Mahila Samman Savings: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಮಹಿಳೆಯರಿಗೆ ಎಫ್ಡಿಗಿಂತಲೂ ಇದುವೇ ಬೆಸ್ಟ್
ಈಗಿನ ಸ್ಥಿರ ಠೇವಣಿ ಅಥವಾ ಎಫ್ಡಿ ಬಡ್ಡಿ ದರಗಳ ಜತೆ ಹೋಲಿಸಿದರೆ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಉತ್ತಮ ಯೋಜನೆಯಾಗಿದ್ದು, ಶೇ 0.50 ಯಿಂದ ಶೇ 1ರ ವರೆಗೆ ಹೆಚ್ಚಿನ ಬಡ್ಡಿಯ ಆಫರ್ ನೀಡಿದೆ.
ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ (Mahila Samman Savings Certificate) ಯೋಜನೆಯನ್ನು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ. ಈ ಯೋಜನೆಯಡಿ ಮಹಿಳೆಯರು ಸಣ್ಣ ಉಳಿತಾಯ ಮಾಡಬಹುದಾಗಿದೆ. ಎರಡು ವರ್ಷಗಳ ಅವಧಿಗೆ ಗರಿಷ್ಠ 2 ಲಕ್ಷ ರೂ. ವರೆಗೆ ಮಹಿಳೆಯರು ಠೇವಣಿ ಇಡಬಹುದಾಗಿದೆ. ಈ ಯೋಜನೆ 2025ರ ಮಾರ್ಚ್ನಿಂದ ಆರಂಭಗೊಳ್ಳಲಿದೆ. ಈ ಯೋಜನೆಯಡಿ ಮಹಿಳೆಯರು ಮಾಡುವ ಉಳಿತಾಯಕ್ಕೆ ಶೇ 7.5ರ ಬಡ್ಡಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಭಾಗಶಃ ಮೊತ್ತ ಹಿಂಪಡೆಯುವ ಆಯ್ಕೆಯೂ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಉಳಿತಾಯ ಯೋಜನೆಯಲ್ಲಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಈ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ವಿನಾಯಿತಿ ಪಡೆಯಲೂ ಅವಕಾಶವಿದೆ. ಆದರೆ, ತೆರಿಗೆ ವಿನಾಯಿತಿ ಮಿತಿಯ ಬಗ್ಗೆ ಇನ್ನಷ್ಟೇ ಸ್ಪಷ್ಟ ಚಿತ್ರಣ ದೊರೆಯಬೇಕಿದೆ. ಹೆಚ್ಚು ಬಡ್ಡಿ ದೊರೆಯುವ ಬ್ಯಾಂಕ್ ಎಫ್ಡಿಗಿಂತಲೂ ಮಹಿಳೆಯರಿಗೆ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯೇ ಉತ್ತಮವಾಗಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಸದ್ಯ ಶೇ 6.75ರ ಬಡ್ಡಿ ನೀಡುತ್ತಿದ್ದು, ಇದು ಅನೇಕ ಖಾಸಗಿ ಬ್ಯಾಂಕ್ಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳು ನೀಡುತ್ತಿರುವ ಬಡ್ಡಿಗಿಂತಲೂ ಕಡಿಮೆಯಾಗಿದೆ. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ಗಳು ಶೇ 7ರ ಬಡ್ಡಿ ನೀಡುತ್ತಿವೆ.
ಇದನ್ನೂ ಓದಿ: Repo Rate: ಆರ್ಬಿಐ ಹಣಕಾಸು ನೀತಿ, ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ಇಲ್ಲಿದೆ ಪೂರ್ತಿ ವಿವರ
ಈಗಿನ ಸ್ಥಿರ ಠೇವಣಿ ಅಥವಾ ಎಫ್ಡಿ ಬಡ್ಡಿ ದರಗಳ ಜತೆ ಹೋಲಿಸಿದರೆ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಉತ್ತಮ ಯೋಜನೆಯಾಗಿದ್ದು, ಶೇ 0.50 ಯಿಂದ ಶೇ 1ರ ವರೆಗೆ ಹೆಚ್ಚಿನ ಬಡ್ಡಿಯ ಆಫರ್ ನೀಡಿದೆ. ಆದಾಗ್ಯೂ, ಹೂಡಿಕೆದಾರರು ಬ್ಯಾಂಕಿನ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಿಕೊಳ್ಳಬೇಕು. ದೊಡ್ಡ ಮೊತ್ತದ ಹೂಡಿಕೆ ಮಾಡುವವರಾದರೆ, ಸಣ್ಣ ಹಣಕಾಸು ಸಂಸ್ಥೆಗಳೂ ಒಳಗೊಂಡಂತೆ ಶೆಡ್ಯೂಲ್ಡ್ ಬ್ಯಾಂಕ್ಗಳಲ್ಲಿ ಆರ್ಬಿಐನ ಠೇವಣಿ ವಿಮಾ ಯೋಜನೆಯಡಿಯಲ್ಲಿ 5 ಲಕ್ಷ ರೂ.ವರೆಗೂ ಠೇವಣಿ ಇಡಲು ಅವಕಾಶವಿದೆ. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಕೇಂದ್ರ ಸರ್ಕಾರ ಬೆಂಬಲಿತ ಯೋಜನೆಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಸ್ಎಜಿ ಇನ್ಫೋಟೆಕ್ನ ಎಂಡಿ ಅಮಿತ್ ಗುಪ್ತಾ ಸಲಹೆ ನೀಡಿದ್ದಾರೆ.