ಚಿನ್ನ, ಬೆಳ್ಳಿಗೆ ಸಾಲ; ಎಲ್​ಟಿವಿ ಹೆಚ್ಚಳ ಇತ್ಯಾದಿ ಆರ್​ಬಿಐನ ಹೊಸ ಮಾರ್ಗಸೂಚಿ ಗಮನಿಸಿ…

New RBI guidelines on gold and silver loans: ಚಿನ್ನ ಮತ್ತು ಬೆಳ್ಳಿಗಳನ್ನು ಒತ್ತೆ ಇಟ್ಟು ನೀಡಲಾಗುವ ಸಾಲಗಳ ವಿಚಾರದಲ್ಲಿ ಆರ್​ಬಿಐ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಭರಣಗಳಿಗೆ ಹೆಚ್ಚು ಸಾಲ ನೀಡಲಾಗುತ್ತದೆ. ಕಡಿಮೆ ಮೊತ್ತದ ಸಾಲಕ್ಕೆ ಬೆಳ್ಳಿ ಮತ್ತು ಚಿನ್ನದ ಮೌಲ್ಯಕ್ಕೆ ಹೆಚ್ಚಿನ ಸಾಲ ಕೊಡಲಾಗುತ್ತದೆ. 2.5 ಲಕ್ಷ ರೂವರೆಗಿನ ಸಾಲಕ್ಕೆ ಎಲ್​ಟಿವಿಯನ್ನು ಶೇ. 75ರಿಂದ ಶೇ. 85ಕ್ಕೆ ಏರಿಸಲಾಗಿದೆ.

ಚಿನ್ನ, ಬೆಳ್ಳಿಗೆ ಸಾಲ; ಎಲ್​ಟಿವಿ ಹೆಚ್ಚಳ ಇತ್ಯಾದಿ ಆರ್​ಬಿಐನ ಹೊಸ ಮಾರ್ಗಸೂಚಿ ಗಮನಿಸಿ...
ಚಿನ್ನದ ಮೇಲೆ ಸಾಲ

Updated on: Oct 28, 2025 | 6:21 PM

ನವದೆಹಲಿ, ಅಕ್ಟೋಬರ್ 28: ಬೆಳ್ಳಿ ಬೆಲೆ ಇತ್ತೀಚೆಗೆ ಸಾಕಷ್ಟು ಏರಿಕೆ ಪಡೆಯುತ್ತಿದ್ದು, ಪ್ರಮುಖ ಸ್ವತ್ತೆಂದು ಪರಿಗಣಿತವಾಗಿದೆ. ಬ್ಯಾಂಕುಗಳಲ್ಲಿ ಸಾಲಕ್ಕೆ ಚಿನ್ನದಂತೆ (Gold) ಬೆಳ್ಳಿಯನ್ನೂ ಒತ್ತೆ ಇಡಲು ಅವಕಾಶ ನೀಡಲಾಗುತ್ತಿದೆ. ಈ ಸಂಬಂಧ ಆರ್​ಬಿಐ (RBI) ಹೊಸ ಮಾರ್ಗಸೂಚಿ ನೀಡಿದೆ. ಚಿನ್ನ ಮತ್ತು ಬೆಳ್ಳಿಗಳನ್ನು ಅಡಮಾನವಾಗಿ ಇಟ್ಟು ಸಾಲ ನೀಡುವ ಸಂಬಂಧ ಆರ್​ಬಿಐ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಸಣ್ಣ ಸಾಲಗಳಿಗೆ ಹೆಚ್ಚು ಎಲ್​ಟಿವಿ

ಎಲ್​ಟಿವಿ ಎಂದರೆ ಲೋನ್ ಟು ವ್ಯಾಲ್ಯೂ. ಅಂದರೆ ಚಿನ್ನ ಮತ್ತು ಬೆಳ್ಳಿಯ ನಿರ್ದಿಷ್ಟ ಮೌಲ್ಯಕ್ಕೆ ನೀಡುವ ಸಾಲದ ಮೊತ್ತ. 2.5 ಲಕ್ಷ ರೂವರೆಗಿನ ಸಾಲಕ್ಕೆ ಎಲ್​ಟಿವಿಯನ್ನು ಶೇ. 75ರಿಂದ ಶೇ. 85ಕ್ಕೆ ಹೆಚ್ಚಿಸಲಾಗಿದೆ.

ನೀವು ಒತ್ತೆ ಇಡುವ ಚಿನ್ನ ಅಥವಾ ಬೆಳ್ಳಿಯ ಮೌಲ್ಯ 2 ಲಕ್ಷ ರೂ ಇದ್ದರೆ, ನಿಮಗೆ 1,70,000 ರೂವರೆಗೂ ಸಾಲ ಪಡೆಯುವ ಅವಕಾಶ ಇರುತ್ತದೆ.

ಇದನ್ನೂ ಓದಿ: ದಾಖಲೆ ಇಲ್ಲದೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಲು ಅವಕಾಶ? ಆಭರಣ ಖರೀದಿಸುವ ಮುನ್ನ ಇದು ತಿಳಿದಿರಿ…

2.5 ಲಕ್ಷ ರೂನಿಂದ 5 ಲಕ್ಷ ರೂ ಸಾಲ ಪಡೆಯುತ್ತಿದ್ದರೆ ಚಿನ್ನ ಮತ್ತು ಬೆಳ್ಳಿಯ ಶೇ. 80ರಷ್ಟು ಮೌಲ್ಯವನ್ನು ಪರಿಗಣಿಸಲಾಗುತ್ತದೆ. ಇನ್ನು, ಐದು ಲಕ್ಷ ರೂ ಮೇಲ್ಪಟ್ಟ ಸಾಲಗಳಿಗೆ ಶೇ. 75ರಷ್ಟು ಮೌಲ್ಯವನ್ನು ಪರಿಗಣಿಸಲಾಗುತ್ತದೆ.

ಉದಾಹರಣೆಗೆ ನೀವು 6 ಲಕ್ಷ ರೂ ಸಾಲ ಪಡೆಯಬೇಕೆಂದರೆ ಕನಿಷ್ಠ ಎಂಟು ಲಕ್ಷ ರೂ ಮೌಲ್ಯದ ಚಿನ್ನಾಭರಣ ಅಥವಾ ಬೆಳ್ಳಿಯ ವಸ್ತುಗಳನ್ನು ಅಡ ಇಡಬೇಕಾಗುತ್ತದೆ.

ಒತ್ತೆ ಇಡುವ ಚಿನ್ನ, ಬೆಳ್ಳಿಗೆ ಮಿತಿ

ಆರ್​ಬಿಐ ಮಾರ್ಗಸೂಚಿ ಪ್ರಕಾರ ಚಿನ್ನದ ಬಿಸ್ಕತ್, ಬೆಳ್ಳಿ ಬಾರ್​ಗಳನ್ನು ಗಿರವಿ ಇಟ್ಟು ಸಾಲ ಪಡೆಯಲು ಅವಕಾಶ ಇರುವುದಿಲ್ಲ. ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಕಾಯಿನ್, ದೀಪ, ಬಟ್ಟಲು ಇತ್ಯಾದಿಯನ್ನು ಅಡವಿಡಬಹುದು. ಸಿಲ್ವರ್ ಕಾಯಿನ್ ಇಡಬಹುದು.

ಒತ್ತೆ ಇಡಲು ಮಿತಿ

  • ಚಿನ್ನಾಭರಣಕ್ಕೆ 1 ಕಿಲೋ ಮಿತಿ
  • ಗೋಲ್ಡ್ ಕಾಯಿನ್ 50 ಗ್ರಾಮ್
  • ಬೆಳ್ಳಿ ಆಭರಣಗಳು 10 ಕಿಲೋ
  • ಬೆಳ್ಳಿ ಕಾಯಿನ್ 500 ಗ್ರಾಮ್

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಇಳಿಯುತ್ತಿರುವುದು ಯಾಕೆ? ಇನ್ನೆಷ್ಟು ದಿನ ಇರಲಿದೆ ಈ ಇಳಿಕೆ?

ಚಿನ್ನ ಮತ್ತು ಬೆಳ್ಳಿ ಒತ್ತೆ ಇಟ್ಟು ಪಡೆಯುವ ಸಾಲವನ್ನು ತೀರಿಸಿದ ದಿನವೇ ಅವನ್ನು ಮರಳಿಸಬೇಕು ಎನ್ನುವ ನಿಯಮ ಮಾಡಲಾಗಿದೆ. ಆವತ್ತೇ ಆಗದಿದ್ದರೂ ಏಳು ಕಾರ್ಯದಿನದೊಳಗೆ ನೀಡಬೇಕು. ತಪ್ಪಿದಲ್ಲಿ, ದಿನಕ್ಕೆ 5,000 ರೂನಂತೆ ಪರಿಹಾರವನ್ನು ಬ್ಯಾಂಕುಗಳು ನೀಡಬೇಕಾಗುತ್ತದೆ. ಆರ್​ಬಿಐನ ಹೊಸ ಮಾರ್ಗಸೂಚಿಗಳು ಮುಂದಿನ ಹಣಕಾಸು ವರ್ಷದಿಂದ (2026ರ ಏಪ್ರಿಲ್ 1) ಜಾರಿಗೆ ಬರುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ