Jeevan Utsav: ಎಲ್​ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Nov 29, 2023 | 2:57 PM

LIC Unveils New Plan: ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಸಂಸ್ಥೆ ನವೆಂಬರ್ 29, ಬುಧವಾರದಂದು ಜೀವನ್ ಉತ್ಸವ್ ಎಂಬ ಹೊಸ ಪಾಲಿಸಿ ಬಿಡುಗಡೆ ಮಾಡಿದೆ. ಇದರ ಕನಿಷ್ಠ ಪ್ರವೇಶ ವಯಸ್ಸು 8 ವರ್ಷ, ಗರಿಷ್ಠ ವಯಸ್ಸು 65 ವರ್ಷವಾಗಿದೆ. ಕನಿಷ್ಠ ಬೇಸಿಕ್ ಸಮ್ ಅಷ್ಯೂರ್ಡ್ 5 ಲಕ್ಷ ಇದ್ದು, 5ರಿಂದ 16 ವರ್ಷದವರೆಗೆ ಪ್ರೀಮಿಮಯ್ ಕಟ್ಟುವ ಅವಕಾಶ ಇದೆ.

Jeevan Utsav: ಎಲ್​ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?
ಎಲ್​ಐಸಿ
Follow us on

ನವದೆಹಲಿ, ನವೆಂಬರ್ 29: ದೇಶದ ಅತಿದೊಡ್ಡ ವಿಮಾ ಸಂಸ್ಥೆ ಎಲ್​ಐಸಿ ಇದೀಗ ಹೊಸ ಪಾಲಿಸಿಯೊಂದನ್ನು (LIC new plan) ಅನಾವರಣಗೊಳಿಸಿದೆ. ಮುಂದಿನ ಕೆಲ ತಿಂಗಳಲ್ಲಿ ಎಲ್​​ಐಸಿಯಿಂದ ಇನ್ನೂ ಮೂರ್ನಾಲ್ಕು ಹೊಸ ಪಾಲಿಸಿಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ. ಹೊಸ ಜೀವನ್ ಉತ್ಸವ್ ಪ್ಲಾನ್ (LIC Jeevan Utsav) ಅನ್ನು ನವೆಂಬರ್ 29, ಬುಧವಾರದಂದು ಬಿಡುಗಡೆ ಮಾಡಿರುವುದಾಗಿ ಎಲ್​ಐಸಿ ಸಂಸ್ಥೆ ಬಿಎಸ್​ಇಯಲ್ಲಿ ಸಲ್ಲಿಸಿರುವ ದಾಖಲೆಯಲ್ಲಿ (regulatory filing) ತಿಳಿಸಿದೆ.

ಎಲ್​ಐಸಿ ಜೀವನ್ ಉತ್ಸವ್ ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಇನ್ಷೂರೆನ್ಸ್ ಪ್ಲಾನ್ ಆಗಿದೆ. ಅಂದರೆ, ಯಾವುದೇ ಈಕ್ವಿಟಿಗೆ ಜೋಡಣೆ ಆಗದ ಪ್ಲಾನ್. ಎಂಟು ವರ್ಷ ಮೇಲ್ಪಟ್ಟ ವ್ಯಕ್ತಿಗಳು ಈ ಪಾಲಿಸಿ ಪಡೆಯಬಹುದು. ಕನಿಷ್ಠ ಅಷ್ಯೂರ್ಡ್ ಮೊತ್ತ 5 ಲಕ್ಷ ರೂ ಇದೆ. ಮೆಚ್ಯೂರಿಟಿ ಬಳಿಕ ಈ ಕನಿಷ್ಠ ಗ್ಯಾರಂಟಿ ಮೊತ್ತದ ಶೇ. 10ರಷ್ಟು ಹಣವನ್ನು ಪಿಂಚಣಿ ರೂಪದಲ್ಲಿ ಕೊನೆಯವರೆಗೂ ಹಂಚಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಜೀವ ಪ್ರಮಾಣಪತ್ರ ಸಲ್ಲಿಸಲು ಎರಡೇ ದಿನ ಬಾಕಿ; ನ. 30ಕ್ಕೆ ಕೊಡದಿದ್ದರೆ ಪಿಂಚಣಿ ಸಿಗೋದಿಲ್ವಾ?

ಹೊಸ ಎಲ್​ಐಸಿ ಜೀವನ್ ಉತ್ಸವ್ ಪ್ಲಾನ್​ನಲ್ಲಿ ಕನಿಷ್ಠ ಪ್ರವೇಶ ವರ್ಷ 8 ವರ್ಷವಾಗಿದೆ. ಗರಿಷ್ಠ ವಯೋಮಿತಿ 65 ವರ್ಷ ಇದೆ. ಪ್ರೀಮಿಯಮ್ ಕಟ್ಟುವ ಅವಧಿ 5ರಿಂದ ಆರಂಭವಾಗಿ 16 ವರ್ಷದವರೆಗೂ ಇದೆ. ಇದರಲ್ಲಿ ಎರಡು ಪೇಔಟ್ ಆಯ್ಕೆಗಳಿವೆ. ರೆಗ್ಯುಲರ್ ಇನ್ಕಮ್ ಅಥವಾ ಫ್ಲೆಕ್ಸಿ ಇನ್ಕಮ್ ಆಯ್ಕೆಗಳನ್ನು ಪಡೆಯಬಹುದು. ಈ ಎರಡೂ ಆಯ್ಕೆಗಳಲ್ಲಿ ನಿರ್ದಿಷ್ಟ ಮೊತ್ತವನ್ನು ನಿಯಮಿತವಾಗಿ ನಿಮಗೆ ಕೊಡಲಾಗುತ್ತದೆ.

ನಿಮ್ಮ ಬೇಸಿಕ್ ಸಮ್ ಅಷ್ಯೂರ್ಡ್​ನ ಶೇ. 10ರಷ್ಟು ಮೊತ್ತವನ್ನು ನಿಮ್ಮ ಪಾಲಿಸಿ ಅವಧಿಯ ನಂತರದ 3 ವರ್ಷದ ಬಳಿಕ ಹಂಚಿಕೆ ಮಾಡಲು ಆರಂಭಿಸಲಾಗುತ್ತದೆ. ಉದಾಹರಣೆಗೆ, ನೀವು 8 ವರ್ಷ ಪ್ರೀಮಿಯಮ್ ಕಟ್ಟುವ ಪಾಲಿಸಿ ಆಯ್ದುಕೊಂಡಿದ್ದರೆ 11ನೇ ವರ್ಷದಿಂದ ಪೇ ಔಟ್ ಆರಂಭವಾಗುತ್ತದೆ.

ಇದನ್ನೂ ಓದಿ: LIC Scheme: ನಿವೃತ್ತಿ ಬಳಿಕ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಬರಲು ಪಾಲಿಸಿ ಮೊತ್ತ ಎಷ್ಟು ಬೇಕು?

ಇನ್ನು, ಫ್ಲೆಕ್ಸಿ ಇನ್ಕಮ್ ಪೇಔಟ್ ಆಯ್ಕೆ ಪಡೆದುಕೊಂಡಿದ್ದರೆ ಕನಿಷ್ಠ ಗ್ಯಾರಂಟಿ ಮೊತ್ತದ ಶೇ. 10ರಷ್ಟು ಹಣವನ್ನು ಪ್ರತೀ ಪಾಲಿಸಿ ವರ್ಷದ ಕೊನೆಗೆ ನಿಮಗೆ ಕೊಡಲಾಗುತ್ತದೆ. ಒಂದು ವೇಳೆ ನಿಮಗೆ ಈ ನಿಯಮಿತ ಪೇಔಟ್ ಬೇಡ, ಪಾಲಿಸಿಯಲ್ಲೇ ಆ ಹಣ ಮುಂದುವರಿಯಲಿ ಎಂದಿದ್ದರೆ ಅದಕ್ಕೂ ಅವಕಾಶ ಇದೆ. ಈ ರೀತಿಯ ಹಣಕ್ಕೆ ಎಲ್​ಐಸಿ ವರ್ಷಕ್ಕೆ ಶೇ. 5.5ರಷ್ಟು ಬಡ್ಡಿ ಸೇರಿಸಿ ತುಂಬಿಸುತ್ತಾ ಹೋಗುತ್ತದೆ.

ನಿಮ್ಮ ಪೇಔಟ್ ಹಣವನ್ನು ಹಿಂಪಡೆಯಲು ವರ್ಷಕ್ಕೆ ಒಮ್ಮೆ ಅವಕಾಶ ಇರುತ್ತದೆ. ಬಡ್ಡಿ ಸೇರಿದಂತೆ ಜಮೆ ಆದ ಎಲ್ಲಾ ಲಾಭಗಳ ಶೇ. 75ರಷ್ಟು ಮೊತ್ತವನ್ನು ನೀವು ವಿತ್​ಡ್ರಾ ಮಾಡಬಹುದು. ಉಳಿದ ಹಣಕ್ಕೆ ಎಲ್​ಐಸಿ ಬಡ್ಡಿ ಸೇರಿಸುವುದನ್ನು ಮುಂದುವರಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Wed, 29 November 23