RBI: ಆರ್ಬಿಐ ಸುದ್ದಿಗೋಷ್ಠಿಗೆ ಮುನ್ನ ಇಲ್ಲಿ ಹೂಡಿಕೆ ಮಾಡಿದರೆ ಸಿಗುತ್ತೆ ಭರ್ಜರಿ ಲಾಭ? ಕಾರಣ ಇಂಟರೆಸ್ಟಿಂಗ್
Share Market vs RBI: ಆರ್ಬಿಐ ನಿರ್ಧಾರ ಪ್ರಕಟಗೊಳ್ಳುವ ಮುನ್ನವೇ ಷೇರುಪೇಟೆ ಗರಿಗೆದರಿ ನಿಂತಿದೆ. ಶೇ. 6.5ರಷ್ಟಿರುವ ರೆಪೋ ದರ, ಅಥವಾ ಬಡ್ಡಿ ದರವು ಈ ಬಾರಿ ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು ಎಂಬ ನಿರೀಕ್ಷೆ ಇರುವುದು ಷೇರುಪೇಟೆಯಲ್ಲಿ ಹೊಸ ಹೊಸ ಲೆಕ್ಕಾಚಾರಗಳಿಗೆ ಎಡೆ ಮಾಡಿಕೊಟ್ಟಿದೆ.
ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರ ಬಹಳ ಸೋಜಿಗ ಮೂಡಿಸುತ್ತವೆ. ಈ ಕ್ಷೇತ್ರದ ಒಂದೊಂದು ಬೆಳವಣಿಗೆಯ ಮೂಲ ಹುಡುಕಿ ಹೋದರೆ ಬಹಳ ದೊಡ್ಡ ಸರಪಳಿಯೇ ಕಾಣುತ್ತದೆ. ಜೂನ್ 6ರಂದು ಆರಂಭವಾದ ಆರ್ಬಿಐನ ಎಂಪಿಸಿ (RBI- Monetary Policy Committee) ಸಭೆ ಜೂನ್ 8ರಂದು ಮುಕ್ತಾಯಗೊಳ್ಳುತ್ತದೆ. ನಾಳೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ರೆಪೋ ದರ ಎಷ್ಟೆಂದು ಘೋಷಿಸಲಿದ್ದಾರೆ. ಆ ಕ್ಷಣಕ್ಕಾಗಿ ಬಹಳ ಮಂದಿ ಕಾಯುತ್ತಿದ್ದಾರೆ. ಜಗತ್ತಿನ ಪ್ರತೀ ಬೆಳವಣಿಗೆಯಿಂದಲೂ ಪರಿಣಾಮ ಎದುರಿಸುವ ಷೇರುಮಾರುಕಟ್ಟೆ ಆರ್ಬಿಐ ನಿರ್ಧಾರ ಪ್ರಕಟಗೊಳ್ಳುವ ಮುನ್ನವೇ ಗರಿಗೆದರಿ ನಿಂತಿದೆ. ಶೇ. 6.5ರಷ್ಟಿರುವ ರೆಪೋ ದರ, ಅಥವಾ ಬಡ್ಡಿ ದರವು ಈ ಬಾರಿ ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು ಎಂಬ ನಿರೀಕ್ಷೆ ಇರುವುದು ಷೇರುಪೇಟೆಯಲ್ಲಿ ಹೊಸ ಹೊಸ ಲೆಕ್ಕಾಚಾರಗಳಿಗೆ ಎಡೆ ಮಾಡಿಕೊಟ್ಟಿದೆ. ಯಾವ್ಯಾವ ಷೇರುಗಳು ಮಲ್ಟಿಬ್ಯಾಗರ್ ಅಥವಾ ಲಾಭದಾಯಕ ಹೂಡಿಕೆಸ್ಥಳವಾಗಬಹುದು ಎಂದು ತಜ್ಞರು ಅಂದಾಜು ಮಾಡುತ್ತಿದ್ದಾರೆ. ಇಂಥ ಷೇರುಗಳು ಯಾವುವು, ಆರ್ಬಿಐ ಗವರ್ನರ್ ಪ್ರೆಸ್ಮೀಟ್ಗೆ ಮುನ್ನ ಷೇರುಪೇಟೆಯಲ್ಲಿ ಯಾಕೆ ಹೂಡಿಕೆ ಮಾಡಬೇಕು…? ಇಲ್ಲಿದೆ ಕುತೂಹಲ ಮೂಡಿಸುವ ಲೆಕ್ಕಾಚಾರ….
ಷೇರುಮಾರುಕಟ್ಟೆಯಲ್ಲಿ ತುರ್ತಾಗಿ ಯಾಕೆ ಹೂಡಿಕೆ ಮಾಡಬೇಕು?
ಜಗತ್ತಿನ ಆರ್ಥಿಕತೆಗೆ ಹೋಲಿಸಿದರೆ ಭಾರತದ ಸ್ಥಿತಿ ಬಹಳ ಉತ್ತಮವಾಗಿಯೇ ಇದೆ. ಶೇ. 7.2ರಷ್ಟು ಜಿಡಿಪಿ ವೃದ್ಧಿಯಾಗಿದೆ. ಅತ್ಯಧಿಕ ಜಿಎಸ್ಟಿ ಸಂಗ್ರಹವಾಗಿದೆ. ಹಣದುಬ್ಬರವು ನಿರೀಕ್ಷಿತ ಮಟ್ಟಕ್ಕೆ ಸೀಮಿತಗೊಂಡಿದೆ. ಇದೆಲ್ಲವೂ ಮುಂಬರುವ ದಿನಗಳು ಅಚ್ಛೇ ದಿನ್ ಆಗಿರಬಹುದು ಎಂಬ ಭರವಸೆ ಮೂಡಿಸುತ್ತವೆ.
ಇದೇ ವೇಳೆ ಅಮೆರಿಕ, ಯೂರೋಪ್ ದೇಶಗಳಲ್ಲಿ ಆರ್ಥಿಕತೆ ಹಿಂಜರಿತಕ್ಕೆ ಸಿಲುಕುತ್ತಿದೆ. ಅಮೆರಿಕದಲ್ಲಿ ಬಡ್ಡಿ ದರ 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಾಗಬಹುದು. ಇದು ಹಾಗೂ ಭಾರತದ ಉತ್ತಮ ಆರ್ಥಿಕತೆಯು ಎಫ್ಐಐ ಅಥವಾ ವಿದೇಶೀ ಹೂಡಿಕೆದಾರರನ್ನು ಭಾರತದತ್ತ ಸೆಳೆಯಲು ಕಾರಣವಾಗಬಹುದು.
ಆರ್ಬಿಐ ರೆಪೋ ದರ ಹೆಚ್ಚಿಸದೇ ಇದ್ದರೆ ಬಂಡವಾಳ ಹರಿವು ಇನ್ನಷ್ಟು ಹೆಚ್ಚಾಗುತ್ತದೆ. ಹೆಚ್ಚಿನ ವಿದೇಶೀ ಬಂಡವಾಳವು ಷೇರುಮಾರುಕಟ್ಟೆಗೆ ಬರಲಿದೆ. ಆದರೆ, ಯಾವ ಷೇರುಗಳಿಗೆ ಬೇಡಿಕೆ ಹೆಚ್ಚಲಿದೆ ಎಂಬ ವಿಚಾರ ಇನ್ನೂ ಕುತೂಹಲ ಮೂಡಿಸುವಂಥದ್ದು.
ಇದನ್ನೂ ಓದಿ: Cash Withdrawal: ಕಾರ್ಡ್ ಬೇಕಿಲ್ಲ, ಮೊಬೈಲ್ನ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಐಟಿ, ಮ್ಯಾನುಫ್ಯಾಕ್ಚರಿಂಗ್ ಮತ್ತು ಬ್ಯಾಂಕಿಂಗ್ ಸಂಸ್ಥೆಗಳ ಷೇರುಗಳು ಹೆಚ್ಚು ಬೆಳೆಯುವ ನಿರೀಕ್ಷೆ
ಮುಂದಿನ ದಿನಗಳಲ್ಲಿ ಭಾರತದ ಐಟಿ, ತಯಾರಿಕೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳು ಗಣನೀಯವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಹೀಗಾಗಿ, ಈ ಕ್ಷೇತ್ರಗಳ ಷೇರುಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ. ಅದರಲ್ಲೂ ಬೆಲೆ ಕಡಿಮೆಗೊಂಡಿರುವ ಉತ್ತಮ ಸ್ಟಾಕುಗಳನ್ನು ಗುರುತಿಸಿ ಹೂಡಿಕೆ ಮಾಡುವುದು ಜಾಣತನ.
ನಿಫ್ಟಿಯ ಬ್ಯಾಂಕಿಂಗ್ ಸೆಕ್ಟರ್ ಪಟ್ಟಿಯಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್, ಆ್ಯಕ್ಸಿಸ್, ಎಸ್ಬಿಐ ಮೊದಲಾದ ಷೇರುಗಳು ಉತ್ತಮ ಲಾಭ ತಂದುಕೊಡಬಲ್ಲುವು. ಟಿಸಿಎಸ್, ಇನ್ಫೋಸಿಸ್, ಹೆಚ್ಸಿಎಲ್ ಟೆಕ್, ಮೈಂಡ್ಟ್ರೀ, ಬಿರ್ಲಾ ಸಾಫ್ಟ್ ಮೊದಲಾದ ಐಟಿ ಕಂಪನಿಗಳ ಷೇರುಗಳಿಗೆ ಒಳ್ಳೆಯ ಭವಿಷ್ಯ ಇದೆಯಂತೆ. ಅದರಲ್ಲೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ ಷೇರುಗಳು ಈ ವರ್ಷ ಮಲ್ಟಿಬ್ಯಾಗರ್ ಆಗುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ