SBI Doorstep Banking: ಮನೆ ಬಾಗಿಲಲ್ಲೇ ಸಿಗುತ್ತೆ ಎಸ್ಬಿಐ ಬ್ಯಾಂಕಿಂಗ್; ಸೇವೆ ಪಡೆಯಲು ಹೀಗೆ ಮಾಡಿ
ನಗದು/ಚೆಕ್ ಸ್ವೀಕೃತಿ, ನಗದು ವಿತರಣೆ, ಗ್ರಾಹಕರ ವಿವರ ಸಂಗ್ರಹ (ಕೆವೈಸಿ), ಚೆಕ್ಪುಸ್ತಕ ಸೇವೆಗೆ ನೋಂದಣಿ, ಫಾರಂ ನಂ 15 ಎಚ್ ಸ್ವೀಕೃತಿ, ಎಫ್ಡಿ ಪ್ರಮಾಣ ಪತ್ರ ವಿತರಣೆ, ಜೀವಂತ ಪ್ರಮಾಣ ಪತ್ರ ಸ್ವೀಕೃತಿ ಸೇರಿದಂತೆ ಹಲವು ಜನಪ್ರಿಯ ಸೇವೆಗಳನ್ನು ಎಸ್ಬಿಐ ಮನೆ ಬಾಗಿಲಿಗೇ ಒದಗಿಸುತ್ತಿದೆ.
ಸುಮಾರು 2 ವರ್ಷಗಳ ಹಿಂದೆ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಪ್ರಯತ್ನ ಅರಂಭಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಮತ್ತಷ್ಟು ಆಯ್ಕೆಗಳೊಂದಿಗೆ ಜನರ ಮುಂದೆ ಬಂದಿದೆ. ಅಂಗವಿಕಲರು (disabled individuals), ಹಿರಿಯ ನಾಗರಿಕರು (senior citizens) ಹಣ ಪಡೆಯಲು ಎಟಿಎಂ ಅಥವಾ ಬ್ಯಾಂಕ್ ಶಾಖೆಗೆ ತೆರಳುವುದನ್ನು ತಪ್ಪಿಸಲು ಎಸ್ಬಿಐ ಈ ಯೋಜನೆ ಜಾರಿಗೊಳಿಸಿತ್ತು. ಕೋವಿಡ್ ಸಾಂಕ್ರಾಮಿಕದ ಸಂದರ್ಭದ ಲಾಕ್ಡೌನ್ ವೇಳೆ ಅನುಷ್ಠಾನಕ್ಕೆ ಬಂದಿದ್ದ ಈ ಯೋಜನೆ ನಂತರದ ದಿನಗಳಲ್ಲಿ ಜನಪ್ರಿಯವಾಗಿತ್ತು. ನಗದು/ಚೆಕ್ ಸ್ವೀಕೃತಿ, ನಗದು ವಿತರಣೆ, ಗ್ರಾಹಕರ ವಿವರ ಸಂಗ್ರಹ (ಕೆವೈಸಿ), ಚೆಕ್ಪುಸ್ತಕ ಸೇವೆಗೆ ನೋಂದಣಿ, ಫಾರಂ ನಂ 15 ಎಚ್ ಸ್ವೀಕೃತಿ, ಎಫ್ಡಿ ಪ್ರಮಾಣ ಪತ್ರ ವಿತರಣೆ, ಜೀವಂತ ಪ್ರಮಾಣ ಪತ್ರ ಸ್ವೀಕೃತಿ ಸೇರಿದಂತೆ ಹಲವು ಜನಪ್ರಿಯ ಸೇವೆಗಳನ್ನು ಎಸ್ಬಿಐ ಮನೆ ಬಾಗಿಲಿಗೇ ಒದಗಿಸುತ್ತಿದೆ.
ಆ್ಯಪ್ ಮೂಲಕ ಸೇವೆ ಪಡೆಯಲು ಏನು ಮಾಡಬೇಕು?
ಗ್ರಾಹಕರು ಮೊದಲಿಗೆ ‘ಎಸ್ಬಿಐ ಡೋರ್ಸ್ಟೆಪ್ ಬ್ಯಾಂಕಿಂಗ್ ಸರ್ವೀಸ್’ಗೆ ನೋಂದಣಿ ಮಾಡಿಕೊಳ್ಳಬೇಕು. ನಂತರ ‘ಎಸ್ಬಿಐ ಡೋರ್ಸ್ಟೆಪ್ ಬ್ಯಾಂಕಿಂಗ್ ಆ್ಯಪ್’ ಅನ್ನು ಇನ್ಸ್ಟಾಲ್ ಮಾಡಬೇಕು. ಆ್ಯಪ್ಗೆ ಲಾಗಿನ್ ಆಗಿ ವಿಳಾಸವನ್ನು ಅಪ್ಡೇಟ್ ಮಾಡಬೇಕು. ಹಣ ವಿತ್ಡ್ರಾಗೆ ಆ್ಯಪ್ ಮೂಲಕ ಮನವಿ ಸಲ್ಲಿಸಬಹುದು. ಮನವಿ ಸಲ್ಲಿಸುವ ಮುನ್ನ ಖಾತೆ ಸಂಖ್ಯೆಯ ಕೊನೆಯ ಆರು ಅಂಕೆಗಳನ್ನು ನಮೂದಿಸಬೇಕು. ಬಳಿಕ ಮೊಬೈಲ್ಗೆ ಬಂದ ಒಟಿಪಿಯನ್ನು ನಮೂದಿಸಬೇಕಾಗುತ್ತದೆ. ನಂತರ ಎಷ್ಟು ಮೊತ್ತದ ಹಣ ಬೇಕು? ಯಾವ ಮಾದರಿಯ ಟ್ರಾನ್ಸಾಕ್ಷನ್ ಬೇಕು ಎಂಬುದನ್ನು ಉಲ್ಲೇಖಿಸಬೇಕು.
ಒಂದು ತಿಂಗಳಲ್ಲಿ ಎಷ್ಟು ಬಾರಿ ಸಿಗುತ್ತೆ ಸೇವೆ?
ಒಂದು ತಿಂಗಳ ಅವಧಿಯಲ್ಲಿ ಅಂಗವಿಕಲರಿಗಾದರೆ ಮೂರು ಬಾರಿ ಉಚಿತ ಸೇವೆ ನೀಡಲಾಗುತ್ತದೆ. ಮೂರು ಬಾರಿಗಿಂತ ಹೆಚ್ಚು ಬಾರಿ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ಪಡೆಯುವುದಿದ್ದರೆ ಹಣಕಾಸು ಮತ್ತು ಹಣಕಾಸೇತರ ಸೇವೆಗಳಿಗೆ 75 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಗ್ರಾಹಕರಿಗೆ ಸೇವೆ ಪಡೆದ ಬಗ್ಗೆ ಎಸ್ಎಂಎಸ್ ಮೂಲಕ ದೃಢೀಕರಣದ ಸಂದೇಶ ಬರುತ್ತದೆ. ಎಸ್ಬಿಐನಲ್ಲಿರುವ ಖಾತೆಗೆ ಕೆವೈಸಿ (ಗ್ರಾಹಕರ ವಿವರ) ಸಮರ್ಪಕವಾಗಿ ಅಪ್ಡೇಟ್ ಆಗಿರಬೇಕು. ಸಮರ್ಪಕ ಕೆವೈಸಿ ದಾಖಲೆ ಕೊಟ್ಟಿರುವವರು ಮತ್ತು ಖಾತೆ ಇರುವ ಶಾಖೆಯಿಂದ 5 ಕಿಮೀ ಅಂತರದಲ್ಲಿ ವಾಸವಿರುವವರಿಗೆ ಮಾತ್ರ ಈ ಸೇವೆ ಸಿಗುತ್ತದೆ.
ದೂರವಾಣಿ ಕರೆ ಮಾಡಿ ಸೇವೆ ಪಡೆಯಲು ಅವಕಾಶ ಇದೆಯೇ?
ಬ್ಯಾಂಕ್ ಕಾರ್ಯನಿರ್ವಹಣೆಯ ದಿನಗಳಂದು ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ಟೋಲ್ಫ್ರೀ ಸಂಖ್ಯೆ 1800 1111 03 ಕರೆ ಮಾಡಿ, ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆಗೆ ನೋಂದಣಿ ಮಾಡಿಕೊಳ್ಳಬಹುದು. ಖಾತೆಯಿರುವ ಬ್ರಾಂಚ್ನಲ್ಲಿ ನಿಮ್ಮ ಮನವಿಯನ್ನು ನೋಂದಾಯಿಸಲಾಗುತ್ತದೆ. ಹಣಕಾಸು ವಹಿವಾಟು ಆಗಿದ್ದರೆ 100 ರೂ ಹಾಗೂ ಜಿಎಸ್ಟಿ, ನಗದು ಅಲ್ಲದ ವಹಿವಾಟು ಆಗಿದ್ದರೆ 60 ರೂ ಹಾಗೂ ಜಿಎಸ್ಟಿ ಶುಲ್ಕ ವಿಧಿಸಲಾಗುತ್ತದೆ. ಈ ಸೇವೆಯಡಿ ಒಂದು ದಿನದಲ್ಲಿ 20,000 ರೂ. ನಗದು ಜಮೆ ಅಥವಾ ಸ್ವೀಕೃತಿ ಸಾಧ್ಯ.
ದೂರವಾಣಿ ಕರೆಯ ಮೂಲಕ ಸೇವೆ ಪಡೆಯಲು ಇಚ್ಛಿಸಿದ್ದಲ್ಲಿ ಅನುಸರಿಸಬೇಕಾದ ವಿಧಾನ ಇಲ್ಲಿದೆ;
- ಈ ಸೇವೆ ಪಡೆದುಕೊಳ್ಳಲು ಇಚ್ಛಿಸುವ ಗ್ರಾಹಕರು ನಿಮ್ಮ ನೋಂದಾಯಿತ ಮೊಬೈಲ್ಸಂಖ್ಯೆಯಿಂದ 1800111103 ಸಂಖ್ಯೆಗೆ ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ನೋಂದಾಯಿಸಿಕೊಳ್ಳಿ.
- ಕಾಲ್ ಕನೆಕ್ಟ್ ಆದ ನಂತರ ನಿಮ್ಮ ಉಳಿತಾಯ ಅಥವಾ ಚಾಲ್ತಿ ಖಾತೆಯ ಕೊನೆಯ 4 ಅಂಕಿಗಳನ್ನು ನಮೂದಿಸಬೇಕು. ಈ ಪ್ರಕ್ರಿಯೆ ಯಶಸ್ವಿಯಾದ ನಂತರ ನಿಮ್ಮ ಕರೆಯನ್ನು ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಸ್ವೀಕರಿಸುತ್ತಾರೆ. ಅಲ್ಲಿ ಮತ್ತೊಮ್ಮೆ ನಿಮ್ಮ ವಿವರಗಳನ್ನು ಪರಿಶೀಲಿಸಲಾಗುತ್ತದೆ.
- ನೀವು ಬೆಳಿಗ್ಗೆ 9ರಿಂದ ಸಂಜೆ 5ರ ನಡುವೆ ಸೇವೆ ಪಡೆದುಕೊಳ್ಳುವ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಕೋರಿಕೆಯನ್ನು ಬ್ಯಾಂಕ್ ಒಪ್ಪಿಕೊಂಡ ನಂತರ ನಿಮ್ಮ ಮೊಬೈಲ್ಗೆ ದೃಢೀಕರಣದ ಎಸ್ಎಂಎಸ್ ಬರುತ್ತದೆ.
- ನಿಮ್ಮ ಮನೆಗೆ ಬರುವ ಬ್ಯಾಂಕ್ ಪ್ರತಿನಿಧಿ (Doorstep Banking Agent) ನಿಮಗೆ ಕರೆ ಮಾಡಿ ಸಮಯ ನಿಗದಿಪಡಿಸಿಕೊಳ್ಳುತ್ತಾರೆ. ನಿಗದಿತ ಸಮಯದಲ್ಲಿ ಅವರು ನಿಮ್ಮ ಮನೆಗೆ ಬಂದು ತಮ್ಮ ಗುರುತಿನ ಚೀಟಿ ಮತ್ತು ಬ್ಯಾಂಕ್ನ ಅಧಿಕೃತ ಪತ್ರ ತೋರಿಸಿ ಪರಿಚಯಿಸಿಕೊಳ್ಳುತ್ತಾರೆ. ನಿಮ್ಮ ಗುರುತಿನಚೀಟಿ ಮತ್ತು ಬ್ಯಾಂಕ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುತ್ತಾರೆ.
- ಬ್ಯಾಂಕ್ ಪ್ರತಿನಿಧಿ ತಮ್ಮ ಬಳಿಯಿರುವ ಮೊಬೈಲ್ ಆ್ಯಪ್ನಲ್ಲಿ ಗ್ರಾಹಕರಿಗೆ ಬ್ಯಾಂಕ್ನಿಂದ ಬಂದಿರುವ ಎಸ್ಎಂಎಸ್ನಲ್ಲಿರುವ ಕೋಡ್ ನಮೂದಿಸುತ್ತಾರೆ. ನಂತರ ಗ್ರಾಹಕರು ಕೋರಿರುವ ಬ್ಯಾಂಕಿಂಗ್ ಸೇವೆ ಒದಗಿಸುತ್ತಾರೆ. ವಹಿವಾಟು ಪೂರ್ಣಗೊಂಡ ನಂತರ ಗ್ರಾಹಕರಿಗೆ ಮತ್ತೊಮ್ಮೆ ದೃಢೀಕರಣದ ಎಸ್ಎಂಎಸ್ ಬರುತ್ತದೆ.
- ಅಪ್ರಾಪ್ತರ ಖಾತೆಗಳು, ಜಂಟಿ ಖಾತೆಗಳಿಗೆ ಈ ಸೇವೆ ಸಿಗುವುದಿಲ್ಲ.