ಭಾರತೀಯರ ಆದಾಯದ ಹೆಚ್ಚಿನ ಭಾಗ ಸಾಲಕ್ಕೆ ಚುಕ್ತಾ; ಬೇರೆ ಯಾವ್ಯಾವುದಕ್ಕೆಷ್ಟು ಖರ್ಚು? ಇಲ್ಲಿದೆ ಪಿಡಬ್ಲ್ಯುಸಿ ವರದಿ
Perfios and PwC India report on Indian consumers spending pattern: ಭಾರತದಲ್ಲಿ ಖಾಸಗಿ ಅನುಭೋಗ ಹೆಚ್ಚುತ್ತಿದೆ. ಇದರಲ್ಲಿ ಜನರು ಯಾವ್ಯಾವುದಕ್ಕೆ ಎಷ್ಟು ವ್ಯಯಿಸುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಪತ್ತೆ ಮಾಡಿದೆ. ಪಿಡಬ್ಲ್ಯುಸಿ ಇಂಡಿಯಾ ಮತ್ತು ಪರ್ಫಿಯೋಸ್ ಸಂಸ್ಥೆಗಳು ನಡೆಸಿದ ಸಮೀಕ್ಷೆ ಪ್ರಕಾರ ಶೇ. 33ರಷ್ಟು ಆದಾಯ ಸರಾಸರಿಯಾಗಿ ಸಾಲದ ಕಂತುಗಳನ್ನು ಕಟ್ಟಲು ವ್ಯಯವಾಗುತ್ತದಂತೆ. ಈ ವರದಿಯ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ...

ಬೆಂಗಳೂರು, ಫೆಬ್ರುವರಿ 19: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ತೆರಿಗೆ ರಿಯಾಯಿತಿಗಳನ್ನು ನೀಡಿದೆ. ಆರ್ಬಿಐ ರಿಪೋ ದರ ಕಡಿಮೆ ಮಾಡಿದೆ. ಈ ಕ್ರಮಗಳು ದೇಶದಲ್ಲಿ ಆಂತರಿಕ ಅನುಭೋಗ ಹೆಚ್ಚಿಸಬಹುದು ಎನ್ನುವ ನಿರೀಕ್ಷೆ ಸರ್ಕಾರದ್ದು. ಇದೇ ಹೊತ್ತಲ್ಲಿ ಪಿಡಬ್ಲ್ಯುಸಿ ಇಂಡಿಯಾ ಮತ್ತು ಪೆರ್ಫಿಯೋಸ್ ಸಂಸ್ಥೆಗಳು (Perfios and PwC India) ಸಿದ್ಧಪಡಿಸಿದ ಅಧ್ಯಯನ ವರದಿಯೊಂದು ಭಾರತೀಯರ ಅನುಭೋಗ ಪ್ರವೃತ್ತಿಯನ್ನು ದಾಖಲಿಸಲು ಯತ್ನಿಸಿದೆ. ಭಾರತದಲ್ಲಿ ಖಾಸಗಿ ಅನುಭೋಗ (private consumption) ಪ್ರಮಾಣ ಹೆಚ್ಚಿದೆಯಾದರೂ ಆ ವೆಚ್ಚ ಯಾವ್ಯಾವುದಕ್ಕೆ ಹೋಗುತ್ತದೆ ಎಂಬುದನ್ನು ಈ ವರದಿಯಲ್ಲಿ ಹೇಳಲಾಗಿದೆ. ಕುತೂಹಲದ ಅಂಶ ಎಂದರೆ, ಭಾರತೀಯರ ಶೇ. 33ರಷ್ಟು ಆದಾಯವು ಸಾಲ ಮರುಪಾವತಿಸಲೇ ಖರ್ಚಾಗಿ ಹೋಗುತ್ತದಂತೆ. ಅಂದರೆ ಸಾಲದ ಕಂತುಗಳನ್ನು ಕಟ್ಟಲು ಹೆಚ್ಚಿನ ಹಣ ವೆಚ್ಚವಾಗಿಬಿಡುತ್ತಿದೆ.
ಜನಸಾಮಾನ್ಯರು ತಮ್ಮ ಒಟ್ಟೂ ವೆಚ್ಚದಲ್ಲಿ ಶೇ. 39ರಷ್ಟನ್ನು ಅತ್ಯಗತ್ಯ ವೆಚ್ಚಗಳಿಗೆ ವಿನಿಯೋಗಿಸುತ್ತಾರೆ. ಅವಶ್ಯಕ ವೆಚ್ಚಗಳಿಗೆ ಶೇ. 32ರಷ್ಟನ್ನು ಉಪಯೋಗಿಸುತ್ತಾರೆ. ಇತರೆ ವೆಚ್ಚಗಳಲ್ಲಿ ಹೆಚ್ಚಿನ ಖರ್ಚು ಬಟ್ಟೆ ಬರೆ, ಸೌಂದರ್ಯವರ್ಧಕ ಇತ್ಯಾದಿಗಳಿಗೆ ಹೋಗುತ್ತದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಏಪ್ರಿಲ್ನಿಂದಲೇ ಟೆಸ್ಲಾ ಕಾರು ಭಾರತದಲ್ಲಿ ಮಾರಾಟ; ಬೆಲೆ ಕೇವಲ 21 ಲಕ್ಷ ರೂ?
ಊಟಕ್ಕೆ ವೆಚ್ಚ…
ಮತ್ತೊಂದು ಕುತೂಹಲದ ಸಂಗತಿ ಎಂದರೆ, ಉದ್ಯೋಗದಲ್ಲಿ ಬಡ್ತಿ ಸಿಕ್ಕು ಸಂಬಳ ಹೆಚ್ಚು ಪಡೆದಂತೆಲ್ಲಾ ಆಹಾರಕ್ಕಾಗಿ ಮಾಡುವ ವೆಚ್ಚವೂ ಅನುಗುಣವಾಗಿ ಹೆಚ್ಚುತ್ತದೆ. ಹೊರಗೆ ಹೋಗಿ ತಿನ್ನುವುದು ಅಥವಾ ಸ್ವಿಗ್ಗಿ, ಜೊಮಾಟೊದಿಂದ ಆಹಾರ ತರಿಸಿ ತಿನ್ನುವುದು ಇವೆಲ್ಲವೂ ಆಹಾರ ವೆಚ್ಚಕ್ಕೆ ಸೇರುತ್ತವೆ.
ಸಣ್ಣ ನಗರ ಮತ್ತು ದೊಡ್ಡ ನಗರವಾಸಿಗಳ ನಡುವಿನ ವೆಚ್ಚದ ಪ್ರವೃತ್ತಿಯಲ್ಲಿ ತುಸು ವ್ಯತ್ಯಾಸವನ್ನು ಗುರುತಿಸಲಾಗಿದೆ. ಮೊದಲ ಸ್ತರದ ನಗರಗಳಿಗೆ (Tier 1 city) ಹೋಲಿಸಿದರೆ ಎರಡನೇ ಸ್ತರದ ನಗರಗಳಲ್ಲಿ (Tier 2 city) ಜನರು ಮನೆ ಬಾಡಿಗೆಗೆ ಶೇ. 4.5ರಷ್ಟು ಹೆಚ್ಚು ವ್ಯಯಿಸುತ್ತಾರೆ. ಹಾಗೆಯೇ, ಔಷಧ ವೆಚ್ಚವೂ ಕೂಡ ಶೇ. 20ರಷ್ಟು ಹೆಚ್ಚು ಮಾಡುತ್ತಾರೆ. ಮೆಟ್ರೋ ನಗರಗಳ ನಿವಾಸಿಗಳ ವೆಚ್ಚ ಇನ್ನೂ ಕಡಿಮೆಯಂತೆ. ಇಲ್ಲಿ ಅಗ್ರ ಶ್ರೇಣಿ ನಗರಗಳೆಂದರೆ ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾ, ಬೆಂಗಳೂರು, ಪುಣೆ ಇವೆ.
ಎರಡನೇ ಶ್ರೇಣಿ ನಗರಗಳೆಂದರೆ ಅಹ್ಮದಾಬಾದ್, ಮೈಸೂರು, ಸೂರತ್, ಕೊಯಮತ್ತೂರು, ಇಂದೋರ್, ಜೈಪುರ, ಲಕ್ನೋ, ಆಗ್ರಾ ಇತ್ಯಾದಿ ಸೇರುತ್ತವೆ.
ಇದನ್ನೂ ಓದಿ: ಕಮಿಷನ್ ಮಾರ್ಗ ಬಿಟ್ಟ ಊಬರ್ ಆಟೊ; ರಿಕ್ಷಾಚಾಲಕರಿಗೆ ಅನುಕೂಲ; ನಮ್ಮ ಯಾತ್ರಿ ಸ್ಪರ್ಧೆ ಎದುರಿಸಲು ಊಬರ್ ಹೆಜ್ಜೆ
ಪಿಡಬ್ಲ್ಯುಸಿ ಇಂಡಿಯಾ ಮತ್ತು ಪರ್ಫಿಯೋಸ್ನ ಈ ವರದಿಗಾಗಿ ದೇಶಾದ್ಯಂತ ತಂತ್ರಜ್ಞಾನ ಕ್ಷೇತ್ರದ 30 ಲಕ್ಷ ಮಂದಿಯನ್ನು ಸಮೀಕ್ಷೆ ನಡೆಸಿ, ಅವರ ವೆಚ್ಚ ಪ್ರವೃತ್ತಿಯನ್ನು ದಾಖಲಿಸಿಕೊಳ್ಳಲಾಗಿದೆ. ಪಿಡಬ್ಲ್ಯುಸಿ ಇಂಡಿಯಾದ ಪಾರ್ಟ್ನರ್ ಆದ ಮಿಹಿರ್ ಗಾಂಧಿ ಪ್ರಕಾರ, ಈ ವರದಿಯಲ್ಲಿರುವ ಅಂಶಗಳು ದೇಶದ ಗ್ರಾಹಕರ ವರ್ತನೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತೋರಿಸುತ್ತವೆ. ಇವು ವಿವಿಧ ಉದ್ದಿಮೆಗಳು, ಸರ್ಕಾರದ ನೀತಿ ರೂಪಕರು, ಹಣಕಾಸು ಸಂಸ್ಥೆಗಳಿಗೆ ನೆರವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ