ಇವತ್ತು ನಿಮಗೆ ಹಣದ ಅಗತ್ಯ ಇದ್ದು ಅದಕ್ಕಾಗಿ ನಿಮ್ಮ ಹೂಡಿಕೆಯನ್ನು ಮರಳಿಸಬೇಕಾಗುವುದಿಲ್ಲ. ಆ ಹೂಡಿಕೆ ಮೇಲೆಯೇ ಸಾಲ ಪಡೆಯಬಹುದು. ಲೈಫ್ ಇನ್ಷೂರೆನ್ಸ್ ಪಾಲಿಸಿ ಮೇಲೂ ಸಾಲ ಪಡೆಯಬಹುದು. ಇನ್ಷೂರೆನ್ಸ್ ಪಾಲಿಸಿ ಮೇಲೆ ಸಾಲ ಪಡೆಯುವುದರಿಂದ ಹಲವು ಪ್ರಯೋಜನಗಳಿವೆ. ಪ್ರಮುಖ ಪ್ರಯೋಜನ ಎಂದರೆ ಬಡ್ಡಿದರ ಕಡಿಮೆ ಇರುತ್ತದೆ, ಮತ್ತು ಸುಲಭವಾಗಿ ಸಾಲ ಸಿಗುತ್ತದೆ. ಇನ್ಷೂರೆನ್ಸ್ ಸಂಸ್ಥೆಯೇ ಈ ಸಾಲವನ್ನು ಒದಗಿಸುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ಸಾಂಪ್ರದಾಯಿಕ ಜೀವ ವಿಮಾ ಪಾಲಿಸಿಗಳಾದ ಮನಿಬ್ಯಾಕ್ ಪಾಲಿಸಿ, ಎಂಡೋಮೆಂಟ್ ಪಾಲಿಸಿಗಳಿಗೆ ಲೋನ್ ಸಿಗುತ್ತದೆ. ಯುನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್, ಟರ್ಮ್ ಇನ್ಷೂರೆನ್ಸ್ ಪ್ಲಾನ್ಗಳಿಗೆ ಸಾಲ ಸೌಲಭ್ಯ ಇರುವುದಿಲ್ಲ.
ನೀವು ಸಾಲಕ್ಕೆ ಅರ್ಹತೆ ಪಡೆಯಬೇಕಾದರೆ ಪಾಲಿಸಿ ಕನಿಷ್ಠ ಒಂದು ವರ್ಷವಾದರೂ ಆಗಿರಬೇಕು. ನೀವು ಆವರೆಗೂ ಪಾವತಿಸಿರುವ ಪ್ರೀಮಿಯಮ್ ಹಣದ ಶೇ. 60ರಿಂದ 80ರಷ್ಟು ಮೊತ್ತವನ್ನು ಸಾಲವಾಗಿ ಪಡೆಯಬಹುದು. ಉದಾಹರಣೆಗೆ, ಇನ್ಷೂರೆನ್ಸ್ ಪಾಲಿಸಿಯಲ್ಲಿ ನೀವು ಈವರೆಗೂ ಕಟ್ಟಿರುವ ಪ್ರೀಮಿಯಮ್ಗಳ ಒಟ್ಟೂ ಹಣ 4,00,000 ರೂ ಆಗಿದ್ದರೆ ನಿಮಗೆ 2,40,000 ರೂನಿಂದ 3,20,000 ರೂವರೆಗೂ ಸಾಲ ಸಿಗಬಹುದು.
ಇನ್ಷೂರೆನ್ಸ್ ಸಂಸ್ಥೆಯ ಕಚೇರಿಗೆ ಹೋಗಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ನಿಮ್ಮ ಇನ್ಷೂರೆನ್ಸ್ ಪಾಲಿಸಿಯ ಮೂಲದಾಖಲೆ ಹಾಗೂ ಇತರ ಕೆವೈಸಿ ದಾಖಲೆಗಳನ್ನು ಜೊತೆಗೆ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: ನಿಮ್ಮ ಆದಾಯದಲ್ಲಿ ಗರಿಷ್ಠ ಎಷ್ಟು ಮೊತ್ತದಷ್ಟು ಟ್ಯಾಕ್ಸ್ ಡಿಡಕ್ಷನ್ಸ್ ಪಡೆಯಬಹುದು? ಇಲ್ಲಿದೆ ಪಟ್ಟಿ
ನೀವು ಪಾಲಿಸಿಯ ಮೂಲದಾಖಲೆಯನ್ನೇ ಒತ್ತೆಗೆ ಇಡುವುದರಿಂದ ಸುರಕ್ಷಿತ ಸಾಲವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಪರ್ಸನಲ್ ಲೋನ್ಗೆ ಹೋಲಿಸಿದರೆ ಇದಕ್ಕೆ ಬಡ್ಡಿದರ ಕಡಿಮೆ ಇರುತ್ತದೆ. ಗೋಲ್ಡ್ ಲೋನ್ ರೀತಿ ಇದಕ್ಕೂ ಕೂಡ ಹೆಚ್ಚು ಸಮಯ ಹಿಡಿಯುವುದಿಲ್ಲ. ಬಹಳ ಕ್ಷಿಪ್ರವಾಗಿ ಸಾಲ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ