Pre-Approved Loan: ಪ್ರಿ ಅಪ್ರೂವ್ಡ್ ಲೋನ್ ಎಂದರೇನು, ಸಾಮಾನ್ಯ ಸಾಲಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಾಹಿತಿ

ಪ್ರಿ ಅಪ್ರೂವ್ಡ್ ಲೋನ್ ಎಂದರೇನು, ಸಾಮಾನ್ಯ ಸಾಲಕ್ಕಿಂತ ಇದು ಹೇಗೆ ಭಿನ್ನ? ಈ ರೀತಿಯ ಆಫರ್ ಬಂದಾಗ ಸಾಲ ಪಡೆಯುವುದು ಒಳ್ಳೆಯದೇ? ಇಲ್ಲಿದೆ ಮಾಹಿತಿ.

Pre-Approved Loan: ಪ್ರಿ ಅಪ್ರೂವ್ಡ್ ಲೋನ್ ಎಂದರೇನು, ಸಾಮಾನ್ಯ ಸಾಲಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 10, 2023 | 12:18 PM

‘ಪ್ರಿ ಅಪ್ರೂವ್ಡ್ ಲೋನ್ (Pre-Approved Loan) ಸ್ಯಾಂಕ್ಷನ್ ಆಗಿದೆ. ತೆಗೆದುಕೊಳ್ಳುತ್ತೀರಾ’ ಎಂದು ಬ್ಯಾಂಕ್​ಗಳು, ಹಣಕಾಸು ಸಂಸ್ಥೆಗಳಿಂದ ಯಾವಾಗಲಾದರೂ ನಿಮಗೆ ಕರೆ ಬಂದಿರಬಹುದು. ಹಾಗಿದ್ದರೆ ಪ್ರಿ ಅಪ್ರೂವ್ಡ್ ಲೋನ್ ಅಥವಾ ಪೂರ್ವ ಅನುಮೋದಿತ ಸಾಲ ಎಂದರೇನು? ಸಾಮಾನ್ಯವಾಗಿ ಯಾವುದಾದರೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬೇಕೆಂದಿದ್ದರೆ ನಾವು ಅರ್ಜಿ ಸಲ್ಲಿಸಬೇಕು. ಆ ಸಾಲದ ಮೊತ್ತಕ್ಕೆ ಏನನ್ನಾದರೂ ಅಡ ಇಡಬೇಕು ಅಥವಾ ಜಾಮೀನು ನೀಡಬೇಕು. ಆದರೆ, ಈ ಎಲ್ಲ ಪ್ರಕ್ರಿಯೆಗಳು ಪೂರ್ವ ಅನುಮೋದಿತ ಸಾಲದಲ್ಲಿ ಬೇಕಾಗುವುದಿಲ್ಲ. ಸಾಲ ಪಡೆಯುವ ವ್ಯಕ್ತಿಯ ಆದಾಯ ಮತ್ತು ಸಾಲದ ಮೊತ್ತದ ಅನುಪಾತ, ಕ್ರೆಡಿಟ್ ಸ್ಕೋರ್ (Credit Score), ಆದಾಯ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್​ ಅಥವಾ ಹಣಕಾಸು ಸಂಸ್ಥೆಗಳು ಸಾಲದ ಆಫರ್ ನೀಡುವುದೇ ಪೂರ್ವ ಅನುಮೋದಿತ ಸಾಲವಾಗಿದೆ. ಈ ವಿಧಾನದಲ್ಲಿ ಸಾಲಕ್ಕೆ ಅರ್ಜಿಯೇ ಸಲ್ಲಿಸಬೇಕಿರುವುದಿಲ್ಲ. ಬ್ಯಾಂಕ್​ಗಳು ಅವಾಗಿಯೇ ಸಾಲದ ಆಫರ್ ನೀಡುತ್ತವೆ.

ಎಲ್ಲೆಲ್ಲ ಪ್ರಿ ಅಪ್ರೂವ್ಡ್ ಲೋನ್ ಸಿಗುತ್ತದೆ?

ಬ್ಯಾಂಕ್​​ಗಳು, ಕ್ರೆಡಿಟ್ ಯೂನಿಯನ್​ಗಳು, ಇತರ ಹಣಕಾಸು ಸಂಸ್ಥೆಗಳು ಪ್ರಿ ಅಪ್ರೂವ್ಡ್ ಲೋನ್ ಆಫರ್ ನೀಡುತ್ತವೆ. ಉತ್ತಮ ಕ್ರೆಡಿಟ್ ಹಿಸ್ಟರಿ ಮತ್ತು ಸ್ಥಿರ ಆದಾಯ ಇರುವ ಗ್ರಾಹಕರಿಗೆ ಹೆಚ್ಚಾಗಿ ಈ ಆಫರ್ ದೊರೆಯುತ್ತದೆ. ಈಗಾಗಲೇ ಸಾಲಕ್ಕೆ ಅರ್ಹರು ಎಂದು ಪರಿಗಣಿಸಲ್ಪಟ್ಟಿರುವ ಗ್ರಾಹಕರಿಗೆ ಸಾಲ ನೀಡಿಕೆ ಪ್ರಕ್ರಿಯೆಯನ್ನು ಸರಳ ಮತ್ತು ಸುಗಮಗೊಳಿಸುವುದು ಇದರ ಮುಖ್ಯ ಉದ್ದೇಶ.

ಪ್ರಿ ಅಪ್ರೂವ್ಡ್ ಲೋನ್ ಪ್ರಯೋಜನವೇನು?

ಪ್ರಿ ಅಪ್ರೂವ್ಡ್ ಲೋನ್​ನ ಬಹುಮುಖ್ಯ ಪ್ರಯೋಜನವೆಂದರೆ ಸಮಯ ಉಳಿತಾಯ. ಸಾಲ ನೀಡುವ ಸಂಸ್ಥೆಗೆ ಗ್ರಾಹಕನ ಸಾಲ ಪಡೆಯುವ ಅರ್ಹತೆ ಬಗ್ಗೆ ಈಗಾಗಲೇ ಪೂರ್ತಿ ವಿವರ ತಿಳಿದಿರುವುದರಿಂದ ಸಾಲ ನೀಡಿಕೆ ಪ್ರಕ್ರಿಯೆ ವೇಗವಾಗಿ ಮುಗಿದುಹೋಗುತ್ತದೆ. ಹಣಕಾಸಿನ ತುರ್ತು ಅಗತ್ಯ ಇರುವ ಗ್ರಾಹಕರಿಗೆ ಇದು ಬಹಳ ಉತ್ತಮ ಆಯ್ಕೆಯೂ ಹೌದು.

ಸಾಮಾನ್ಯ ಸಾಲಕ್ಕಿಂತ ಕಡಿಮೆ ಬಡ್ಡಿ

ಪ್ರಿ ಅಪ್ರೂವ್ಡ್ ಲೋನ್ ಆಫರ್​ಗಳಲ್ಲಿ ಸಾಮಾನ್ಯವಾಗಿ ಬಡ್ಡಿ ದರ ಕಡಿಮೆ ಇರುತ್ತದೆ. ಸಾಮಾನ್ಯ ಸಾಲಕ್ಕೆ ಹೋಲಿಸಿದರೆ ಗ್ರಾಹಕಸ್ನೇಹಿಯಾಗಿಯೂ ಇರುತ್ತದೆ. ಇದಕ್ಕೆ ಕಾರಣವಿಷ್ಟೇ; ಈ ವಿಧಾನದ ಸಾಲ ನೀಡಿಕೆಯಲ್ಲಿ ಗ್ರಾಹಕನ ಪೂರ್ವಾಪರ ಮೊದಲೇ ಬ್ಯಾಂಕ್​ಗೆ ತಿಳಿದಿರುವುದರಿಂದ ಮತ್ತು ನೀಡುವ ಹಣದ ರಿಸ್ಕ್​ ಮಟ್ಟ ಕಡಿಮೆ ಇರುವುದು.

ಆದಾಗ್ಯೂ ಪ್ರಿ ಅಪ್ರೂವ್ಡ್ ಲೋನ್​​ ಸಿಕ್ಕಿಯೇ ಸಿಗುತ್ತದೆ ಎಂಬ ಖಾತರಿ ನೀಡಲಾಗದು. ಸಾಲ ಪಡೆಯುವವನ ಹಣಕಾಸು ಸ್ಥಿತಿ ಬದಲಾದರೆ ಸಾಲ ನೀಡಿಕೆ ಆಫರ್​ ಅನ್ನು ಬ್ಯಾಂಕ್​​ಗಳು ತಿರಸ್ಕರಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದಾಯದಲ್ಲಿ ಕುಸಿತ, ಸಾಲದ ಪ್ರಮಾಣ ಹೆಚ್ಚಳವಾದರೆ ಪ್ರಿ ಅಪ್ರೂವ್ಡ್ ಲೋನ್ ರದ್ದಾಗುವ ಸಾಧ್ಯತೆಯೂ ಇದೆ. ಪ್ರಿ ಅಪ್ರೂವ್ಡ್ ಲೋನ್​ಗೂ ಪ್ರೊಸೆಸಿಂಗ್ ಶುಲ್ಕ ಇರುತ್ತದೆ. ಹೀಗಾಗಿ ಪ್ರಿ ಅಪ್ರೂವ್ಡ್ ಲೋನ್ ಪಡೆಯುವ ಮುನ್ನ ಎಲ್ಲ ವಿವರಗಳನ್ನು ತಿಳಿದುಕೊಳ್ಳುವುದು ಉತ್ತಮ. ಬಡ್ಡಿ, ಅವಧಿ, ಪ್ರೊಸೆಸಿಂಗ್ ಶುಲ್ಕ, ಷರತ್ತುಗಳು ಮತ್ತು ನಿಬಂಧನೆಗಳು ಹೀಗೆ ಎಲ್ಲ ವಿವರಗಳನ್ನು ತಿಳಿದುಕೊಂಡೇ ಮುಂದುವರಿಯುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ