Mutual Fund SIP: 10,000 ರೂ ಎಸ್ಐಪಿಯಿಂದ 24 ವರ್ಷದಲ್ಲಿ 4.87 ಕೋಟಿ ರೂ ಲಾಭ; ಇದು ಎಸ್ಬಿಐ ಕಾಂಟ್ರಾ ಫಂಡ್ ಧಮಾಕ
SBI Contra Fund: ಎಸ್ಬಿಐನ ಕಾಂಟ್ರಾ ಫಂಡ್ ಸ್ಕೀಮ್ ಕಳೆದ 24 ವರ್ಷದಲ್ಲಿ ಶೇ. 19ರ ಸಿಎಜಿಆರ್ ದರದಲ್ಲಿ ಬೆಳೆದಿದೆ. ಅಗಿನಿಂದ ತಿಂಗಳಿಗೆ 10,000 ರೂ ಕಟ್ಟುತ್ತಾ ಬಂದಿದ್ದರೆ ಈಗ ಸಂಗ್ರಹವಾದ ಹಣ 4.87 ಕೋಟಿ ರೂ ಆಗುತ್ತಿತ್ತು.
ಅತಿಹೆಚ್ಚು ಲಾಭ ತಂದಿರುವ ಮ್ಯೂಚುವಲ್ ಫಂಡ್ಗಳಲ್ಲಿ ಎಸ್ಬಿಐ ಕಾಂಟ್ರಾ ಫಂಡ್ (SBI Contra Fund) ಕೂಡ ಒಂದು. 1999ರ ಜುಲೈ ಮೊದಲ ವಾರ ಶುರುವಾದ ಈ ಮ್ಯೂಚುವಲ್ ಫಂಡ್ಗೆ 24 ವರ್ಷವಾಯಿತು. ಇದು ಶೇ. 19ರ ವಾರ್ಷಿಕ ದರದಲ್ಲಿ (CAGR) ಈ ಮ್ಯೂಚುವಲ್ ಫಂಡ್ ಬೆಳೆದಿದೆ. 24 ವರ್ಷದಲ್ಲಿ ಇದು ಹಲವು ಪಟ್ಟು ಬೆಳೆದಿದೆ. ಎಸ್ಬಿಐ ಕಾಂಟ್ರಾ ಫಂಡ್ನ ನ್ಯೂ ಫಂಡ್ ಆಫರ್ನಲ್ಲಿ (NFO) ಆಗ ಯಾರಾದರೂ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಹಣ 65.20 ಲಕ್ಷಕ್ಕೆ ಏರುತ್ತಿತ್ತು. ಅಷ್ಟರಮಟ್ಟಿಗೆ ಈ ಮ್ಯುಚುವಲ್ ಫಂಡ್ ಹೂಡಿಕೆ ಮೌಲ್ಯವನ್ನು ವೃದ್ಧಿಸಿದೆ.
ಅದೇ ನೀವು ಎಸ್ಬಿಐ ಕಾಂಟ್ರಾ ಫಂಡ್ನಲ್ಲಿ ಎಸ್ಐಪಿ ಯೋಜನೆಯಲ್ಲಿ ಹಣತೊಡಗಿಸಿದ್ದರೆ ಅದ್ಭುತ ಮೊತ್ತದ ಉಳಿತಾಯ ಹಣ ನಿಮ್ಮದಾಗಿರುತ್ತಿತ್ತು. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಲ್ಲಿ (ಎಸ್ಐಪಿ) ಪ್ರತೀ ತಿಂಗಳು ನೀವು 10,000 ರೂ ಹೂಡಿಕೆ ಮಾಡುತ್ತಾ ಬಂದಿದ್ದರೆ ಈ 24 ವರ್ಷದಲ್ಲಿ ಒಟ್ಟುಗೂಡುತ್ತಿದ್ದ ಸಂಪತ್ತು 4.87 ಕೋಟಿ ರೂ ಆಗುತ್ತಿತ್ತು. ಗಮನಿಸಿ, ತಿಂಗಳಿಗೆ 10,000 ರೂನಂತೆ ನೀವು 24 ವರ್ಷದಲ್ಲಿ ಕಟ್ಟುವ ಒಟ್ಟು ಮೊತ್ತ 28,80,000 ರೂ ಆಗುತ್ತದೆ. ಈ ನಿಮ್ಮ 28.8 ಲಕ್ಷ ರೂ ಮೊತ್ತ ಹೆಚ್ಚೂಕಡಿಮೆ 5 ಕೋಟಿಯಾಗಿ ಬೆಳೆದಿದೆ.
ಇದನ್ನೂ ಓದಿ: BSE 148 Years: ಆಲದ ಮರದ ಕೆಳಗೆ ಶುರುವಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ 148 ವರ್ಷಗಳ ಇಂಟರೆಸ್ಟಿಂಗ್ ಇತಿಹಾಸ
ಎಸ್ಬಿಐ ಕಾಂಟ್ರಾ ಫಂಡ್ ಕಳೆದ 3 ವರ್ಷದಲ್ಲಂತೂ ಅದ್ಭುತವಾಗಿ ಬೆಳೆದಿದೆ. ಇದರ ಡೈರೆಕ್ಟ್ ಪ್ಲಾನ್ನಲ್ಲಿ ಕಳೆದ 3 ವರ್ಷದಲ್ಲಿ ಶೇ. 41.29ರ ವಾರ್ಷಕ ದರದಲ್ಲಿ ಹಣ ಬೆಳೆದಿದೆ. ದಿನೇಶ್ ಬಾಲಚಂದ್ರನ್ ಮತ್ತು ಮೋಹಿತ್ ಜೈನ್ ಅವರು ಇದರ ಫಂಡ್ ಮ್ಯಾನೇಜರ್ಗಳಾಗಿದ್ದಾರೆ.
ಎಸ್ಬಿಐ ಕಾಂಟ್ರಾ ಫಂಡ್ ಒಟ್ಟು 11,000 ಕೋಟಿ ರೂಗೂ ಹೆಚ್ಚು ಮೊತ್ತದ ಹೂಡಿಕೆಯನ್ನು ನಿಭಾಯಿಸುತ್ತದೆ. ಇದರ ಹಣವನ್ನು ಗೇಲ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರ, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕಾಗ್ನೈಜೆಂಟ್ ಟೆಕ್ನಾಲಜಿ, ಟಾರೆಂಟ್ ಪವರ್ ಲಿ, ಪವರ್ ಗ್ರಿಡ್ ಕಾರ್ಪೊರೇಷನ್, ಎಚ್ಡಿಎಫ್ಸಿ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡಲಾಗಿದೆ. ಈ ಬಹುತೇಕ ಷೇರುಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಸಿವೆ.
ಕಾಂಟ್ರಾ ಫಂಡ್ಗಳೇಕೆ ಗಮನ ಸೆಳೆಯುತ್ತವೆ?
ಮ್ಯೂಚುವಲ್ ಫಂಡ್ಗಳಲ್ಲಿ ಕಾಂಟ್ರಾ ಫಂಡ್ಗಳ ವೈಶಿಷ್ಟ್ಯತೆ ತುಸು ಭಿನ್ನ. ಇವು ಅಲೆಗೆ ವಿರುದ್ಧವಾಗಿ ಈಜುವಂತಹವು. ಹೆಚ್ಚು ಟ್ರೆಂಡಿಂಗ್ನಲ್ಲಿ ಇಲ್ಲದ ಆದರೆ ಭವಿಷ್ಯದಲ್ಲಿ ಬೆಳೆಯುವ ಅಗಾಧ ಶಕ್ತಿ ಹೊಂದಿರುವ ಸಂಸ್ಥೆಗಳ ಷೇರುಗಳ ಮೇಲೆ ಈ ಫಂಡ್ನ ಹಣ ಹೂಡಿಕೆ ಆಗುತ್ತದೆ. ಈಗಿನ ಟ್ರೆಂಡ್ಗಿಂತ ಮ್ಯಾಕ್ರೋ ಟ್ರೆಂಡ್ ಮುಖ್ಯ ಎಂದು ಭಾವಿಸುವವರು ಮತ್ತು ಹೆಚ್ಚು ರಿಸ್ಕ್ ಇದ್ದರೂ ಲಾಭ ಹೆಚ್ಚು ಇರುವ ಸಾಧ್ಯತೆಯನ್ನು ಕಾಣುವವರು ಇಂಥ ಫಂಡ್ಗಳಲ್ಲಿ ಹಣ ತೊಡಗಿಸಿಕೊಳ್ಳುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Sun, 9 July 23