Udyogini Scheme: ಉದ್ಯಮ ಆರಂಭಿಸಲು ಮಹಿಳೆಯರಿಗೆ ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ; ಹೀಗೆ ಅರ್ಜಿ ಸಲ್ಲಿಸಿ

|

Updated on: Feb 03, 2023 | 6:25 PM

ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆಯ ಲಕ್ಷಣಗಳೇನು, ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ.

Udyogini Scheme: ಉದ್ಯಮ ಆರಂಭಿಸಲು ಮಹಿಳೆಯರಿಗೆ ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ; ಹೀಗೆ ಅರ್ಜಿ ಸಲ್ಲಿಸಿ
ಸಾಂದರ್ಭಿಕ ಚಿತ್ರ
Follow us on

ಉದ್ಯಮ (Business) ಆರಂಭಿಸಿ ಯಶಸ್ಸು ಕಾಣಬೇಕೆಂದು ಹಂಬಲಿಸುವ ಬಡ ಮಹಿಳೆಯರಿಗಾಗಿ (Women) ಸರ್ಕಾರ ಆರಂಭಿಸಿರುವ ಯೋಜನೆಯೇ ‘ಉದ್ಯೋಗಿನಿ ಸ್ಕೀಮ್’ (Udyogini Scheme). ಈ ಯೋಜನೆಯಡಿ ಮಹಿಳೆಯರು 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಪಡೆಯಬಹುದಾಗಿದೆ. ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಈ ಯೋಜನೆಯಡಿ ಬಡ್ಡಿರಹಿತ ಸಾಲ ದೊರೆಯುತ್ತದೆ. ಮಹಿಳೆಯರಲ್ಲಿ ಉದ್ಯಮಶೀಲತೆ (Entrepreneurship) ಹೆಚ್ಚಿಸಲು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ (Women Development Corporation) ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆಯ ಲಕ್ಷಣಗಳೇನು, ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ.

ಉದ್ಯೋಗಿನಿ ಯೋಜನೆ ಎಂದರೇನು?

ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಗಾಗಿ ಸಣ್ಣ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಮುಖ್ಯವಾಗಿ ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ. ಸಣ್ಣ ಉದ್ಯಮ ಆರಂಭಿಸಲು ಬಂಡವಾಳಕ್ಕಾಗಿ ಈ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ.

ಉದ್ಯೋಗಿನಿ ಯೋಜನೆ ಲಕ್ಷಣಗಳೇನು?

ಉದ್ಯೋಗಿನಿ ಯೋಜನೆಯಡಿ ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ.

ಯಾವೆಲ್ಲ ಉದ್ಯಮ ಆರಂಭಿಸಲು ಸಿಗುತ್ತೆ ಸಾಲ?

ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಬಹುದಾಗಿದೆ. ಇವುಗಳಲ್ಲಿ ಹೊಲಿಗೆ, ಮತ್ಸ್ಯೋದ್ಯಮ, ದಿನಸಿ ಮಾರಾಟ, ಗ್ರಂಥಾಲಯ, ಬೇಕರಿ, ಅಗರಬತ್ತಿ ತಯಾರಿಕೆ, ಡೈರಿ ಹಾಗೂ ಕುಕ್ಕುಟೋದ್ಯಮ ಕೂಡ ಸೇರಿವೆ.

ಯಾವೆಲ್ಲ ಬ್ಯಾಂಕ್​ಗಳು ಸಾಲ ನೀಡುತ್ತವೆ?

ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕ್​ಗಳು ಉದ್ಯೋಗಿನಿ ಯೋಜನೆಯಡಿ ಸಾಲ ನೀಡುತ್ತಿವೆ. ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಸಾರಸ್ವತ ಬ್ಯಾಂಕ್​ಗಳಲ್ಲಿಯೂ ಸಾಲ ಪಡೆಯಹುದಾಗಿದೆ. ಇವುಗಳು ಮಾತ್ರವಲ್ಲದೆ ಎಲ್ಲ ವಾಣಿಜ್ಯ ಬ್ಯಾಂಕ್​ಗಳು, ಸಹಕಾರಿ ಬ್ಯಾಂಕ್​ಗಳಿಂದಲೂ ಸಾಲ ಪಡೆಯಬಹುದಾಗಿದೆ.

ಸಾಲ ಪಡೆಯಲು ಅರ್ಹತೆಗಳೇನು?

ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಸಾಲ ದೊರೆಯುತ್ತದೆ. 18ರಿಂದ 55 ವರ್ಷಷ ವಯಸ್ಸಿನ ಮಹಿಳೆಯರು ಬಡ್ಡಿರಹಿತ ಸಾಲ ಪಡೆಯಲು ಅರ್ಹರಾಗಿದ್ದಾರೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಆದಾಯ 1.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಾದರೆ ಕುಟುಂಬದವರಿಗೆ ಹೆಚ್ಚಿನ ಆದಾಯವಿದ್ದರೂ ಸಾಲ ನೀಡಲು ಪರಿಗಣಿಸಲಾಗುತ್ತದೆ.

ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆ ಬೇಕು?

  • ಆಧಾರ್ ಕಾರ್ಡ್
  • ಜನನ ಪ್ರಮಾಣಪತ್ರ
  • ಸ್ಥಳೀಯ ಶಾಸಕ ಅಥವಾ ಸಂಸದನ ಲೆಟರ್​ಹೆಡ್ ಇರುವ ಪತ್ರ
  • ಬಿಪಿಎಲ್​ ಕಾರ್ಡ್​ನ ಪ್ರತಿ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಸಂಬಂಧಪಟ್ಟ ಬ್ಯಾಂಕ್​ನ ವೆಬ್​ಸೈಟ್​ನಿಂದ ಉದ್ಯೋಗಿನಿ ಸಾಲದ ಅರ್ಜಿಯ ಪ್ರತಿಯನ್ನು ಡೌನ್​ಲೋಡ್ ಮಾಡಿ.
  • ಅರ್ಜಿಯಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿ.
  • ಬ್ಯಾಂಕ್ ಕೇಳಿರುವ ಎಲ್ಲ ದಾಖಲೆಗಳ ಪ್ರತಿಯನ್ನು ಅರ್ಜಿಯ ಜತೆಗೆ ಲಗತ್ತಿಸಿರಬೇಕು.
  • ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತೆರಳಿ ಸಾಲ ಮಂಜೂರಾಗಿರುವ ಬಗ್ಗೆ ವಿಚಾರಿಸಿ.
  • ಬ್ಯಾಂಕ್​ ಶಾಖೆಗೆ ಭೇಟಿ ನೀಡಿಯೂ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Thu, 2 February 23