2023-24ರ ಸಾಲಿನ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನ (Sovereign Gold Bond Scheme) ಎರಡನೇ ಸರಣಿಯ ಆಫರ್ ಇಂದು ಶುರುವಾಗಿದೆ. ಸಾರ್ವಜನಿಕರು ಈ ಸ್ಕೀಮ್ ಪಡೆಯಲು ಇಂದಿನಿಂದ 6 ದಿನಗಳ ಕಾಲ ಅವಕಾಶ ಇರುತ್ತದೆ. ಸೆಪ್ಟೆಂಬರ್ 15ರವರೆಗೂ ಸಬ್ಸ್ಕ್ರಿಪ್ಚನ್ ತೆರೆದಿರುತ್ತದೆ. ಈ ಸ್ಕೀಮ್ನಲ್ಲಿ ನೀವು ಇವತ್ತಿನ ಮಾರುಕಟ್ಟೆ ಆಧಾರಿತವಾಗಿ ನಿಗದಿತವಾದ ದರದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ನೀವು ಖರೀದಿಸುವ ಚಿನ್ನವು ಭೌತಿಕ ಸ್ವರೂಪದಲ್ಲಿ ಇರುವುದಿಲ್ಲ. ಎಲೆಕ್ಟ್ರಾನಿಕ್ ರೂಪದಲ್ಲಿದ್ದು ಮೆಚ್ಯೂರ್ ಆದಾಗ ಚಿನ್ನದ ಬದಲು ಆಗಿನ ಚಿನ್ನದ ಮೌಲ್ಯದ ಹಣವನ್ನು ಪಡೆಯಬಹುದು.
ಎರಡನೇ ಸರಣಿಯ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ನೀವು ಒಂದು ಗ್ರಾಮ್ಗೆ 5,923 ರೂ ಬೆಲೆಯಂತೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆ ಕನಿಷ್ಠ ಒಂದು ಗ್ರಾಂ ಆದರೂ ಇರಬೇಕು. ಗರಿಷ್ಠ 4 ಕಿಲೋವರೆಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಅವಕಾಶ ಇರುತ್ತದೆ.
ನೀವು ಆನ್ಲೈನ್ನಲ್ಲಿ ಹಣ ಪಾವತಿಸಿದರೆ ಒಂದು ಗ್ರಾಂಗೆ 50 ರೂ ರಿಯಾಯಿತಿ ಸಿಗುತ್ತದೆ. ಅಂದರೆ ಒಂದು ಗ್ರಾಮ್ಗೆ 5,873 ರೂನಂತೆ ಹೂಡಿಕೆ ಮಾಡಬಹುದು.
ಈ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ನೀವು ಪಡೆಯುವ ಬಾಂಡ್ಗಳು 8 ವರ್ಷಗಳ ಬಳಿಕ ಮೆಚ್ಯೂರ್ ಆಗುತ್ತವೆ. ಆದರೆ, 5 ವರ್ಷದ ಬಳಿಕ ನೀವು ಇಚ್ಛಿಸಿದರೆ ಬಾಂಡ್ ಅನ್ನು ಹಿಂಪಡೆಯಬಹುದು.
ನಿಮ್ಮ ಬಾಂಡ್ ಮೆಚ್ಯೂರ್ ಆದ ದಿನಾಂಕ್ಕೆ ಹಿಂದಿನ ಮೂರು ದಿನಗಳು ಚಿನ್ನದ ಸರಾಸರಿ ಬೆಲೆ ಅನ್ವಯ ಆಗುತ್ತದೆ. ಇವತ್ತು 5,923 ರೂ ಬೆಲೆಯಂತೆ 100 ಗ್ರಾಂ ಚಿನ್ನದ ಮೇಲೆ 5,92,300 ರೂ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಎಂಟು ವರ್ಷದ ಬಳಿಕ ಒಂದು ಚಿನ್ನದ ಬೆಲೆ 10,000 ರೂ ಆಗಿದ್ದರೆ, ನಿಮ್ಮ ಹೂಡಿಕೆ 10,00,000 ರೂನಷ್ಟು ಬೆಳೆದಿರುತ್ತದೆ. ನಿಮ್ಮ ಹೂಡಿಕೆ ನಗದು ರೂಪದಲ್ಲಿ ನಿಮ್ಮ ಕೈಸೇರುತ್ತದೆ.
ಇದನ್ನೂ ಓದಿ: ಸಾವರಿನ್ ಗೋಲ್ಡ್ ಬಾಂಡ್; ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಆರ್ಬಿಐನಿಂದ ವೇಳಾಪಟ್ಟಿ ಬಿಡುಗಡೆ
ಇದರ ಜೊತೆಗೆ ನಿಮ್ಮ ಹೂಡಿಕೆ ಮೇಲೆ ಶೇ. 2.5ರ ವಾರ್ಷಿಕ ಬಡ್ಡಿದರವೂ ನಿಮಗೆ ಸಿಗುತ್ತದೆ. ಈ ಬಡ್ಡಿಹಣ 6 ತಿಂಗಳಿಗೊಮ್ಮೆ ನಿಮಗೆ ಸಿಗುತ್ತಿರುತ್ತದೆ. ಈ ಬಡ್ಡಿಹಣಕ್ಕೆ ತೆರಿಗೆ ಅನ್ವಯ ಆಗುತ್ತದೆಯಾದರೂ ಬಾಂಡ್ ಮೆಚ್ಯೂರ್ ಆದ ಬಳಿಕ ಸಿಗುವ ಲಾಭಕ್ಕೆ ತೆರಿಗೆ ಹಾಕಲಾಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ