ಹಣ ಬೆಳೆಸುವ ಸಾಧನವಾಗಿ ಮ್ಯೂಚುವಲ್ ಫಂಡ್ (Mutual Fund) ಈಗ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಅದರಲ್ಲೂ ಮ್ಯೂಚುವಲ್ ಫಂಡ್ಗೆ ಜೋಡಿತವಾದ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ SIP ಯೋಜನೆಗಳು ಬಹಳ ಜನಪ್ರಿಯ ಹೂಡಿಕೆ ಯೋಜನೆಗಳಾಗಿವೆ. ದೀರ್ಘಾವಧಿ ಪ್ರಗತಿ ಹೊಂದಲು ಎಸ್ಐಪಿ ಬಹಳ ಪರಿಣಾಮಕಾರಿ ಎನಿಸಿವೆ. ಈ ಮ್ಯೂಚುವಲ್ ಫಂಡ್ಗಳು ಜನರ ಹೂಡಿಕೆ ಹಣವನ್ನು ಷೇರುಮಾರುಕಟ್ಟೆ ಇತ್ಯಾದಿ ಲಾಭದಾಯಕ ಸ್ಥಳಗಳಲ್ಲಿ ಮರುಹೂಡಿಕೆ ಮಾಡಿ ಲಾಭ ಸೃಷ್ಟಿಸುತ್ತವೆ. ಈ ಲಾಭವು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದವರಿಗೆ ವರ್ಗವಾಗುತ್ತದೆ. ಮ್ಯೂಚುವಲ್ ಫಂಡ್ಗೆ ನೇರವಾಗಿ ಹೂಡಿಕೆ ಮಾಡುವುದಕ್ಕಿಂತ ಎಸ್ಐಪಿ ಮೂಲಕ ಹೂಡಿಕೆ ಮಾಡುವುದು ಇನ್ನೂ ಉತ್ತಮ ಎನಿಸುತ್ತದೆ. ನೀವು ಆದಾಯದಲ್ಲಿ ನಿಯಮಿತವಾಗಿ ಒಂದಷ್ಟು ಭಾಗವನ್ನು ಎಸ್ಐಪಿ ಮೂಲಕ ಹೂಡಿಕೆ ಮಾಡಬಹುದು. ಇದರಿಂದ ಹೂಡಿಕೆಗೆ ನಿಮ್ಮ ಬದ್ಧತೆ ಹೆಚ್ಚುತ್ತದೆ.
ಯಾವುದೇ ಮ್ಯೂಚುವಲ್ ಫಂಡ್ ಪ್ರತೀ ತಿಂಗಳು, ಪ್ರತೀ ವರ್ಷವೂ ಬೆಳೆಯುತ್ತದೆ ಎಂದು ನಿರೀಕ್ಷಿಸಲು ಆಗುವುದಿಲ್ಲ. ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ್ದವು ಇವು. ನಿಮ್ಮ ಗೃಹಸಾಲಕ್ಕೆ ಪ್ರತೀ ತಿಂಗಳು ಕಂತು ಕಟ್ಟುವಂತೆಯೋ, ಅಥವಾ ಇನ್ಷೂರೆನ್ಸ್ ಹಣವನ್ನು ನಿಯಮಿತವಾಗಿ ಕಟ್ಟುವಂತೆ ಎಸ್ಐಪಿಗೂ ನೀವು ನಿಯಮಿತವಾಗಿ ಹಣ ಕಟ್ಟಿದರೆ ನೀವಂದುಕೊಂಡ ಹಣಕಾಸು ಗುರಿ ಸಾಕಾರ ಮಾಡಿಕೊಳ್ಳಬಹುದು.
ಇದನ್ನೂ ಓದಿ: Health Insurance: ಹೆಲ್ತ್ ಇನ್ಷೂರೆನ್ಸ್ ಮಾಡಿಸಲು ಭಯವಾ? ಹಣ ಕ್ಲೇಮ್ಗೆ ಗೊಂದಲವಾ? ಇಲ್ಲಿದೆ ಟಿಪ್ಸ್
ಒಂದು ಕೋಟಿ ರೂ ಹಣ ಸಂಪಾದಿಸಬೇಕೆನ್ನುವ ಗುರಿ ನಿಮ್ಮಲ್ಲಿದೆ ಎಂದಿಟ್ಟುಕೊಂಡರೆ, ಈ ಗುರಿ ಸಾಧನೆಗೆ ನಾವು ಪ್ರತೀ ತಿಂಗಳು ಎಷ್ಟು ಹಣ ಕಟ್ಟಬೇಕು, ಎಷ್ಟು ವರ್ಷ ಕಟ್ಟಬೇಕು ಎಂಬ ಪ್ರಶ್ನೆ ಬಂದೇ ಬರುತ್ತದೆ. ಸಾಮಾನ್ಯವಾಗಿ ಒಂದು ಎಸ್ಐಪಿ ಒಂದು ವರ್ಷದ ಅವಧಿಯಲ್ಲಿ ಶೇ. 12ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಲಡ್ಡಿ ಇಲ್ಲ. ಕೆಲ ಮ್ಯೂಚುವಲ್ ಫಂಡ್ಗಳು ವರ್ಷಕ್ಕೆ ಶೇ. 25ರ ದರದಲ್ಲೂ ಬೆಳೆದಿರುವ ಉದಾಹರಣೆಗಳುಂಟು. ಒಂದು ಕೋಟಿ ರೂನಷ್ಟು ಹಣ ಬೆಳೆಸಲು ಈ ಕೆಳಗಿನ ಲೆಕ್ಕಾಚಾರ ಸಹಾಯಕವಾಗಬಹುದು. ಇದು ಎಸ್ಐಪಿ ಶೇ. 12ರ ದರದಲ್ಲಿ ಬೆಳೆಯುತ್ತದೆ ಎಂಬ ಎಣಿಕೆ ಮೇಲೆ ಮಾಡಿರುವ ಲೆಕ್ಕಾಚಾರ, ನೆನಪಿರಲಿ:
10,000 ರೂ ಎಸ್ಐಪಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ನಲ್ಲಿ ತಿಂಗಳಿಗೆ 10,000 ರೂ ಕಟ್ಟುತ್ತಾ ಹೋದರೆ ಶೇ. 12ರ ಸಿಎಜಿಆರ್ ದರದಲ್ಲಿ ಅದು ಬೆಳೆದರೆ ನಿಮ್ಮ ಹೂಡಿಕೆಯು 1 ಕೋಟಿ ಆಗಲು 20 ವರ್ಷ ಬೇಕಾಗುತ್ತದೆ. ಅಂದರೆ ನೀವು 20 ವರ್ಷ ಕಾಲ ತಿಂಗಳಿಗೆ 10,000 ರೂ ಕಟ್ಟಿದರೆ ನಿಮ್ಮ ಹಣ 1 ಕೋಟಿ ಆಗುತ್ತದೆ. ವಾಸ್ತವದಲ್ಲಿ ತಿಂಗಳಿಗೆ 10,000 ರೂ ಅನ್ನು 20 ವರ್ಷ ಕಟ್ಟಿದರೆ ಅದು 24 ಲಕ್ಷ ರೂ ಆಗುತ್ತದೆ. ಇದಕ್ಕೆ ವಾರ್ಷಿಕ ಶೇ. 12ರಂತೆ ಸಿಎಜಿಆರ್ ಸೇರಿದರೆ 1 ಲಕ್ಷ ರೂ ನಿಮ್ಮ ಕೈಸೇರಬಹುದು.
ಇದನ್ನೂ ಓದಿ: Great Returns: 10,000 ರೂ ಎಸ್ಐಪಿ 23 ವರ್ಷದಲ್ಲಿ 1.14 ಕೋಟಿ ರೂ; ಗಮನ ಸೆಳೆದ ಹೈಬ್ರಿಡ್ ಮ್ಯೂಚುವಲ್ ಫಂಡ್
20,000 ರೂ ಎಸ್ಐಪಿ: ತಿಂಗಳಿಗೆ 20,000 ರೂ ಕಟ್ಟುತ್ತಾ ಹೋದರೆ 1 ಕೋಟಿ ರೂ ಆಗಲು 15 ವರ್ಷ 5 ತಿಂಗಳು ಬೇಕು. ಅದು ಶೇ. 12ರ ಸಿಎಜಿಆರ್ ದರದಲ್ಲಿ.
30,000 ರೂ ಎಸ್ಐಪಿ: ತಿಂಗಳಿಗೆ 30,000 ರೂ ಹಣವನ್ನು ಕಟ್ಟುತ್ತಾ ಹೋದರೆ 12 ವರ್ಷ 4 ತಿಂಗಳಲ್ಲಿ 1 ಕೋಟಿ ರೂ ಮೊತ್ತವಾಗುತ್ತದೆ.
40,000 ರೂ ಎಸ್ಐಪಿ: ತಿಂಗಳಿಗೆ 40,000 ರೂ ಕಟ್ಟಿದರೆ 1 ಕೋಟಿ ಆಗಲು 10 ವರ್ಷ 6 ತಿಂಗಳು ಬೇಕು.
50,000 ರೂ ಎಸ್ಐಪಿ: ತಿಂಗಳಿಗೆ 50,000 ರೂ ಕಟ್ಟಿದರೆ 9 ವರ್ಷ 2 ತಿಂಗಳಲ್ಲಿ 1 ಕೋಟಿ ರೂ ಜಮೆ ಆಗುತ್ತದೆ.
1 ಲಕ್ಷ ರೂ ಎಸ್ಐಪಿ: ನೀವು ತಿಂಗಳಿಗೆ 1 ಲಕ್ಷ ರೂನಷ್ಟು ಹೂಡಿಕೆ ಮಾಡಬಲ್ಲಿರಾದರೆ ಕೇವಲ 5 ವರ್ಷ 10 ತಿಂಗಳಲ್ಲಿ 1ಕೋಟಿ ರೂ ನೋಡಬಹುದು.
ಇದನ್ನೂ ಓದಿ: Mudra Loan: ಪಿಎಂ ಮುದ್ರಾ ಸ್ಕೀಮ್; 10 ಲಕ್ಷ ರೂವರೆಗೂ ಸಾಲ; ಎಲ್ಲಿ ಸಿಗುತ್ತೆ? ಯಾರಿಗೆ ಸಿಗುತ್ತೆ ಮುದ್ರಾ ಲೋನ್?
ಈ ಮೇಲಿನ ಲೆಕ್ಕಾಚಾರವು ಶೇ. 12ರ ಸಿಎಜಿಆರ್ ದರದ ಆಧಾರದಲ್ಲಿ ಮಾಡಿರುವಂಥದ್ದು. ಕೆಲ ಎಸ್ಐಪಿಗಳು ಇನ್ನೂ ಅಧಿಕ ಸಿಎಜಿಆರ್ ದರದಲ್ಲಿ ಬೆಳೆದಲ್ಲಿ ಇನ್ನೂ ಬೇಗನೇ ಹಣ ಬೆಳೆಯುತ್ತದೆ. ಸಿಎಜಿಆರ್ ಎಂದರೆ ಕಾಂಪೌಂಡೆಡ್ ಆನುಯಲ್ ಗ್ರೋತ್ ರೇಟ್. ಅಂದರೆ, ನಿರ್ದಿಷ್ಟ ವರ್ಷಗಳಲ್ಲಿ ಸರಾಸರಿಯಾಗಿ ವರ್ಷಕ್ಕೆ ಎಷ್ಟು ಬೆಳೆದಿದೆ ಎಂಬುದರ ಲೆಕ್ಕ ಅದು.