ಪ್ರತಿಯೊಬ್ಬರಿಗೂ ಕೋಟಿ ಸಂಪಾದನೆ ಮಾಡುವ ಆಸೆ ಇದ್ದೇ ಇರುತ್ತದೆ. ಆದರೆ, ಕಂಪನಿ ಕೊಡುತ್ತಿರುವ ಸಂಬಳ ಸಾಕಾಗುವುದಿಲ್ಲ, ಕೋಟಿ ಎಲ್ಲಿಂದ ಎಂದು ಪರಿತಪಿಸುವವರು ಹಲವರುಂಟು. ಇವತ್ತು ಕನಿಷ್ಠ 15,000 ಸಂಬಳ ಪಡೆಯುತ್ತಾರೆ. ಸರಾಸರಿಯಾಗಿ 25,000 ರೂ ಆದರೂ ಸಂಬಳ ಹೊಂದಿರುವವರು ಬಹಳ ಇದ್ದಾರೆ. ನೀವು ಕೇವಲ 25,000 ರೂ ಸಂಬಳ ಪಡೆಯುತ್ತಿದ್ದರೂ ಒಂದು ಕೋಟಿ ರೂ ಹಣವನ್ನು ಕೂಡಿಡಲು ಸಾಧ್ಯ. ಇದು ಬಹಳ ಕಷ್ಟವೇ. ಆದರೂ ಕೂಡ ಮನಸು ಮಾಡಿದರೆ ಸಾಧ್ಯವಾಗಿಸಬಹುದು. ನಿಮ್ಮ ಬದ್ಧತೆ (financial discipline) ಮತ್ತು ಮಾನಸಿಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
ಹಣಕಾಸು ವಿಚಾರದಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಉಳಿತಾಯ. ನೀವು ಎಷ್ಟು ಹಣ ಉಳಿಸುತ್ತೀರೋ ಅಷ್ಟು ಹಣ ಗಳಿಸಿದಂತೆಯೇ. ಬಹಳ ಜನರು ಒಂದು ಲಕ್ಷ ರೂ ಸಂಬಳ ಪಡೆದು ಅದರಲ್ಲಿ ಅಂತಿಮವಾಗಿ ಐದಾರು ಸಾವಿರ ರೂ ಮಾತ್ರವೇ ಉಳಿಸುತ್ತಾರೆ. ನೀವು 25,000 ರೂ ಸಂಬಳ ಪಡೆದು ಐದಾರು ಸಾವಿರ ರೂ ಉಳಿಸಬಲ್ಲಿರಾದರೆ ನೀವು ಅವರಷ್ಟೇ ಹಣ ಶೇಖರಣೆ ಮಾಡಬಲ್ಲವರಾಗಿರುತ್ತೀರಿ.
ಕಡಿಮೆ ಸಂಬಳದಲ್ಲೂ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಉಳಿಸಲು ರೂಢಿ ಮಾಡಿಕೊಳ್ಳಿ. ಸಂಬಳ ಹೆಚ್ಚಾದರೂ ನಿಮ್ಮ ವೆಚ್ಚ ಹೆಚ್ಚಿಸುವ ಜೀವನಶೈಲಿ ರೂಢಿಸಿಕೊಳ್ಳದಿರಿ.
ಇದನ್ನೂ ಓದಿ: 40ರ ಬಳಿಕ ಮನೆ ಮಾಡಲು ಹೊರಟಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ
ಇನ್ನೊಂದು ಮುಖ್ಯ ಅಂಶ ಎಂದರೆ ಹೂಡಿಕೆ. ನೀವು ಉಳಿಸಿದ ಹಣವನ್ನು ಉತ್ತಮ ಯೋಜನೆಗಳಲ್ಲಿ ಹೂಡಿಕೆ ಮಾಡದಿದ್ದರೆ ಪ್ರಯೋಜನ ಇಲ್ಲ. ಇವತ್ತು ಬಹಳ ಸರಳ ಹಾಗೂ ಉತ್ತಮ ಹೂಡಿಕೆ ಮಾರ್ಗವೆಂದರೆ ಮ್ಯೂಚುವಲ್ ಫಂಡ್. ತಿಂಗಳಿಗೆ ನಿಯಮಿತವಾಗಿ ಮ್ಯೂಚುವಲ್ ಫಂಡ್ನಲ್ಲಿ ಎಸ್ಐಪಿ ಮೂಲಕ ಹೂಡಿಕೆ ಮಾಡಬಹುದು. ಸಾಮಾನ್ಯವಾಗಿ ಈ ಫಂಡ್ಗಳು ವರ್ಷಕ್ಕೆ ಶೇ. 12ರಷ್ಟು ಲಾಭ ತರಬಲ್ಲುವು. ಆ ಲೆಕ್ಕದ ಪ್ರಕಾರವೇ ನೋಡಿದರೆ ನೀವು ಎಷ್ಟು ಹಣ ಹೂಡಿಕೆಯಿಂದ ಎಷ್ಟು ಬೇಗ ಕೋಟಿ ಸಂಪಾದನೆ ಮಾಡಬಹುದು ಎನ್ನುವ ಲೆಕ್ಕಾಚಾರ ಇಲ್ಲಿದೆ.
ಇಲ್ಲಿ ಎಸ್ಐಪಿಯಲ್ಲಿ ಸ್ಟೆಪ್ ಅಪ್ ತಂತ್ರ ಇದೆ. ನೀವು ತಿಂಗಳಿಗೆ ಕಟ್ಟುವ ಹಣವನ್ನು ವರ್ಷಕ್ಕೊಮ್ಮೆ ನಿರ್ದಿಷ್ಟವಾಗಿ ಹೆಚ್ಚಿಸುವ ತಂತ್ರ. ಅಂದರೆ ಒಂದು ವರ್ಷ ನೀವು ತಿಂಗಳಿಗೆ 5,000 ರೂ ಎಸ್ಐಪಿ ಕಟ್ಟುತ್ತೀರಿ. ಮುಂದಿನ ವರ್ಷ ಶೇ. 10ರಷ್ಟು, ಅಂದರೆ 500 ರೂ ಹೆಚ್ಚಿಸಿ. ಅಂದರೆ 5,500 ರೂ ಕಟ್ಟಬಹುದು. ನಿಮ್ಮ ಸಂಬಳ ಹೆಚ್ಚಳ ಸಾಧ್ಯತೆ ಇರುವುದರಿಂದ ಸ್ಟೆಪ್ ಅಪ್ ಸಾಧ್ಯತೆಯೂ ಇರುತ್ತದೆ.
ಶೇ. 12ರ ವಾರ್ಷಿಕ ದರ ಹಾಗು ಶೇ. 10ರ ಸ್ಟೆಪ್ ಅಪ್ ಎರಡೂ ಸಂಯೋಜಿಸಿದರೆ ನಿಮ್ಮ 4,000 ರೂ ಮಾಸಿಕ ಹೂಡಿಕೆಯಿಂದ ಒಂದು ಕೋಟಿ ರೂ ಹಣ ಉಳಿಸಲು ಬೇಕಾಗುವ ಅವಧಿ 264 ತಿಂಗಳು. ಅಂದರೆ 22 ವರ್ಷ ಆಗುತ್ತದೆ.
ಇದನ್ನೂ ಓದಿ: ತೆರಿಗೆ, ಶುಲ್ಕಗಳು ಲಾಭ ತಿಂದುಹಾಕೀತು ಜೋಕೆ; ಷೇರುಪೇಟೆಗೆ ಹೊಸಬರಾಗಿದ್ದರೆ ಈ ಟಿಪ್ಸ್ ತಿಳಿದಿರಿ
ಒಂದು ವೇಳೆ ನೀವು 10,000 ರೂ ಹಣ ಉಳಿಸಿ ಅದನ್ನು ಎಸ್ಐಪಿ ಮೂಲಕ ಹೂಡಿಕೆ ಮಾಡಿ ವರ್ಷಕ್ಕೆ ಶೇ. 10ರಷ್ಟು ಸ್ಟೆಪ್ ಅಪ್ ಹೂಡಿಕೆಯೂ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆಗ ನೀವು ಒಂದು ಕೋಟಿ ರೂ ಹಣ ಉಳಿಸಲು ಬೇಕಾಗುವ ತಿಂಗಳು 194 ಮಾತ್ರ. ಅಂದರೆ, ಕೇವಲ 16 ವರ್ಷಕ್ಕೆ ನೀವು ಕೋಟಿ ಹಣ ಗಳಿಸಬಹುದು.
ಒಂದು ವೇಳೆ ನಿಮಗೆ ಹೂಡಿಕೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಪ್ರತೀ ತಿಂಗಳು ನಿಯಮಿತವಾಗಿ 10,000 ರೂ ಹಣವನ್ನು ಕಟ್ಟಿಕೊಂಡು ಹೋಗುತ್ತೇನೆ ಎಂದರೆ ಕೋಟಿ ಹಣ ಕೂಡಿಡಲು 20 ವರ್ಷ ಬೇಕಾಗುತ್ತದೆ. ನಿಮ್ಮ ವಯಸ್ಸು ಈಗ 25 ವರ್ಷ ಎಂದಾದರೆ 45 ವರ್ಷ ಆಗುವಷ್ಟರಲ್ಲಿ ನೀವು ಕೋಟ್ಯಾಧೀಶ್ವರ ಆಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ