Credit Score new rules: ಸಾಲ ಸುಲಭವಾಗಿ ಪಡೆಯಲು ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು. ಈ ಸ್ಕೋರ್ ಅನ್ನು ನಿಮ್ಮ ಕ್ರೆಡಿಟ್ ಇತಿಹಾಸದ (Credit History) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ನೀವು ಎಷ್ಟು ಸಾಲ ಪಡೆಯಲು ಅರ್ಹರಿದ್ದೀರಿ ಎಂಬುದನ್ನು ಈ ಕ್ರೆಡಿಟ್ ಸ್ಕೋರ್ನಿಂದ ಕಂಡುಕೊಳ್ಳುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರೆಡಿಟ್ ಸ್ಕೋರ್ ನಿಯಮಗಳಲ್ಲಿ ಇತ್ತೀಚೆಗೆ ಬದಲಾವಣೆ ಮಾಡಿದೆ. ಅದರಂತೆ, ಸಾಲ ನೀಡುಗರು (ಬ್ಯಾಂಕ್) ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಬ್ಯೂರೋ ರೆಕಾರ್ಡ್ಗಳಲ್ಲಿ ಪ್ರತೀ 15 ದಿನಗಳಿಗೊಮ್ಮೆ ಅಪ್ಡೇಟ್ ಮಾಡಬೇಕಾಗುತ್ತದೆ. ಈ ಕ್ರಮದಿಂದಾಗಿ ಜನರು ಈಗ ಸಾಲ ತೆಗೆದುಕೊಳ್ಳುವುದು ಹೆಚ್ಚು ಸುಲಭವಾಗುತ್ತದೆ. ಗ್ರಾಹಕರಿಗೆ ಮಾತ್ರವಲ್ಲ, ಬ್ಯಾಂಕುಗಳಿಗೂ ಈ ಹೊಸ ನಿಯಮ ವರದಾನವಾಗಿದೆ. ವಂಚನೆ ಹಾಗೂ ಸಾಲ ಡೀಫಾಲ್ಟ್ ಆಗುವುದನ್ನು ತಪ್ಪಿಸಲು ಇದು ಸಹಾಯವಾಗಿದೆ. ಇಷ್ಟು ಮಾತ್ರವಲ್ಲದೆ, ವಂಚನೆ ಮತ್ತು ಸುಸ್ತಿದಾರಿಕೆಯನ್ನು ತಡೆಯುವಲ್ಲಿಯೂ ಇದು ಸಹಾಯ ಮಾಡುತ್ತದೆ. ಹಾಗಾದರೆ 2025ರ ಜನವರಿ 1ರಿಂದ ಜಾರಿಗೆ ಬಂದಿರುವ ಆರ್‌ಬಿಐನ ಈ ಹೊಸ ನಿಯಮ ಏನು ಮತ್ತು ಅದರಿಂದ ಆಗುವ ಪ್ರಯೋಜನಗಳೇನು, ಈ ಮಾಹಿತಿ ಇಲ್ಲಿದೆ…
ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಈಗ ಹೆಚ್ಚು ವೇಗ ಮತ್ತು ನಿಖರತೆ ಹೊಂದಿರುತ್ತದೆ. ಈ ಹಿಂದೆ, ಸಾಲದ ಇಎಂಐ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದರೂ, ಅದು CIBIL ಅಥವಾ ಬೇರೆ ಕ್ರೆಡಿಟ್ ಏಜೆನ್ಸಿಯ ಸ್ಕೋರ್ನಲ್ಲಿ ಅಪ್ಡೇಟ್ ಆಗಲು ವಿಳಂಬವಾಗುತ್ತಿತ್ತು. ಇದರಿಂದ, ತುರ್ತಾಗಿ ಸಾಲ ಪಡೆಯಬೇಕೆನ್ನುವವರಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ಈ ಕ್ರೆಡಿಟ್ ಸ್ಕೋರ್ ನಿಯಮದಲ್ಲಿ ಒಂದು ಮಾರ್ಪಾಡು ಮಾಡಿದೆ. ಈಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಒಂದು ತಿಂಗಳವರೆಗೆ ಕಾಯದೆ, ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಬ್ಯೂರೋಗೆ ಡೇಟಾವನ್ನು ನವೀಕರಿಸಬೇಕಾಗುತ್ತದೆ. ಈ ನಿಯಮವು ಜನವರಿ 1, 2025 ರಿಂದ ಜಾರಿಗೆ ಬಂದಿದೆ.
ನೀವು ಸಮಯಕ್ಕೆ ಸರಿಯಾಗಿ EMI ಪಾವತಿಯನ್ನು ಮಾಡಿದರೆ ಅದು 15 ದಿನದಲ್ಲಿ ನಿಮ್ಮ ಸ್ಕೋರ್ ಮೇಲೆ ಪ್ರತಿಫಲಿಸುತ್ತದೆ. ನಿಮ್ಮ ಸ್ಕೋರ್ ಹೆಚ್ಚಬಹುದು. ಬ್ಯಾಂಕುಗಳಿಗೆ ನಿಮ್ಮ ಹಳೆಯ ಸ್ಕೋರ್ ಬದಲು ಹೊಸ ಸ್ಕೋರ್ ಸಿಗುತ್ತದೆ. ಇದರಿಂದ ಕಡಿಮೆ ಬಡ್ಡಿದರ ಹಾಗು ಹೆಚ್ಚು ಮೊತ್ತದ ಸಾಲ ಸಿಗಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಪೋಸ್ಟ್ ಪೇಯ್ಡ್ ಬಿಲ್ ಮಿಸ್ ಆದ್ರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಡೀಟೇಲ್ಸ್
ಕ್ರೆಡಿಟ್ ಬ್ಯೂರೋದಲ್ಲಿ ದಾಖಲೆಗಳನ್ನು ಅಪ್ಡೇಟ್ ಮಾಡಲು ಈ ಮೊದಲು 30ರಿಂದ 40 ದಿನಗಳಾಗುತ್ತಿತ್ತು. ಒಬ್ಬ ವ್ಯಕ್ತಿ ಡೀಫಾಲ್ಟ್ ಆಗಿದ್ದರೆ, ಅದು ಕ್ರೆಡಿಟ್ ರೆಕಾರ್ಡ್ನಲ್ಲಿ ದಾಖಲಾಗಲು ಕನಿಷ್ಠ ಒಂದು ತಿಂಗಳಾದರೂ ಆಗುತ್ತಿತ್ತು. ಡೀಫಾಲ್ಟ್ ಮಾಡಿದ ವ್ಯಕ್ತಿ ಕೂಡಲೇ ಬೇರೆ ಬ್ಯಾಂಕ್ಗೆ ಹೋಗಿ ಸಾಲ ಪಡೆದುಕೊಳ್ಳಲು ಅವಕಾಶ ಇತ್ತು. ಇದರಿಂದ ಬ್ಯಾಂಕ್ಗೆ ಈ ಸಾಲವು ಎನ್ಪಿಎ ಆಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಈಗ 15 ದಿನಕ್ಕೆ ಕ್ರೆಡಿಟ್ ರೆಕಾರ್ಡ್ ಅಪ್ಡೇಟ್ ಆಗುವುದರಿಂದ ಬ್ಯಾಂಕುಗಳು ಇಂಥ ಸುಸ್ತಿದಾರರನ್ನು ಬೇಗನೇ ಪತ್ತೆ ಹಚ್ಚಿ, ಎಚ್ಚರ ವಹಿಸಲು ಸಾಧ್ಯವಾಗುತ್ತದೆ.
ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು ಅಥವಾ CIC ಗಳು ಎಂದೂ ಕರೆಯಲ್ಪಡುವ ಕ್ರೆಡಿಟ್ ಬ್ಯೂರೋಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ. ಬ್ಯಾಂಕುಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು ಮುಂತಾದ ವಿವಿಧ ಹಣಕಾಸು ಸಂಸ್ಥೆಗಳು ತಮ್ಮ ಎಲ್ಲಾ ಗ್ರಾಹಕರ ಮಾಹಿತಿಯನ್ನು ಕ್ರೆಡಿಟ್ ಬ್ಯೂರೋಗಳಿಗೆ ಅಪ್ಡೇಟ್ ಮಾಡುತ್ತವೆ. ಒಬ್ಬ ವ್ಯಕ್ತಿ ಯಾವುದೇ ಬ್ಯಾಂಕ್ನಲ್ಲಿ ಪಡೆದ ಸಾಲ, ಮತ್ಯಾವುದೋ ಬ್ಯಾಂಕ್ನಿಂದ ಪಡೆದ ಕ್ರೆಡಿಟ್ ಕಾರ್ಡ್, ಇವುಗಳ ನಿರ್ವಹಣೆ ಇತ್ಯಾದಿ ಎಲ್ಲ ಮಾಹಿತಿಯನ್ನು ಅಪ್ಡೇಟ್ ಮಾಡಲಾಗುತ್ತದೆ. ಹೀಗಾಗಿ, ಒಬ್ಬ ವ್ಯಕ್ತಿಯ ಸಮಗ್ರ ಕ್ರೆಡಿಟ್ ಹಿಸ್ಟರಿಯು ಕ್ರೆಡಿಟ್ ಬ್ಯೂರೋ ಬಳಿ ಇರುತ್ತದೆ. ಯಾವುದೇ ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳು ಈ ಡಾಟಾವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: ನಿಮ್ಮ ಬ್ಯಾಂಕ್ ಸಾಲದ ಮೇಲೆ ಕ್ರೆಡಿಟ್ ಸ್ಕೋರ್ ಪರಿಣಾಮ ಏನು? ಎಷ್ಟು ಸ್ಕೋರ್ ಇದ್ದರೆ ಉತ್ತಮ?
ಕ್ರೆಡಿಟ್ ಸ್ಕೋರ್ 300 ರಿಂದ 900 ಅಂಕಗಳವರೆಗೆ ಇರುತ್ತದೆ. 700 ಕ್ಕಿಂತ ಹೆಚ್ಚಿನ ಅಂಕಗಳನ್ನು ತುಂಬಾ ಉತ್ತಮವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಇತರ ಅಂಕಗಳು ವಿಭಿನ್ನ ಅರ್ಥಗಳನ್ನು ಸೂಚಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Thu, 20 March 25