ಮಳೆ ಬಂದು ರಸ್ತೆಯಲ್ಲೆಲ್ಲಾ ನೀರು ತುಂಬಿದ್ದಾಗ ಅಥವಾ ಅಪಾರ್ಟ್ಮೆಂಟ್ನ ಬೇಸ್ಮೆಂಟ್ನಲ್ಲಿ ನಿಲ್ಲಿಸಿದ್ದ ಕಾರಿಗೆ ನೀರು ತುಂಬಿದಾಗ ಬಹಳ ಹುಷಾರಾಗಿರಿ. ಯಾವುದೇ ಕಾರಣಕ್ಕೂ ಕಾರಿನ ಎಂಜಿನ್ ಸ್ಟಾರ್ಟ್ ಮಾಡದಿರಿ. ಇದರಿಂದ ಎಂಜಿನ್ ಹಾಳಾಗುತ್ತದೆ. ಇನ್ಷೂರೆನ್ಸ್ ಮಾಡಿಸಿದ್ದರೂ (Car Insurance) ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ. ನೀವು ವಾಹನಕ್ಕೆ ಸಮಗ್ರ ವಿಮೆ ಪಾಲಿಸಿ ಮಾಡಿಸಿದ್ದರೂ ಏನೂ ಪ್ರಯೋಜನವಾಗುವುದಿಲ್ಲ. ಇನ್ಷೂರೆನ್ಸ್ನ ಆನ್ಲೈನ್ ಮಾರುಕಟ್ಟೆ ಪೋರ್ಟಲ್ ಎನಿಸಿದ ಪಾಲಿಸಿಬಜಾರ್ ಡಾಟ್ ಕಾಮ್ನ (Policy Bazaar) ಮೋಟಾರ್ ಇನ್ಷೂರೆನ್ಸ್ ಮುಖ್ಯಸ್ಥ ನಿತಿನ್ ಕುಮಾರ್ ಈ ಬಗ್ಗೆ ಒಂದಷ್ಟು ಅಮೂಲ್ಯ ಮಾಹಿತಿ ಹಂಚಿಕೊಂಡಿದ್ದಾರೆ.
‘ನೀವು ಬೇಸ್ಮೆಂಟ್ನಲ್ಲಿ ಕಾರನ್ನು ಪಾರ್ಕ್ ಮಾಡಿರುತ್ತೀರಿ. ನೀರು ನುಗ್ಗಿ ಅದು ಮುಳುಗಿಹೋಗಿರುತ್ತದೆ. ಆಗ ನೀವು ಇನ್ಷೂರೆನ್ಸ್ ಕಂಪನಿಗೆ ನೇರವಾಗಿ ಮಾಹಿತಿ ಕೊಡಬೇಕು. ಹಾಗು ಸಮೀಪದ ಸರ್ವಿಸ್ ಸೆಂಟರ್ ಅಥವಾ ಗ್ಯಾರೇಜ್ಗೆ ನಿಮ್ಮ ಕಾರನ್ನು ಟೋವ್ ಮಾಡಬೇಕು. ಒಂದು ವೇಳೆ ನೀವು ಕಾರು ನೀರಿನಲ್ಲಿ ಮುಳುಗಿದ್ದಾಗ ಎಂಜಿನ್ ಸ್ಟಾರ್ಟ್ ಮಾಡಲು ಯತ್ನಿಸಿದರೆ ಆಗ ಎಂಜಿನ್ ಹೈಡ್ರೋಸ್ಟಾಟಿಕ್ ಲಾಕ್ ಆಗಿಹೋಗುತ್ತದೆ. ಇಂಥ ಸಂದರ್ಭದಿಂದ ಎಂಜಿನ್ ಫೈಲ್ಯೂರ್ ಆದರೆ ಅದಕ್ಕೆ ಇನ್ಷೂರೆನ್ಸ್ ಕಂಪನಿ ಕವರ್ ಮಾಡುವುದಿಲ್ಲ. ಯಾಕೆಂದರೆ, ನೀರು ತುಂಬಿದಾಗ ನೀವು ಎಂಜಿನ್ ಸ್ಟಾರ್ಟ್ ಮಾಡಿದರೆ ಅದನ್ನು ಉದ್ದೇಶಪೂರ್ವಕ ಕೃತ್ಯದಿಂದಾಗಿ ಆದ ಹಾನಿ ಎಂದು ಪರಿಗಣಿಸಲಾಗುತ್ತದೆ’ ಎಂದು ನಿತಿನ್ ಕುಮಾರ್ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮರ ಬಿದ್ದು ಸಂಭವಿಸುವ ಹಾನಿಗಳು ವಿಮೆ ವ್ಯಾಪ್ತಿಗೆ ಒಳಪಡುತ್ತವೆಯೇ?
ರನ್ ಆಗುತ್ತಿರುವ ಕಾರಿನ ಎಂಜಿನ್ಗೆ ನೀರು ನುಗ್ಗಿದಾಗ ಎಂಜಿನ್ ಹಾನಿಯಾಗುತ್ತದೆ. ಅಂಥ ಸಮಯದಲ್ಲಿ ಹೈಡ್ರೋಸ್ಟಾಟಿಕ್ ಲಾಕ್ ಸಂಭವಿಸುತ್ತದೆ. ಒಂದು ವೇಳೆ ಎಂಜಿನ್ ಆಫ್ನಲ್ಲಿದ್ದಾಗ ನೀರು ನುಗ್ಗಿದರೆ ಆಗ ಹಾನಿಯಾಗುವ ಸಾಧ್ಯತೆ ಇಲ್ಲದೇ ಇರಬಹುದು. ಆದರೂ ಕೂಡ ಎಂಜಿನ್ ಸ್ಟಾರ್ಟ್ ಮಾಡುವ ಮುನ್ನ ವೃತ್ತಿಪರರ ಸಹಾಯ ಪಡೆಯುವುದು ಒಳ್ಳೆಯದು.
ಕಾರಿಗೆ ಸಣ್ಣ ಡ್ಯಾಮೇಜ್ ಆದರೂ ಅದನ್ನು ದುರಸ್ತಿ ಮಾಡಲು ಬಹಳ ಖರ್ಚಾಗುತ್ತದೆ. ಅಪಘಾತವಷ್ಟೇ ಅಲ್ಲ, ಪ್ರವಾಹ ಇತ್ಯಾದಿ ಕಾರಣಕ್ಕೆ ಕಾರಿಗೆ ಬಹಳ ಹಾನಿಯಾಗುವುದಿದೆ. ಈ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಕಾರಿಗೆ ಇನ್ಷೂರೆನ್ಸ್ ಕವರೇಜ್ ಇದ್ದರೆ ಹಾನಿವೆಚ್ಚವನ್ನು ಸರಿದೂಗಿಸಲು ಸಾಧ್ಯ. ಸಮಗ್ರ ಇನ್ಷೂರೆನ್ಸ್ ಪಾಲಿಸಿ ಪಡೆದರೆ ಪ್ರವಾಹ, ಬೆಂಕಿ ಮತ್ತು ಕಳ್ಳತನ ಇತ್ಯಾದಿ ಅವಘಡಗಳನ್ನು ಕವರ್ ಮಾಡಬಹುದು. ಹೊಸ ಕಾರಾದರೆ ಬಹುತೇಕ ಎಲ್ಲಾ ರೀತಿಯ ಹಾನಿಗಳನ್ನು ಕವರ್ ಮಾಡಲಾಗುತ್ತದೆ. ಕಾರು ಹಳೆಯದಾದಷ್ಟೂ ಕವರೇಜ್ ಕಡಿಮೆ ಆಗುತ್ತಾ ಹೋಗುತ್ತದೆ. ಪ್ಲಾಸ್ಟಿಕ್ ಮತ್ತು ರಬ್ಬರ್ನ ಬಿಡಿಭಾಗಗಳು ಹಾನಿಯಾದರೆ ಅರ್ಧದಷ್ಟು ಮಾತ್ರ ಕ್ಲೈಮ್ ಸಾಧ್ಯ.
ಇದನ್ನೂ ಓದಿ: ತಡವಾಗಿ ಕ್ಲೇಮ್ ಎಂದು ಅಪಘಾತ ವಿಮೆ ತಿರಸ್ಕಾರ: ಪರಿಹಾರ ಕೊಡಲು ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಆದೇಶ
ಒಂದು ಸಾಧಾರಣವಾದ ಸಮಗ್ರ ಕಾರ್ ಇನ್ಷೂರೆನ್ಸ್ ಪಾಲಿಸಿ ಇದ್ದರೆ ಎಲ್ಲವೂ ಕವರ್ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಎಂಜಿನ್ ರಕ್ಷಣೆ, ಝೀರೋ ಡೆಪ್ರಿಶಿಯೇಶನ್, ಕನ್ಸೂಮಬಲ್ಸ್ ಕವರ್, ರೋಡ್ಸೈಡ್ ಅಸಿಸ್ಟೆನ್ಸ್, ಕೀ ಮತ್ತು ಲಾಕ್ಕವರ್, ವೈಯಕ್ತಿಕ ವಸ್ತುಗಳಿಗೆ ಹಾನಿ ಇತ್ಯಾದಿಗಳಿಗೆ ಪ್ರತ್ಯೇಕವಾಗಿ ಇನ್ಷೂರೆನ್ಸ್ ಆ್ಯಡ್ ಆನ್ ಪಡೆಯುವುದು ಉತ್ತಮ ಎನ್ನುತ್ತಾರೆ ಪಾಲಿಸಿ ಬಜಾರ್ನ ಇನ್ಷೂರೆನ್ಸ್ ತಜ್ಞರು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ