ಉನ್ನತ ಶಿಕ್ಷಣ ಇವತ್ತು ಬಹಳ ದುಬಾರಿ. ಉತ್ತಮ ವೃತ್ತಿ ಆರಂಭಿಸಲು ಬಹಳ ಅಗತ್ಯ ಇರುವ ಉನ್ನತ ಶಿಕ್ಷಣವನ್ನು ಹಣವಿಲ್ಲವೆಂಬ ಅಸಹಾಯಕತೆಯಿಂದ ಕೈಬಿಡಲು ಆಗುವುದಿಲ್ಲ. ಸಾಲವಾದರೂ ಸರಿ ಶಿಕ್ಷಣ ಪೂರ್ಣಗೊಳಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಇಂಥ ಸಂದರ್ಭಗಳಿಗೆ ಸಹಾಯಕವಾಗುವಂತೆ ಪಿಎಂ ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಯೋಜನೆ (PM Vidya Lakshmi Education Loan Yojana) ಆರಂಭಿಸಿದೆ. 2015ರಿಂದ ಚಾಲನೆಯಲ್ಲಿರುವ ಈ ಸ್ಕೀಮ್ನಲ್ಲಿ ಭಾರತದ ಯಾವುದೇ ನಾಗರಿಕರು ಸಾಲ ಪಡೆಯಬಹುದಾಗಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇರುವ ವಿದ್ಯಾರ್ಥಿಗಳಿಗೆ ಈ ಸಾಲ ಉಪಯುಕ್ತವಾಗುತ್ತದೆ. ಹಣಕಾಸು ತೊಂದರೆಯಿಂದ ಓದಿಗೆ ತೊಂದರೆ ಆಗುವುದನ್ನು ಇದು ತಪ್ಪಿಸುತ್ತದೆ.
ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಅಡಿಯಲ್ಲಿ ಬ್ಯಾಂಕುಗಳಿಂದ ಸಾಲ ಸಿಗುತ್ತದೆ. ಉನ್ನತ ಶಿಕ್ಷಣದ ಕೋರ್ಸ್ ಭಾರತದಲ್ಲಿಯಾದರೆ ಏಳೂವರೆ ಲಕ್ಷ ರೂವರೆಗೂ ಸಾಲ ಪಡೆಯಬಹುದು. ವಿದೇಶಗಳಲ್ಲಿ ಓದುವುದಾದರೆ 15 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ.
ಈ ಯೋಜನೆ ಅಡಿಯಲ್ಲಿ 22 ವಿಧದ ಶಿಕ್ಷಣ ಸಾಲಗಳು ಸಿಗುತ್ತವೆ. 14 ಬ್ಯಾಂಕುಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಅಂದರೆ ಈ 14 ಬ್ಯಾಂಕ್ಗಳಲ್ಲಿ ಸಾಲ ಪಡೆಯಬಹುದು. ಎಚ್ಡಿಎಫ್ಸಿ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಐಸಿಐಸಿಐ, ಎಕ್ಸಿಸ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್ ಇದರಲ್ಲಿ ಒಳಗೊಂಡಿವೆ.
ಇದನ್ನೂ ಓದಿ: ಪಿಪಿಎಫ್ನಿಂದ ಟ್ರಿಪಲ್ ಲಾಭ; ಉಳಿತಾಯ, ದೀರ್ಘಾವಧಿ ಹೂಡಿಕೆ, ತೆರಿಗೆ ಲಾಭ
ಅಭ್ಯರ್ಥಿಯು ಪ್ಲಸ್ 2 ಅಥವಾ ದ್ವಿತೀಯ ಪಿಯು ಮುಗಿಸಿರಬೇಕು. ಪದವಿ, ಮಾಸ್ಟರ್ಸ್ ಇತ್ಯಾದಿ ಕೋರ್ಸ್ಗೆ ಅರ್ಜಿ ಸಲ್ಲಿಸಿರಬೇಕು. ಈ ಯೋಜನೆಗೆ ಅಧಿಕೃತ ವೆಬ್ಸೈಟ್ ಅಭಿವೃದ್ದಿಪಡಿಸಲಾಗಿದೆ. ಅದರ ವಿಳಾಸ ಇಂತಿದೆ: vidyalakshmi.co.in/Students/
ಈ ಪೋರ್ಟಲ್ನಲ್ಲಿ ರಿಜಿಸ್ಟರ್ ಮಾಡಿಕೊಂಡು, ಕಾಮನ್ ಎಜುಕೇಶನ್ ಲೋನ್ ಅಪ್ಲಿಕೇಶನ್ (ಸೆಲಾಫ್) ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಈ ಸಾಲಕ್ಕೆ ಬಡ್ಡಿದರ ಬ್ಯಾಂಕಿಂಗ್ ಬ್ಯಂಕಿಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಪರ್ಸನಲ್ ಲೋನ್ಗಿಂತ ಕಡಿಮೆ ಬಡ್ಡಿ ಇರುತ್ತದೆ. ಜನಸಮರ್ಥ್ ವೆಬ್ಸೈಟ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಒಂದಷ್ಟು ಡಿಸ್ಕೌಂಟ್ ಸಿಗುತ್ತದೆ. ಆದರೆ, ಪೋಷಕರ ಆದಾಯ ವರ್ಷಕ್ಕೆ ನಾಲ್ಕೂವರೆ ಲಕ್ಷ ರೂಗಿಂತ ಕಡಿಮೆ ಇರಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ