ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐನ ಜನಪ್ರಿಯ ಅಮೃತ್ ಕಳಶ್ ಸ್ಕೀಮ್ನ (SBI Amrit Kalash FD Scheme) ಕೊನೆಯ ದಿನವನ್ನು ಮುಂದೂಡಲಾಗಿದೆ. ಈ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಪಡೆಯಲು 2023 ಮಾರ್ಚ್ 31ಕ್ಕೆ ಕೊನೆಯ ದಿನವಾಗಿತ್ತು. ಕಳೆದ ವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI- State Bank of India) ತನ್ನ ಅಮೃತ ಕಳಶ್ ಯೋಜನೆಯನ್ನು ಜೂನ್ 30ರವರೆಗೂ ವಿಸ್ತರಿಸಲು ನಿರ್ಧರಿಸಿದೆ. ಅಂದರೆ ಜೂನ್ 30ರವರೆಗೂ ಹಿರಿಯ ನಾಗರಿಕರು ಎಸ್ಬಿಐನಲ್ಲಿ ಅಮೃತ್ ಕಳಸ್ ಎಫ್ಡಿ ಸ್ಕೀಮ್ ತೆರೆದು ಗರಿಷ್ಠ ಬಡ್ಡಿ ಪಡೆಯಲು ಅವಕಾಶ ಇದೆ. ಅಮೃತ್ ಕಳಶ್ ಯೋಜನೆಯಲ್ಲಿ ನಿರ್ದಿಷ್ಟ ಎಫ್ಡಿಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.10ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.60ರಷ್ಟು ಬಡ್ಡಿ ಕೊಡುತ್ತದೆ ಅಮೃತ ಕಳಶ್ ಸ್ಕೀಮ್. ಜೂನ್ 30ರವರೆಗೂ ಈ ಸ್ಕೀಮ್ ಪಡೆಯಲು ಅವಕಾಶ ಇದೆ.
ಅಮೃತ ಕಳಶ್ ಯೋಜನೆಯಲ್ಲಿ 400 ದಿನಗಳ ನಿಶ್ಚಿತ ಅವಧಿ ಠೇವಣಿಗೆ (ಎಫ್ಡಿ) ಗರಿಷ್ಠ ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.10 ಬಡ್ಡಿ ಸಿಕ್ಕರೆ, ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿ ಬರುತ್ತದೆ. 2023 ಏಪ್ರಿಲ್ 12ರಿಂದ ಈ ಎಫ್ಡಿಗೆ ಹೊಸ ಬಡ್ಡಿ ದರ ಅನ್ವಯ ಆಗುತ್ತದೆ.
ಹಿರಿಯ ನಾಗರಿಕರಷ್ಟೇ ಅಲ್ಲ, ಎಸ್ಬಿಐನ ಸಿಬ್ಬಂದಿ, ಪಿಂಚಣಿ ಪಡೆಯುವ ನಿವೃತ್ತ ಬ್ಯಾಂಕ್ ನೌಕರರು ಈ ಎಫ್ಡಿ ಸ್ಕೀಮ್ನ ಲಾಭ ಪಡೆಯಬಹುದಾಗಿದೆ. 2 ಕೋಟಿ ರೂ ಒಳಗಿನ ಠೇವಣಿಯನ್ನು ಈ ಸ್ಕೀಮ್ನ ಅಡಿಯಲ್ಲಿ ಇಡಬಹುದು.
ಎಸ್ಬಿಐ ಅಮೃತ್ ಕಳಶ್ ಎಫ್ಡಿ ಸ್ಕೀಮ್ ಈ ಬ್ಯಾಂಕ್ನ ಶಾಖಾ ಕಚೆರಿ, ಯೋನೋ ಆ್ಯಪ್ಗಳಲ್ಲಿ ಪಡೆಯಬಹುದು. ಈ ಯೋಜನೆ ನೀಡುವ ಇತರ ಸೌಲಭ್ಯಗಳೆಂದರೆ ಅವಧಿಗೆ ಮುನ್ನ ಠೇವಣಿ ಹಿಂಪಡೆಯಬಹುದು. ಹೀಗೆ ಪಡೆಯುವ ಹಣಕ್ಕೆ ಪೂರ್ಣಪ್ರಮಾಣದಲ್ಲಿ ಬಡ್ಡಿ ಸಿಗುವುದಿಲ್ಲ. ಅಂದರೆ ಕಡಿಮೆ ಬಡ್ಡಿ ಮಾತ್ರ ಸಿಗುತ್ತದೆ. ಮತ್ತೊಂದು ಲಾಭ ಎಂದರೆ ನೀವು ಇರಿಸುವ ಠೇವಣಿ ಮೊತ್ತದ ಆಧಾರವಾಗಿ ಸಾಲ ಸೌಲಭ್ಯ ಸಿಗುತ್ತದೆ.
ಇನ್ನು, ಈ ಸ್ಕೀಮ್ನಲ್ಲಿ ಇಡಲಾಗುವ ಠೇವಣಿಗಳಿಗೆ ಸಿಗುವ ಬಡ್ಡಿಯನ್ನು ತಿಂಗಳಿಗೆ ಅಥವಾ 3 ತಿಂಗಳಿಗೆ ಅಥವಾ ಅರ್ಧವರ್ಷಕ್ಕೆ ಪಾವತಿಸಲಾಗುತ್ತದೆ. ಅಥವಾ ಡೆಪಾಸಿಟ್ ಅವಧಿ ಬಳಿಕ ಮೆಚ್ಯೂರ್ ಆದಾಗ ಬಡ್ಡಿ ಕೊಡಲಾಗುತ್ತದೆ.
ಇದನ್ನೂ ಓದಿ: LIC Jeevan Tarun: 8 ವರ್ಷ ಹೂಡಿಕೆ ಮಾಡಿದರೆ 7 ಲಕ್ಷ ರೂ ರಿಟರ್ನ್ ಕೊಡುವ ಜೀವನ್ ತರುಣ್ ಸ್ಕೀಮ್
ಎಸ್ಬಿಐನ ಸರ್ವೋತ್ತಮ್ ಎಫ್ಡಿ ಸ್ಕೀಮ್ ಒಂದಿಷ್ಟು ಜನಪ್ರಿಯತೆ ಗಳಿಸುತ್ತಿದೆ. 15 ಲಕ್ಷ ರೂಗೂ ಹೆಚ್ಚು ಮೊತ್ತದ ಠೇವಣಿಗಳನ್ನು ಸ್ವೀಕರಿಸುವ ಈ ಸ್ಕೀಮ್ನಲ್ಲಿ ಗರಿಷ್ಠ ಶೇ. 7.9ರವರೆಗೂ ಬಡ್ಡಿ ಸಿಗುತ್ತದೆ.
ಈ ಸ್ಕೀಮ್ ಅಡಿಯಲ್ಲಿ ಒಂದು ವರ್ಷ ಮತ್ತು ಎರಡು ವರ್ಷ ಅವಧಿಯ ಎಫ್ಡಿಗಳಿಗೆ ಗರಿಷ್ಠ ಬಡ್ಡಿ ದರ ಸಿಗುತ್ತದೆ. ಸಾಮಾನ್ಯ ಗ್ರಾಹಕರ 1 ವರ್ಷದ ಠೇವಣಿಗೆ ಶೇ. 7.1 ಮತ್ತು 2 ವರ್ಷದ ಠೇವಣಿಗೆ ಶೇ. 7.4 ಬಡ್ಡಿ ಬರುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು (ಶೇ. 0.5) ಹೆಚ್ಚು ಬಡ್ಡಿ ಸಿಗುತ್ತದೆ.