AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗವರ್ನ್ಮೆಂಟ್ ಬಾಂಡ್, ಎಫ್ ಅಂಡ್ ಒ, ಮ್ಯೂಚುವಲ್ ಫಂಡ್ ಇತ್ಯಾದಿಗಳಿಗೆ ತೆರಿಗೆಯಲ್ಲಿ ಬದಲಾವಣೆ

New tax rules from Oct 1st: ಅಕ್ಟೋಬರ್ 1ರಿಂದ ಷೇರು ಮಾರುಕಟ್ಟೆ ಮತ್ತು ಹಣಕಾಸು ವಲಯದಲ್ಲಿ ತೆರಿಗೆಯಲ್ಲಿ ಒಂದಷ್ಟು ಬದಲಾವಣೆ ಆಗುತ್ತಿದೆ. ಗವರ್ನ್ಮೆಂಟ್ ಬಾಂಡ್, ಎಫ್ ಅಂಡ್ ಒ ಟ್ರೇಡಿಂಗ್, ಷೇರ್ ಬಯ್​ಬ್ಯಾಕ್​ಗಳಿಗೆ ತೆರಿಗೆ ಬಿಸಿ ಏರುತ್ತಿದೆ. ಲೈಫ್ ಇನ್ಷೂರೆನ್ಸ್ ಪಾಲಿಸಿಯ ಮೆಚ್ಯೂರಿಟಿ ಹಣದ ಮೇಲೆ ತೆರಿಗೆಯನ್ನು ಇಳಿಕೆ ಮಾಡಲಾಗುತ್ತಿದೆ. ಮನೆ ಬಾಡಿಗೆ ಪಾವತಿಗೂ ಟಿಡಿಎಸ್ ಇಳಿಕೆ ಇದೆ.

ಗವರ್ನ್ಮೆಂಟ್ ಬಾಂಡ್, ಎಫ್ ಅಂಡ್ ಒ, ಮ್ಯೂಚುವಲ್ ಫಂಡ್ ಇತ್ಯಾದಿಗಳಿಗೆ ತೆರಿಗೆಯಲ್ಲಿ ಬದಲಾವಣೆ
ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2024 | 3:44 PM

Share

ನವದೆಹಲಿ, ಸೆಪ್ಟೆಂಬರ್ 26: ಮುಂದಿನ ತಿಂಗಳಿಂದ ಕೆಲ ಪ್ರಮುಖ ಆದಾಯ ತೆರಿಗೆಗಳಲ್ಲಿ ಬದಲಾವಣೆಗಳಾಗುತ್ತಿವೆ. ಗವರ್ನ್ಮೆಂಟ್ ಬಾಂಡ್, ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮತ್ತು ಷೇರು ಮರುಖರೀದಿಗೆ ತೆರಿಗೆಯ ಬಿಸಿ ಹೆಚ್ಚಲಿದೆ. ಜೀವ ವಿಮಾ ಪಾಲಿಸಿಯ ಮೆಚ್ಯೂರಿಟಿ ಹಣ, ಬಾಡಿಗೆ ಪಾವತಿ, ಮ್ಯೂಚುವಲ್ ಫಂಡ್ ರೀಪರ್ಚೇಸ್​ನಲ್ಲಿ ತೆರಿಗೆ ರಿಯಾಯಿತಿ ನೀಡಲಾಗುತ್ತಿದೆ. ಅಕ್ಟೋಬರ್ 1ರಿಂದ ಈ ಕೆಲ ತೆರಿಗೆ ವ್ಯತ್ಯಯಗಳಾಗುತ್ತಿವೆ. ಟಿಡಿಎಸ್ ತೆರಿಗೆ ಕಡಿತವಾದರೂ ಐಟಿ ರಿಟರ್ನ್ಸ್ ಸಲ್ಲಿಸುವಾಗ ಅವಕಾಶ ಇದ್ದಲ್ಲಿ ಆ ಹಣವನ್ನು ಕ್ಲೇಮ್ ಮಾಡಲು ಸಾಧ್ಯ. ಅಕ್ಟೋಬರ್ 1ರಿಂದ ಯಾವೆಲ್ಲಾ ಯೋಜನೆಗಳಿಗೆ ತೆರಿಗೆ ವ್ಯತ್ಯಯ ಆಗುತ್ತಿದೆ ಎಂಬ ವಿವರ ಇಲ್ಲಿದೆ….

ಗವರ್ನ್ಮೆಂಟ್ ಬಾಂಡ್ಸ್ ಮೇಲೆ ಟಿಡಿಎಸ್ ಜಾರಿ

ಕೇಂದ್ರ ಮತ್ತು ರಾಜ್ಯಗಳ ಗವರ್ನ್ಮೆಂಟ್ ಬಾಂಡ್​ಗಳಿಂದ ಸಿಗುವ ಬಡ್ಡಿ ಆದಾಯಕ್ಕೆ ಶೇ. 10ರಷ್ಟು ಟಿಡಿಎಸ್ ಕಡಿತ ಆಗಲಿದೆ. ಇತರ ಹಣಕಾಸು ಯೋಜನೆಗಳಲ್ಲೂ ಇದೇ ರೀತಿ ಆದಾಯಕ್ಕೆ ಟಿಡಿಎಸ್ ಕಡಿತ ಇದೆ. ಗವರ್ನ್ಮೆಂಟ್ ಬಾಂಡ್​ಗಳಿಗೂ ಕೂಡ ಅಕ್ಟೋಬರ್ 1ರಿಂದ ಟಿಡಿಎಸ್ ಅನ್ವಯ ಆಗಲಿದೆ.

ಎಫ್ ಅಂಡ್ ಒ ಟ್ರೇಡಿಂಗ್​ನಲ್ಲಿ ಎಸ್​ಟಿಟಿ ಹೆಚ್ಚಳ

ಷೇರು ಮಾರುಕಟ್ಟೆಯಲ್ಲಿನ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮೇಲೆ ಸರ್ಕಾರ ಅಂಕೆ ಹಾಕಲು ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಎಸ್​ಟಿಟಿ ತೆರಿಗೆ ಹೆಚ್ಚಿಸುತ್ತಿದೆ. ಎಫ್ ಅಂಡ್ ಒ ಟ್ರೇಡಿಂಗ್​ನಲ್ಲಿ ಅಕ್ಟೋಬರ್ 1ರಿಂದ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅನ್ನು ಏರಿಸಲಾಗುತ್ತಿದೆ. ಆಪ್ಷನ್ಸ್ ಮಾರಾಟದಲ್ಲಿ ಪ್ರೀಮಿಯಮ್ ಹಣದ ಮೇಲೆ ಎಸ್​ಟಿಟಿಯನ್ನು ಶೇ. 0.0625ರಿಂದ ಶೇ. 0.1ಕ್ಕೆ ಏರಿಕೆ ಆಗುತ್ತದೆ.

ಫ್ಯೂಚರ್ಸ್ ಸೇಲ್​ನಲ್ಲಿ ಟ್ರೇಡಿಂಗ್ ದರದ ಮೇಲೆ ಎಸ್​ಟಿಟಿ ಶೇ. 0.0125ರಿಂದ ಶೇ. 0.02ಕ್ಕೆ ಏರಿಕೆ ಆಗಲಿದೆ.

ಇದನ್ನೂ ಓದಿ: ಊಟದ ಜೊತೆಗೆ ಉಪ್ಪಿನಕಾಯಿ ಇದ್ದಂತೆ; ಹೂಡಿಕೆದಾರರಿಗೆ 80:20 ಸೂತ್ರ ಕೊಟ್ಟ ರಾಧಿಕಾ ಗುಪ್ತ

ಷೇರು ಮರುಖರೀದಿಗೆ ತೆರಿಗೆ

ಕಂಪನಿಯೊಂದು ಷೇರು ಮರುಖರೀದಿ ಅಥವಾ ಷೇರು ಬಯ್​ಬ್ಯಾಕ್ ಮಾಡುವಾಗ ಷೇರುದಾರರಿಗೆ ಲಾಭವಾದರೆ ಅದಕ್ಕೆ ತೆರಿಗೆ ಹಾಕಲಾಗುತ್ತದೆ. ಅಕ್ಟೋಬರ್ 1ರಿಂದ ಇದು ಜಾರಿಗೆ ಬರುತ್ತದೆ. ಡಿವಿಡೆಂಡ್ ಆದಾಯವು ಟ್ಯಾಕ್ಸ್ ಬ್ರ್ಯಾಕೆಟ್ ಪ್ರಕಾರ ತೆರಿಗೆಯ ವ್ಯಾಪ್ತಿಗೆ ಬರುತ್ತದೆ. ಈಗ ಷೇರ್ ಬಯ್​ಬ್ಯಾಕ್​ನಿಂದ ಸಿಗುವ ಲಾಭವೂ ತೆರಿಗೆಗೆ ಅರ್ಹವಾಗಿರುತ್ತದೆ.

ಆಧಾರ್ ಎನ್​ರೋಲ್ಮೆಂಟ್ ಐಡಿ ಮಾನ್ಯವಿರುವುದಿಲ್ಲ

ಪ್ಯಾನ್​ಗೆ ಅರ್ಜಿ ಸಲ್ಲಿಸುವಾಗ ಅಥವಾ ಐಟಿ ರಿಟರ್ನ್ ಸಲ್ಲಿಸುವಾಗ ಆಧಾರ್ ಕಾರ್ಡ್ ದಾಖಲೆ ನೀಡುವುದು ಕಡ್ಡಾಯ. ಆಧಾರ್ ಬದಲು ಆಧಾರ್ ಎನ್​ರೋಲ್ಮೆಂಟ್ ಐಡಿಯನ್ನೂ ಬಳಸಬಹುದಿತ್ತು. ಆಧಾರ್ ಇನ್ನೂ ಪಡೆಯದೇ ಇರುವವರಿಗೆ ಇದು ಅನುಕೂಲವಾಗಿತ್ತು. ಈಗ ಅಕ್ಟೋಬರ್ 1ರಿಂದ ಎನ್ರೋಲ್ಮೆಂಟ್ ಐಡಿಯನ್ನು ಪ್ಯಾನ್​ಗೆ ಮತ್ತು ಐಟಿ ರಿಟರ್ನ್ಸ್ ಸಲ್ಲಿಕೆಗೆ ಬಳಸುವಂತಿಲ್ಲ. ಅದು ಸಿಂಧುವಾಗಿರುವುದಿಲ್ಲ.

ಲೈಫ್ ಇನ್ಷೂರೆನ್ಸ್ ಪೇಔಟ್ ಮೇಲೆ ಟಿಡಿಎಸ್ ಇಳಿಕೆ

ಲೈಫ್ ಇನ್ಷೂರೆನ್ಸ್ ಮೆಚ್ಯೂರ್ ಆಗಿ ಕ್ಲೈಮ್ ಮಾಡಲಾಗುವ ಹಣಕ್ಕೆ ಶೇ. 5ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ಅಕ್ಟೋಬರ್ 1ರಿಂದ ಇದು ಶೇ. 2ಕ್ಕೆ ಇಳಿಯುತ್ತದೆ. ಎಲ್ಲಾ ರೀತಿಯ ಜೀವ ವಿಮೆ ಮೆಚ್ಯೂರಿಟಿ ಹಣಕ್ಕೆ ಈ ಹೊಸ ತೆರಿಗೆ ಅನ್ವಯ ಆಗುತ್ತದೆ. ಇದರಿಂದ ಪಾಲಿಸಿದಾರರ ಕೈಗೆ ಹೆಚ್ಚು ಹಣ ಸಿಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Bank Holidays Oct 2024: ಹಬ್ಬ ಹರಿದಿನಗಳೇ ಇರುವ ಅಕ್ಟೋಬರ್​ನಲ್ಲಿ ಬ್ಯಾಂಕ್​ ರಜಾದಿನಗಳ ಪಟ್ಟಿ

ಬಾಡಿಗೆ ಪಾವತಿಗೆ ಟಿಡಿಎಸ್ ಇಳಿಕೆ

ತಿಂಗಳಿಗೆ 50,000 ರೂಗಿಂತ ಹೆಚ್ಚು ಮನೆ ಬಾಡಿಗೆ ಕಟ್ಟುತ್ತಿದ್ದರೆ ಅದಕ್ಕೆ ಶೇ. 5ರಷ್ಟು ಟಿಡಿಎಸ್ ಕಟ್ಟಬೇಕಾಗುತ್ತದೆ. ಈಗ ಅದನ್ನು ಶೇ. 2ಕ್ಕೆ ಇಳಿಸಲಾಗಿದೆ. ಅಕ್ಟೋಬರ್ 1ರಿಂದ ಇದು ಜಾರಿಗೆ ಬರುತ್ತದೆ.

ಮ್ಯೂಚುವಲ್ ಫಂಡ್ ಹಣಕ್ಕೆ ಟಿಡಿಎಸ್ ಇರಲ್ಲ

ಮ್ಯೂಚುವಲ್ ಫಂಡ್ ರೀಪರ್ಚೇಸ್ (ಹೂಡಿಕೆ ಹಿಂಪಡೆಯುವುದು) ಮಾಡುವಾಗ ಲಾಭದ ಮೇಲೆ ಶೇ. 20ರಷ್ಟು ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಅಕ್ಟೋಬರ್ 1ರಿಂದ ಇಂಥ ಲಾಭದ ಮೇಲೆ ಸ್ವಲ್ಪವೂ ಟಿಡಿಎಸ್ ಮುರಿದುಕೊಳ್ಳಲಾಗುವುದಿಲ್ಲ.

ಇಲ್ಲಿ ರೀಪರ್ಚೇಸ್ ಎಂದರೆ ನೀವು ಮ್ಯೂಚುವಲ್ ಫಂಡ್​ನಲ್ಲಿ ಹಣ ಹೂಡಿಕೆ ಮಾಡುವಾಗ ಅದರ ಯೂನಿಟ್​ಗಳನ್ನು ಖರೀದಿಸಿರುತ್ತೀರಿ. ನೀವು ಹೂಡಿಕೆ ಹಿಂಪಡೆಯುವಾಗ ಮ್ಯೂಚುವಲ್ ಫಂಡ್ ಸಂಸ್ಥೆ ಆ ಯೂನಿಟ್ ಅನ್ನು ರೀಪರ್ಚೇಸ್ ಅಥವಾ ಮರುಖರೀದಿ ಮಾಡುತ್ತದೆ. ಅದಕ್ಕೆ ಮ್ಯೂಚುವಲ್ ಫಂಡ್ ರೀಪರ್ಚೇಸ್ ಎನ್ನುವುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ