
ಇವತ್ತು ನಿಯಮಿತ ಹೂಡಿಕೆಗೆ ಬಹಳ ಸಾಮಾನ್ಯವಾಗಿ ಬಳಕೆಯಲ್ಲಿರುವುದು ಬ್ಯಾಂಕ್ ಠೇವಣಿಗಳು ಹಾಗೂ ಮ್ಯೂಚುವಲ್ ಫಂಡ್ಗಳು. ಬ್ಯಾಂಕ್ ಠೇವಣಿಗಳಿಂದ ವರ್ಷಕ್ಕೆ ಶೇ. 6ರಿಂದ 9ರಷ್ಟು ರಿಟರ್ನ್ ನಿರೀಕ್ಷಿಸಬಹುದು. ಮ್ಯುಚುವಲ್ ಫಂಡ್ಗಳಲ್ಲಿ (Mutual Fund) ಎಸ್ಐಪಿ ಮೂಲಕ ಶೇ. 8ರಿಂದ 16ರಷ್ಟು ವಾರ್ಷಿಕ ರಿಟರ್ನ್ ನಿರೀಕ್ಷಿಸಬಹುದು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಹೂಡಿಕೆಯನ್ನು ಯೋಜಿಸಬಹುದು
ನೀವು ದೀರ್ಘಾವಧಿಯಲ್ಲಿ ಒಂದು ದೊಡ್ಡ ಮೊತ್ತದ ನಿರೀಕ್ಷೆ ಇಟ್ಟುಕೊಂಡು ಹೂಡಿಕೆ ಮಾಡುವುದಾದರೆ ಎಸ್ಐಪಿ ಉತ್ತಮ ಆಯ್ಕೆ ಎನ್ನುತ್ತಾರೆ ತಜ್ಞರು. ಉದಾಹರಣೆಗೆ, ನೀವು ನಿವೃತ್ತರಾಗುವಾಗ 9 ಕೋಟಿ ರೂ ಹಣ ನಿಮ್ಮ ಬಳಿ ಇರಬೇಕು ಎನ್ನುವ ಗುರಿ ಇದ್ದು, ತಿಂಗಳಿಗೆ 11,000 ರೂ ಮಾತ್ರವೇ ಎಸ್ಐಪಿಗೆ ಲಭ್ಯ ಇದೆ ಎಂದಾದರೆ, ನಿಮ್ಮ ಗುರಿ ಈಡೇರಲು ಎಷ್ಟು ವರ್ಷ ಬೇಕಾಗಬಹುದು?
ಕೇವಲ 11,000 ರೂ ಹೂಡಿಕೆಯಿಂದ 9 ಕೋಟಿ ರೂ ಆದಾಯ ಸಾಧ್ಯವಾ? ನೀವು ಕೆಲಸಕ್ಕೆ ಸೇರಿದ ಹೊಸದರಲ್ಲೇ 11,000 ರೂನ ಎಸ್ಐಪಿ ಆರಂಭಿಸಿದರೆ ನಿವೃತ್ತರಾಗುವುದರೊಳಗೆ 9 ಕೋಟಿ ರೂ ಕಾರ್ಪಸ್ ಸೃಷ್ಟಿ ಸಾಧ್ಯ. ಅದುವೇ ಹಣದ ಕಾಂಪೌಂಡಿಂಗ್ ಮ್ಯಾಜಿಕ್.
ಇದನ್ನೂ ಓದಿ: ಸರ್ಕಾರದ ಟ್ರೆಷರಿ ಬಿಲ್ಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆ; ಆರ್ಬಿಐ ರಿಟೇಲ್ ಡೈರೆಕ್ಟ್ನಲ್ಲಿ ಅವಕಾಶ
ಮೊದಲಿಗೆ ನೀವು ಹೂಡಿಕೆ ಮಾಡಿರುವ ಮ್ಯುಚುವಲ್ ಫಂಡ್ ಶೇ. 12ರಷ್ಟು ವಾರ್ಷಿಕ ರಿಟರ್ನ್ ಕೊಡಬಹುದು ಎಂದು ನಿರೀಕ್ಷಿಸೋಣ. ಹಲವು ಫಂಡ್ಗಳು ದೀರ್ಘಾವಧಿಯಲ್ಲಿ ಇಷ್ಟು ರಿಟರ್ನ್ ಕೊಟ್ಟಿರುವುದು ಹೌದು. ಇಂಥ ಈಕ್ವಿಟಿ ಫಂಡ್ನಲ್ಲಿ ನೀವು 11,000 ರೂ ಎಸ್ಐಪಿ ಆರಂಭಿಸಿದರೆ, 10 ವರ್ಷದಲ್ಲಿ ನೀವು ಮಾಡುವ 13.2 ಲಕ್ಷ ರೂ ಹೂಡಿಕೆಯು 24.6 ಲಕ್ಷ ರೂಗೆ ಬೆಳೆದಿರುತ್ತದೆ.
ಅಂದರೆ, ಶೇ. 12ರ ದರದಲ್ಲಿ ನಿಮ್ಮ ಹೂಡಿಕೆ ಬೆಳೆದರೆ ಅದು ದ್ವಿಗುಣಗೊಳ್ಳಲು 10 ವರ್ಷ ಬೇಕಾಗುತ್ತದೆ.
ಅದೇ ರೀತಿ ನಿಮ್ಮ ಮಾಸಿಕ ಹೂಡಿಕೆ ಇನ್ನೂ 10 ವರ್ಷ ಮುಂದುವರಿಸುತ್ತೀರಿ. ಆ 20 ವರ್ಷದಲ್ಲಿ ನೀವು ಮಾಡುವ ಹೂಡಿಕೆ 26.4 ಲಕ್ಷದಷ್ಟಿರುತ್ತದೆ. ನಿಮ್ಮ ಕಾರ್ಪಸ್ ಸುಮಾರು ಒಂದು ಕೋಟಿ ರೂ ದಾಟಿರುತ್ತದೆ.
ಮೊದಲ ಹತ್ತು ವರ್ಷ ಹೂಡಿಕೆ ಬಹಳ ಮಂದವಾಗಿ ಬೆಳೆದಿತ್ತು. ನಂತರದ 10 ವರ್ಷದಲ್ಲಿ ನಿಮಗೆ ಅಚ್ಚರಿ ಎನಿಸುವಷ್ಟು ವೇಗವಾಗಿ ಬೆಳೆದಿದೆ. ಈಗ ನೀವು ಇನ್ನೂ 10 ವರ್ಷ ಹೂಡಿಕೆ ಮುಂದುವರಿಸಿದರೆ? ಅಂದರೆ, 30 ವರ್ಷದವರೆಗೆ ನೀವು ಎಸ್ಐಪಿ ಮುಂದುವರಿಸಿದರೆ ನಿಮ್ಮ ಕಾರ್ಪಸ್ ಎಷ್ಟಾಗುತ್ತದೆ ಗೊತ್ತಾ?
ಇದನ್ನೂ ಓದಿ: ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್ಎಸ್ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ
30 ವರ್ಷ ನಿರಂತರವಾಗಿ ನೀವು ತಿಂಗಳಿಗೆ 11,000 ರೂನಂತೆ ಪಾವತಿಸುತ್ತಿದ್ದರೆ 39.6 ಲಕ್ಷ ರೂ ಹೂಡಿಕೆ ಮಾಡಿದಂತಾಗುತ್ತದೆ. ಈ ಫಂಡ್ ಶೇ. 12ರ ದರದಲ್ಲೇ ಬೆಳೆಯುತ್ತಾ ಹೋದರೆ, 30 ವರ್ಷದಲ್ಲಿ ಅದು 3.38 ಕೋಟಿ ರೂ ಆಗುತ್ತದೆ. ಅಂದರೆ, 10 ವರ್ಷದಲ್ಲಿ ಹಣವು ಮೂರು ಪಟ್ಟು ಬೆಳೆದಿರುತ್ತದೆ.
ಇದರ ಮೇಲೆ ನೀವು ಹೂಡಿಕೆ ಮುಂದುವರಿಸಿದಷ್ಟೂ ನಿಮಗೆ ಅಚ್ಚರಿ ಎನಿಸುವ ರೀತಿಯಲ್ಲಿ ಲಾಭ ಸಿಗುತ್ತಾ ಹೋಗುತ್ತದೆ. 11,000 ರೂ ಎಸ್ಐಪಿ ಮೂಲಕ ನಿಮ್ಮ ಕಾರ್ಪಸ್ 9 ಕೋಟಿ ರೂ ಆಗಬೇಕೆಂದರೆ 38-39 ವರ್ಷದವರೆಗೆ ಹೂಡಿಕೆ ಮಾಡಬೇಕು.
38 ವರ್ಷದಲ್ಲಿ ನೀವು ಮಾಡಿದ 50 ಲಕ್ಷ ರೂ ಹೂಡಿಕೆಯು 9 ಕೋಟಿ ರೂ ಆಗಿರುತ್ತದೆ. ಹೂಡಿಕೆ ಮಾಡಿದ ಮ್ಯುಚುವಲ್ ಫಂಡ್ ಈ 38 ವರ್ಷದಲ್ಲಿ ಶೇ. 12ರಷ್ಟು ವಾರ್ಷಿಕ ರಿಟರ್ನ್ ನೀಡಿದಲ್ಲಿ ಇದು ಸಾಧ್ಯ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ