AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಮಕ್ಕಳ ಹಣಕಾಸು ಸುರಕ್ಷತೆ ತರುವ ಸುಕನ್ಯ ಸಮೃದ್ಧಿ ಸ್ಕೀಮ್; ಈ ಯೋಜನೆಯ ಲಭ ಇತ್ಯಾದಿ ಮುಖ್ಯಾಂಶಗಳಿವು

International Daughters' Day 2024: ಸೆ. 22ರಂದು ಇದ್ದ ಅಂತಾರಾಷ್ಟ್ರೀಯ ಹೆಣ್ಮಕ್ಕಳ ದಿನದ ಆಚರಣೆಯ ಭಾಗವಾಗಿ ಸರ್ಕಾರವು ವಿವಿಧ ಯೋಜನೆಗಳ ಮಾಹಿತಿ ಇರುವ ಕೈಪಿಡಿ ಬಿಡುಗಡೆ ಮಾಡಿದೆ. ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹೆಣ್ಮಕ್ಕಳಿಗೆ ಏನು ಉಪಯೋಗ, ಇದನ್ನು ಆರಂಭಿಸುವುದು ಹೇಗೆ ಇತ್ಯಾದಿ ಮಾಹಿತಿ ಇದರಲ್ಲಿದೆ. ಹತ್ತು ವರ್ಷದೊಳಗಿನ ವಯಸ್ಸಿನ ಹೆಣ್ಮಕ್ಕಳ ಹೆಸರಲ್ಲಿ ಈ ಸ್ಕೀಮ್ ಅಡಿಯಲ್ಲಿ ಅಕೌಂಟ್ ತೆರೆಯಬಹುದು.

ಹೆಣ್ಮಕ್ಕಳ ಹಣಕಾಸು ಸುರಕ್ಷತೆ ತರುವ ಸುಕನ್ಯ ಸಮೃದ್ಧಿ ಸ್ಕೀಮ್; ಈ ಯೋಜನೆಯ ಲಭ ಇತ್ಯಾದಿ ಮುಖ್ಯಾಂಶಗಳಿವು
ಹೆಣ್ಮಗು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2024 | 5:00 PM

Share

ನವದೆಹಲಿ, ಸೆಪ್ಟೆಂಬರ್ 26: ಹೆಣ್ಣು ಮತ್ತು ಗಂಡು ಮಧ್ಯೆ ಬೌದ್ಧಿಕ ಅಂತರ ಉಳಿದಿಲ್ಲ. ಮೊದಲಿದ್ದಂತೆ ಹೆಣ್ಮಗು ಅಡುಗೆ ಮನೆಗೆ ಸೀಮಿತವಾಗಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಗಂಡಿಗೆ ಸರಿಸಮಾನವಾಗಿ ನಿಲ್ಲಲು ಹೆಣ್ಣು ನಿರಂತರ ಪ್ರಯತ್ನ ಮಾಡುತ್ತಿದ್ದಾಳೆ. ಹೆಣ್ಮಗು ಈಗ ಅಬಲೆಯಾಗಿ ಉಳಿದಿಲ್ಲ. ಸರ್ಕಾರ ಕೂಡ ವಿವಿಧ ಯೋಜನೆಗಳ ಮೂಲಕ ಹೆಣ್ಮಕ್ಕಳನ್ನು ಬಲಾಢ್ಯಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಭಾರತದ ಆರ್ಥಿಕತೆ ಅಗಾಧವಾಗಿ ಬೆಳೆಯಲು ಶುರುವಾಗಿರುವ ಈ ಹೊತ್ತಲ್ಲಿ ಮತ್ತು ಮುಂಬರುವ ವರ್ಷಗಳಲ್ಲಿ ದೇಶದ ಉನ್ನತಿಗೆ ಹೆಣ್ಮಕ್ಕಳ ಪಾತ್ರ ಬಹಳ ಮಹತ್ತರದ್ದು. ಅಂತಾರಾಷ್ಟ್ರೀಯ ಹೆಣ್ಮಕ್ಕಳ ದಿನ ಇತ್ತೀಚೆಗೆ (ಸೆ. 22) ಆಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಣ್ಮಕ್ಕಳಿಗೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಇರುವ ಒಂದು ಪುಟ್ಟ ಕೈಪಿಡಿಯನ್ನು ಇಂದು ಗುರುವಾರ ಬಿಡುಗಡೆ ಮಾಡಿದೆ.

ಹೆಣ್ಮಗುವಿನ ಅಭ್ಯುದಯಕ್ಕಾಗಿ ಸರ್ಕಾರ ಕೈಗೊಂಡಿರುವ ಯೋಜನೆಗಳೇನು ಎಂಬ ವಿವರ ಇಲ್ಲಿದೆ. ಅದರಲ್ಲೂ ಸುಕನ್ಯ ಸಮೃದ್ಧಿ ಯೋಜನೆ ಶುರುವಾಗಿ ಹತ್ತಿರ ಹತ್ತಿರ 10 ವರ್ಷಗಳಾಗುತ್ತಿವೆ. ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಪೈಕಿ ಸುಕನ್ಯ ಸಮೃದ್ಧಿ ಸ್ಕೀಮ್​ಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಈವರೆಗೆ ಈ ಸ್ಕೀಮ್ ಅಡಿಯಲ್ಲಿ ಮೂರು ಕೋಟಿಗೂ ಹೆಚ್ಚು ಅಕೌಂಟ್​ಗಳು ತೆರೆಯಲಾಗಿವೆ. ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಪಿಎಂ ಎಸ್​ಎಸ್​ವೈ ಯೋಜನೆ ಆರಂಭಿಸಲಾಗಿತ್ತು. ಹತ್ತು ವರ್ಷದಲ್ಲಿ ಸಾಕಷ್ಟು ಜನರನ್ನು ಇದು ಸೆಳೆದಿರುವುದು ಗಮನಾರ್ಹ ಸಂಗತಿ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ?

2015ರ ಜನವರಿಯಲ್ಲಿ ಆರಂಭಿಸಲಾದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 10 ವರ್ಷದವರೆಗಿನ ಹೆಣ್ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದು. 21 ವರ್ಷಕ್ಕೆ ಈ ಅಕೌಂಟ್ ಮೆಚ್ಯೂರ್ ಆಗುತ್ತದೆ. ಒಂದು ವರ್ಷದಲ್ಲಿ ಕನಿಷ್ಠ ಹೂಡಿಕೆ 250 ರೂ ಇದೆ. ಗರಿಷ್ಠ ಒಂದೂವರೆ ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. ಈ ರೀತಿ 21 ವರ್ಷ ಕಾಲ ಹೂಡಿಕೆಗೆ ಅವಕಾಶ ಇದೆ.

ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್, ಎಫ್ ಅಂಡ್ ಒ, ಮ್ಯೂಚುವಲ್ ಫಂಡ್ ಇತ್ಯಾದಿಗಳಿಗೆ ತೆರಿಗೆಯಲ್ಲಿ ಬದಲಾವಣೆ

ಸದ್ಯಕ್ಕೆ ಸರ್ಕಾರ ಈ ಯೋಜನೆಯಲ್ಲಿ ವಾರ್ಷಿಕ ಶೇ. 8.2ರಷ್ಟು ಬಡ್ಡಿ ನೀಡುತ್ತದೆ. ಮಾಸಿಕವಾಗಿ ಬಡ್ಡಿದರ ಲೆಕ್ಕ ಮಾಡಲಾಗುತ್ತದಾದರೂ ಹಣಕಾಸು ವರ್ಷದ ಕೊನೆಯಲ್ಲಿ ಅಕೌಂಟ್​ಗೆ ಬಡ್ಡಿ ಜಮೆ ಮಾಡಲಾಗುತ್ತದೆ. ಬಡ್ಡಿದರ ಶೇ. 8.2ರಲ್ಲೇ ಮುಂದುವರಿಯುತ್ತದೆ ಎನ್ನಲಾಗುವುದಿಲ್ಲ. ಪ್ರತೀ ಕ್ವಾರ್ಟರ್​ನಲ್ಲೂ ಬಡ್ಡಿದರ ಪರಿಷ್ಕರಿಸಲಾಗುತ್ತದೆ. ಕಳೆದ 10 ವರ್ಷದಲ್ಲಿ ಇದರ ಬಡ್ಡಿದರ ಕನಿಷ್ಠ ಶೇ. 7.6ರಿಂದ ಗರಿಷ್ಠ ಶೇ. 9.2ರವರೆಗೂ ಹೋಗಿತ್ತು.

ಮಧ್ಯದಲ್ಲೇ ವಿತ್​ಡ್ರಾ ಮಾಡಲು, ಅಕೌಂಟ್ ಮುಚ್ಚಲು ಅವಕಾಶ

ಹೆಣ್ಮಗುವಿನ ಶಿಕ್ಷಣ, ಮದುವೆ ಇತ್ಯಾದಿ ಉದ್ದೇಶಕ್ಕೆ ಸುಕನ್ಯ ಸಮೃದ್ಧಿ ಅಕೌಂಟ್​ನಿಂದ ಒಂದು ಭಾಗದ ಹಣವನ್ನು ಹಿಂಪಡೆಯಲು ಅವಕಾಶ ಇದೆ. ಹೆಣ್ಮಗುವಿನ ವಯಸ್ಸು 18 ವರ್ಷ ತುಂಬಿದಾಗ ಅಥವಾ ಆಕೆ 10ನೇ ತರಗತಿ ಪೂರ್ಣಗೊಳಿಸಿದಾಗ ವಿತ್​ಡ್ರಾ ಮಾಡಬಹುದು. ಹಿಂದಿನ ಹಣಕಾಸು ವರ್ಷದ ಕೊನೆಯಲ್ಲಿ ಅಕೌಂಟ್​ನಲ್ಲಿ ಎಷ್ಟು ಬ್ಯಾಲನ್ಸ್ ಇರುತ್ತೋ ಅದರ ಅರ್ಧದಷ್ಟು ಮೊತ್ತವನ್ನು ಮಾತ್ರವೇ ವಿತ್​ಡ್ರಾ ಮಾಡಲು ಸಾಧ್ಯ.

ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್; ಅಕ್ಟೋಬರ್ ಮೊದಲ ವಾರದಲ್ಲಿ 18ನೇ ಕಂತಿನ ಹಣ ಬಿಡುಗಡೆ

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆಗೆ ಎಷ್ಟು ಲಾಭ ಸಿಗುತ್ತೆ?

ನೀವು ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆದು ವರ್ಷಕ್ಕೆ ಗರಿಷ್ಠ ಮೊತ್ತವಾದ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದರೆ, 21 ವರ್ಷದ ಬಳಿಕ ನಿಮ್ಮ ಒಟ್ಟಾರೆ ಹೂಡಿಕೆ 22.5 ಲಕ್ಷ ರೂ ಇರುತ್ತದೆ. ಬಡ್ಡಿ ಸೇರಿ ನಿಮಗೆ ಸಿಗುವ ಒಟ್ಟು ಮೊತ್ತ 70 ಲಕ್ಷ ಸಮೀಪ ಆಗಬಹುದು. ಇದು ಶೇ. 8.2ರಷ್ಟಿರುವ ಬಡ್ಡಿದರದಲ್ಲಿ ಮಾಡಿದ ಲೆಕ್ಕಾಚಾರ. ಒಂದು ವೇಳೆ ಬಡ್ಡಿದರ ಮುಂದಿನ ದಿನಗಳಲ್ಲಿ ಏರಿಳಿತಗಳಾದರೆ ನಿಮಗೆ ಸಿಗುವ ರಿಟರ್ನ್ಸ್​ನಲ್ಲೂ ಏರಿಳಿತಗಳಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ