ಇವತ್ತಿನ ಕಾಲಕ್ಕೆ ಹಣ (Importance of money) ಅತೀ ಮುಖ್ಯ. ಹಣದಿಂದ ಸಂತೋಷ ಕೊಳ್ಳಲು ಆಗುವುದಿಲ್ಲವಾದರೂ ಹಣ ಇಲ್ಲದಿದ್ದರೆ ಇರುವ ಸಂತೋಷವೂ ನಶಿಸುತ್ತದೆ. ಜೀವನ ನಶ್ವರ, ಇವತ್ತು ಇದ್ದೇವೆ, ನಾಳೆ ಏನಾಗುತ್ತೇವೋ. ಇವತ್ತು ಖುಷಿ ಪಡಿ, ನಾಳೆ ಚಿಂತೆ ಯಾಕೆ ಎಂದು ಹಿತನುಡಿಗಳನ್ನು ನಾವು ಕೇಳಿದ್ದಿರಬಹುದು. ಹಾಗಂತ, ನಾಳೆಗೆ ಆಲೋಚನೆ ಮಾಡದೇ ಹೋದರೆ ಪರಿಸ್ಥಿತಿ ಹೇಗೆ ಬೇಕಾದರೂ ತಿರುಗಬಹುದು. ಇವತ್ತಿನ ಜೀವನದ ಜೊತೆಗೆ ನಾಳೆಯ ಜೀವನದ ಬಗ್ಗೆಯೂ ಯೋಚಿಸಬೇಕಾದ್ದು ಬಹಳ ಮುಖ್ಯ. ಅಂತೆಯೇ ಇವತ್ತೇ ನಿಮ್ಮ ಹಣಕಾಸು ಜೀವನಕ್ಕೆ ಅಡಿಪಾಯ ಹಾಕಿರಿ.
ಕೆಲಸಕ್ಕೆ ಸೇರುವ ಮುಂಚೆಯೇ ಹಣಕಾಸು ತಿಳಿವಳಿಕೆ ಇರಬೇಕು. ಸರಿಯಾದ ಹೂಡಿಕೆ ಆಯ್ಕೆಗಳು ಗೊತ್ತಿರಬೇಕು. ಇನ್ಷೂರೆನ್ಸ್ ಮಹತ್ವ ತಿಳಿದಿರಬೇಕು. ಆಗ ನೀವು ನಿಮ್ಮ ಸಂಪಾದನೆಯ ಆರಂಭಿಕ ಹಂತದಿಂದಲೇ ಹಣವನ್ನು ಸದ್ವಿನಿಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Money Matters: ಒಟ್ಟಿಗೆ ಹಣ ಬಂದರೆ ಸಾಲ ತೀರಿಸಬೇಕಾ? ಹೂಡಿಕೆ ಮಾಡಬೇಕಾ? ಯಾವ ನಿರ್ಧಾರ ಉತ್ತಮ?
ಇವತ್ತು ಜೀವನ ಎಲ್ಲವೂ ಚೆನ್ನಾಗಿ ಕಾಣುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ; ಅಪ್ಪ ಅಮ್ಮನ ಸಂಪಾದನೆಯ ರಕ್ಷಾ ಕವಚ ಇರುತ್ತದೆ. ಯಾವ ಗಮನಾರ್ಹ ಖರ್ಚೂ ಬರುವುದಿಲ್ಲ. ಈ ಹಂತದಲ್ಲಿ ಬಹುಪಾಲು ಹಣವನ್ನು ಕೂಡಿಡಲು ಸಾಧ್ಯ.
ನಾಳೆಯ ಸಮಸ್ಯೆ ನಾಳೆ ನೋಡೋಣ ಎನ್ನುವ ಧೋರಣೆ ಬಹಳ ಪ್ರಮಾದವಾದುದು. ನಾಳೆ ನಮ್ಮ ಆರೋಗ್ಯ ಹೀಗೇ ಇರುವುದಿಲ್ಲ. ಅಪ್ಪ ಅಮ್ಮನ ಆರೋಗ್ಯ ಕೆಡಬಹುದು. ನಿರೀಕ್ಷಿತ ಮತ್ತು ಅನಿರೀಕ್ಷಿತ ಖರ್ಚುಗಳು ದುತ್ತೆಂದು ಬರಬಹುದು. 40ರ ವಯಸ್ಸು ದಾಟಿದ ಮೇಲೆ ಆರೋಗ್ಯ ಕೆಡುತ್ತಾ ಹೋಗಬಹುದು. ಮದುವೆ ಆಗಿ ಸಂಸಾರದ ನೊಗ ಬಂದ ಮೇಲೆ ಅನಿರೀಕ್ಷಿತ ವೆಚ್ಚಗಳು ಹೆಚ್ಚಬಹುದು. ಇವೆಲ್ಲವನ್ನೂ ಎದುರಿಸಲು ನಿಮ್ಮ ಬಳಿ ಸುಭದ್ರ ಹಣಕಾಸು ವ್ಯವಸ್ಥೆ ಇರಬೇಕು.
ಇದನ್ನೂ ಓದಿ: ಪವರ್ ಆಫ್ ಕಾಂಪೌಂಡಿಂಗ್: ನಿಮ್ಮ ಸಂಪತ್ತು ವೃದ್ಧಿಸುವ ವಿಸ್ಮಯಕಾರಿ ಹೂಡಿಕೆ ಅಂಶ
ಇವತ್ತು ಹೊಸ ಹೊಸ ರೀತಿಯ ಹೂಡಿಕೆಗಳು ಆಕರ್ಷಿಸುತ್ತವೆ. ಬಿಟ್ಕಾಯಿನ್ ಮೇಲೆ ಹೂಡಿಕೆ ಮಾಡಿದರೆ ವರ್ಷದಲ್ಲಿ 50 ಪರ್ಸೆಂಟ್ ಲಾಭ ಮಾಡಬಹುದು ಎಂದು ಕೆಲ ವರ್ಷಗಳ ಹಿಂದೆ ಗುಲ್ಲೆಬ್ಬಿಸಲಾಗಿತ್ತು. ಹಾಗೆಯೇ, ಭಾರೀ ರಿಟರ್ನ್ ತರುತ್ತದೆಂದು ಭರವಸೆ ನೀಡುವ ಹಲವು ಪಂಗನಾಮ ಸ್ಕೀಮ್ಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇಂಥ ಗಾಳಕ್ಕೆ ಸಿಕ್ಕಿದರೆ ನಿಮ್ಮ ಕಥೆ ಮುಗಿದಂತೆಯೇ.
ಇವತ್ತು ನಿಮ್ಮ ಆರೋಗ್ಯ ಚೆನ್ನಾಗಿರಬಹುದು. ತಂದೆ ತಾಯಿ ಆರೋಗ್ಯವೂ ಚೆನ್ನಾಗಿರಬಹುದು. ಮುಂದೆಯೂ ಹೀಗೇ ಇರುತ್ತೆ ಎನ್ನುವಂತಿಲ್ಲ. ಒಂದೇ ಒಂದು ಗಂಭೀರ ಕಾಯಿಲೆ ಬಂದು ಹೋದರೆ ನಮ್ಮಿಡೀ ಸಂಪಾದನೆಯೇ ನಶಿಸಿಹೋಗಬಹುದು. ಹೀಗಾಗಿ, ಹೆಲ್ತ್ ಇನ್ಷೂರೆನ್ಸ್ ಬಹಳ ಮುಖ್ಯ. ನಿಮಗೆ ಒಬ್ಬರಿಗೆ ಮಾತ್ರವಲ್ಲ, ನಿಮ್ಮ ಇಡೀ ಕುಟುಂಬಕ್ಕೆ ವಿಮಾ ಪಾಲಿಸಿ ಮಾಡಿಸುವುದು ಕ್ಷೇಮಕರ.
ಇದನ್ನೂ ಓದಿ: ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ, ಇಲ್ಲಿದೆ ಡೀಟೇಲ್ಸ್
ಮೊದಲ ಕೆಲ ವರ್ಷ ನಿಮ್ಮ ಆರೋಗ್ಯ ಚೆನ್ನಾಗಿದ್ದು, ಸುಮ್ಮನೆ ಪ್ರೀಮಿಯಮ್ ಕಟ್ಟುತ್ತಿದ್ದೇವಲ್ಲ ಅನಿಸಬಹುದು. ಆದರೆ, ಪರಿಸ್ಥಿತಿ ಹಾಗೇ ಇರುವುದಿಲ್ಲ. ವೃಥಾ ಕಟ್ಟುವ ನಿಮ್ಮ ಪ್ರೀಮಿಯಮ್ ಅನ್ನು ಹೂಡಿಕೆ ಎಂದೇ ಪರಿಗಣಿಸಿ. ಮುಂದಿನ ದಿನಗಳಲ್ಲಿ ನಿಮಗೆ ಅದು ನೆಮ್ಮದಿ ತರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ