
ಷೇರು ಮಾರುಕಟ್ಟೆ (Stock Market) ಕಳೆದ ಒಂದು ವರ್ಷದಿಂದ ಸಿಕ್ಕಾಪಟ್ಟೆ ವಿಕ್ಷಿಪ್ತ ಹಾಗೂ ಚಂಚಲ (Volatile) ಎನಿಸಿದೆ. ಸಾಕಷ್ಟು ಏರಿಳಿತಗಳನ್ನು ಕಾಣುತ್ತಿದೆ. ಷೇರುಗಳ ಅರ್ಹತೆ ಮೀರಿದ ಮೌಲ್ಯ (over-valued), ಜಾಗತಿಕ ವಿದ್ಯಮಾನಗಳು, ಕಾರ್ಪೊರೇಟ್ ಲಾಭ ಗಳಿಕೆಯಲ್ಲಿ ಏರುಪೇರು ಇತ್ಯಾದಿ ಹಲವು ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬಿದ್ದಿವೆ. ಒಂದು, ಒಂದೂವರೆ ವರ್ಷದ ಹಿಂದೆ ಷೇರುಪೇಟೆಯನ್ನು ಮೊದಲ ಬಾರಿಗೆ ಕಂಡವರಿಗೆ ಅದೊಂದು ಮನಿ ಮೆಷಿನ್ನಂತೆ ಭಾಸವಾಗಿದ್ದಿರಬಹುದು. ಈಗ ಆರೇಳು ತಿಂಗಳ ಹಿಂದಿನಿಂದ ಷೇರುಪೇಟೆಯನ್ನು ಕಂಡವರಿಗೆ ಅದು ಸಂಪತ್ತು ಮಾಯವಾಗುವ ಪೆಟ್ಟಿಗೆಯಂತೆ ಕಂಡಿದ್ದೀತು. ಆದರೆ, ಹಲವಾರು ವರ್ಷಗಳಿಂದ ಷೇರು ಮಾರುಕಟ್ಟೆಯನ್ನು ಹತ್ತಿರದಿಂದ ನೋಡಿದವರಿಗೆ ಯಾವ ಏರಿಳಿತವೂ ಕಂಗೆಡಿಸದೆ, ಹುಬ್ಬೇರಿಸದು. ಯಾವ ಷೇರು ಕೊಳ್ಳಬೇಕು, ಕೊಂಡ ಷೇರನ್ನು ಯಾವಾಗ ಮಾರಬೇಕು ಇತ್ಯಾದಿ ಹಲವು ವಿಷಯಗಳು ಬಹುತೇಕ ಕರಗತವಾಗಿರುತ್ತವೆ. ಹೂಡಿಕೆಗಳ ಮೂಲಕ ಹಣ ಮಾಡುವ ಕೆಲ ತಂತ್ರಗಳನ್ನು ಅನುಭವಿಗಳು ಹಂಚಿಕೊಂಡಿದ್ದಾರೆ. ಇಂಥ ಕೆಲವು ಮುಂದಿವೆ:
ನೀವು ಭವಿಷ್ಯಕ್ಕಾಗಿ ಒಂದಷ್ಟು ಹಣ ಮಾಡಬೇಕು ಎನ್ನುವ ಮನಸ್ಸು ಇದ್ದರೆ, ನೀವು ಸಾಧ್ಯವಾದಷ್ಟೂ ದೀರ್ಘಾವಧಿ ಹೂಡಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ನೀವು ಹೂಡಿಕೆ ಮಾಡಿದ ಷೇರು ಕೆಲವೊಮ್ಮೆ ನೆಗಟಿವ್ ರಿಟರ್ನ್ ಕೊಟ್ಟರೂ ತಲೆ ಕೆಡಿಸಿಕೊಳ್ಳಬಾರದು. ಒಂದು ಷೇರಿನ ಮೇಲೆ ಹೂಡಿಕೆ ಮಾಡುವ ಮುನ್ನ ಆ ಕಂಪನಿಯ ಹಣಕಾಸು ಪರಿಸ್ಥಿತಿ, ಮ್ಯಾನೇಜ್ಮೆಂಟ್ ಇತ್ಯಾದಿ ಅಂಶಗಳನ್ನು ಅವಲೋಕಿಸಿ.
ಮಾರುಕಟ್ಟೆ ಚಂಚಲತೆಯಲ್ಲಿದ್ದಾಗ ಹೆಚ್ಚಿನ ಷೇರುಗಳು ಕುಸಿಯುತ್ತವೆ. ಈ ಸಂದರ್ಭದಲ್ಲಿ ಉತ್ತಮ ಷೇರುಗಳ ಬೆಲೆ ಕಡಿಮೆ ಮಟ್ಟಕ್ಕೆ ಇಳಿದಾಗ ಅದನ್ನು ಖರೀದಿಸುವುದು ಉತ್ತಮ.
ಇದನ್ನೂ ಓದಿ: ಈ ವರ್ಷ ಸೆನ್ಸೆಕ್ಸ್ ಎಷ್ಟು ಅಂಕ ಹೆಚ್ಚುತ್ತೆ? ಮಾರ್ಗನ್ ಸ್ಟಾನ್ಲೀ ಪ್ರಕಾರ 82,000ಕ್ಕೆ ಏರಿಕೆ
ನೀವು ಯಾವ ಷೇರು ಖರೀದಿಸಬೇಕು ಎನ್ನುವ ಗೊಂದಲ ಇದ್ದರೆ, ಅಥವಾ ವ್ಯವಹಾರಕ್ಕೆ ಹೊಸಬರಾಗಿದ್ದರೆ ನಿಮ್ಮ ಮೊದಲ ಹೆಜ್ಜೆಯು ಪಾಸಿವ್ ಇನ್ವೆಸ್ಟಿಂಗ್ ಆಗಿರಬೇಕು. ಅಂದರೆ, ಇಂಡೆಕ್ಸ್ ಫಂಡ್, ಇಟಿಎಫ್ಗಳಲ್ಲಿ ಹಣ ಹೂಡಿಕೆ ಮಾಡಬಹುದು.
ನೀವು ಷೇರುಪೇಟೆಗೆ ಹೊಸಬರಾಗಿದ್ದು, ಏನೂ ಗೊತ್ತಿಲ್ಲ, ಆದರೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಎಂದಿದ್ದರೆ ಆಗ ಆ್ಯಕ್ಟಿವ್ ಮ್ಯುಚುವಲ್ ಫಂಡ್ಗಳನ್ನು ಆಯ್ದುಕೊಳ್ಳಬಹುದು. ಇಲ್ಲಿ ಫಂಡ್ ಮ್ಯಾನೇಜರ್ಗಳು ತಮ್ಮ ಅನುಭವ, ಕೌಶಲ್ಯದಿಂದ ಷೇರುಗಳ ಮೇಲೆ ಹೂಡಿಕೆ ಮಾಡಿ ಗರಿಷ್ಠ ರಿಟರ್ನ್ ತರಲು ಯೋಜಿಸುತ್ತಾರೆ. ಇಂಥ ಆ್ಯಕ್ಟಿವ್ ಫಂಡ್ಗಳಲ್ಲಿ ಕನಿಷ್ಠ ನಾಲ್ಕೈದು ವರ್ಷವಾದರೂ ನೀವು ಹೂಡಿಕೆ ಮಾಡಿರಬೇಕು.
ಚಿನ್ನ ಯಾವತ್ತಿದ್ದರೂ ಮೌಲ್ಯ ಕಳೆದುಕೊಳ್ಳದ ವಸ್ತು. ದೀರ್ಘಾವಧಿಯಲ್ಲಿ ನಿಮಗೆ ಶೇ. 12ರ ದರದಲ್ಲಿ ಲಾಭ ಕೊಡಬಲ್ಲುದು. ಗೋಲ್ಡ್ ಫಂಡ್, ಗೋಲ್ಡ್ ಇಟಿಎಫ್ಗಳಲ್ಲಿ ಹೂಡಿಕೆ ಮಾಡಬಹುದು. ಭೌತಿಕ ಚಿನ್ನ ಬೇಕಾದರೂ ಖರೀದಿಸಬಹುದು.
ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಕಂಡ 5 ಅತಿದೊಡ್ಡ ಕುಸಿತಗಳಿವು
ಡೆಟ್ ಫಂಡ್ಗಳಲ್ಲಿ ನಿಮಗೆ ಷೇರುಗಳಷ್ಟು ಲಾಭ ಸಿಗದೇ ಹೋದರೂ ರಿಸ್ಕ್ ಅಂಶ ಕಡಿಮೆ. ಫಿಕ್ಸೆಡ್ ಡೆಪಾಸಿಟ್ಗಿಂತ ತುಸು ಹೆಚ್ಚು ರಿಟರ್ನ್ ಅನ್ನು ಡೆಟ್ ಫಂಡ್ಗಳಿಂದ ನಿರೀಕ್ಷಿಸಬಹುದು. ನಿಮ್ಮ ಹೂಡಿಕೆ ಪೋರ್ಟ್ಫೋಲಿಯೋದಲ್ಲಿ ಡೆಟ್ ಕೂಡ ಸೇರಿರಲಿ.
ನೀವು ದೀರ್ಘಾವಧಿ ಕಾಲ ಹೂಡಿಕೆ ಮಾಡಬೇಕೆಂದು ನಿರ್ಧರಿಸಿದ್ದೇ ಆದಲ್ಲಿ, ಮಾರುಕಟ್ಟೆ ಬಗ್ಗೆ ಜ್ಞಾನಾರ್ಜನೆ ಮುಖ್ಯ. ಹೂಡಿಕೆ ಬಗ್ಗೆ ಸಾಕಷ್ಟು ಪುಸ್ತಕಗಳು, ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದು. ಉತ್ತಮ ಷೇರುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು, ಯಾವ ಹೂಡಿಕೆಯಿಂದ ಯಾವಾಗ ನಿರ್ಗಮಿಸಬೇಕು ಎನ್ನುವ ತಂತ್ರವನ್ನು ನೀವು ತಿಳಿದುಬಿಟ್ಟರೆ ಅಲ್ಲಿಗೆ ಅರ್ಧ ಗೆದ್ದಂತೆ.
ಗಮನಿಸಿ: ಇಲ್ಲಿ ಮೇಲೆ ಕೊಟ್ಟಿರುವುದು ಆರಂಭಿಕ ಸಲಹೆ ಮಾತ್ರ. ಹೂಡಿಕೆ ಮಾಡುವ ಮುನ್ನ ಅಧಿಕೃತ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ.)
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ