಧತೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸಾಲ ಸಿಗುವುದೇ ಇಲ್ಲ ಎಂದಲ್ಲ. ಸಾಲ ನೀಡುವುದು ರಿಸ್ಕ್ ಎಂದು ಬ್ಯಾಂಕುಗಳು ಭಾವಿಸುತ್ತವೆ. ಈ ರಿಸ್ಕ್ ಫ್ಯಾಕ್ಟರ್ ಕಡಿಮೆ ಮಾಡಲು ಹೆಚ್ಚು ಬಡ್ಡಿ ನಿಗದಿ ಮಾಡುತ್ತವೆ.
ಉದಾಹರಣೆಗೆ, ಶೇ. 14ರಷ್ಟು ಬಡ್ಡಿ ಇರುವ ಸಾಲಕ್ಕೆ ಶೇ. 18 ಅಥವಾ ಇನ್ನೂ ಹೆಚ್ಚಿನ ಬಡ್ಡಿ ವಿಧಿಸಬಹುದು.
ಇದನ್ನೂ ಓದಿ: ಜೀವನ ಭದ್ರತೆಗೆ ಎಷ್ಟು ಹಣ ಉಳಿಸಬೇಕು, ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಟಿಪ್ಸ್
ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಪ್ರಮುಖ ಕ್ರಮಗಳು
- ನೀವು ಬ್ಯಾಂಕುಗಳಲ್ಲಿ ತೆಗೆದುಕೊಳ್ಳುವ ಸಾಲದ ಕಂತುಗಳನ್ನು ಸಕಾಲಕ್ಕೆ ಕಟ್ಟಬೇಕು
- ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ನಿಗದಿತ ದಿನದೊಳಗೆ ಪಾವತಿಸಬೇಕು
- ಕ್ರೆಡಿಟ್ ಕಾರ್ಡ್ನ ಲಿಮಿಟ್ ಮೀರಿ ಬಳಸಬೇಡಿ.
ಕೊನೆಯ ಅಂಶದ ಬಗ್ಗೆ ಉದಾಹರಣೆ ನೀಡುವುದಾದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ 75,000 ರೂ ಇದ್ದರೆ ನೀವು ಅದರಲ್ಲಿ ವೆಚ್ಚ 50,000 ರೂಗಿಂತ ಹೆಚ್ಚಿರದಂತೆ ನೋಡಿಕೊಳ್ಳಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ